ADVERTISEMENT

ಎ.ನಾರಾಯಣ ಬರಹ | ಪರಕೀಯರ ಆಡಳಿತ, ಆಡಳಿತದ ಪರಕೀಯತೆ

ಸಂವಿಧಾನ ಸಂಕೇತಿಸಬೇಕಿರುವುದಕ್ಕೆಲ್ಲಾ ನಂಬಿಕೆಗಳು ಸಂಕೇತವಾಗುತ್ತಿರುವ ಕಾಲದ ಸ್ವಾತಂತ್ರ್ಯೋತ್ಸವ

ನಾರಾಯಣ ಎ
Published 14 ಆಗಸ್ಟ್ 2020, 19:30 IST
Last Updated 14 ಆಗಸ್ಟ್ 2020, 19:30 IST
   

ಸತಿ ಪದ್ಧತಿಯನ್ನು ಅರ್ಥಾತ್ ಪತಿಯ ಚಿತೆಯ ಮೇಲೆ ಪತ್ನಿ ಕಡ್ಡಾಯವಾಗಿ ಹಾರಿ ಸಾಯಬೇಕು ಎನ್ನುವ ಪದ್ಧತಿಯನ್ನು ಕಂಪನಿ ಸರ್ಕಾರ 1829ರಲ್ಲಿ ನಿಷೇಧಿಸಿದಾಗ, ಅದಕ್ಕೆ ಭಾರತೀಯ ಸಮಾಜದಿಂದ ಮೂರು ರೀತಿಯ ಪ್ರತಿಕ್ರಿಯೆಗಳು ಬಂದದ್ದು ಚರಿತ್ರೆಯಲ್ಲಿ ದಾಖಲಾಗಿದೆ. ಸತಿ ಪದ್ಧತಿ ಅಮಾನವೀಯವೂ ಕ್ರೂರವೂ ಆಗಿದ್ದ ಕಾರಣ ಅದನ್ನು ನಿಷೇಧಿಸಿದ್ದು ಸರಿಯಾದ ಕ್ರಮ ಎಂಬುದು ಒಂದನೆಯ ಅಭಿಪ್ರಾಯ.

ಎರಡನೆಯ ಅಭಿಪ್ರಾಯದ ಪ್ರಕಾರ, ಸತಿ ಪದ್ಧತಿಯು ಹಿಂದೂ ಧರ್ಮದ ಒಂದು ಕಟ್ಟಲೆಯಾಗಿತ್ತು ಮತ್ತು ಆ ಕಾರಣಕ್ಕೆ ಅದನ್ನು ಉಳಿಸಿಕೊಳ್ಳಬೇಕಿತ್ತು ಅಥವಾ ನಿಷೇಧಿಸಬಾರದಾಗಿತ್ತು. ಈ ನಿಲುವು ಎಷ್ಟು ದಟ್ಟವಾಗಿತ್ತು ಎಂದರೆ, ನಿಷೇಧದ ವಿರುದ್ಧ ಹೋರಾಡಲು ‘ಧರ್ಮಸಭಾ’ ಎನ್ನುವ ಸಂಸ್ಥೆ ಹುಟ್ಟಿಕೊಳ್ಳುತ್ತದೆ. ಆ ಸಂಸ್ಥೆ ತನ್ನ ಹೋರಾಟಕ್ಕೆ ಕ್ಷಣಾರ್ಧದಲ್ಲಿ 11,260 ರೂಪಾಯಿಗಳ ದೇಣಿಗೆ ಸಂಗ್ರಹಿಸಿ, ಅಂದಿನ ಸುಪ್ರಸಿದ್ಧ ಆಂಗ್ಲ ವಕೀಲರೊಬ್ಬರನ್ನು ಗೊತ್ತುಪಡಿಸಿ, ನಿಷೇಧ ತೆರವುಗೊಳಿಸಬೇಕು ಮತ್ತು ಸತಿಪದ್ಧತಿಯನ್ನು ಯಥಾಪ್ರಕಾರ ಮುಂದುವರಿಸಲು ಅವಕಾಶ ನೀಡಬೇಕು ಅಂತ ಇಂಗ್ಲೆಂಡ್‌ನ ಪ್ರಿವಿ ಕೌನ್ಸಿಲ್‌ನಲ್ಲಿ ದಾವೆ ಹೂಡುತ್ತದೆ. ಆ ದಾವೆ 6-4 ಮತಗಳಲ್ಲಿ ಬಿದ್ದು ಹೋಗುತ್ತದೆ (ರಾಜಾರಾಮ್ ಮೋಹನ್‌ರಾಯ್ ಅವರ ಜೀವನ ಚರಿತ್ರೆ: ಎ.ಪಿ.ಸೆನ್, ಪುಟ 117).

