ಎಲ್ಲಾ ಬಗೆ ವರ್ಧಂತಿಗಳಿವೆ. ಆದರೆ ಮರುನಾಮಕರಣದ ವರ್ಧಂತಿ ಆಚರಿಸುವ ವೈಶಿಷ್ಟ್ಯ ಕರ್ನಾಟಕದ್ದು ಮಾತ್ರ ಆಗಿರಬೇಕು. ರಾಜ್ಯದ ಮರುನಾಮಕರಣ ಆಗಿ, ಅಂದರೆ, 1956ರಲ್ಲಿ ರಾಜ್ಯ ಏಕೀಕರಣವಾದ ನಂತರವೂ ಇದ್ದ ಮೈಸೂರು ರಾಜ್ಯ ಎಂಬ ಹೆಸರನ್ನು ಬಿಟ್ಟು 1973ರಲ್ಲಿ ಕರ್ನಾಟಕ ರಾಜ್ಯ ಎಂಬ ಹೆಸರನ್ನು ಸ್ವೀಕರಿಸಿ ಐದು ದಶಕಗಳು ಸಂದಿವೆ. ಮರುನಾಮಕರಣವನ್ನು ವರ್ಷವಿಡೀ ಸ್ಮರಿಸಿದ ಗುಂಗಿನಲ್ಲಿ ಇರುವಾಗಲೇ ಮತ್ತೆ ರಾಜ್ಯೋತ್ಸವ ಬಂದಿದೆ.
‘ಹೆಸರು ಬದಲಿಸಿಕೊಂಡದ್ದರಲ್ಲಿ ಅಂತಹದ್ದೇನಿದೆ? ಗುಲಾಬಿಯನ್ನು ಬೇರೆ ಯಾವ ಹೆಸರಿಂದ ಕರೆದರೂ ಬೀರುವ ಸುಗಂಧ ಬೇರಾಗುವುದಿಲ್ಲವಲ್ಲ’ ಅಂತ ಶೇಕ್ಸ್‌ಪಿಯರ್ ಹೇಳಿದ್ದು ಅಥವಾ ಕೇಳಿದ್ದು ಸತ್ಯದ ಮಾತಲ್ಲವೇ? ಇರಬಹುದು. ಆದರೆ ನಾಡುನುಡಿಗಳ ಜತೆಗೆ ನಾಡವರಿಗಿರುವ ಸಂಬಂಧದ ಪ್ರಶ್ನೆ ಬಂದಾಗ ಹೆಸರಲ್ಲೆನೋ ಇರುತ್ತದೆ. ನಾಡ ಹೆಸರು ಒಂದು ನಾಮಪದ ಮಾತ್ರವಲ್ಲ. ನಾಡನಾಮಕ್ಕೆ ಒಂದು ಕ್ರಿಯಾಪದದ ಲೇಪವೂ ಇರುತ್ತದೆ. ಹಾಗಾಗಿ, ಏಕೀರಣವಾಗಿ ಹದಿನೆಂಟು ವರ್ಷಗಳ ತರುವಾಯ ನಡೆದ ರಾಜ್ಯದ ಮರುನಾಮಕರಣ ಮತ್ತದರ ಮರುಸ್ಮರಣೆಯ ಭಾಗವಾಗಿ ಮೆಲುಕುಹಾಕಬೇಕಿರುವ ಹಲವು ವಿಚಾರಗಳಿವೆ.
