ADVERTISEMENT

ಅನುರಣನ: ಜನಾದೇಶದ ಸಂದೇಶ ಮರೆತ ಕಾಂಗ್ರೆಸ್

ಭ್ರಷ್ಟಾಚಾರವನ್ನು ಜನ ಸಹಿಸಿದ್ದಿದೆ, ಅಧಿಕಾರಸ್ಥರ ಕಚ್ಚಾಟವನ್ನು ಮಾತ್ರ ಅವರು ಕ್ಷಮಿಸುವುದಿಲ್ಲ

ನಾರಾಯಣ ಎ
Published 2 ಜುಲೈ 2024, 22:15 IST
Last Updated 2 ಜುಲೈ 2024, 22:15 IST
   

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ 2023ರ ವಿಧಾನಸಭಾ ಚುನಾವಣೆ ಫಲಿತಾಂಶದಲ್ಲಿ ಆ ಪಕ್ಷಕ್ಕೊಂದು ಸ್ಪಷ್ಟವಾದ ಸಂದೇಶವಿತ್ತು. ಸಂದೇಶ ಎನ್ನುವುದಕ್ಕಿಂತಲೂ ಹೆಚ್ಚಾಗಿ ಅದು ಜನಸಮೂಹದ ಮೊರೆಯಾಗಿತ್ತು...

ಸ್ಪಷ್ಟವಾಗಿ ಹೇಳಬೇಕು ಎಂದರೆ ಸುಳ್ಳು, ಹಿಂಸೆ, ದ್ವೇಷ, ಭ್ರಷ್ಟಾಚಾರ ಮತ್ತು ಅಪ್ರಬುದ್ಧ ವರ್ತನೆಯ ಭಯಾನಕ ಮಿಶ್ರಣದಂತಿದ್ದ 2019-23ರ ನಡುವಣ ಬಿಜೆಪಿಯ ಆಡಳಿತದಿಂದ ಕರ್ನಾಟಕವನ್ನು ಶಾಶ್ವತವಾಗಿ ರಕ್ಷಿಸಬೇಕು ಎನ್ನುವುದಾಗಿತ್ತು ಆ ಸಂದೇಶ. ಸಮಾಜದ ಸ್ವಾಸ್ಥ್ಯ ಹಾಗೂ ಜನಜೀವನದ ನೆಮ್ಮದಿಯನ್ನು ಇನ್ನಿಲ್ಲದಂತೆ ಕೆಡಿಸಿದ ಆ ಅನರ್ಥಕಾರಿ ರಾಜಕಾರಣವು ಕರ್ನಾಟಕದ ಪಾಲಿಗೆ ಮತ್ತೊಮ್ಮೆ ವಕ್ಕರಿಸದಂತೆ ನೋಡಿಕೊಳ್ಳಿ ಎಂದಾಗಿತ್ತು ಆ ಮೊರೆ.

ಆದರೆ, ಕಾಂಗ್ರೆಸ್ಸಿನ ಆಡಳಿತವನ್ನು ಅವಲೋಕಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಆ ಸಂದೇಶವನ್ನು ಅರ್ಥ ಮಾಡಿಕೊಳ್ಳುವ ಪ್ರಬುದ್ಧತೆ ಇದೆ ಅಂತ ಅನ್ನಿಸುವುದಿಲ್ಲ. ಆ ಮೊರೆಯನ್ನು ಅರ್ಥಮಾಡಿಕೊಳ್ಳುವಷ್ಟು ವಿವೇಕ, ವಿವೇಚನೆ ಇದೆ ಅಂತಲೂ ಅನ್ನಿಸುವುದಿಲ್ಲ. ಜನಾದೇಶದ ಮರ್ಮ ಅರಿತು ಮುನ್ನಡೆಯುವ ಜಾಣ್ಮೆಯ ಮಾತು ಹಾಗಿರಲಿ, ಈವರೆಗಿನ ವಿದ್ಯಮಾನಗಳನ್ನು ಗಮನಿಸಿದಾಗ ಕಾಂಗ್ರೆಸ್ ಪಕ್ಷ ಮತದಾರರನ್ನು ಭಯಾನಕವಾದ ಭ್ರಮನಿರಸನಕ್ಕೆ ದೂಡುವ ಸನ್ನಾಹದಲ್ಲಿರುವಂತೆ ತೋರುತ್ತಿದೆ. ಅಧಿಕಾರ ಹಿಡಿದು ನೆಟ್ಟಗೆ ಒಂದು ವರ್ಷ ಮುಗಿಯುವುದೊರಳಗೇ ‘ಅಧಿಕಾರಕ್ಕಾಗಿ ಕಚ್ಚಾಟ’ ಎನ್ನುವುದು ಕಾಯಂ ‘ಬ್ರೇಕಿಂಗ್ ನ್ಯೂಸ್’. ನಂಬಿ ಬೆಂಬಲಿಸಿದ ಮತದಾರರಿಗೆ ಮುಜುಗರವಾಗುವ ಸ್ಥಿತಿ.