ಸತಿಪದ್ಧತಿಯ ನಿಷೇಧದ ಬಗ್ಗೆ ಪರ ಮತ್ತು ವಿರುದ್ಧ ಇದ್ದ ಈ ಎರಡು ಅಭಿಪ್ರಾಯಗಳು ನೇರವಾಗಿವೆ. ಅಂದರೆ, ಅವುಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೇನಲ್ಲ. ಬಹಳ ಸಂಕೀರ್ಣವೂ ಕುತೂಹಲಕಾರಿಯೂ ಸ್ವಾತಂತ್ರ್ಯ ದಿನಾಚರಣೆಯ ಇಂದಿನ ಸಂದರ್ಭದಲ್ಲಿ ಪ್ರಸ್ತುತವೂ ಆಗಿರುವುದು ಸತಿ ನಿಷೇಧದ ಕುರಿತಾಗಿ ಆ ಕಾಲದಲ್ಲಿ ವ್ಯಕ್ತವಾಗಿದ್ದ ಮೂರನೆಯ ಅಭಿಪ್ರಾಯ.

ADVERTISEMENT

ಈ ಅಭಿಪ್ರಾಯ ಹೀಗಿತ್ತು: ಸತಿ ಪದ್ಧತಿ ಕ್ರೂರ, ಬರ್ಬರ, ಅಮಾನವೀಯ ಇತ್ಯಾದಿ ಎಲ್ಲವೂ ಸರಿಯಾಗಿದ್ದರೂ ಅದನ್ನು ಸರ್ಕಾರ ನಿಷೇಧಿಸಿದ್ದು ಸರಿಯಲ್ಲ. ಅಂದರೆ ಸತಿ ಪದ್ಧತಿ ಕೊನೆಯಾಗಬೇಕಿತ್ತು ಎನ್ನುವುದೇನೋ ಸರಿ. ಆದರೆ ಅದರ ಅಂತ್ಯವು ಸರ್ಕಾರದ ನಿಷೇಧದ ರೂಪದಲ್ಲಿ ಇರಬಾರದಾಗಿತ್ತು. ಹಾಗಾದರೆ ಅದು ಇನ್ಯಾವ ರೂಪದಲ್ಲಿ ಬರಬೇಕಿತ್ತು? ಗೊತ್ತಿಲ್ಲ. ಅದೇನೇ ಇರಲಿ, ಇಲ್ಲಿ ‘ಸರ್ಕಾರ ನಿಷೇಧ ಹೇರಿದ್ದು ಸರಿಯಲ್ಲ’ ಎನ್ನುವುದನ್ನು ಎರಡು ರೀತಿಯಲ್ಲಿ ಅರ್ಥೈಸಿಕೊಳ್ಳಲು ಸಾಧ್ಯವಿದೆ. ನಿಷೇಧ ಹೇರಿದ ಸರ್ಕಾರವು ಈಸ್ಟ್ ಇಂಡಿಯಾ ಕಂಪನಿಯ ಸರ್ಕಾರ ಅಥವಾ ವಿದೇಶಿಯರ ಸರ್ಕಾರವಾಗಿದ್ದ ಕಾರಣಕ್ಕೆ ಅದು ಭಾರತೀಯ ಸಮಾಜದ ಮೇಲೆ ಹೀಗೊಂದು ನಿಷೇಧ ಹೇರಿದ್ದು ಸರಿಯಲ್ಲ ಎನ್ನುವುದು ಒಂದು ವ್ಯಾಖ್ಯಾನ. ಎರಡನೆಯ ವ್ಯಾಖ್ಯಾನದ ಪ್ರಕಾರ, ಸರ್ಕಾರ ಯಾರದ್ದೇ ಆಗಿದ್ದರೂ ಅದು ಸಮಾಜದ ಕಟ್ಟುಕಟ್ಟಲೆಗಳನ್ನು, ನಂಬಿಕೆಗಳನ್ನು ನಿಷೇಧಿಸುವುದಾಗಲೀ ಅಲ್ಲಗಳೆಯುವುದಾಗಲೀ ಮಾಡಬಾರದು. ಅಂದರೆ, ಯಾರೇ ಸರ್ಕಾರ ನಡೆಸಿದರೂ ಜನರ ಬದುಕಿನ ಮೇಲೆ ಮನಬಂದಂತೆ ಸವಾರಿ ಮಾಡುವಷ್ಟು ಅಧಿಕಾರವನ್ನು ಅದು ಆವಾಹಿಸಿಕೊಳ್ಳಬಾರದು. ಸಾಮಾಜಿಕ ಅನಿಷ್ಟಗಳನ್ನು ಸಮಾಜವೇ ನಿಷೇಧಿಸುವ ಮಟ್ಟಕ್ಕೆ ಜನರ ಪ್ರಜ್ಞೆ ಬೆಳೆಯಬೇಕು ಎನ್ನುವುದು.