ಭಾಷಾವಾರು ಪ್ರಾಂತ್ಯಗಳ ಸೃಷ್ಟಿಯೊಂದಿಗೆ ಮದರಾಸು ರಾಜ್ಯವು ತಮಿಳುನಾಡು ಆಯಿತು, ಮುಂಬೈ ರಾಜ್ಯವು ಮಹಾರಾಷ್ಟ್ರ ಆಯಿತು, ಹೈದರಾಬಾದ್ ರಾಜ್ಯವು ಆಂಧ್ರಪ್ರದೇಶ ಆಯಿತು. ಮೈಸೂರು ರಾಜ್ಯ ಮಾತ್ರ ಮೈಸೂರಾಗಿಯೇ ಮುಂದುವರಿದಿತ್ತು ಎನ್ನುವಲ್ಲಿ ಹೆಸರಿನಾಚೆಗಿನ ಒಂದು ಸಂಕೇತವಿದೆ. ಉಳಿದ ರಾಜ್ಯಗಳು ಅರಸೊತ್ತಿಗೆಯನ್ನು ಅಥವಾ ಬ್ರಿಟಿಷ್ ಆಳ್ವಿಕೆಯನ್ನು ನೆನಪಿಸುತ್ತಿದ್ದ ನಗರಗಳ ಹೆಸರುಗಳಲ್ಲಿ ಏಕೀಕರಣವಾದ ನಂತರ ತಮ್ಮನ್ನು ಗುರುತಿಸಿಕೊಳ್ಳಲು ಇಷ್ಟಪಡಲಿಲ್ಲ. ಕನ್ನಡಿಗರಿಗೆ ಅದೊಂದು ಅಪವಾದ ಅಂತ ಅನ್ನಿಸಲಿಲ್ಲ. ಅದಕ್ಕೆ ರಾಜಕೀಯ- ಸಾಂಸ್ಕೃತಿಕ ಕಾರಣಗಳು ಏನೇ ಇದ್ದಿರಬಹುದು. ಆದರೆ ಅರಸೊತ್ತಿಗೆಯ ಜತೆಗೆ ಬೆಸೆದುಕೊಂಡ ಹೆಸರೇ ಮುಂದುವರಿದದ್ದು ಮತ್ತು ಸಮಸ್ತ ನಾಡಬಾಂಧವರ ಅಸ್ಮಿತೆಯನ್ನು ಸೂಚಿಸುವ ಹೆಸರು ಏಕೀಕರಣದೊಂದಿಗೆ ರಾಜ್ಯಕ್ಕೆ ದಕ್ಕದೇ ಹೋದದ್ದು ಅದು ಏಕೀಕರಣದ ಮಾತ್ರವಲ್ಲ ಸಂವಿಧಾನದ ಆಶಯವೂ ಅಪೂರ್ಣವಾಗಿಯೇ ಉಳಿದದ್ದರ ಸಂಕೇತ.
ಮೈಸೂರು ಹೋಗಿ ಕರ್ನಾಟಕ ಎಂದಾದದ್ದು ಕರ್ನಾಟಕ ಪ್ರಜ್ಞೆಯೊಂದನ್ನು ಹುಟ್ಟುಹಾಕುವ ಉದ್ದೇಶದಿಂದ ಮತ್ತು ಸಾಂವಿಧಾನಿಕ ಪ್ರಜಾತಂತ್ರದ ಜತೆ ಇನ್ನಷ್ಟು ಗಾಢವಾಗಿ ಬೆಸೆಯುವ ದೃಷ್ಟಿಯಿಂದ ಒಂದು ಪ್ರಮುಖ ಹೆಜ್ಜೆ. ಈ ಎರಡರ ಪೈಕಿ ಕರ್ನಾಟಕದಲ್ಲಿ ಕನ್ನಡ ಪ್ರಜ್ಞೆಯನ್ನು ಹುಟ್ಟುಹಾಕುವ ಉದ್ದೇಶ ಎಷ್ಟರ ಮಟ್ಟಿಗೆ ಈಡೇರಿದೆ ಎಂಬ ಪ್ರಶ್ನೆಯನ್ನು ಸುವರ್ಣ ಸಂಭ್ರಮದ ಅಂತಿಮ ಘಟ್ಟದಲ್ಲೀಗ ಕೇಳಬೇಕಿದೆ.
