ADVERTISEMENT

ನಾರಾಯಣ ಎ. ಬರೆದ ಲೇಖನ: ಯಾವ ಕಡೆ ಸಾಮಾಜಿಕ ನ್ಯಾಯದ ನಡೆ?

ಪ್ರಬಲ ಜಾತಿಗಳ ಬಡವರಿಗೆ ನೀಡಬೇಕಿರುವುದು ಬಿಪಿಎಲ್ ಕಾರ್ಡ್, ಮೀಸಲಾತಿಯಲ್ಲ

ನಾರಾಯಣ ಎ
Published 3 ಜನವರಿ 2023, 5:26 IST
Last Updated 3 ಜನವರಿ 2023, 5:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕರ್ನಾಟಕದಲ್ಲಿ ಎರಡು ಪ್ರಬಲ ಜಾತಿಗಳಿಗೆ ನೀಡಲಾಗಿರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಸರ್ಕಾರ ಸೂತ್ರವೊಂದನ್ನು ಕಂಡುಕೊಂಡಿದೆ ಎಂಬ ವರದಿಗಳಿವೆ. ಸೂತ್ರ ಏನೇ ಇರಲಿ, ಅದರ ಸಾಂವಿಧಾನಿಕ ಸಿಂಧುತ್ವದ ಪ್ರಶ್ನೆಗಳೇನೇ ಇರಲಿ, ಈ ಎರಡು ಜಾತಿಗಳಿಗೆ ಮೀಸಲಾತಿ ಹೆಚ್ಚಿಸಲು ಹೊರಟಿರುವ ಸರ್ಕಾರದ ನಡೆ ಅದ್ಯಾವ ರೀತಿಯ ಸಾಮಾಜಿಕ ನ್ಯಾಯದ ಕಡೆ ಎನ್ನುವ ಪ್ರಶ್ನೆಯನ್ನೀಗ ಎತ್ತಬೇಕಿದೆ.

‘ನಮ್ಮ ಜಾತಿಗಳಲ್ಲೂ ಬಡವರಿದ್ದಾರೆ, ಈ ಬಡವರಿಗೆ ಇತರ ಜಾತಿಗಳ ಬಡವರಿಗೆ ಸಿಗುತ್ತಿರುವಷ್ಟು ಮೀಸಲಾತಿ ದೊರೆಯದೇ ಇರುವುದರಿಂದ ಅವರು ತಾರತಮ್ಯಕ್ಕೆ ಒಳಗಾಗಿದ್ದಾರೆ. ಹಾಗಾಗಿ, ನಮ್ಮ ಜಾತಿಯ ಬಡವರಿಗೆ ನೆರವಾಗುವ ದೃಷ್ಟಿಯಿಂದ ನಾವು ಮೀಸಲಾತಿ ಕೇಳಿದರೆ ತಪ್ಪೇನು? ಸಂವಿಧಾನ ಎಲ್ಲರನ್ನೂ ಸಮನಾಗಿ ಪರಿಗಣಿಸಬೇಡವೇ?’ ಇದು, ಮೀಸಲಾತಿ ಬೇಕೆಂದು ಆಗ್ರಹಿಸುವ ಪ್ರಬಲ ಜಾತಿಯವರು ಮುಂದಿಡುವ ವಾದ.

