ತಮಿಳುನಾಡಿನ ಮಂತ್ರಿಯೊಬ್ಬರು ಸನಾತನ ಎಂಬ ಪರಿಕಲ್ಪನೆಯ ಬಗ್ಗೆ ಹೇಳಬಾರದ್ದನ್ನು ಹೇಳಿದರೋ ಅಥವಾ ಹೇಳಬಹುದಾದದ್ದನ್ನು ಹೇಳಬಾರದ ರೀತಿಯಲ್ಲಿ ಹೇಳಿದರೋ ಅಂತೂ ಈ ಹೇಳಿಕೆಯ ಸುತ್ತಣ ಚರ್ಚೆ ಇನ್ನೂ ಜೀವಂತವಾಗಿದೆ. ರಾಜಕೀಯವಾಗಿ ಇದು ಹೊಡೆಯುವವನ ಕೈಗೆ ಬಡಿಗೆ ನೀಡಿದ ರೀತಿಯ ಹೇಳಿಕೆ. ಯಾಕೆಂದರೆ, ‘ಹಿಂದೂ ಧರ್ಮ’, ‘ಸನಾತನ’ ಮತ್ತು ‘ಹಿಂದುತ್ವ’ ಎಂಬ ಪರಿಕಲ್ಪನೆಗಳ ಕುರಿತಂತೆ ಸಾಮಾನ್ಯ ಜನರ ಮನಸ್ಸಿನಲ್ಲಿ ತೀವ್ರವಾದ ಗೊಂದಲವಿದೆ. ಇದು ನಿವಾರಣೆ ಆಗುವತನಕ ಭಾರತದ ಬಹುಸಂಖ್ಯಾತರ ಧರ್ಮದ ವಿಚಾರವಾಗಿ ಯಾರು ಯಾವುದೇ ಅರ್ಥದಲ್ಲಿ ಏನೇ ಕಟು ಹೇಳಿಕೆ ನೀಡಿದರೂ ಅದರಿಂದಾಗಿ ಲಾಭ ಆಗುವುದು ‘ಧರ್ಮ ಅಪಾಯದಲ್ಲಿದೆ’ ಎನ್ನುವ ಭ್ರಮೆ ಮೂಡಿಸಿ ರಾಜಕೀಯ ಮಾಡಲು ಹೊಂಚು ಹಾಕುತ್ತಿರುವವರಿಗೆ ಮಾತ್ರ.
‘ಹಿಂದೂ ಧರ್ಮ’, ‘ಸನಾತನ’ ಮತ್ತು ‘ಹಿಂದುತ್ವ’ ಈ ಮೂರರ ಮಧ್ಯೆ ಒಂದು ಸಂಬಂಧ ಇದೆ. ಈ ಸಂಬಂಧಕ್ಕಿಂತ ಹೆಚ್ಚಾಗಿ ಜನರಿಗೆ ಅರ್ಥ ಆಗಬೇಕಾಗಿರು
ವುದು ಅವುಗಳ ನಡುವಣ ವ್ಯತ್ಯಾಸ. ಈ ವ್ಯತ್ಯಾಸವನ್ನು
ಹುಡುಕುವುದೆಂದರೆ, ಯಾವುದೇ ಧರ್ಮದಲ್ಲಿ ಹುಳುಕು ಹುಡುಕುವುದಲ್ಲ, ಯಾರನ್ನೂ ಅಣಕಿಸುವುದಲ್ಲ, ನಾಶವಾಗಿಹೋಗಿ ಎಂದು ಶಪಿಸುವುದೂ ಅಲ್ಲ. ಇದ್ದದ್ದನ್ನು ಇದ್ದ ಹಾಗೆ ಅರ್ಥೈಸಿ ಹೇಳುವುದು.