ಏಕೀಕರಣದ ರೂವಾರಿ ಎಂದೇ ಗುರುತಿಸ್ಪಡುವ ಆಲೂರು ವೆಂಕಟರಾವ್ ಅವರು ಏಕೀಕರಣವನ್ನು ಪ್ರತಿಪಾದಿಸಲು ಕರ್ನಾಟಕತ್ವ ಇಲ್ಲದ ಭಾರತೀಯತ್ವ ನನಗೆ ಬೇಡ ಎಂಬುದಾಗಿ ಹೇಳಿದ್ದರಂತೆ. ಏಕೀಕರಣ ಆಗಿಬಿಟ್ಟರೆ ಕರ್ನಾಟಕತ್ವ ಅಥವಾ ಕರ್ನಾಟಕ ಪ್ರಜ್ಞೆಯೊಂದು ಇಲ್ಲಿ ತನ್ನಿಂದ ತಾನೇ ಅಂಕುರಿಸಿ ಬೇರೂರುತ್ತದೆ ಎಂಬ ಭರವಸೆ ಅವರಿಗಿದ್ದ ಹಾಗೆ ಕಾಣುತ್ತದೆ. ಆ ಭರವಸೆ ಇಂದಿಗೂ ಈಡೇರಿದಂತೆ ಕಾಣಿಸುವುದಿಲ್ಲ.
ಕರ್ನಾಟಕದಲ್ಲಿ ಜಾತಿಪ್ರಜ್ಞೆಯೊಂದು ಸದಾ ಜಾಗೃತವಾಗಿದ್ದಂತೆ ಕಾಣುತ್ತದೆ. ಕರ್ನಾಟಕದಲ್ಲಿ ರಾಷ್ಟ್ರಪ್ರಜ್ಞೆ ಎಂದರೆ ಒಂದು ನಿರ್ದಿಷ್ಟ ಸ್ವರೂಪದ ಭಾರತ ಪ್ರಜ್ಞೆ ಯಾವತ್ತೂ ಜಾಗೃತವಾಗಿರುವಂತಿದೆ. ಆದರೆ ಇವೆರಡರ ಮಧ್ಯೆ ಇರಬೇಕಾಗಿದ್ದ ಕರ್ನಾಟಕ ಪ್ರಜ್ಞೆಯೊಂದು ಹುಟ್ಟಿದಂತಿಲ್ಲ, ಹುಟ್ಟಿದ್ದರೂ ಅದು ಬೆಳೆದಿಲ್ಲ. ದೇಶ ದೇಶ ಅಂತ ಜಪಿಸಿಯಾದರೂ ಇಲ್ಲಿ ಕೆಲವೊಮ್ಮೆ ಜಾತಿಪ್ರಜ್ಞೆಯನ್ನು ಹಿಮ್ಮೆಟ್ಟಿಸಬಹುದೋ ಏನೋ. ಆದರೆ, ಏಕೀಕರಣದ ಹೊತ್ತಲ್ಲಿ ಯಾವ ಕರ್ನಾಟಕತ್ವವನ್ನು ಕೆಲವರಾದರೂ ಪ್ರತಿಪಾದಿಸಿ ಮುನ್ನೆಲೆಗೆ ತಂದರೋ ಆ ಕರ್ನಾಟಕತ್ವ ರಾಜಕೀಯವಾಗಿ ಅಂದೂ ಕರ್ನಾಟಕದ ಜನತೆಯನ್ನು ತಟ್ಟಿದ್ದು ಕಾಣಿಸುವುದಿಲ್ಲ, ಇಂದೂ ಅದು ಜನಮನವನ್ನು ಮುಟ್ಟುತ್ತಿಲ್ಲ. ಇದನ್ನು ಮನಗಂಡೇ ಮರುನಾಮಕರಣದ ವೇಳೆ ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಅಂತ ಚೆನ್ನವೀರ ಕಣವಿ ಅವರು ಕವನ ಕಟ್ಟಿರಬೇಕು.
ಕರ್ನಾಟಕದ ಮೇಲೆ ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ದಾಳಿ ನಡೆಯುತ್ತಿದೆ. ಬಹುಕಾಲದಿಂದ ಆಗುತ್ತಿದ್ದ ಈ ವಿದ್ಯಮಾನ ಈಗ ಹೊಸ ಸ್ವರೂಪದಲ್ಲಿ ಮತ್ತು ಹೊಸ ನಿರ್ದಯ ಸ್ಥಿತಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ಕರ್ನಾಟಕತ್ವ ಅಥವಾ ಕರ್ನಾಟಕ ಪ್ರಜ್ಞೆಯೊಂದು ರಾಜ್ಯದಲ್ಲಿ ಜಾಗೃತವಾಗಿ ಇದ್ದಿದ್ದರೆ ಈ ದಾಳಿಗಳ ವಿರುದ್ಧ ಒಂದು ವ್ಯಾಪಕ ಪ್ರತಿರೋಧ ಎಂದೋ ಕಾಣಿಸುತ್ತಿತ್ತು. ಆ ಪ್ರತಿರೋಧ ಒಂದು ರಾಜಕೀಯ ಅಥವಾ ಸಾಂಸ್ಕೃತಿಕ ಶಕ್ತಿಯಾಗಿ ರೂಪುಗೊಳ್ಳುತ್ತಿತ್ತು. ನೆರೆ ರಾಜ್ಯಗಳಲ್ಲಿ ಹೀಗೆ ಆಗಿದೆ.
ಕರ್ನಾಟಕದಲ್ಲಿ ಅಲ್ಲೊಂದು ಇಲ್ಲೊಂದು ಸಂಘಟನೆಯ ಪ್ರತಿಭಟನೆಯ ಧ್ವನಿ ಕೇಳಿಸುತ್ತಿರಬಹುದು, ಆದರೆ ಅದು ಜನಧ್ವನಿ ಆಗುತ್ತಿಲ್ಲ ಎನ್ನುವುದು ವಿಷಾದದ ವಿದ್ಯಮಾನವೂ ಹೌದು, ಅಪಾಯದ ಮುನ್ಸೂಚನೆಯೂ ಹೌದು.
ರಾಜಕೀಯವಾಗಿ ಕರ್ನಾಟಕವನ್ನು ದೆಹಲಿಯಿಂದ ಆಳುವವರ ಸಾಮಂತ ರಾಜ್ಯ ಎಂಬಷ್ಟರ ಮಟ್ಟಿಗೆ ಅವಮಾನಿಸಿದರೂ ಅದು ಜನಮನವನ್ನು ಗಾಸಿಗೊಳಿಸುವುದಿಲ್ಲ. ಹೋದ ಚುನಾವಣೆಯ ಸಂದರ್ಭದಲ್ಲಿ ‘ಡಬಲ್ ಎಂಜಿನ್’ ಸರ್ಕಾರ ಎಂಬ ಪರಿಕಲ್ಪನೆಯನ್ನು ಕೇಂದ್ರದಲ್ಲಿ ಆಡಳಿತ ನಡೆಸುವ ಪಕ್ಷ ಪ್ರತಿಪಾದಿಸಿತ್ತು. ಅಂದರೆ, ನಮ್ಮ ಪಕ್ಷವನ್ನು ಕರ್ನಾಟಕದಲ್ಲೂ ನೀವು ಚುನಾಯಿಸದೇ ಹೋದರೆ ‘ಹುಷಾರ್’ ಎನ್ನುವ ಎಚ್ಚರಿಕೆ, ನಿಮ್ಮನ್ನು ಸತಾಯಿಸಲಿದ್ದೇವೆ ಎನ್ನುವ ‘ಬೆದರಿಕೆ’ ಆಗ ಎಚ್ಚರಿಸಿದ್ದ ಹಾಗೆಯೇ, ಈಗ ದೆಹಲಿ ದರ್ಬಾರ್ ಕರ್ನಾಟಕವನ್ನು ಸತಾಯಿಸುತ್ತಿದೆ ಕೂಡ.