ಪ್ರಬಲ ಜಾತಿಗಳಲ್ಲಿ ಕೂಡಾ ಬಡವರಿದ್ದಾರೆ ಎನ್ನುವುದು ನಿಜ. ಹಾಗೆಂದು, ಆ ಜಾತಿಗಳ ಬಡವರಿಗೆ ಮೀಸಲಾತಿ ನೀಡದಿದ್ದರೆ ಅದು ತಾರತಮ್ಯವಾಗುತ್ತದೆ ಎನ್ನುವುದು ಮಾತ್ರ ತಪ್ಪು. ಯಾಕೆಂದರೆ, ಮೀಸಲಾತಿ ಎನ್ನುವುದು ಬಡತನ ನಿರ್ಮೂಲನ ಕಾರ್ಯಕ್ರಮ ಅಲ್ಲ. ಬಡತನ ನಿರ್ಮೂಲನ ಕಾರ್ಯಕ್ರಮಗಳು ಏನಿವೆಯೋ ಅವು ಎಲ್ಲಾ ಜಾತಿಗಳಲ್ಲಿರುವ ಬಡವರಿಗೂ ದೊರೆಯುತ್ತವೆ. ಅದಕ್ಕೆ ಅವರ ಬಳಿ ಬಿಪಿಎಲ್ ಕಾರ್ಡ್ ಇದ್ದರೆ ಸಾಕು. ಬಿಪಿಎಲ್ ಕಾರ್ಡ್ ನೀಡುವುದು ಬಡತನದ ಆಧಾರದಲ್ಲಿ, ಜಾತಿಯ ಆಧಾರದಲ್ಲಿ ಅಲ್ಲ. ಸಾಲದ್ದಕ್ಕೆ ಜಾತಿ ಆಧಾರಿತ ಅಭಿವೃದ್ಧಿ ಮಂಡಳಿಗಳು ಕೂಡಾ ಇವೆ. ಹಾಗಾಗಿ, ‘ನಮ್ಮ ಜಾತಿಯ ಬಡವರಿಗೆ ಅನ್ಯಾಯವಾಗುತ್ತಿದೆ’ ಎಂಬ ವಾದದಲ್ಲಿ ಹುರುಳಿಲ್ಲ.

ADVERTISEMENT

ಹಾಗಾದರೆ, ಮೀಸಲಾತಿ ಯಾರಿಗಾಗಿ? ರಾಜಕೀಯ ಅಧಿಕಾರದಲ್ಲಿ ಮತ್ತು ಸರ್ಕಾರಿ ನೌಕರಿಗಳಲ್ಲಿ ಎಲ್ಲ ಜಾತಿಯವರೂ ಪ್ರಾತಿನಿಧ್ಯ ಪಡೆಯಬೇಕೆಂಬ ಉದ್ದೇಶದಿಂದ ಮೀಸಲಾತಿ ಸೌಲಭ್ಯವನ್ನು ಸಂವಿಧಾನವು ನೀಡಿದೆ. ರಾಜಕೀಯ ಅಧಿಕಾರ ಮತ್ತು ಸರ್ಕಾರಿ ಹುದ್ದೆಗಳೆಲ್ಲಾ ಕೆಲವೇ ಜಾತಿಗಳ ಕೈಯ್ಯಲ್ಲಿ ಉಳಿದರೆ ಅದರಿಂದಾಗಿ ತಲೆದೋರಬಹುದಾದ ಅಸಮಾನತೆ, ಅಸಮಾಧಾನ, ಅಸಂತೃಪ್ತಿ ಮತ್ತು ಪರಕೀಯ ಪ್ರಜ್ಞೆಯಿಂದಾಗಿ ದೇಶದಲ್ಲಿ ಆಡಳಿತ ನಡೆಸುವುದು ಮತ್ತು ದೇಶವನ್ನು ಒಂದಾಗಿ ಉಳಿಸಿಕೊಳ್ಳುವುದು ಕಷ್ಟ. ಹಾಗಾಗಿ, ಯಾವ್ಯಾವ ಜಾತಿಗಳು ರಾಜಕೀಯದಲ್ಲಿ ಮತ್ತು ಸರ್ಕಾರಿ ನೌಕರಿಗಳಲ್ಲಿ ಸೂಕ್ತ ಪ್ರಾತಿನಿಧ್ಯ ಪಡೆದಿರಲಿಲ್ಲವೋ ಯಾವ್ಯಾವ ಜಾತಿಗಳಿಗೆ ಅವುಗಳ ಸಾಮಾಜಿಕ ಹಿಂದುಳಿದಿರುವಿಕೆಯ ಕಾರಣ ದಿಂದಾಗಿ ಮುಂದೆಯೂ ಅಂತಹ ಪ್ರಾತಿನಿಧ್ಯವನ್ನು ಮುಕ್ತವಾಗಿ ಸ್ಪರ್ಧಿಸಿ ಪಡೆದುಕೊಳ್ಳಲು ಸಾಧ್ಯವಿರಲಿಲ್ಲವೋ ಅಂತಹ ಜಾತಿಗಳಿಗೆ ಮೀಸಲಾತಿಯನ್ನು ಸಂವಿಧಾನ ನೀಡಿದೆ. ಇಂದಿಗೂ ಮುಂದೆಯೂ ಮೀಸಲಾತಿ ಪಡೆಯಲು ಇವೆರಡು ಅಂಶಗಳೇ ಮಾನದಂಡಗಳಾಗಿರತಕ್ಕದ್ದು. ‘ನಮ್ಮ ಜಾತಿಯಲ್ಲೂ ಬಡವರಿದ್ದಾರೆ’ ಎನ್ನುವುದು ಮೀಸಲಾತಿ ಕೇಳಲು ಮಾನದಂಡವಲ್ಲ.