ಈ ಎರಡರಲ್ಲಿ ಯಾವ ಅರ್ಥದಲ್ಲಿ ಸತಿಯ ಕುರಿತಾದ ಮೂರನೆಯ ಅಭಿಪ್ರಾಯ ಅಂದು ವ್ಯಕ್ತವಾಗಿತ್ತು ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಈ ಎರಡು ವ್ಯಾಖ್ಯಾನಗಳ ಸುತ್ತ ಸೃಷ್ಟಿಯಾದ ಜಿಜ್ಞಾಸೆ ಹರಳುಗಟ್ಟುತ್ತಾ ಹರಳುಗಟ್ಟುತ್ತಾ ಸ್ವಾತಂತ್ರ್ಯ ಚಳವಳಿಯ ಪರಾಕಾಷ್ಠೆಯ ಕಾಲಕ್ಕೆ, ಸ್ವಾತಂತ್ರ್ಯ ಎಂದರೆ ಪರಕೀಯರ ಆಡಳಿತದಿಂದ ಬಿಡುಗಡೆ ಹೊಂದುವುದೇ ಅಥವಾ ಯಾವುದೇ ಸರ್ಕಾರದ ಪರಕೀಯತೆಯಿಂದ ಪಾರಾಗುವುದೇ ಎನ್ನುವ ಚಿಂತನೆಗೆ ಕಾರಣವಾಗುತ್ತದೆ ಅಂತ ಪ್ರಖ್ಯಾತ ರಾಜಕೀಯ ಚಿಂತಕ ಸುದೀಪ್ತ ಕವಿರಾಜ ಗುರುತಿಸುತ್ತಾರೆ. ಮಹಾತ್ಮ ಗಾಂಧಿಯವರಿಗೆ ಪರಕೀಯರ ಆಡಳಿತ ಎಷ್ಟು ಸಮಸ್ಯಾತ್ಮಕವಾಗಿ ಕಂಡಿತ್ತೋ ಅಷ್ಟೇ ಆತಂಕ ಅವರಿಗೆ ಭಾರತೀಯರಿಂದಲೇ ಕೂಡಿದ ಸರ್ಕಾರದ ಪರಕೀಯತೆಯ ಬಗ್ಗೆ ಕೂಡಾ ಇತ್ತು. ಈ ಸರ್ಕಾರಿ ವ್ಯವಸ್ಥೆ ಎನ್ನುವುದೇ ಭಾರತಕ್ಕೆ ಹೊಸತು. ಅದು ಆಧುನೀಕರಣದ ಒಂದು ಭಾಗ ಮತ್ತು ಈ ಆಧುನಿಕ ಸರ್ಕಾರವೇ ಒಂದು ಪರಕೀಯ ಕಲ್ಪನೆ ಎನ್ನುವ ಅಂಶಗಳನ್ನು ಪರಿಗಣಿಸಿ, ಆಧುನಿಕತೆಯ ಬಗ್ಗೆ ತಮ್ಮದೇ ಆದ ಗುಮಾನಿಯನ್ನು ಹೊಂದಿದ್ದ ಗಾಂಧೀಜಿ ಈ ಅಭಿಪ್ರಾಯಕ್ಕೆ ಬಂದಿದ್ದರು. ಆದಕಾರಣ ಅವರಿಗೆ 1947, ಆಗಸ್ಟ್ 15ರಂದು ಬಂದ ಸ್ವಾತಂತ್ರ್ಯ ಕೇವಲ ಮಧ್ಯಂತರ, ಅಂತಿಮವಲ್ಲ.

