‘ನವಭಾರತಕ್ಕಾಗಿ ನವಕರ್ನಾಟಕ’ ಎನ್ನುವುದು ರಾಜ್ಯ ಸರ್ಕಾರ ಈ ವರ್ಷದ ಬಜೆಟ್‌ನಲ್ಲಿ ಮಾಡಿರುವ ಘೋಷಣೆ. ಯಾವ ರೀತಿಯ ‘ನವಭಾರತ’ಕ್ಕಾಗಿ ಯಾವ ರೀತಿಯ ‘ನವಕರ್ನಾಟಕ’ ಸಿದ್ಧವಾಗುತ್ತಿದೆ ಎಂಬುದು ನಮ್ಮ ಮುಂದಿರುವ ಪ್ರಶ್ನೆ.
‘ನವ’ ಎಂದರೆ ಹೊಸತು. ಕರ್ನಾಟಕದಲ್ಲಿ ಇತ್ತೀಚೆಗೆ ಹೊಸತು ಏನಾದರೂ ಕಾಣಿಸಿಕೊಂಡಿದ್ದರೆ ಅದರ ಹೆಸರು ದ್ವೇಷ ಅಂತ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಅದರ ಹೆಸರು ಮುಸ್ಲಿಂ ದ್ವೇಷ ಅಂತ. ಶತಶತಮಾನಗಳಿಂದ ಈ ನೆಲದಲ್ಲಿ ಬೀಡುಬಿಟ್ಟಿದ್ದ ಸಾಮಾಜಿಕ ಸೌಹಾರ್ದ ಶಿಥಿಲವಾಗುತ್ತಿರುವುದು ಹೊಸ ಬೆಳವಣಿಗೆ. ಬಸವಾದಿ ಶರಣರು ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಕಟ್ಟಿದ್ದ ‘ಅನ್ಯರಿಗೆ ಅಸಹ್ಯ ಪಡಬೇಡ’ ಎನ್ನುವ ಪ್ರಬುದ್ಧ ಪರಂಪರೆಯನ್ನು ಶತಾಯಗತಾಯ ಅಂತ್ಯಗೊಳಿಸುವ ಯಜ್ಞಕ್ಕೆ ರಾಜ್ಯ ಸರ್ಕಾರವೇ ಪೌರೋಹಿತ್ಯ ವಹಿಸಿರುವುದಂತೂ ಕರ್ನಾಟಕದ ಮಟ್ಟಿಗೆ ಹೊಚ್ಚ ಹೊಸದು. ನವಕರ್ನಾಟಕ ಎಂದರೆ ಇದುವೇ ಇರಬಹುದು.
ಆಳುವ ಬಿಜೆಪಿಯ ಹತಾಶೆಯನ್ನು ಅರ್ಥ ಮಾಡಿಕೊಳ್ಳಬಹುದು. ಅದಕ್ಕೆ ರಾಜ್ಯದಲ್ಲಿ ಈ ತನಕ ಒಮ್ಮೆಯೂ ಕನಿಷ್ಠ ಬಹುಮತವನ್ನೂ ಪಡೆಯಲಾಗಿಲ್ಲ. ಎರಡು ಬಾರಿಯೂ ಸರ್ಕಾರ ರಚಿಸಲು ಬೇಕಾದ ಸಂಖ್ಯಾಬಲ
ವನ್ನು ಅದು ಖರೀದಿಸಿ ಗಳಿಸಿದ್ದು. ಹಾಗಾಗಿ 2023ರ ಚುನಾ
ವಣೆಯಲ್ಲಾದರೂ ಸ್ಪಷ್ಟ ಬಹುಮತದಿಂದ ಗೆದ್ದು ಅಧಿಕಾರ ಉಳಿಸಿಕೊಳ್ಳಬೇಕು ಎಂದು ಅದು ಬಯಸುತ್ತದೆ. ಇದರಲ್ಲಿ ತಪ್ಪೇನಿಲ್ಲ. ಆದರೆ, ಈ ಗುರಿ ತಲುಪಲು ಆ ಪಕ್ಷ ಈಗ ಬಳಸಿಕೊಳ್ಳುತ್ತಿರುವ ದ್ವೇಷಕೇಂದ್ರಿತ ರಾಜಕೀಯದ ಮಾರ್ಗ ಇದೆಯಲ್ಲ ಅದು ಮನುಷ್ಯ ಮಾರ್ಗವಲ್ಲ. ಮನುಷ್ಯತ್ವ ಎನ್ನುವುದನ್ನು ದೇಹದ ಒಂದೇ ಒಂದು ಕಣದಲ್ಲಾದರೂ ಒಂದಿನಿತು ಉಳಿಸಿಕೊಂಡಿರುವ ಯಾವೊಬ್ಬನೂ ಯೋಚಿಸದ ರೀತಿಯಲ್ಲಿ ಯೋಚಿಸುವ ಕ್ರೂರ ಶಕ್ತಿಯೊಂದು ಕರ್ನಾಟಕದಲ್ಲಿ ಆಳುವ ಪಕ್ಷದ ರಾಜಕಾರಣವನ್ನು ಆವರಿಸಿಕೊಂಡಂತೆ ಕಾಣುತ್ತಿದೆ. ದ್ವೇಷದ ಕಡಲಲ್ಲಿ ತಾನು ವಿಕೃತಾನಂದದಿಂದ ಮಿಂದೇಳುವುದು ಮಾತ್ರವಲ್ಲದೆ ಇಡೀ ರಾಜ್ಯವನ್ನೇ ಮುಳುಗಿಸುವುದು ಅದರ ಮೂಲಮಂತ್ರ ಮತ್ತು ಚುನಾವಣಾ ತಂತ್ರ ಎರಡೂ ಆಗಿರುವಂತಿದೆ.