ಪ್ರಬಲ ಜಾತಿಯವರು ಮುಂದಿಡುವ ಇನ್ನೊಂದು ವಾದ ಎಂದರೆ, ‘ನಮ್ಮ ಜನಸಂಖ್ಯೆ ದೊಡ್ಡದಿದೆ, ನಮಗೆ ಸಿಗುವ ಮೀಸಲಾತಿ ಪ್ರಮಾಣ ಕಡಿಮೆ ಇದೆ’ ಎಂದು. ಮೊದಲಿಗೆ, ಈಗಾಗಲೇ ನೀಡಿರುವ ಪ್ರಮಾಣದ ಮೀಸಲಾತಿಗೂ ಅವರು ಅರ್ಹರಲ್ಲ ಎನ್ನುವ ವಿಚಾರವನ್ನು ಮರೆಮಾಚಲಾಗುತ್ತದೆ. ಅದಿರಲಿ, ಯಾವುದೋ ಒಂದು ಪ್ರಬಲ ಜಾತಿಯು ಮೀಸಲಾತಿ ಬೇಕೆಂದೋ ಅಥವಾ ಮೀಸಲಾತಿ ಹೆಚ್ಚಿಸಬೇಕೆಂದೋ ಕೇಳಬೇಕಾದರೆ ಅದಕ್ಕೆ ಆಧಾರ ಆ ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲಾಗಿದೆಯೇ ಇಲ್ಲವೇ ಎನ್ನುವುದಲ್ಲ. ಬದಲಿಗೆ, ಆ ಜಾತಿಯ ಜನ ತಮ್ಮ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯದಲ್ಲಿ ಮತ್ತು ಉದ್ಯೋಗದಲ್ಲಿ ಈಗಾಗಲೇ ಪ್ರಾತಿನಿಧ್ಯ ಪಡೆದಿದ್ದಾರೆಯೇ ಇಲ್ಲವೇ ಎನ್ನುವುದು ಮುಖ್ಯ ವಿಚಾರ.