ಯಾವ ಜನಸಮೂಹವನ್ನು ಚರಿತ್ರೆಯ ಯಾವುದೋ ಕಾಲಘಟ್ಟದಲ್ಲಿ ಹಿಂದೂ ಧರ್ಮದವರೆಂದು ಗುರುತಿಸಲಾಯಿತೋ ಅವರಲ್ಲಿ ‘ಜೀವ’ ಮತ್ತು ‘ದೇವ’ ಇವೆರಡರ ನಡುವಣ ಸಂಬಂಧವನ್ನು ತರಹೇವಾರಿ ಅನುಸರಿಸಿ ಆಚರಿಸುವವರೆಲ್ಲಾ ಸೇರಿದ್ದಾರೆ. ಅವರಲ್ಲಿ ದೇವರನ್ನು ನಂಬುವವರೂ ಇದ್ದಾರೆ, ನಂಬದವರೂ ಇದ್ದಾರೆ, ನಂಬುವವರಲ್ಲಿ ದೇವರನ್ನು ಮೂರ್ತ ರೂಪದಲ್ಲಿ ಕಲ್ಪಿಸುವವರು, ಅಮೂರ್ತ ರೂಪದಲ್ಲಿ ಪರಿಭಾವಿಸುವವರು, ಮಂತ್ರಗಳ ಮೂಲಕ ಪೂಜಿಸುವವರು, ಬೈಗುಳಗಳ ಮೂಲಕ ಅರ್ಚಿಸುವವರು, ಮದ್ಯ-ಮಾಂಸ ಇಟ್ಟು ಸಂಪ್ರೀತಗೊಳಿಸುವವರು ಹೀಗೆ ಎಲ್ಲರೂ ಸೇರಿದ್ದಾರೆ. ಅಲ್ಲಿ ಯಾವ ಒಂದು ಗ್ರಂಥವೂ ದೊಡ್ಡದಲ್ಲ, ಯಾವ ಒಂದು ವಿಚಾರಧಾರೆಯೂ ಶ್ರೇಷ್ಠ ಅಂತ ಇಲ್ಲ.
ಹೀಗೆ ಯಾವ ನಿರ್ದಿಷ್ಟ ಮೇರೆಯೂ ಇಲ್ಲದ ಒಂದು ಒಕ್ಕೂಟದಂತಿರುವ ಈ ಧಾರ್ಮಿಕ ವ್ಯವಸ್ಥೆಯನ್ನು ಭಾರತದ ಸಂವಿಧಾನವೂ ಹಿಂದೂ ಧರ್ಮ ಎಂದು ಒಪ್ಪಿಕೊಂಡು ಅಧಿಕೃತವಾಗಿ ಗುರುತಿಸಿದೆ. ಈ ಮಹಾ ಹಿಂದೂ ಸಾಗರದಲ್ಲಿ ಶ್ರುತಿ, ಸ್ಮೃತಿ, ಪುರಾಣಗಳ ಆಧಾರದ ಮೇಲೆ ನಿಂತಿರುವ ಸನಾತನವೂ ಸೇರಿದೆ. ಅದು ಮೊದಲಿನಿಂದಲೇ ಇತ್ತೋ ಆನಂತರ ಬಂದು ಸೇರಿಕೊಂಡಿತೋ ಎನ್ನುವುದು ಇಲ್ಲಿ ಅಪ್ರಸ್ತುತ. ಹಿಂದೂ ಧರ್ಮದಲ್ಲಿ ಅದೂ ಸೇರಿದೆ ಮತ್ತು ಅದಕ್ಕೆ ಸ್ವಲ್ಪ ಮಟ್ಟಿಗಿನ ನಿರ್ದಿಷ್ಟ ಗ್ರಂಥಗಳು, ಕಟ್ಟಲೆಗಳು, ಸ್ಥಾಪನಾಚಾರ್ಯರುಗಳೆಲ್ಲಾ ಇದ್ದಾರೆ ಎನ್ನುವುದಷ್ಟೇ ಇಲ್ಲಿ ಪ್ರಸ್ತುತ.
ಹಿಂದೂ ಧರ್ಮ ಎನ್ನುವುದು ಈ ಸನಾತನ ಆವರಣದಾಚೆಗೂ ಇರುವುದರಿಂದ, ವೇದ- ಉಪನಿಷತ್ತು- ಗೀತೆ- ಪುರಾಣದಂತಹವುಗಳ ಹಾಗೂ ಈ ಗ್ರಂಥಗಳ ಮೂಲಕ ಮುನ್ನೆಲೆಗೆ ಬಂದಿರುವ ದೇವಾನುದೇವತೆಗಳ ಹಂಗೇ ಇಲ್ಲದವರು ಕೂಡಾ ಹಿಂದೂಗಳೇ. ಸನಾತನ ಅಥವಾ ವೈದಿಕ ಎಂದು ಕರೆಯಲಾಗುವ ಭಾಗ ಹಿಂದೂ ಧರ್ಮದ ಒಂದು ಕವಲೇ ವಿನಾ ಅದರ ಒಡಲಲ್ಲ.