ADVERTISEMENT

ದುರಂತ ನೋಡಿ! ಬಿಜೆಪಿ ನೇತೃತ್ವದ ಈ ಹಿಂದಿನ ಸರ್ಕಾರಕ್ಕೆ ಸ್ಪಷ್ಟ ಬಹುಮತವೂ ಇರಲಿಲ್ಲ. ಅದು ಜನಾದೇಶವನ್ನು ಅಕ್ಷರಶಃ ಖರೀದಿಸಿತ್ತು, ಆಡಳಿತ ನಡೆಸಲು ಪ್ರಯಾಸಪಟ್ಟಿತ್ತು. ಆದರೂ ಅದಕ್ಕೆ ತನ್ನ ಕಾರ್ಯಸೂಚಿಯ ಬಗ್ಗೆ ಸ್ಪಷ್ಟತೆ ಇತ್ತು. ಆ ಕಾರ್ಯಸೂಚಿಯ ವಿನಾಶಕಾರಿ ಮುಖ ಏನೇ ಇರಲಿ, ಅದನ್ನು ಸಾಧಿಸಲು ಬಿಜೆಪಿ ಯಾವ ಬೆಲೆಯನ್ನಾದರೂ ತೆರಲು ಸಿದ್ಧವಿತ್ತು. ಕಾಂಗ್ರೆಸ್ಸಿನ ಕತೆ ನೋಡಿ. ಅದಕ್ಕೆ ಅಧಿಕಾರದಲ್ಲಿ ಮಿಂದೇಳಲು ಬೇಕಾದಷ್ಟು ಬಹುಮತವಿದೆ. ರಾಜ್ಯದ ಬಿಜೆಪಿ ನಾಯಕರಿಗಿಂತ ನೂರ್ಮಡಿ ಹೆಚ್ಚು ಸಾಮರ್ಥ್ಯ ಹಾಗೂ ವರ್ಚಸ್ಸು ಇರುವ ಹಿರಿಯ-ಕಿರಿಯ ನಾಯಕರ ಗಡಣ ಇದೆ. ಆದರೆ, ಇಷ್ಟೆಲ್ಲಾ ಇರುವ ಸರ್ಕಾರಕ್ಕೆ ಒಂದು ಗೊತ್ತು-ಗುರಿ ಇದೆ ಎನ್ನುವ ಭಾವನೆ ಮೂಡುತ್ತಿಲ್ಲ. ಒಂದು ನಿರ್ದಿಷ್ಟ ಹಾದಿಯಲ್ಲಿ ಈ ಸರ್ಕಾರ ಈ ರಾಜ್ಯವನ್ನು ಮುನ್ನಡೆಸುತ್ತದೆ ಎಂದು ಅನ್ನಿಸುತ್ತಿಲ್ಲ. ಎಲ್ಲರನ್ನೂ ನಿಯಂತ್ರಣದಲ್ಲಿಟ್ಟುಕೊಂಡು ಜನರ ಒಲವನ್ನು ಗಳಿಸಲು ಎಲ್ಲವನ್ನೂ ಮುನ್ನಡೆಸುವ ಶಕ್ತಿ ಕೇಂದ್ರವೊಂದು ಪಕ್ಷ ಅಥವಾ ಸರ್ಕಾರದೊಳಗಿದೆ ಅಂತ ಕಾಣುವುದಿಲ್ಲ.