ಒಮ್ಮೆ ಸ್ಫೋಟಿಸಿದ ಅಣುಬಾಂಬ್ ಮುಂದೆ ಹುಟ್ಟಲಿರುವ ಹಲವಾರು ತಲೆಮಾರುಗಳ ಜೀವಕಣ
ಗಳನ್ನೂ ವಿಕಾರಗೊಳಿಸುವ ಹಾಗೆ, ಈಗ ಆಳುವ ಪಕ್ಷ ಆಯ್ದುಕೊಂಡಿರುವ ಚುನಾವಣಾ ರಾಜಕೀಯದ ಮಾರ್ಗ ಈ ಸಮಾಜದ ಸ್ವಾಸ್ಥ್ಯಕ್ಕೆ ತಲೆತಲಾಂತರಗಳ ಕಾಲ ಕೆಡುಕು ಉಂಟುಮಾಡಲಿದೆ. ಮಿದುಳಿನಲ್ಲಿ ನಂಜು ಆವರಿಸಿಕೊಂಡು ವಿವೇಚನಾ ಸಾಮರ್ಥ್ಯವನ್ನು ಸಂಪೂರ್ಣವಾಗಿ ಕಳೆದುಕೊಂಡಿರುವ ವ್ಯಕ್ತಿ ಅಥವಾ ಶಕ್ತಿಗಳಿಗೆ ಮಾತ್ರ ಇಂತಹ ಮಾರ್ಗಗಳನ್ನು ಆವಿಷ್ಕರಿಸಲು ಸಾಧ್ಯ. ಇದೀಗ ‘ನವಕರ್ನಾಟಕ’ದ ಮಾದರಿ ಬೆಳೆಯುತ್ತಿದೆ. ಇದನ್ನು ‘ನವಭಾರತ’ ಮಾತ್ರವಲ್ಲ ಸಮಸ್ತ ಜಗತ್ತು ಆತಂಕದಿಂದ ಗಮನಿಸುತ್ತಿದೆ.
ಇಷ್ಟೇ ಅಲ್ಲ. ರಾಜ್ಯ ಸರ್ಕಾರ ತನ್ನ ಸಾರ್ವಭೌಮ ಅಧಿಕಾರ ಬಳಸಿ ಮಾಡಬೇಕಿರುವ ಆಡಳಿತ ಕಾರ್ಯ
ಗಳನ್ನೆಲ್ಲಾ ಹೊರಗುತ್ತಿಗೆ ನೀಡಿ ಅಧಿಕಾರ ಚಲಾಯಿಸುತ್ತಿದೆಯೇನೋ ಎನ್ನುವಂತಹ ಬೆಳವಣಿಗೆಗಳು ಕರ್ನಾಟಕ
ದಲ್ಲಿ ಆಗುತ್ತಿವೆ. ಹಿಂದೂಗಳ ಹೆಸರು ಹೇಳಿಕೊಂಡು ಯಾವುದೋ ಕೆಲ ಸಂಘಟನೆಗಳ ಮಂದಿ, ‘ಮುಸ್ಲಿಂ ಧರ್ಮಕ್ಕೆ ಸೇರಿದವರು ಜಾತ್ರೆಗಳಲ್ಲಿ ವ್ಯಾಪಾರ ಮಾಡಬಾರದು’ ಎಂದು ನಿರ್ಬಂಧ ಹೇರುತ್ತಿರುವ ವಿಚಾರವನ್ನೇ ಗಮನಿಸಿ. ಯಾವುದೇ ದೇಶದಲ್ಲಿ, ಅದು ಪ್ರಪಂಚದ ಕ್ರೂರಾತಿಕ್ರೂರ ಸರ್ವಾಧಿಕಾರಿಯ ಆಡಳಿತವಿರುವ ದೇಶವೇ ಆಗಿದ್ದರೂ ಸರಿ, ಸಾರ್ವಜನಿಕ ವ್ಯವಹಾರಗಳಿಗೆ ಸಂಬಂಧಿಸಿದಂತೆ ಯಾರಿಗಾದರೂ ನಿರ್ಬಂಧ ವಿಧಿಸುವ ಅಧಿಕಾರ ಇರುವುದು ಸರ್ಕಾರಕ್ಕೆ ಮಾತ್ರ. ಸರ್ಕಾರ ಬಿಟ್ಟು ಇನ್ಯಾವುದೇ ಸಂಘಟನೆ ಅದನ್ನು ಮಾಡಿದರೆ ಸರ್ಕಾರ ಇದ್ದೂ ಸತ್ತಂತೆ.