ಆದರೆ, ಶತಶತಮಾನಗಳಿಂದ ಈ ಸನಾತನ– ವೈದಿಕ ಕವಲೇ ಇಡೀ ಹಿಂದೂ ಸಮಾಜದ ಮೇಲೆ ಒಂದು ರೀತಿಯ ಧಾರ್ಮಿಕ ಪಾರುಪತ್ಯವನ್ನು ಹೇರುತ್ತಾ ಬಂದು ವೈದಿಕವೇ ಹಿಂದೂ ಧರ್ಮ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ದೇಶದ ಸಂಸ್ಕೃತಿ ಎಂದರೆ ಸನಾತನ ಆಚರಣೆಗಳು ಮಾತ್ರ, ದೇಶದ ಅನನ್ಯತೆ ಎಂದರೆ ಸನಾತನ ಪುರಾಣದ ಯಾವುದೋ ಪಾತ್ರ ಎಂದು
ಪ್ರತಿಷ್ಠಾಪಿಸಲಾಗುತ್ತದೆ. ಸನಾತನ ಗ್ರಂಥಗಳ ಮೂಲಕ ಸಮಾಜದೊಳಗೆ ಬೇರುಬಿಟ್ಟ ಶ್ರೇಣೀಕರಣ ಮತ್ತು ತಾರತಮ್ಯ ನೀತಿಗಳನ್ನು ಸುಧಾರಿಸುವ ಕೆಲಸ ಸುಧಾರಕರ ಶ್ರಮದಿಂದ ಕಾಲಕಾಲಕ್ಕೆ ನಡೆಯಿತು. ಇಲ್ಲಿ ಸುಧಾರಣೆ ಸಾಧ್ಯವಿಲ್ಲ ಎಂದು ಮನಗಂಡ ಕೆಲವರು ಹೊರನಡೆದು ಬೇರೆ ಧರ್ಮಗಳನ್ನು ಸ್ಥಾಪಿಸಿದ್ದೂ ಆಗಿದೆ.
ಸುಧಾರಣೆ ಒಳಗಿಂದ ಆಗಲಿ ಅಥವಾ ಹೊರ
ನಡೆದವರಿಂದ ಆಗಲಿ, ಅದನ್ನು ಹಿಮ್ಮೆಟ್ಟಿಸುವ ಕೆಲಸ ಸನಾತನದ ಕಡೆಯಿಂದ ನಡೆದು ಅದರ ಪಾರಮ್ಯವನ್ನು ಅದು ಉಳಿಸಿಕೊಳ್ಳುತ್ತಾ ಬಂದಿದೆ ಎಂಬ ಅಂಶವನ್ನೇ ಅಂಬೇಡ್ಕರ್ ಅವರು ಪ್ರತಿಕ್ರಾಂತಿ (counter revolution) ಅಂತ ಕರೆದದ್ದು. ಕೊನೆಗೆ ಸಂವಿಧಾನದ ಮೂಲಕವೂ ಹಿಂದೂ ಧರ್ಮದ ಮೇಲಿನ ಸನಾತನ ಪಾರಮ್ಯವನ್ನು ಅಲುಗಾಡಿಸಲು ಅಂದುಕೊಂಡಮಟ್ಟಿಗೆ ಆಗಲಿಲ್ಲ ಎಂಬ ನಿರಾಸೆಯಿಂದ ಅಂಬೇಡ್ಕರ್ ಹಿಂದೂ ಧರ್ಮದ ಗೊಡವೆಯೇ ಬೇಡ ಅಂತ ಹೊರನಡೆದದ್ದು.
ತಮಿಳುನಾಡಿನಲ್ಲಿ ಒಂದು ಸಣ್ಣ ಪ್ರತಿರೋಧ ಕಾಣಿಸಿಕೊಂಡದ್ದು ಬಿಟ್ಟರೆ, ಹಿಂದೂ ಧರ್ಮದೊಳಗಣ ವೈದಿಕ ಸಾಮ್ರಾಜ್ಯ ವಿಸ್ತರಣೆಗೆ ಸ್ವಾತಂತ್ರ್ಯೋತ್ತರ ಕಾಲದಲ್ಲಿ ಯಾವ ಅಡ್ಡಿಯೂ ಎಂದೂ ಆಗಿದ್ದಿಲ್ಲ. ಸುಧಾರಣೆ ಬೇಕು ಎನ್ನುವ ಆಗ್ರಹ ಆಗಿರಬಹುದು. ವೈದಿಕೇತರರು ತಮ್ಮ ಕೀಳರಿಮೆಯಿಂದಲೋ ಅಥವಾ ಔದಾರ್ಯದಿಂದಲೋ ವೈದಿಕ ಪಾರಮ್ಯವನ್ನು ಬಹುಮಟ್ಟಿಗೆ ಒಪ್ಪಿಕೊಂಡು
ಬಿಟ್ಟಿದ್ದಾರೆ. ಆದರೆ ಅದೇ ವೇಳೆಗೆ ಅಳಿದುಳಿದ ಸನಾತನೇತರ ಕುರುಹುಗಳನ್ನೂ ಅಳಿಸಿ ವಿಶಾಲ ಹಿಂದೂ ಧರ್ಮವನ್ನು ಸನಾತನದ ಆವರಣದೊಳಗೆ ಕಟ್ಟಿಹಾಕುವ ಕೆಲಸ ಮುಂದುವರಿದಿದೆ. ಉದಾಹರಣೆಗೆ, ಸನಾತನಕ್ಕೆ ಸಂಬಂಧವೇ ಇಲ್ಲದ ತುಳುನಾಡಿನ ಭೂತಾರಾಧನೆಯಲ್ಲಿ ಈಗ ಸನಾತನ ಸಂಪ್ರದಾಯಗಳದ್ದೇ ಮೇಲುಗಾರಿಕೆ.