ಬೇರೆಲ್ಲ ಬಿಟ್ಟುಬಿಡೋಣ. ಇಡೀ ದೇಶದ ಗಮನ ಸೆಳೆದಿರುವ ಗ್ಯಾರಂಟಿ ಯೋಜನೆಗಳನ್ನು ಅದು ನಿರ್ವಹಿಸುತ್ತಿರುವ ಬಗೆ ನೋಡಿ. ಸೂಕ್ಷ್ಮ ಲೋಪದೋಷಗಳೇನೇ ಇರಲಿ, ಆರ್ಥಿಕ ಅಸಮಾನತೆಯಿಂದ ಬಸವಳಿದ ಜನರಿಗೆ ಅವು ನೆರವಾಗಿವೆ. ಇಂದಿರಾ ಗಾಂಧಿ ಕಾಲದ ನಂತರ ಕಾಂಗ್ರೆಸ್ಸಿಗೆ ಅದರದ್ದೇ ಆದ ಒಂದು ಹೊಸ ಮತಬ್ಯಾಂಕ್ ಈ ಯೋಜನೆಗಳಿಂದ ಸೃಷ್ಟಿಯಾಗಿದೆ. ಆದರೆ ವಿರೋಧ ಪಕ್ಷಗಳಿಗಿಂತ ಮಿಗಿಲಾಗಿ ಕಾಂಗ್ರೆಸ್ ನಾಯಕರೇ ಈ ಯೋಜನೆಗಳ ಮೇಲೆ ಮುಗಿಬಿದ್ದಿದ್ದಾರೆ. ವಸ್ತುಸ್ಥಿತಿ ಅರಿಯುವ ಗೋಜಿಗೆ ಹೋಗದೆ ಇವುಗಳಿಂದ ರಾಜಕೀಯ ಲಾಭವಿಲ್ಲ ಎನ್ನುತ್ತ ಅಪಪ್ರಚಾರಕ್ಕೆ ಇಳಿದಿದ್ದಾರೆ. ‘ಇದು ನಮ್ಮ ವಿನೂತನ ಆವಿಷ್ಕಾರ, ಅಭಿವೃದ್ಧಿಯತ್ತ ಸಾಗುವ ಮಾನವೀಯ ಮಾರ್ಗ’ ಅಂತ ಯಾರೂ ಗಟ್ಟಿಧ್ವನಿಯಲ್ಲಿ ಪ್ರತಿಪಾದಿಸುತ್ತಿಲ್ಲ.

ಇನ್ನು, ಮತಾಂಧ ಶಕ್ತಿಗಳ ವಿಚಾರದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಿರಲಿ, ಒಂದು ಗಟ್ಟಿಯಾದ ಸಂದೇಶವನ್ನು ಕೂಡ ಸರ್ಕಾರ ರವಾನಿಸಿಲ್ಲ. ಬಿಜೆಪಿಯ ರಕ್ತ-ರಾಜಕೀಯದ ಆಡುಂಬೊಲವಾಗಿರುವ ಕರಾವಳಿ ಕರ್ನಾಟಕದ ಪರಿಸ್ಥಿತಿ ಇನ್ನೂ ಅಯೋಮಯವಾಗಿಯೇ ಮುಂದುವರಿದಿದೆ. ಮತಾಂಧ ಶಕ್ತಿಗಳನ್ನು ನಿಯಂತ್ರಿಸಲು ಈ ಸರ್ಕಾರದಿಂದ ಸಾಧ್ಯ ಎನ್ನುವ ಭರವಸೆಯನ್ನು ಅಲ್ಲಿನ ಪ್ರಜ್ಞಾವಂತ ಜನ ಕಳೆದುಕೊಳ್ಳುತ್ತಿದ್ದಾರೆ. ದ್ವೇಷ ರಾಜಕಾರಣಕ್ಕೆ ಕರ್ನಾಟಕದಲ್ಲಿ ದೊಡ್ಡ ಮಾರುಕಟ್ಟೆ ಸೃಷ್ಟಿಯಾಗುತ್ತಿದೆ ಎನ್ನುವುದನ್ನು ಚುನಾವಣಾ ಫಲಿತಾಂಶಗಳು ಸಾರುತ್ತಿವೆ. ಮದ್ದು ಅರೆಯಬೇಕಾದ ಸರ್ಕಾರ ಈ ವಿಚಾರದಲ್ಲಿ ಸದಾ ಗೊಂದಲದಲ್ಲಿರುವಂತೆ ಕಾಣಿಸುತ್ತಿದೆ.

ಹಾಗೆಯೇ ಬಿಜೆಪಿಯ ಬಕಾಸುರ ಭ್ರಷ್ಟಾಚಾರದ ಬಗ್ಗೆ ಕಾವ್ಯ ಸೃಷ್ಟಿಸಿ ಚುನಾವಣಾ ಪ್ರಚಾರ ನಡೆಸಿ ಗೆದ್ದ ಕಾಂಗ್ರೆಸ್, ಭ್ರಷ್ಟಾಚಾರದ ಕುರಿತಂತೆ ತಾನು ಕಿಂಚಿತ್ತಾದರೂ ಭಿನ್ನ ಎಂದು ತೋರಿಸಿಕೊಳ್ಳುವ ರೀತಿಯಲ್ಲಿ ಸಾಗುತ್ತಿಲ್ಲ. ‘ಶೇಕಡ 40 ಕಮಿಷನ್’ ಆರೋಪದ ಬಗ್ಗೆ ತನಿಖೆಗೊಂದು ವಿಚಾರಣಾ ಆಯೋಗ ನೇಮಿಸಿದ ಆಚೆಗೆ ಭ್ರಷ್ಟಾಚಾರದ ವಿಷಯದಲ್ಲಿ ಈ ಸರ್ಕಾರ ಹೇಗೆ ಭಿನ್ನವಾಗಿದೆ ಎನ್ನುವ ಪ್ರಶ್ನೆಗೆ ಸರ್ಕಾರದ ನಡೆನುಡಿಗಳಿಂದ ಉತ್ತರ ದೊರಕುತ್ತಿಲ್ಲ.

ಆದರೆ ‘ಎಲ್ಲ ಬಿಟ್ಟ ಮಗ, ಭಂಗಿ ನೆಟ್ಟ’ ಎಂಬಂತೆ ಕೆಲ ಕಾಂಗ್ರೆಸ್ ಶಾಸಕರು ಉಪಮುಖ್ಯಮಂತ್ರಿ ಹುದ್ದೆಗಳನ್ನು ಹೆಚ್ಚುವರಿ ಸೃಷ್ಟಿಸಬೇಕೆಂದೂ ಮುಖ್ಯಮಂತ್ರಿಯ ಬದಲಾವಣೆ ಆಗಬೇಕೆಂದೂ ಚಂಡಿಹಿಡಿಯತೊಡಗಿದ್ದಾರೆ. ಹೀಗೆಲ್ಲಾ ಕೇಳಲು ಸಾವಿರ ರಾಜಕೀಯ ಸಮರ್ಥನೆಗಳಿರಬಹುದು. ಆದರೆ ಪಕ್ಷದಲ್ಲಿ ಆಂತರಿಕವಾಗಿ ಏನನ್ನು ಕೇಳಬೇಕು, ಬಹಿರಂಗವಾಗಿ ಏನನ್ನು ಹೇಳಬೇಕು ಎನ್ನುವ ಕನಿಷ್ಠ ಪ್ರಜ್ಞೆಯಾದರೂ ಬೇಕಲ್ಲ? ಜನರಿಗೆ ಸಂಬಂಧಿಸಿದ ಒಂದು ವಿಷಯವನ್ನು ಇಷ್ಟೊಂದು ಆಸ್ಥೆಯಿಂದ ಈ ಶಾಸಕರು ಎತ್ತಿಕೊಂಡ ನಿದರ್ಶನ ಇದೆಯೇ? ಮಳೆಯೇನೋ ಪ್ರಾರಂಭವಾಗಿದೆ. ಆದರೆ ಭೀಕರ ಬರದಿಂದ ತತ್ತರಿಸಿದ ಜನ ಸಾವರಿಸಿಕೊಂಡಿದ್ದಾರೆಯೇ? ಆ ಜನರ ಬದುಕಿನಲ್ಲಿ ಏನಾಗುತ್ತಿದೆ ಎನ್ನುವ ಬಗ್ಗೆ ಶಾಸಕರು ಮಾತನಾಡುತ್ತಿಲ್ಲ. ಈ ಸ್ಥಿತಿಯಲ್ಲಿ ರಾಜ್ಯಕ್ಕೆ ಅಗತ್ಯವಾಗಿ ಬೇಕಿರುವುದು ಹೆಚ್ಚುವರಿ ಉಪಮುಖ್ಯಮಂತ್ರಿಗಳು ಅಂತ ಶಾಸಕರು ಎಗ್ಗಿಲ್ಲದೆ ಹೇಳುತ್ತಿದ್ದರೆ, ಫ್ರೆಂಚ್ ಕ್ರಾಂತಿಯ ಕಾಲದಲ್ಲಿ ರಾಣಿಯೊಬ್ಬಳು ‘ಬ್ರೆಡ್ ಇಲ್ಲದೆ ಹೋದರೆ ಕೇಕ್ ತಿನ್ನಿ’ ಎಂದು ಜನರಿಗೆ ಹೇಳಿದ್ದು ನೆನಪಾದೀತು!

ಕರ್ನಾಟಕದ ಮತದಾರರು ಭ್ರಷ್ಟಾಚಾರವನ್ನು ತಾಳಿಕೊಂಡದ್ದಿದೆ. ಮತಾಂಧತೆಯ ರಾಜಕೀಯವನ್ನು ಪೂರ್ತಿ ತಿರಸ್ಕರಿಸದೆ ಬೆಂಬಲಿಸಿದ್ದಿದೆ. ಆದರೆ, ಅಧಿಕಾರಸ್ಥ ಪಕ್ಷಗಳ ಕಚ್ಚಾಟವನ್ನು ಮಾತ್ರ ಅವರು ಕ್ಷಮಿಸುವುದಿಲ್ಲ. ಮುಖ್ಯವಾಗಿ 1989ರ ನಂತರದ ಘಟನಾವಳಿಗಳು ಇದನ್ನು ಸಾರುತ್ತವೆ. ಈತನಕ ಆಡಳಿತ ನಡೆಸಿದ ಮೂರೂ ಪಕ್ಷಗಳು ಮತದಾರರ ಕೈಯಿಂದ ಈ ಕಾರಣಕ್ಕೆ ಶಿಕ್ಷೆ ಅನುಭವಿಸಿವೆ.

ಹಾಗೆ ನೋಡಿದರೆ, ಮಾಮೂಲಿ ಅಂತಃಕಲಹದ ಪರಂಪರೆಯಿಂದ ಹೊರಬಂದದ್ದು ಕಾಂಗ್ರೆಸ್ ಪಕ್ಷವೇ. ಮೊದಲಿಗೆ 1999-2004ರ ನಡುವಣ ಕಾಂಗ್ರೆಸ್ ಆಡಳಿತ (ಎಸ್.ಎಂ. ಕೃಷ್ಣ ನೇತೃತ್ವದ ಸರ್ಕಾರ) ಮತ್ತು 2013-18ರ ನಡುವಣ ಕಾಂಗ್ರೆಸ್ ಆಡಳಿತ (ಸಿದ್ದರಾಮಯ್ಯ ನೇತೃತ್ವದ ಮೊದಲ ಅವಧಿ) ಆಂತರಿಕ ಕಚ್ಚಾಟದಿಂದ ದೂರ ಉಳಿದು ಚಾರಿತ್ರಿಕವಾದ ಪ್ರಬುದ್ಧ ರಾಜಕೀಯ ಪರಂಪರೆಯೊಂದನ್ನು ಸೃಷ್ಟಿಸಿದ್ದವು. ಈ ವೈಶಿಷ್ಟ್ಯವನ್ನು ಉಳಿಸಿಕೊಳ್ಳುವ ಹಾದಿಯಲ್ಲಿ ಕಾಂಗ್ರೆಸ್ ಈಗ ಸಾಗುತ್ತಿಲ್ಲ. ಚರಿತ್ರೆಯ ತಪ್ಪುಗಳಿಂದ ಪಾಠ ಕಲಿಯುವುದಾಗಲೀ ಚರಿತ್ರೆಯಲ್ಲಿ ತಾವೇ ಹಾಕಿಕೊಟ್ಟ ಮಾದರಿಯಲ್ಲಿ ಮುಂದುವರಿಯುವುದಾಗಲೀ ರಾಜಕೀಯ ಪಕ್ಷಗಳಿಗೆ ಕೂಡಿಬಾರದ ವಿಚಾರ. ಚರಿತ್ರೆ ಪುನರಾವರ್ತನೆ ಆಗುತ್ತದೆ ಎನ್ನುವ ಮಾತೊಂದಿದೆ. ಅದನ್ನು ಸರಿಪಡಿಸಿಕೊಳ್ಳಬೇಕು ಅನ್ನಿಸುತ್ತದೆ. ಯಾಕೆಂದರೆ, ಒಳ್ಳೆಯ ಚರಿತ್ರೆ ಮರುಕಳಿಸುವಂತೆ ಕಾಣಿಸುತ್ತಿಲ್ಲ, ಕೆಟ್ಟ ಚರಿತ್ರೆ ಮಾತ್ರ ಪುನರಾವರ್ತನೆ ಆಗುತ್ತಿರುವುದು.