ಯಾವುದೋ ಸಂಘಟನೆಗೆ ಸೇರಿದ ಕೆಲವರು ‘ಅವರು ಅಲ್ಲಿ ಹಾಗೆ ಮಾಡುವ ಹಾಗಿಲ್ಲ, ಇವರು ಇಲ್ಲಿ ಹೀಗೆ ಮಾಡುವ ಹಾಗಿಲ್ಲ. ಇವರು ಅಲ್ಲಿ ಅವರಿಂದ ಖರೀದಿಸುವ ಹಾಗಿಲ್ಲ, ಅವರು ಇನ್ನೆಲ್ಲಿಯೋ ಬೇರೆ ಯಾರ ಜತೆಗೋ ಓಡಾಡುವಂತಿಲ್ಲ...’ ಎನ್ನುತ್ತಾ ತುಘಲಕ್ ದರ್ಬಾರ್ ನಡೆಸುತ್ತಿದ್ದರೆ, ಆಳುವ ಸರ್ಕಾರದ ಮಂದಿ ನಾಟಕ ನೋಡುವ ಹಾಗೆ ನೋಡುತ್ತಿದ್ದಾರೆ. ಯಾವುದೋ ಹಳೆಯ ಆದೇಶವೊಂದನ್ನು ತೋರಿಸಿ, ಮುಸ್ಲಿಮರಿಗೆ ಹಾಕಿದ ವ್ಯಾಪಾರ ಬಹಿಷ್ಕಾರವನ್ನು ಸಮರ್ಥಿಸುವ ಕೆಲಸವನ್ನು ಮುಖ್ಯಮಂತ್ರಿ ಮತ್ತು ಕಾನೂನು ಮಂತ್ರಿ ಮಾಡಿದ್ದು ವರದಿಯಾಗಿದೆ. ಮೊದಲನೆಯದಾಗಿ,
ಆ ಆದೇಶಕ್ಕೂ ಈಗ ನಡೆಯುತ್ತಿರುವ ಘಟನೆಗಳಿಗೂ ಯಾವುದೇ ಸಂಬಂಧ ಇಲ್ಲ. ಇದೆ ಎಂದು ಒಂದು ವೇಳೆ ತರ್ಕಕ್ಕಾಗಿ ಭಾವಿಸಿದರೂ ಆದೇಶದ ಪ್ರಕಾರ ನಿರ್ಬಂಧ ವಿಧಿಸಬೇಕಿರುವುದು ಸರ್ಕಾರವೇ ವಿನಾ ಯಾವುದೇ ಸಂಘಟನೆಗಳಲ್ಲ. ಆಡಳಿತ ನಡೆಯಬೇಕಿರುವುದು ಕಾನೂನಿನ ಮೂಲಕ, ಸಾಮಾಜಿಕ ಸನ್ನಿಯ ಬಲ
ಪ್ರದರ್ಶನದ ಮೂಲಕವಲ್ಲ.