ಕೇರಳದ ಓಣಂ ಹಬ್ಬದಲ್ಲಿ ಬಲಿ ಚಕ್ರವರ್ತಿಯನ್ನು ಆರಾಧಿಸಲಾಗುತ್ತದೆ. ಕೇರಳದ ರಾಜ್ಯಗೀತೆ ಕೂಡಾ ಬಲಿಯ ರಾಜ್ಯವನ್ನು ಕೊಂಡಾಡುತ್ತದೆ. ಹಾಗಂತ ಅಲ್ಲಿ ಸನಾತನದ ಮೇಲುಗಾರಿಕೆಗೆ ಯಾವ ಕೊರತೆಯೂ ಆಗಿಲ್ಲ. ರಾಜ್ಯದ ಉದ್ದಗಲಕ್ಕೆ ಭವ್ಯ ಸನಾತನ ದೇಗುಲಗಳು ಇದ್ದಷ್ಟು ಬೇರೆಲ್ಲೂ ಇಲ್ಲ. ಆದರೂ ಕೇರಳದಲ್ಲಿ ಈಗ ಬಲಿಯ ಬದಲಿಗೆ ವಾಮನನ ಪೂಜೆಯೇ ನಡೆಯಬೇಕೆಂಬ ಬೇಡಿಕೆ ಹುಟ್ಟಿಕೊಂಡಿದೆ. ಯಾಕೆಂದರೆ, ವೈದಿಕ ಪುರಾಣದಲ್ಲಿ ಬಲಿ ರಾಕ್ಷಸನಾಗಿದ್ದ
ಮತ್ತು ವೈದಿಕ ದೇವರಾದ ವಿಷ್ಣುವಿನ ಅವತಾರವಾದ ವಾಮನನು ಬಲಿಯನ್ನು ಕೊಂದ ಎಂಬ ಕತೆ ಇದೆ. ಅದಕ್ಕೆ ಪ್ರತಿರೋಧ ಒಡ್ಡಿದವರನ್ನೆಲ್ಲಾ ರಾಕ್ಷಸರಂತೆ ಬಿಂಬಿಸಿ ತನ್ನ ಹೆಚ್ಚುಗಾರಿಕೆಯನ್ನು ಸ್ಥಿರಗೊಳಿಸುವುದು ಸನಾತನದ ಒಂದು ತಂತ್ರ. ಈಗಲೂ ಅದರ ಬಳಕೆ ನಡೆಯುತ್ತಿದೆ. ಕರ್ನಾಟಕದಲ್ಲಿ, ವೈದಿಕ ದಸರಾದ ಜತೆಗೆ ಮಹಿಷ ದಸರಾವನ್ನೂ ಆಚರಿಸುತ್ತೇವೆ ಎಂಬ ಸನಾತನೇತರರ ಬೇಡಿಕೆಗೆ ಬರುವ ವಿರೋಧ ಕೂಡಾ ಈ ಧಾರ್ಮಿಕ ವಸಾಹತುಶಾಹಿ ಮನೋಭಾವದ ಪ್ರತೀಕ.
ಈಗ ಹಿಂದುತ್ವದ ವಿಚಾರಕ್ಕೆ ಬರೋಣ.
ಸ್ವಾತಂತ್ರ್ಯಸಂಗ್ರಾಮದುದ್ದಕ್ಕೂ ಗಾಂಧೀಜಿಯು ಭಾರತ ಎಲ್ಲ ಧರ್ಮೀಯರಿಗೂ ಸೇರಿದ್ದು ಎಂದು
ಪ್ರತಿಪಾದಿಸಿದ್ದು ಸನಾತನವಾದಿಗಳಿಗೆ ಸಮ್ಮತವಾಗಿ
ರಲಿಲ್ಲ. ಗಾಂಧೀಜಿಯನ್ನು ಕೊಂದ ಗೋಡ್ಸೆ ಪ್ರೇರೇಪಣೆ ಪಡೆದದ್ದು ನಿಜವಾದ ಹಿಂದೂ ಧರ್ಮದಿಂದ ಅಲ್ಲ. ಆತ ಹಿಂದೂ ಧರ್ಮದ ಯಾವ ಕವಲಿನಿಂದ ಪ್ರೇರೇಪಣೆ ಪಡೆದುಕೊಂಡಿರಬಹುದು ಎಂದು ಊಹಿಸುವುದು ಕಷ್ಟವೂ ಅಲ್ಲ. ಆ ಪ್ರೇರೇಪಣೆಯೇ ಈಗ ಹಿಂದುತ್ವದ ರೂಪದಲ್ಲಿ ಕಾಣಿಸುವುದು. ಈ ದೇಶದಲ್ಲಿ ರಾಜಕೀಯ ಅಧಿಕಾರ ಸನಾತನ– ವೈದಿಕ ಪಾರಮ್ಯವನ್ನು ಒಪ್ಪುವ ಹಿಂದೂಗಳದ್ದೇ ಆಗಿರಬೇಕು ಎನ್ನುವ ವಾದವೇ ‘ಹಿಂದುತ್ವ’.
ದೇಶದ ಮತ್ತು ವಿಶಾಲ ಹಿಂದೂ ಧರ್ಮದ ಬಹುತ್ವಕ್ಕೆ ಹೊಂದಿಕೆಯಾಗದ ಅಪಾಯಕಾರಿ ಹಿಂದುತ್ವ ಯೋಜನೆಗೆ ಅಂದು ಅಡ್ಡಿಯಾಗಿದ್ದು ಗಾಂಧೀಜಿ. ಅದಕ್ಕೇ ಅವರನ್ನು ಮುಗಿಸಿದ್ದು. ದೇಶವಿಭಜನೆ, ‘ಮುಸ್ಲಿಂ ತುಷ್ಟೀಕರಣ’ದಂತಹ ಸಮರ್ಥನೆಗಳೆಲ್ಲಾ ನೆಪ. ಹಿಂದುತ್ವ ರಾಜಕೀಯವನ್ನು ವಿಶಾಲ ಹಿಂದೂ ಧರ್ಮ ಆರಂಭದಿಂದಲೂ ಒಪ್ಪಿಕೊಂಡಿರಲಿಲ್ಲ. ಗಾಂಧೀಜಿಯ ಹತ್ಯೆಯಂತೂ ಹಿಂದುತ್ವ ರಾಜಕೀಯವನ್ನು ಹಿಂದೂ ಸಮಾಜವು ಮಾರುದ್ದ ದೂರವಿಡುವಂತೆ ಮಾಡಿತು. ಹಿಂದುತ್ವ ರಾಜಕೀಯ ಹಟ ಬಿಡಲಿಲ್ಲ. ಬದಲಾಗಿ ಇನ್ನೊಂದು ಧರ್ಮವನ್ನು ವೈರಿ ಸ್ಥಾನದಲ್ಲಿ ನಿಲ್ಲಿಸಿ, ಆ ಧರ್ಮದವರಿಂದಾಗಿ ಇಡೀ ಹಿಂದೂ ಧರ್ಮಕ್ಕೆ ಅಪಾಯವಿದೆ ಎಂದು ದೊಡ್ಡ ಸಂಖ್ಯೆಯ ಹಿಂದೂಗಳನ್ನು ನಂಬಿಸಿ ಅದೀಗ ದೇಶವನ್ನು ಹಿಂದೂರಾಷ್ಟ್ರ ಮಾಡಲು ಬಹಿರಂಗವಾಗಿಯೇ ಸನ್ನಾಹ ನಡೆಸುತ್ತಿದೆ. ಅದಕ್ಕೆ ಮೊದಲ ಹಂತದಲ್ಲಿ ಅಡ್ಡಿಯಾದ ಗಾಂಧಿಯವರಿಗೆ ಆದ ಗತಿಯೇ ಈಗ ಅಂತಿಮ ಹಂತದಲ್ಲಿ ಅಡ್ಡಿಯಾಗಿರುವ ಸಂವಿಧಾನಕ್ಕೂ ಆಗುವ ಲಕ್ಷಣ ಗೋಚರಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.