ಕಾಂಗ್ರೆಸ್‌ನ ಸ್ವಯಂಘಾತುಕತನದ ಹಾದಿಯು ಗ್ರೀಕ್‌ ಪುರಾಣಗಳಲ್ಲಿ ಉಲ್ಲೇಖವಾಗಿರುವ, ತನ್ನನ್ನು ತಾನೇ ನುಂಗುವ ಒರುಬರೋಸ್ ಹಾವಿನ ಕಲ್ಪನೆಯನ್ನು ನೆನಪಿಸುತ್ತದೆ. ಕಾಂಗ್ರೆಸ್ಸಿಗೆ ಸುಧಾರಿಸಿಕೊಳ್ಳಲು ಸಮಯ ಮೀರಿಲ್ಲ. ಪಕ್ಷದೊಳಗೆ ವಿವೇಕ-ವಿವೇಚನೆಯಿಂದ ಧ್ವನಿ ಎತ್ತಬಲ್ಲವರಿಗೇನೂ ಕೊರತೆ ಇಲ್ಲ. ಆದರೆ ಆ ಧ್ವನಿಗಳು ಅರಣ್ಯರೋದನ ಆಗದ ಹಾಗೆ ನೋಡಿಕೊಳ್ಳುವ ವ್ಯವಸ್ಥೆ ಪಕ್ಷದಲ್ಲಿದೆಯೇ ಎನ್ನುವುದು ಪ್ರಶ್ನೆ.

ಒಟ್ಟಿನಲ್ಲಿ, ಕರ್ನಾಟಕವನ್ನು ಬಿಜೆಪಿಯ ಭಯಾನಕ ಜೀವವಿರೋಧಿ ದ್ವೇಷ ರಾಜಕಾರಣದಿಂದ ಬಿಡುಗಡೆಗೊಳಿಸುವ ಜವಾಬ್ದಾರಿಯನ್ನು ಕಾಂಗ್ರೆಸ್ಸಿಗೆ ಹೊರಿಸಿ ಸುಮ್ಮನಾದರೆ ಅಪಾಯ ಕಾದಿದೆ. ಯಾಕೆಂದರೆ, ಕೆಲ ಕಾಂಗ್ರೆಸ್ಸಿಗರು ‘ಬಿಜೆಪಿಯೇ ಮೇಲು’ ಎನ್ನುವ ಭಾವನೆಯನ್ನು ಮತ್ತೆ ಮತದಾರರಲ್ಲಿ ಹುಟ್ಟಿಸುವಂತಹ ಆತ್ಮಘಾತುಕ ಪ್ರವೃತ್ತಿಯನ್ನು ಅದೆಷ್ಟು ನಿಷ್ಠೆಯಿಂದ ಪ್ರದರ್ಶಿಸುತ್ತಿದ್ದಾರೆ ಎಂದರೆ ತನ್ನನ್ನು ತಾನೇ ನುಂಗುವ ಒರುಬರೋಸ್ ಹಾವಿಗೇನೇ ಇವರು ಪೈಪೋಟಿ ನೀಡುವಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.