ಪರಕೀಯ ಆಡಳಿತವನ್ನು ಕೊನೆಗೊಳಿಸುವಲ್ಲಿ ಗಾಂಧೀಜಿಗೆ ಹೆಗಲಾಗಿದ್ದ ನೆಹರೂ ಅವರಿಗೆ ದೇಶೀಯ ಸರ್ಕಾರದ ಪರಕೀಯತೆ ಎನ್ನುವುದು ಒಂದು ಸಮಸ್ಯೆಯಾಗಿ ಕಂಡಂತೆ, ಕಾಡಿದಂತೆ ಇಲ್ಲ. ಅವರ ಪ್ರಕಾರ, ಆಡಳಿತ ನಡೆಸುವ ಅಧಿಕಾರವನ್ನು ಭಾರತೀಯರು ಸಂಪೂರ್ಣವಾಗಿ ವಹಿಸಿಕೊಳ್ಳುವಲ್ಲಿಗೆ ಮತ್ತು ಆ ಆಡಳಿತದ ಆಣತಿಗೆ ಮತ್ತು ಅಂಕೆಗೆ ಒಂದು ಉದಾರ-ಪ್ರಜಾತಂತ್ರವಾದಿ ಸಂವಿಧಾನ ಅಳವಡಿಸಿಕೊಳ್ಳುವಲ್ಲಿಗೆ ಭಾರತೀಯರು ಸ್ವಾತಂತ್ರ್ಯ ಪಡೆದಂತೆ: ಮುಂದೇನಿದ್ದರೂ ಆ ಸ್ವಾತಂತ್ರ್ಯವನ್ನು ಬಳಸಿಕೊಂಡು ಅಭಿವೃದ್ಧಿ ಸಾಧಿಸುವುದಷ್ಟೇ.

‌ಈ ನಿಟ್ಟಿನಲ್ಲಿ ನೋಡಿದಾಗ ಗಾಂಧಿ ಅಂದೂ ಏಕಾಂಗಿ, ಇಂದೂ ಏಕಾಂಗಿ. ಅದೇ ವೇಳೆ, ಈ ದಿಸೆಯಲ್ಲಿ ನೋಡಿದಾಗ ಎಲ್ಲರೂ ನೆಹರೂವಾದಿಗಳೇ- ನೆಹರೂ ಅವರನ್ನು ಒಪ್ಪಿಕೊಳ್ಳುವವರು, ಟೀಕಿಸುವವರು ಮತ್ತು ಅವರ ಚಾರಿತ್ರ್ಯವಧೆಗೆ ಇಳಿದಿರುವವರೂ ಸೇರಿದಂತೆ!

