ADVERTISEMENT

ಅನುಸಂಧಾನ | ಕಸಾಪ ಅಂಗಳದಲ್ಲಿ ಕಮಲದ ಕಮಟು!

ರಾಜಕೀಯ ಪಕ್ಷಗಳ ಋಣಭಾರಕ್ಕೆ ಸಿಲುಕಿದರೆ ಸ್ವತಂತ್ರ ನಿರ್ಧಾರ ಕಷ್ಟ

ರವೀಂದ್ರ ಭಟ್ಟ
Published 26 ನವೆಂಬರ್ 2021, 20:26 IST
Last Updated 26 ನವೆಂಬರ್ 2021, 20:26 IST
ಕಸಾಪ ಅಂಗಳದಲ್ಲಿ ಕಮಲದ ಕಮಟು!
ಕಸಾಪ ಅಂಗಳದಲ್ಲಿ ಕಮಲದ ಕಮಟು!   

2006ರಲ್ಲಿ ಶಿವಮೊಗ್ಗದಲ್ಲಿ 73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ. ಪ್ರೊ. ಕೆ.ಎಸ್.ನಿಸಾರ್ ಅಹಮದ್‌ ಅವರು ಸಮ್ಮೇಳನಾಧ್ಯಕ್ಷರು. ಪ್ರೊ. ಚಂದ್ರಶೇಖರ ಪಾಟೀಲ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು. ರಾಜ್ಯದಲ್ಲಿ ಆಗ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ. ಬಿ.ಎಸ್.ಯಡಿಯೂರಪ್ಪ ಅವರು ಉಪಮುಖ್ಯಮಂತ್ರಿ. ಶಿವಮೊಗ್ಗ ಜಿಲ್ಲೆಯವರೇ ಆದ ಯಡಿಯೂರಪ್ಪ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷರು. ಪ್ರಭಾವಿ ಸಚಿವರಾಗಿದ್ದ ಮತ್ತು ಜಿಲ್ಲೆಯವರೇ ಆದ ಡಿ.ಎಚ್.ಶಂಕರಮೂರ್ತಿ ಮತ್ತು ಕೆ.ಎಸ್.ಈಶ್ವರಪ್ಪ ಸ್ವಾಗತ ಸಮಿತಿ ಯಲ್ಲಿದ್ದರು. ಆದರೂ ಚಂಪಾ ಅವರು ