ಬಹುತೇಕ ಮಠಾಧಿಪತಿಗಳೆಲ್ಲಾ ಅಧಿಕಾರದಲ್ಲಿದ್ದವರನ್ನು ಓಲೈಸುತ್ತಿರುವ, ಓಲೈಸಲು ಮುಂದಾಗದಿದ್ದರೂ ಎದುರು ಹಾಕಿಕೊಳ್ಳಲು ಹಿಂದೇಟು ಹಾಕುತ್ತಿರುವ ಇಂದಿನ ಕಾಲದಲ್ಲಿ, ನಾಡಿನ ಇಬ್ಬರು ಮಠಾಧಿಪತಿಗಳುಅಧಿಕಾರಸ್ಥರಿಗೆ ‘ಸತ್ಯ’ ಹೇಳುವ ಕೆಲಸ ಮಾಡಿದ್ದಾರೆ. ಧರ್ಮಪೀಠದಲ್ಲಿ ಕುಳಿತ ಕಾರಣಕ್ಕಾಗಿ ಅವರ ಆಂತರ್ಯದ ಕರೆ ಅವರಿಂದ ಈ ಸತ್ಯವನ್ನು ಹೇಳಿಸಿತೋ ಅಥವಾ ಪ್ರಜಾತಾಂತ್ರಿಕ ರಾಜಕೀಯದ ಒತ್ತಡ ಅವರಿಂದ ಈ ಕೆಲಸವನ್ನು ಮಾಡಿಸಿತೋ ಗೊತ್ತಿಲ್ಲ. ಏನೇ ಇದ್ದರೂ ಇವರಿಬ್ಬರೂ ಹೇಳಬೇಕಾದುದನ್ನು ಹೇಳಬೇಕಾದವರಿಗೆ ಸೂಕ್ತ ಕಾಲದಲ್ಲಿ ಹೇಳಿ ನಾಡ ಹಿತ ಕಾಯುವ ಒಂದು ಕಾರ್ಯ ಮಾಡಿದ್ದಾರೆ.
ಈ ಇಬ್ಬರ ಈ ಹಿಂದಿನ ರಾಜಕೀಯ ನಿಲುವು, ಸಂಪರ್ಕ, ಸಾಮೀಪ್ಯ ಏನೇ ಇರಲಿ ಮತ್ತು ಮುಂದಿನ ಅವರ ರಾಜಕೀಯ ನಡೆ–ನುಡಿಗಳು ಏನೇ ಇರಲಿ, ಅವೆಲ್ಲವುಗಳಿಂದ ಪ್ರತ್ಯೇಕಿಸಿ ಮೇಲಿನ ಬೆಳವಣಿಗೆಯನ್ನುನೋಡುವ ಅಗತ್ಯವಿದೆ. ಯಾಕೆಂದರೆ, ಸಂತತ್ವ ಎನ್ನುವುದು ಯಾರಲ್ಲೂ ಇಡಿಯಾಗಿ ಹುಡುಕುವ ಕಾಲ ಇದಲ್ಲ. ಯಾರೋ ಎಂದೋ ಮಾಡುವ ಒಂದು ಬಿಡಿ ಕಾರ್ಯದಲ್ಲಿ, ಒಂದು ಬಿಡಿ ಸತ್ಯದ ಹೇಳಿಕೆಯಲ್ಲಿ ಸಂತತ್ವವನ್ನು ಹುಡುಕಬೇಕಾಗಿರುವ ಕಾಲ ಇದು.