ಮುಸ್ಲಿಂ ಹೆಣ್ಣು ಮಕ್ಕಳ ಶಿರವಸ್ತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ ತೀರ್ಪಿನಿಂದ ಮನನೊಂದು ಕೆಲವು ಮುಸ್ಲಿಂ ವರ್ತಕರು ಒಂದು ದಿನ ವ್ಯಾಪಾರ ಸ್ಥಗಿತಗೊಳಿಸಿದ್ದಕ್ಕೆ ಈ ಬಹಿಷ್ಕಾರ ಅಂತ ‘ವಿರೋಧ ಪಕ್ಷಗಳ ವಿರೋಧ ಪಕ್ಷ’ಗಳಂತೆ ನಡೆದುಕೊಳ್ಳುತ್ತಿರುವ ಕೆಲ ಮಾಧ್ಯಮಗಳ ಮಂದಿ ಡಂಗುರ ಹೊಡೆಯುತ್ತಿದ್ದಾರೆ. ಹಾಗೊಂದು ನ್ಯಾಯಾಂಗ ನಿಂದನೆ ನಡೆದೇ ಇದ್ದರೆ ಅದರ ವಿರುದ್ಧ ಸರ್ಕಾರವಾಗಲೀ ನ್ಯಾಯಾಲಯಗಳಾಗಲೀ ಕ್ರಮ ಕೈಗೊಳ್ಳಬೇಕ
ಲ್ಲವೇ? ಆದರೆ ಆ ಕೆಲಸವನ್ನು ಯಾವುದೋ ಅಂಚಿನ ಸಂಘಟನೆಗಳಿಗೆ ಮತ್ತು ಅತ್ತ ಧರ್ಮವೂ ಗೊತ್ತಿಲ್ಲದ, ಇತ್ತ ಸಂವಿಧಾನವನ್ನೂ ತಿಳಿದುಕೊಳ್ಳದ ಕೆಲ ಮಠಾಧೀಶರು
ಗಳಿಗೆ ಹೊರಗುತ್ತಿಗೆ ನೀಡಿದ್ದು ಯಾರು? ಯಾವ ಕಾನೂನಿನ ಅಡಿಯಲ್ಲಿ?
ಶಬರಿಮಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಅಸಭ್ಯವಾಗಿಯೂ ಹಿಂಸಾತ್ಮಕವಾ
ಗಿಯೂ ಪ್ರತಿಭಟನೆ ನಡೆದಿತ್ತಲ್ಲ. ಆಗ ನ್ಯಾಯಾಂಗವಾಗಲೀ ಆಳುವ ಸರ್ಕಾರಗಳಾಗಲೀ ಕೈಗೊಳ್ಳಬೇಕಾದ ಕ್ರಮ ಕೈಗೊಂಡಿದ್ದರೆ ಆ ನಂತರ ಯಾರೂ ಹಾಗೆ ಮಾಡುವ ಪ್ರಶ್ನೆಯೇ ಇರಲಿಲ್ಲವಲ್ಲ. ಈ ಪ್ರಶ್ನೆಗಳೆಲ್ಲಾ ನವಕರ್ನಾಟಕ
ದಲ್ಲಿ ಪ್ರಸ್ತುತವೇ ಅಲ್ಲ. ಇಲ್ಲಿರುವುದು ಅರ್ಧ ಚುನಾಯಿತ, ಅರ್ಧ ಖರೀದಿಸಲ್ಪಟ್ಟ ಒಂದು ಸರ್ಕಾರ. ಇಲ್ಲಿ ಮೆರೆಯುತ್ತಿರುವುದು ಇನ್ನೊಂದು ಬಡತಾಯಿ ಮಗನ ಹೆಣ ಯಾವಾಗ ಉರುಳೀತು ಎನ್ನುವ ರಣಹದ್ದು ನಿರೀಕ್ಷೆಯ ಸುತ್ತ ಹೆಣೆಯಲಾಗುವ ರಾಜಕೀಯ ತಂತ್ರ. ಇಲ್ಲಿ ಕೊಂದವರ‍್ಯಾರು ಎನ್ನುವುದರ ಮೇಲೆ ಕೊಲೆಯ ಕ್ರೌರ್ಯ ನಿರ್ಣಯಿಸಲ್ಪಡುತ್ತದೆ, ಜಾತಿಯ ಆಧಾರದ ಮೇಲೆ ಸಾವಿನ ದಾರುಣತೆ ನಿರ್ಧಾರವಾಗುತ್ತದೆ, ಸಂತ್ರಸ್ತನ ಧರ್ಮದ ಆಧಾರದ ಮೇಲೆ ಪರಿಹಾರ ಘೋಷಣೆ ಆಗುತ್ತದೆ. ಆಳುವ ಪಕ್ಷಕ್ಕೆ ಅನುಕೂಲವಾಗಬಹುದಾದರೆ ಘೋರಾಪರಾಧಗಳೂ ನವಕರ್ನಾಟಕದಲ್ಲಿ ದೇಶಸೇವೆ, ಧರ್ಮರಕ್ಷಣೆಯ ಕೈಂಕರ್ಯಗಳಾಗಿಬಿಡುತ್ತವೆ.