ಇಲ್ಲಿ ಇನ್ನೂ ವಿಭಿನ್ನವಾಗಿಯೂ ವಿಶಿಷ್ಟವಾಗಿಯೂ ಕಾಣಿಸುವುದು ಅಂಬೇಡ್ಕರ್ ಅವರ ಚಿಂತನೆ. ಅವರು ಸಂವಿಧಾನಾಧೀನ- ಆಧುನಿಕ- ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯನ್ನು ನೆಹರೂ ಅವರಂತೆ ಒಪ್ಪಿಕೊಳ್ಳುತ್ತಲೇ ಸರ್ಕಾರದ ಪರಕೀಯತೆಯ ಬಗೆಗೂ ಇನ್ನೊಂದು ರೀತಿಯಲ್ಲಿ ಆತಂಕಿತರಾಗಿದ್ದರು. ಸ್ವಾತಂತ್ರ್ಯಾನಂತರ ಬಲಿಷ್ಠರು, ಮೇಲ್ಜಾತಿಯವರು ಮತ್ತು ಮೇಲ್ವರ್ಗದವರು
ಮಾತ್ರ ನಿಜ ಅರ್ಥದಲ್ಲಿ ಅಧಿಕಾರ ಪಡೆಯಲಿದ್ದಾರೆ ಎನ್ನುವ ಅಂಬೇಡ್ಕರ್ ಕಾಣ್ಕೆಯ ಹಿಂದೆ ಕೂಡ ಇರುವುದು ಸರ್ಕಾರದ ಪರಕೀಯತೆಯ ಪರಿಕಲ್ಪನೆ. ಸ್ವಾತಂತ್ರ್ಯ ಎಂದರೆ ಒಂದರ್ಥದ ಪರಕೀಯರಿಂದ ಇನ್ನೊಂದರ್ಥದ ಪರಕೀಯರಿಗೆ ಆಡಳಿತದ ಅಧಿಕಾರ ಹಸ್ತಾಂತರವಾಗುವುದಲ್ಲದೆ ಇನ್ನೇನೂ ಅಲ್ಲ ಎನ್ನುವುದನ್ನು ಮನಗಂಡಿದ್ದ ಅಂಬೇಡ್ಕರ್ ಇದೇ ಕಾರಣಕ್ಕೆ, ಸ್ವಾತಂತ್ರ್ಯ ಪಡೆಯಲು ಭಾರತ ಸಾಮಾಜಿಕವಾಗಿ ಇನ್ನೂ ಅಣಿಯಾಗಿಲ್ಲ ಎನ್ನುವ ಅಭಿಪ್ರಾಯವನ್ನು ಒಂದು ಹಂತದಲ್ಲಿ ಹೊಂದಿದ್ದರು. ನಂತರ ಅವರಿಗೆ ಸರ್ಕಾರದ ಈ ಪರಕೀಯತೆಗೂ ಸಂವಿಧಾನವೇ ಒಂದು ಮಟ್ಟಿಗೆ ಪರಿಹಾರವೆಂಬಂತೆ ಕಂಡಿದ್ದರೆ, ಸರ್ಕಾರದ ಪರಕೀಯತೆಯ ಅಪಾಯವನ್ನು ಸಂವಿಧಾನದ ಮೂಲಕ ಇಲ್ಲವಾಗಿಸಬಹುದೆಂಬ ವಾದ ಗಾಂಧೀಜಿ ಚಿಂತನೆಯ ಭಾಗವಾಗಿರಲಿಲ್ಲ.