ಕರ್ನಾಟಕದ ಮೇಲೆ ತಣ್ಣನೆ ಆಗುತ್ತಿರುವ ಸಾಂಸ್ಕೃತಿಕ ಪ್ರಹಾರವಂತೂ ಇನ್ನೂ ಅವಮಾನಕರವಾಗಿದೆ. ‘ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು’ ಎಂಬ ಕರ್ನಾಟಕ ನೆಲದ ಅಧ್ಯಾತ್ಮವನ್ನು ಸದಾ ‘ಇತರರನ್ನು’ ಸೃಷ್ಟಿಸಿ ಬೇಟೆಯಾಡುವ ಪ್ರವೃತ್ತಿಯ ಮತಾಂಧ ರಾಜಕೀಯ ವಶೀಕರಿಸಿಕೊಳ್ಳುತ್ತಿದೆ. ಎಲ್ಲರನ್ನೂ ‘ಇವ ನಮ್ಮವ ಇವ ನಮ್ಮವ’ ಎನ್ನುವ ಈ ನೆಲದ ಸಂಸ್ಕೃತಿಯನ್ನು ಧರ್ಮದ ಹೆಸರಲ್ಲಿ ನಿರ್ನಾಮಗೊಳಿಸುತ್ತಿರುವ ಆಕ್ರಮಣಕ್ಕೆ ಕನ್ನಡಿಗರು ತಿಳಿದೋ ತಿಳಿಯದೆಯೋ ಬಲಿಯಾಗುತ್ತಿದ್ದಾರೆ. ಕೂದಲು ಸೀಳುವ ವಾದವನ್ನು ಮಂಡಿಸಿ ಕರ್ನಾಟಕಕ್ಕೆ ಸಾಂವಿಧಾನಿಕವಾಗಿ ಸಿಗಬೇಕಿರುವ ತೆರಿಗೆ ಪಾಲನ್ನು ಕಡಿತಗೊಳಿಸಿ ನಾಡಿನ ಆರ್ಥಿಕ ನರನಾಡಿಗಳನ್ನು ಅದುಮಿ ಹಿಡಿಯುವ ಆರ್ಥಿಕ ರಾಜಕೀಯವೂ ಕರ್ನಾಟಕವನ್ನು ಹೈರಾಣಾಗಿಸುತ್ತಿದೆ.
ಅಷ್ಟೇ ಅಲ್ಲ, ಒಂದು ಕಾಲದಲ್ಲಿ ಸಾಮಾಜಿಕ ಸಾಮರಸ್ಯವನ್ನು ವಿಸ್ತರಿಸುವ ಮತ್ತು ಪ್ರಜಾತಾಂತ್ರಿಕ ಆಡಳಿತವನ್ನು ಆಳಗೊಳಿಸುವ ಮಾದರಿಗಳು ಕರ್ನಾಟಕದಲ್ಲಿ ಸೃಷ್ಟಿಯಾಗಿ ಇತರೆಡೆಗೆ ವ್ಯಾಪಿಸುತ್ತಿದ್ದರೆ ಇಂದು ಆಗುತ್ತಿರುವುದೇ ಬೇರೆ. ದೇಶದೆಲ್ಲೆಡೆ ಹರಡುತ್ತಿರುವ ಸಂಶಯ ಮಾತ್ರದಿಂದ ಯಾರದ್ದೋ ಮೈಮೇಲೆ ಬಿದ್ದು ಥಳಿಸಿ ಕೊಲ್ಲುವ ಗುಂಪುಹತ್ಯೆಯ ಮಾದರಿಗೆ ಕರ್ನಾಟಕ ಮೂಲ. ಹಾಗೆಯೇ, ಅನೈತಿಕ ಪೊಲೀಸ್ ಗಿರಿ, ಆಪರೇಷನ್ ಕಮಲ, ಸಾಮಾಜಿಕ ನ್ಯಾಯವನ್ನು ಅಣಕಿಸುವ ತರಹೇವಾರಿ ನುಡಿಗಟ್ಟುಗಳಂತಹವೆಲ್ಲವೂ ಕರ್ನಾಟಕದಿಂದ ರಫ್ತಾಗುತ್ತಿರುವ ವಿವಿಧ ಸಾಮಾಜಿಕ- ರಾಜಕೀಯ ಮಾದರಿಗಳು.