ಈ ಇಬ್ಬರು ಮಠಾಧಿಪತಿಗಳಲ್ಲಿ ಒಬ್ಬರು, ಬಿಜೆಪಿ ಸೃಷ್ಟಿಸಿದ ಉರಿಗೌಡ, ನಂಜೇಗೌಡ ಪಾತ್ರಗಳ ಕುರಿತು ‘ಕಾಲ್ಪನಿಕ ವಿಚಾರಗಳನ್ನು ಚಾರಿತ್ರಿಕ ಎಂಬಂತೆ ಜನರ ಮುಂದಿಟ್ಟು ಗೊಂದಲ ಉಂಟುಮಾಡಬೇಡಿ’ ಎಂದು ತಿಳಿಹೇಳಿದರು. ಮೈಸೂರನ್ನು ಹದಿನೆಂಟನೆಯ ಶತಮಾನದಲ್ಲಿ ಆಳಿದ ಮುಸ್ಲಿಂ ದೊರೆ ಟಿಪ್ಪುವನ್ನು ಮೊದಲಿಗೆ ಮನಸೋಇಚ್ಛೆ ಮತಾಂಧ ಎಂದು ಚಿತ್ರಿಸಿ, ಆನಂತರ ಆತನನ್ನು ಒಂದು ಸಮುದಾಯಕ್ಕೆ ಸೇರಿದ ಯೋಧರಾದ ಉರಿಗೌಡ ಮತ್ತು ನಂಜೇಗೌಡ ಎಂಬಿಬ್ಬರು ಕೊಂದರು ಎನ್ನುವ ಕತೆ ಕಟ್ಟಿ, ಆ ಸಮುದಾಯದಲ್ಲಿ ಮುಸ್ಲಿಮರ ಬಗ್ಗೆ ದ್ವೇಷ ಹುಟ್ಟಿಸುವ ಮೂಲಕ ಇಡೀ ಸಮುದಾಯವನ್ನು ರಾಜಕೀಯವಾಗಿ ಒಲಿಸಿಕೊಳ್ಳಬಹುದು ಎಂಬ ಭಾರತೀಯ ಜನತಾ ಪಕ್ಷದ ಕರಾಳ ವ್ಯೂಹವೊಂದು ಮಠಾಧಿಪತಿಯ ಸಕಾಲಿಕ ಮಧ್ಯಪ್ರವೇಶದಿಂದಾಗಿ ಹಿನ್ನಡೆ ಕಂಡಿತು.
ಇನ್ನೊಬ್ಬರು ಮಠಾಧಿಪತಿಯು ಬಿಜೆಪಿ ನೇತೃತ್ವದ ಸರ್ಕಾರ ಉರುಳಿಸಿದ ಇನ್ನೊಂದು ಮತದ್ವೇಷಿ ದಾಳದ ವಿರುದ್ಧ ಮಾತನಾಡಿದ್ದಾರೆ. ರಾಜ್ಯ ಸರ್ಕಾರವು ಮುಸ್ಲಿಮರಿಗೆ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಅಡಿಯಲ್ಲಿ ದೊರೆಯುತ್ತಿದ್ದ ಶೇಕಡ 4ರಷ್ಟು ಔದ್ಯೋಗಿಕ ಮತ್ತು ಶೈಕ್ಷಣಿಕ ಮೀಸಲಾತಿಯನ್ನು ಕಿತ್ತುಹಾಕಿ ಅದನ್ನು ರಾಜ್ಯದ ಪ್ರಬಲ ಸಮುದಾಯವಾದ ಒಕ್ಕಲಿಗರು ಹಾಗೂ ಇತರ ಕೆಲವು ಸಮುದಾಯಗಳು ಮತ್ತು ಲಿಂಗಾಯತ ಹಾಗೂ ಇತರ ಕೆಲವು ಸಮುದಾಯಗಳಿಗೆ ಸಮನಾಗಿ ಮರುಹಂಚಿಕೆ ಮಾಡಿದೆ. ಒಂದೆಡೆ, ಮುಸ್ಲಿಮರ ಮೀಸಲಾತಿ ಕಿತ್ತುಕೊಳ್ಳುವ ಮೂಲಕ ‘ಓಲೈಕೆ ರಾಜಕಾರಣ’ದ ವಿರುದ್ಧ ಖಡಾಖಡಿ ಯುದ್ಧ ಸಾರಿದ್ದೇವೆ ಎನ್ನುವ ಸಂದೇಶವನ್ನು ಹಿಂದುತ್ವವಾದಿ ಮತದಾರರಿಗೆ ರವಾನಿಸಿ ಬಿಜೆಪಿಗೆ ಅವರ ಬೆಂಬಲವನ್ನು ಗಟ್ಟಿಗೊಳಿಸಿಕೊಳ್ಳುವುದು. ಇನ್ನೊಂದೆಡೆ, ಹಾಗೆ ಕಿತ್ತುಕೊಂಡದ್ದನ್ನು ಪ್ರಬಲ ಜಾತಿಗಳಿಗೆ ನೀಡಿ ಅವರನ್ನೂ ಒಲಿಸಿಕೊಳ್ಳುವ ಹುನ್ನಾರ ಈ ನಿರ್ಧಾರದಲ್ಲಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಮಠಾಧೀಶರ ಮಾತುಗಳು ಮಾರ್ಮಿಕವಾಗಿವೆ. ‘ಈ ರಾಜ್ಯದ ಒಕ್ಕಲು ಮಕ್ಕಳು ನಾವು, ಯಾರ ಅನ್ನವನ್ನೂ ಕಸಿದು ತಿನ್ನಬೇಕೆನ್ನುವವರಲ್ಲ. ನಾವೇ ದುಡಿದದ್ದನ್ನು ಕೂಡಾ ಮೊದಲು ಹಂಚಿ, ಉಳಿದದ್ದನ್ನು ನಾವು ತಿನ್ನಬೇಕು ಎಂದುಕೊಂಡವರು ನಾವು’. ಈ ಮಾತುಗಳ ನೈತಿಕ ಎತ್ತರ, ಸೇರಿದ್ದ ಸಭಿಕರಿಂದ ಕೇಳಿಬಂದ ಕರತಾಡನದ ಅಬ್ಬರ ಇವೆಲ್ಲವನ್ನೂ ಕೇಳುತ್ತಿದ್ದ ಯಾರಿಗಾದರೂ ಎಲ್ಲಿಂದಲೋ ಬಂದವರ ರಾಜಕೀಯ ವಿಕಾರ ಸ್ವರೂಪಗಳು ಏನೇ ಇದ್ದರೂ ಈ ನೆಲದ ವಿವೇಕ ಸಂಪೂರ್ಣ ಅಳಿದಿಲ್ಲ ಎನ್ನುವ ಭರವಸೆ ಮೂಡುತ್ತದೆ.
ಒಬ್ಬರು ಮಠಾಧೀಶರು ಸುಳ್ಳು ನಿರೂಪಣೆಯ ರಾಜಕೀಯಕ್ಕೊಂದು ಸಾತ್ವಿಕ ಪ್ರತಿರೋಧ ಒಡ್ಡಿದರೆ, ಇನ್ನೊಬ್ಬರು ಮಠಾಧೀಶರು ಒಬ್ಬರಿಂದ ಕಿತ್ತು ಇನ್ನೊಬ್ಬರನ್ನು ಓಲೈಸುವ ತಂತ್ರವನ್ನು ಈ ಮಣ್ಣಿನ ಗುಣ ಎಂದಿಗೂ ಒಪ್ಪುವುದಿಲ್ಲ ಎನ್ನುವ ಸಂದೇಶ ರವಾನಿಸಿದ್ದಾರೆ. ಮಠಾಧೀಶರೆಲ್ಲ ಸಂತರು ಹೌದೋ ಅಲ್ಲವೋ ಎನ್ನುವ ಪ್ರಶ್ನೆ ಬೇರೆ, ಆದರೆ ಅಧಿಕಾರಸ್ಥರನ್ನು ನೇರಾನೇರ ಎದುರು ಹಾಕಿಕೊಂಡು ಯಾರೇ ಇಂತಹದ್ದೊಂದು ನಿಲುವು ತಳೆದರೂ ಆ ನಿಲುವಿನಲ್ಲಿ ಸಂತತ್ವವನ್ನು ಕಂಡೇ ಕಾಣಬೇಕು. ಪೂರ್ಣ ಸಂತತ್ವವನ್ನು ಯಾರಲ್ಲೂ ಕಾಣಲಾಗದ ಈ ಕಾಲದಲ್ಲಿ ಸಂತತ್ವದ ಇಂತಹ ಬಿಡಿ ಪ್ರಕಟಣೆಗಳೇ ನಾಡನ್ನು ಕಾಯಬೇಕು.
ಅಧಿಕಾರ ಪಡೆದುಕೊಳ್ಳಲು ಮತ್ತು ಪಡೆದ ಅಧಿಕಾರವನ್ನು ಉಳಿಸಿಕೊಳ್ಳಲು ಏನು ಮಾಡಿದರೂ ಸರಿ ಎಂಬ ಭಾವನೆ ಪಕ್ಷಗಳಲ್ಲಿ ಇರಬಹುದು. ಅದಕ್ಕೆ ಒಂದು ಹಂತದ ಜನಸಮ್ಮತಿಯೂ ಇರಬಹುದು. ಆದರೆ ಏನು ಮಾಡಿದರೂ ಸರಿ ಎನ್ನುವಾಗಲೂ ಒಂದು ಹಂತಕ್ಕಿಂತ ಕೆಳಗಿಳಿದು ಏನನ್ನೂ ಮಾಡಬಾರದೆಂಬ ಅದ್ಯಾವುದೋ ಒಂದು ಅಲಿಖಿತ ನಿಯಮವೊಂದು ಈ ದೇಶದ ಕೆಟ್ಟುಹೋದ ರಾಜಕೀಯದಲ್ಲೂ ತೀರಾ ಇತ್ತೀಚಿನ ವರೆಗೂ ಇತ್ತು. ಭೂಗತ ಪಾತಕಿಗಳ ಲೋಕದವರ ಕಡಿಯುವ, ಕೊಲ್ಲುವ ದಂಧೆಯಲ್ಲೂ ಏನೋ ಕೆಲವೊಂದನ್ನೆಲ್ಲಾ ಮಾಡಬಾರದು ಎಂದೆಲ್ಲಾ ಇದೆಯಂತಲ್ಲ, ಹಾಗೆ. ಈಗಿನ ಆಡಳಿತ ಪಕ್ಷವು ಹೀಗೊಂದು ಕನಿಷ್ಠ ನೈತಿಕ ನಿಯಂತ್ರಣವೂ ಇಲ್ಲದ ರೀತಿಯ ರಾಜಕೀಯವನ್ನು ಮಾಡುತ್ತಿದೆ. ತಾನು ಹೇಳುವುದು ಸುಳ್ಳು ಎಂದು ಅದನ್ನು ಕೇಳಿಸಿಕೊಳ್ಳುವವರಿಗೆಲ್ಲ ಗೊತ್ತಾಗುತ್ತದೆ ಎಂಬ ಅರಿವಿದ್ದರೂ ಅದು ಸುಳ್ಳನ್ನೇ ಹೇಳಲು ಹಿಂಜರಿಯುವುದಿಲ್ಲ. ತಾನು ಅನ್ಯಾಯ ಮಾಡುತ್ತಿದ್ದೇನೆ ಅಂತ ಜನರಿಗೆ ಗೊತ್ತಾಗುತ್ತಿದೆ ಎಂದು ಗೊತ್ತಿದ್ದರೂ ಅನ್ಯಾಯ ಮಾಡಲು ಅವರು ಹೇಸುವುದಿಲ್ಲ. ಉರಿಗೌಡ, ನಂಜೇಗೌಡರ ಸೃಷ್ಟಿಸಿದವರಿಗೆ ಇವೆರಡೂ ನಕಲಿ ಪಾತ್ರಗಳು ಎಂದು ಗೊತ್ತಿರದೇ ಇರಲು ಸಾಧ್ಯವೇ ಇಲ್ಲ. ಮಾತ್ರವಲ್ಲ ಇವು ನಕಲಿ ಪಾತ್ರಗಳು ಎಂದು ಜನರಿಗೆ ತಿಳಿಯುತ್ತದೆ ಎಂದೂ ಅವರಿಗೆ ತಿಳಿಯದೇ ಇರಲು ಸಾಧ್ಯವೇ ಇರಲಿಲ್ಲ. ಕನಿಷ್ಠ ಬುದ್ಧಿಶಕ್ತಿ ಮತ್ತು ಯೋಚನಾಸಾಮರ್ಥ್ಯ ಇದ್ದವರಿಗೆಲ್ಲ
ರಿಗೂ ಅರ್ಥವಾಗುವ ವಿಷಯ ಇದು.
ಈ ಪಾತ್ರಗಳ ನೈಜತೆಯ ಕುರಿತು ಅವರು ನೀಡುತ್ತಿದ್ದ ಪುರಾವೆಗಳನ್ನು ನ್ಯಾಯಾಲಯಗಳು ಬಿಡಿ, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಕೂಡಾ ಕಂಡೊಡನೆಯೇ ಕಸದ ಬುಟ್ಟಿಗೆ ಎಸೆಯುವಂತಹವು. ಆದರೂ, ಒಂದಿನಿತೂ ಅಳುಕಿಲ್ಲದೆ ಅವರು ನಕಲಿ ಪಾತ್ರಗಳನ್ನು ಅಸಲಿ ಎಂದು ಚುನಾವಣಾ ಮಾರುಕಟ್ಟೆಯಲ್ಲಿ ಬಿಕರಿಗಿಟ್ಟರು, ಖರೀದಿಸುವವರು ಖರೀದಿಸಲಿ ಎಂದು. ಮಾರುಕಟ್ಟೆ ಯಲ್ಲಿ ಒಂದಷ್ಟು ಕಾಲ ಉಳಿದುಬಿಟ್ಟರೆ ಇಂದಲ್ಲ ನಾಳೆ ಖರೀದಿಸಲು ಯಾರೋ ಬಂದೇ ಬರುತ್ತಾರೆ ಎಂದವರಿಗೆ ಗೊತ್ತಿತ್ತು. ಇದೇ ರೀತ್ಯ ‘ಏನು ಮಾಡಿದರೂ ನಡೆಯುತ್ತದೆ’ ಎನ್ನುವ ಧಾರ್ಷ್ಟ್ಯ ಮತ್ತು ‘ಏನಾದರೂ ಮಾಡುತ್ತೇವೆ ಏನೀಗ’ ಎನ್ನುವ ನಾಚಿಕೆಯೇ ಇಲ್ಲದ ಮನಃಸ್ಥಿತಿಯೇ ಮುಸ್ಲಿಮರ ಮೀಸಲಾತಿ ಕಿತ್ತುಕೊಳ್ಳುವುದರಲ್ಲೂ ಕೆಲಸ ಮಾಡಿದ್ದು. ಮೀಸಲಾತಿಯನ್ನು ಈ ರೀತಿ ಬೇಕಾಬಿಟ್ಟಿಯಾಗಿ ನೀಡಲು, ನೀಡಿದ್ದನ್ನು ಕಿತ್ತುಕೊಳ್ಳಲು, ಕಿತ್ತುಕೊಂಡದ್ದನ್ನು ಮರು ಹಂಚಲು ಸಂವಿಧಾನದ ಪ್ರಕಾರ, ಕಾನೂನು ಪ್ರಕಾರ ಆಗುವುದಿಲ್ಲ ಎಂದು ಗೊತ್ತಿದ್ದೂ ಅದನ್ನು ಮಾಡುವುದು ಒಂದೆಡೆಯಾದರೆ, ಇನ್ನೊಂದೆಡೆ, ಎಲ್ಲವನ್ನೂ ಸಂವಿಧಾನದ ಪ್ರಕಾರವೇ ಮಾಡಿದ್ದೇವೆ ಎನ್ನುವ ಅಸಂಗತ ಸಮಾಜಾಯಿಷಿ ಬೇರೆ. ಇದನ್ನೆಲ್ಲಾ ಏನೆಂದು ಕರೆಯುವುದು?
ಹೌದು, ಅಧಿಕಾರದಲ್ಲಿದ್ದವರು ಪಕ್ಷಾತೀತವಾಗಿ ಸುಳ್ಳು ಹೇಳುತ್ತಾರೆ, ಪಕ್ಷಾತೀತವಾಗಿ ಭಂಡತನ ತೋರುತ್ತಾರೆ. ಆದರೆ ಇದು ಬರೀ ಸುಳ್ಳುಗಳ ವಿಚಾರ ಮಾತ್ರವಲ್ಲ. ಇದು ಬರೀ ಭಂಡತನದ ವಿಚಾರ ಮಾತ್ರವಲ್ಲ. ಈ ವಿಕಾರ ಗಳನ್ನೆಲ್ಲ ವಿವರಿಸುವ ಪದಗಳು ಪ್ರಪಂಚದ ಯಾವ ಭಾಷೆಯಲ್ಲೂ ಸೃಷ್ಟಿಯಾಗಿಲ್ಲ.
ಇಂಥದ್ದೊಂದು ವಿಕೃತಿಯನ್ನು ಧರ್ಮಪೀಠದಲ್ಲಿಕುಳಿತವರಿಗಲ್ಲದೆ ಬೇರೆ ಯಾರಿಂದಲೂ ಎದುರು ಹಾಕಿಕೊಳ್ಳಲು ದೇಶದ ಇಂದಿನ ರಾಜಕೀಯ ಸ್ಥಿತಿಯಲ್ಲಿ ಸಾಧ್ಯವಿರಲಿಲ್ಲ. ಆದುದರಿಂದ ಈ ಕಾಲದ ಕರೆಗೆ ಓಗೊಟ್ಟು ಏನು ಹೇಳಬೇಕೋ ಅದನ್ನು ಈ ಮಠಾಧೀಶರಿಬ್ಬರಿಂದ ಹೇಳಿಸಿದ ಕನ್ನಡದ ಮಣ್ಣಿನ ಗುಣಕ್ಕೆ ಶರಣು ಎನ್ನಬೇಕು. ಅಷ್ಟೇ ಅಲ್ಲ, ಧರ್ಮದ್ವೇಷ ಬಿತ್ತಿ ರಾಜಕೀಯದ ಬೆಳೆ ತೆಗೆಯುವ ತಮ್ಮ ಕೆಲಸಕ್ಕೆ ಈ ರಾಜ್ಯದ ಕಾವಿಧಾರಿ ಸ್ವಾಮಿಗಳೆಲ್ಲಾ ಹೆಗಲೆಣೆಯಾಗಿ ಇರುತ್ತಾರೆ, ಇಲ್ಲದೇ ಹೋದರೆ ಮೌನ ಸಮ್ಮತಿಯನ್ನಾದರೂ ನೀಡುತ್ತಾರೆ ಎಂದುಕೊಂಡಿದ್ದ ಆಳುವ ಪಕ್ಷದವರ ಆಲೋಚನೆಗೆ ಕನ್ನಡದ ನೆಲದಲ್ಲಿ ಆದ ಮೊದಲ ಹಿನ್ನಡೆಯಾಗಿಯೂ ಈ ಇಬ್ಬರು ಮಠಾಧೀಶರ ಮಧ್ಯಪ್ರವೇಶವು ಪ್ರಾಮುಖ್ಯವನ್ನು ಪಡೆದುಕೊಳ್ಳುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.