ಇಷ್ಟೆಲ್ಲಾ ಚರಿತ್ರೆಯನ್ನು ನೋಡಿ ವರ್ತಮಾನಕ್ಕೆ ಬಂದರೆ, ಇನ್ನೊಂದು ಸ್ವಾತಂತ್ರ್ಯ ಮಹೋತ್ಸವದ ಬಾನಂಗಳದಲ್ಲಿ ಕಾಣಿಸುವುದೇನು? ಕಾಣಿಸುವುದೇನೆಂದರೆ, ಸರ್ಕಾರದ ಪರಕೀಯತೆಯ ಕುರಿತಾಗಿ ಗಾಂಧೀಜಿ ಕಂಡಿದ್ದ ದುಃಸ್ವಪ್ನ ಮತ್ತು ಅಂಬೇಡ್ಕರ್ ಕಂಡಿದ್ದ ದುಃಸ್ವಪ್ನಗಳೆರಡೂ ಪರಸ್ಪರ ಸಂಧಿಸುತ್ತಿರುವುದು. ಈ ತನಕ ಬಿಡಿಬಿಡಿಯಾಗಿ ಸಾಕಾರಗೊಳ್ಳುತ್ತಿದ್ದ ಎರಡೂ ದುಃಸ್ವಪ್ನಗಳು ಏಕಕಾಲದಲ್ಲಿ ಸತ್ಯವಾಗುತ್ತಿರುವ ಸಂಧಿಕಾಲವೊಂದನ್ನು ಈಗ ದೇಶ ಹಾದು ಹೋಗುತ್ತಿರುವಂತೆ ಭಾಸವಾಗುತ್ತದೆ. ಯಾಕೆಂದರೆ, ಸ್ವಾತಂತ್ರ್ಯ ಮತ್ತು ಸಂವಿಧಾನದ ಮೂಲಕ ದೇಶ ಸಾಧಿಸಬೇಕಾಗಿದ್ದ ಶಾಂತಿಯನ್ನೂ ಸಹಬಾಳ್ವೆಯನ್ನೂ ಸರ್ವಾಂತರ್ಗತ ಸಮೃದ್ಧಿಯನ್ನೂ ನಂಬಿಕೆಯೊಂದರ ಸುತ್ತ ಕಟ್ಟುವ ರಚನೆಯೊಂದು ಸಂಕೇತಿಸುತ್ತದೆ ಮತ್ತು ಸಾಧಿಸಲಿದೆ ಅಂತ ಆಳುವ ಸರ್ಕಾರ ಈಗ ಹೇಳುತ್ತಿದೆ. ಈ ನಿಲುವಿನ ಪರಕೀಯತೆಯನ್ನು ಯಾರೂ ಗುರುತಿಸಲೂ ಆಗದಷ್ಟು ದಾಸ್ಯ ದೇಶದಲ್ಲಿ ಸೃಷ್ಟಿಯಾಗಿದೆ.

ಈಗ ರಾಜಕೀಯದ ಎರಡು ಮಾದರಿಗಳಲ್ಲಿ ಸ್ವಾತಂತ್ರ್ಯ ಮತ್ತು ಸಂವಿಧಾನಗಳೆರಡೂ ಅಪ್ರಸ್ತುತವಾಗುತ್ತಿವೆ: ಒಂದು, ಸುಳ್ಳುಗಳು ಮತ್ತು ಮಿಥ್ಯೆಗಳನ್ನೇ ಇಟ್ಟಿಗೆಗಳನ್ನಾಗಿ ಮಾಡಿಕೊಂಡು ಕಟ್ಟಿರುವ ರಾಜಕೀಯದ ಮಾದರಿ; ಇನ್ನೊಂದು, ಕನಿಷ್ಠಪಕ್ಷ ಸತ್ಯಗಳನ್ನು ಗಟ್ಟಿಯಾಗಿ ಹೇಳುವ ಧೈರ್ಯ ಇಲ್ಲದೆ ಬಿಕಾರಿಯಾಗಿರುವ ರಾಜಕೀಯದ ಮಾದರಿ. ಎರಡೂ ಮಾದರಿಗಳು ಸೃಷ್ಟಿಸುತ್ತಿರುವ ಆಡಳಿತದ ಪರಕೀಯತೆಯಿಂದ ದೇಶವನ್ನು ಬಿಡುಗಡೆಗೊಳಿಸಬೇಕು ಅಂತ ಜನರಿಗೆ ಅನ್ನಿಸತೊಡಗಿದರೆ, ಭಾರತದಲ್ಲಿ ನಿಜವಾದ ಸ್ವಾತಂತ್ರ್ಯದ ಹೊಂಗಿರಣವೊಂದು ಮೂಡಿದಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.