ಈ ನೆಲದ ಒಳಿತನ್ನು ಹೊರಗಿನಿಂದ ತರಿಸಿದ ಕೆಡುಕು ಆಕ್ರಮಿಸಿಕೊಳ್ಳುವಾಗ ಜನಮನದಲ್ಲಿ ಹುಟ್ಟಬೇಕಿರುವ ಒಂದು ಸಾತ್ವಿಕ ಆಕ್ರೋಶ, ಈ ಮಣ್ಣು ಪ್ರತಿಪಾದಿಸುವ ಮಾನವೀಯ ಮೌಲ್ಯಗಳನ್ನು ಧಿಕ್ಕರಿಸುವ ಘಟನೆಗಳು ನಡೆದಾಗ ಸಮಾಜ ಪಟ್ಟುಕೊಳ್ಳಬೇಕಿರುವ ನಾಚಿಕೆ, ಈ ನಾಡ ನಾಡಿಯ ಭಾಗವಾಗಿರುವ ಸಾಮಾಜಿಕ ನ್ಯಾಯದ ಪರಿಕಲ್ಪನೆಯೇ ಪರಿಹಾಸ್ಯಕ್ಕೆ ಒಳಗಾಗುತ್ತಿರುವ ಬಗ್ಗೆ ಇರಬೇಕಾದ ಕನಿಷ್ಠ ಆತಂಕ ಇವ್ಯಾವುವೂ ಕಾಣಿಸಿಕೊಳ್ಳುತ್ತಿಲ್ಲ. ಕೆಟ್ಟದು ಘಟಿಸುತ್ತದೆ ಎನ್ನುವುದೇ ಸಮಸ್ಯೆಯಲ್ಲ. ಕೆಟ್ಟದ್ದನ್ನು ಒಳ್ಳೆಯದು ಎಂದು ಸ್ವೀಕರಿಸುವ ಪ್ರವೃತ್ತಿ ಹೆಚ್ಚುತ್ತಿದೆ ಎನ್ನುವುದು ಕರ್ನಾಟಕತ್ವವನ್ನು ಅಣಕಿಸುವ ಬೆಳವಣಿಗೆ.
ಈ ಕಟು ವಾಸ್ತವಗಳ ನಡುವೆ, ಕರ್ನಾಟಕ ಆರ್ಥಿಕವಾಗಿ ಬೆಳೆಯುತ್ತಿದೆ, ತಂತ್ರಜ್ಞಾನ ಆಧಾರಿತ ಉದ್ದಿಮೆಗಳಲ್ಲಿ ಜಾಗತಿಕವಾಗಿ ಗಮನ ಸೆಳೆದಿದೆ ಎಂಬಿತ್ಯಾದಿಗಳನ್ನೇ ಇಟ್ಟುಕೊಂಡು ಅಭಿಮಾನ ಪಡುವ ದೊಡ್ಡ ಸಂಖ್ಯೆಯ ಜನ ಇರಬಹುದು. ಆದರೆ, ಈ ಶ್ರೀಮಂತಿಕೆಯನ್ನು ಉಳಿಸಿಕೊಳ್ಳಬೇಕಾದರೆ, ಈ ಶ್ರೀಮಂತಿಕೆ ಜನಜೀವನದ ನೆಮ್ಮದಿಗೆ ಕಾರಣವಾಗಬೇಕಿದ್ದರೆ, ತನ್ನಂತೆ ಪರರ ಬಗೆವ ಕರ್ನಾಟಕದ ಮಣ್ಣಿನ ಮೂಲ ಗುಣವನ್ನು ಸಂರಕ್ಷಿಸಿಕೊಳ್ಳಬೇಕು ಎಂಬಷ್ಟಾದರೂ ಪ್ರಜ್ಞೆಯನ್ನು ಸೃಷ್ಟಿಸಿಕೊಳ್ಳಲಾಗದೇ ಹೋದರೆ ರಾಜ್ಯೋತ್ಸವ ಬರೀ ಪ್ರದರ್ಶನವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.