ಮೀಸಲಾತಿ ಹೆಚ್ಚಿಸಬೇಕು, ಪ್ರವರ್ಗ ಬದಲಾಗಬೇಕು ಎಂದು ಈಗ ಆಗ್ರಹಿಸುತ್ತಿರುವ ಎರಡೂ ಪ್ರಬಲ ಜಾತಿಗಳವರು ರಾಜಕೀಯದಲ್ಲಿ ಅವರ ಜನಸಂಖ್ಯೆಯ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರಾತಿನಿಧ್ಯ ಪಡೆದಿದ್ದಾರೆ ಎಂಬುದಕ್ಕೆ ಪುರಾವೆ ಇದೆ. ಸರ್ಕಾರಿ ಉದ್ಯೋಗಗಳಲ್ಲಿ ಕೂಡಾ ಈ ಎರಡು ಜಾತಿಗಳ ಪ್ರಾತಿನಿಧ್ಯ ಬಹಳಷ್ಟು ಪ್ರಮಾಣದಲ್ಲಿ ಇದೆ ಎನ್ನುವುದು ಅಧಿಕೃತ ಅಂಕಿ ಸಂಖ್ಯೆಗಳಿಲ್ಲದೆ ಹೋದರೂ ಎಲ್ಲರಿಗೂ ತಿಳಿದಿರುವ ವಿಚಾರ. ಇಲ್ಲ ಎನ್ನುವುದಾದರೆ ಅದಕ್ಕೆ ಪುರಾವೆ ಒದಗಿಸಬೇಕು. ಪುರಾವೆ ಒದಗಿಸಿದರೂ ಬರೀ ಈ ಎರಡು ಜಾತಿಗಳಿಗೆ ಮಾತ್ರ ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರಿ ಉದ್ಯೋಗ ಬೇಕು ಎಂದರೆ ಅದು ಈಡೇರಿಸಲು ಅಸಾಧ್ಯವಾದ ಬೇಡಿಕೆ.

ಜನಸಂಖ್ಯೆಯ ಆಧಾರದಲ್ಲಿ ನಿರ್ಧರಿಸುವುದಾದರೆ ಅದನ್ನು ಎಲ್ಲಾ ಜಾತಿಗಳ ವಿಚಾರದಲ್ಲೂ ಮಾಡಬೇಕಾಗುತ್ತದೆ. ಅಂದರೆ, ಈಗಿರುವ ಮೀಸಲಾತಿಗೆ ಬದಲಾಗಿ ಎಲ್ಲಾ ಜಾತಿಗಳಿಗೂ ಅವರವರ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯದಲ್ಲಿ ಮತ್ತು ಉದ್ಯೋಗಗಳಲ್ಲಿ ಪ್ರಾತಿನಿಧ್ಯ ನೀಡುವ ವ್ಯವಸ್ಥೆ ಬರಬೇಕಾಗುತ್ತದೆ. ಮೀಸಲಾತಿ ವಿವಾದಕ್ಕೆ ಇದುವೇ ಅಂತಿಮ ಪರಿಹಾರ ಅಂತ ಕೆಲವರ ವಾದ. ಪರಿಹಾರ ಹೌದೋ ಅಲ್ಲವೋ ಎನ್ನುವುದು ಬೇರೆ ಪ್ರಶ್ನೆ. ಸದ್ಯಕ್ಕಂತೂ ಇದನ್ನು ಜಾರಿಗೆ ತರುವುದಕ್ಕೆ ತಯಾರಿಯೂ ಇಲ್ಲ, ಸಾಧ್ಯತೆಯೂ ಇಲ್ಲ.

ಪ್ರಬಲ ಜಾತಿಯವರು ಇನ್ನೊಂದು ವಾದ ಮಂಡಿಸುತ್ತಾರೆ. ಅದು ಹೀಗಿದೆ: ‘ಅವರ ಜಾತಿಗೆ– ಜಾತಿಯನ್ನು ಇಡಿಯಾಗಿ ಪರಿಗಣಿಸಿದಾಗ– ರಾಜಕೀಯ ಮತ್ತು ಔದ್ಯೋಗಿಕ ಪ್ರಾತಿನಿಧ್ಯ ಸಿಕ್ಕರೂ ಕೆಲವು ಉಪಜಾತಿ, ಉಪಪಂಗಡಗಳಿಗೆ ಸರಿಯಾದ ಪ್ರಾತಿನಿಧ್ಯ ದೊರಕಿಲ್ಲ. ಹಾಗಾಗಿ ಅಂತಹ ಉಪಜಾತಿ, ಉಪಪಂಗಡಗಳಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವುದಕ್ಕಾಗಿ ಮೀಸಲಾತಿ ಹೆಚ್ಚಳ ಅಥವಾ ಪ್ರವರ್ಗ ಬದಲಾವಣೆ ಬೇಕು’. ಮೇಲ್ನೋಟಕ್ಕೆ ಇದು ಸರಿಯಾದ ಬೇಡಿಕೆ ಅಂತ ಅನ್ನಿಸಬಹುದು. ಆದರೆ, ಪ್ರಶ್ನೆ ಇರುವುದು ಯಾವುದೋ ಜಾತಿ, ಪಂಗಡ ಅಥವಾ ಉಪಪಂಗಡಗಳಿಗೆ ಈಗಾಗಲೇ ರಾಜಕೀಯದಲ್ಲಿ ಮತ್ತು ಸರ್ಕಾರಿ ನೌಕರಿಗಳಲ್ಲಿ ಪ್ರಾತಿನಿಧ್ಯ ಇದೆಯೇ ಇಲ್ಲವೇ ಎನ್ನುವುದಷ್ಟೇ ಅಲ್ಲ. ಅಂತಹ ಜಾತಿ, ಪಂಗಡ, ಉಪಪಂಗಡಗಳಿಗೆ ಇತರ ಜಾತಿಗಳ ಜತೆಗೆ ಸ್ಪರ್ಧಿಸಿ ತಮ್ಮ ಪ್ರಾತಿನಿಧ್ಯ ಹೆಚ್ಚಿಸಿಕೊಳ್ಳಲು ಯಾವುದೇ ರೀತಿಯ ಸಾಮಾಜಿಕ ಹಿಂದುಳಿದಿರುವಿಕೆಯ ಅಡಚಣೆ ಇದೆಯೇ ಎನ್ನುವುದನ್ನು ಕೂಡ ಪರಿಗಣಿಸಬೇಕಿದೆ.

ಕರ್ನಾಟಕದಲ್ಲಿ ಮೀಸಲಾತಿಗಾಗಿ ಪಟ್ಟುಹಿಡಿದಿರುವ ಪ್ರಬಲ ಜಾತಿಗಳಿಗೆ ಪ್ರಾತಿನಿಧ್ಯ ಕಡಿಮೆಯಾಗಿದೆ ಎನ್ನುವುದಕ್ಕೆ ಆಧಾರವಿಲ್ಲ. ಯಾವುದೋ ಉಪಪಂಗಡದ ವಿಚಾರದಲ್ಲಿ ಹಾಗಾಗಿದ್ದರೆ, ಅವರಿಗೆ ಸ್ಪರ್ಧಿಸಿ ತಮ್ಮ ಪ್ರಾತಿನಿಧ್ಯ ಹೆಚ್ಚಿಸಿಕೊಳ್ಳಲು ಸಾಮಾಜಿಕ ಹಿಂದುಳಿದಿರುವಿಕೆಯ ಅಡಚಣೆ ಇದೆ ಎನ್ನುವಂತಿಲ್ಲ. ಆರ್ಥಿಕ ಅಡಚಣೆ ಇದ್ದದ್ದೇ ಆದರೆ ಅದಕ್ಕೆ ಪರಿಹಾರ ಬಿಪಿಎಲ್ ಕಾರ್ಡ್ ವಿನಾ ಮೀಸಲಾತಿಯಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ, ಪ್ರಾತಿನಿಧ್ಯ ಕಡಿಮೆ ಇದೆ ಎನ್ನುವುದಕ್ಕೆ ಆಧಾರ ಇಲ್ಲದೆ ಇದ್ದರೂ ಈ ಎರಡೂ ಪ್ರಬಲ ಜಾತಿಗಳಿಗೂ ಈಗಾಗಲೇ ಮೀಸಲಾತಿ ಇದೆ. ಯಾವುದೋ ಉಪಪಂಗಡಕ್ಕೆ ಅನ್ಯಾಯವಾಗಿದ್ದರೆ, ಅಂತಹ ಉಪಪಂಗಡಗಳು ಕೇಳ
ಬಹುದಾಗಿರುವುದು ಈಗಾಗಲೇ ಇರುವ ಮೀಸಲಾತಿ ಯಲ್ಲಿ ಒಳಮೀಸಲಾತಿಯನ್ನೇ ವಿನಾ ಮೀಸಲಾತಿ ಹೆಚ್ಚಳ ಅಥವಾ ಪ್ರವರ್ಗ ಬದಲಾವಣೆಯನ್ನಲ್ಲ.