ದ್ವೇಷವನ್ನು ಬಿತ್ತಿ ರಾಜಕೀಯದ ಬೆಳೆ ತೆಗೆಯಲು ಉತ್ತರಭಾರತದಲ್ಲೆಲ್ಲೋ ರೂಪುಗೊಂಡ ರಾಜಕೀಯ ಮಾದರಿಗೆ ಕರ್ನಾಟಕವನ್ನು ದಕ್ಷಿಣದ ವಸಾಹತನ್ನಾಗಿ ರೂಪಿಸುವ ಹುನ್ನಾರವಿದು. ಜನತೆಗೆ ಧರ್ಮದ್ವೇಷದ ಅಮಲೇರಿಸಿ ಅವರು ಏನನ್ನೂ ಪ್ರಶ್ನಿಸದಂತೆ ಮಾಡುವ ವಿಷ ಮತ್ತು ವಿಷಯಾಂತರ ರಾಜಕಾರಣದ ಕರ್ನಾಟಕ ಅವತರಣಿಕೆ ಇದು. ಕನ್ನಡಿಗರಿಗೆ ಬೇಕಾಗಿರುವ ನವಕರ್ನಾಟಕ ಇದಲ್ಲ. ಕನ್ನಡಿಗರಿಗೆ ಬೇಕಾಗಿರುವುದು ಬಸವಾದಿ ಶರಣರು ಕಟ್ಟಿದ ಕರ್ನಾಟಕ, ಕನಕದಾಸರಂತಹ ದಾಸವರೇಣ್ಯರು ಕಟ್ಟಿದ ಕರ್ನಾಟಕ, ವೀರ ಕಲ್ಕುಡ-ಜಕಣಾಚಾರಿಯಂತಹವರ ಶ್ರಮಿಕ- ಕೌಶಲದ ಮೌಲ್ಯಗಳನ್ನು ಸಾರುವ ಕರ್ನಾಟಕ, ಧರ್ಮಗಳಿಗೆ ಧರ್ಮ ಬೋಧಿಸಿದ ಮಹಾ ಮಾನವತಾವಾದಿ ಕುವೆಂಪು ರೂಪಿಸಿದ ಕರ್ನಾಟಕ, ಸಂವಿಧಾನಕ್ಕೆ ಮೊದಲೇ ಸಾಮಾಜಿಕ ನ್ಯಾಯಕ್ಕೆ ಮುನ್ನುಡಿ ಬರೆದ ನಾಲ್ವಡಿ ಕೃಷ್ಣರಾಜ ಒಡೆಯರು ಕಟ್ಟಿದ ಕರ್ನಾಟಕ, ‘ಸತ್ಯಕ್ಕೆ ಎದೆಯಲ್ಲಿ ಹಾದಿ ಕೊಟ್ಟೇವು’ ಅಂತ ಹೋರಾಡಿ ಮರೆಯಿಂದ ತೂರಿಬಂದ ಬಾಣಕ್ಕೆ ಬಲಿಯಾದ ಕೋಟಿ ಚೆನ್ನಯರ ಐತಿಹ್ಯದ ನೆರಳಲ್ಲಿ ನಿರ್ಮಾಣವಾದ ಕರ್ನಾಟಕ. ಹಾಗೆಯೇ, ಉಳಿದ ಆಪಾದನೆಗಳೆಲ್ಲಾ ಏನೇ ಇದ್ದರೂ ಮುತ್ಸದ್ದಿಗಳಾಗಿ ಮೆರೆದು ರಾಷ್ಟ್ರದ ಗಮನ ಸೆಳೆದ ನಿಜಲಿಂಗಪ್ಪ, ದೇವರಾಜ ಅರಸು, ರಾಮಕೃಷ್ಣ ಹೆಗಡೆಯಂತಹವರು ದೇಣಿಗೆ ನೀಡಿದ ಕರ್ನಾಟಕ.
ಇಂತಹ ಜೀವಪರ ಪರಂಪರೆಗಳಲ್ಲಿ ರೂಪುಗೊಂಡ ಉದಾತ್ತವೂ ಮಾನವೀಯವೂ ಆದ ಕರ್ನಾಟಕ
ತ್ವವು ಎರವಲು ತಂದ ರಾಜಕೀಯದ ಎಂಜಲು ಮಾದರಿ ಯೊಂದರ ಕುತಂತ್ರದಿಂದಾಗಿ ಕೊನೆಗೊಳ್ಳುತ್ತಿದೆ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.