ಒಟ್ಟಿನಲ್ಲಿ, ಯಾವ ಜಾತಿಗಳು ಈಗಾಗಲೇ ರಾಜಕೀಯದಲ್ಲಿ ಮತ್ತು ಸರ್ಕಾರಿ ನೌಕರಿಗಳಲ್ಲಿ ಬಹಳಷ್ಟು ಪ್ರಾತಿನಿಧ್ಯ ಹೊಂದಿರುವುವೋ ಅಥವಾ ಹೊಂದಿರದಿದ್ದರೂ ಅಂತಹ ಪ್ರಾತಿನಿಧ್ಯ ಸಂಪಾದಿಸಲು ಯಾವುದೇ ಸಾಮಾಜಿಕ ಹಿಂದುಳಿದಿರುವಿಕೆಯ ಅಡಚಣೆ ಅನುಭವಿಸುತ್ತಿಲ್ಲವೋ ಅಂತಹ ಜಾತಿಗಳು ಮೀಸಲಾತಿ ಬೇಕೆಂದು ಅಥವಾ ಮೀಸಲಾತಿ ಹೆಚ್ಚಿಸಬೇಕೆಂದು ಕೇಳಬಾರದು. ಕೇಳಿದರೂ ಸರ್ಕಾರ ನೀಡಬಾರದು. ನೀಡಿದರೂ ನ್ಯಾಯಾಂಗ ಅದನ್ನು ಒಪ್ಪಬಾರದು. ಈ ದೃಷ್ಟಿಯಿಂದ ನೋಡಿದಾಗ, ಆರ್ಥಿಕವಾಗಿ ಹಿಂದುಳಿ
ದವರಿಗಾಗಿ ಜಾರಿಯಾಗಿರುವ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದದ್ದು ದುರದೃಷ್ಟಕರ.

ಯಾರಿಗೆ ಮೀಸಲಾತಿ ಬೇಕು, ಯಾರಿಗೆ ಬಿಪಿಎಲ್ ಕಾರ್ಡ್ ಸಾಕು ಅಂತ ಎಲ್ಲರಿಗೂ ಗೊತ್ತು. ಮೀಸಲಾತಿ ಪಡೆಯಲು ಅರ್ಹರಾಗಿದ್ದೂ ಯಾರಿಗೆ ಅದು ಲಭಿಸುತ್ತಿಲ್ಲವೋ ಅಂತಹವರಿಗೆ ಧ್ವನಿಯಿಲ್ಲ. ಗಟ್ಟಿ ಧ್ವನಿ ಇರುವವರು ಏನೇ ಕೇಳಿದರೂ ಇಲ್ಲ ಎನ್ನುವ ಧೈರ್ಯ ಸಂವಿಧಾನದ ಯಾವ ಅಂಗಗಳಿಗೂ ಉಳಿದಿಲ್ಲ. ಧ್ವನಿ ಇಲ್ಲದಿರುವುದೇ ಮೀಸಲಾತಿ ಪಡೆಯಲು ಇರುವ ಮೊದಲ ಅರ್ಹತೆ ಎನ್ನುವುದು ಎಲ್ಲರಿಗೂ ಮರೆತೇಹೋದಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.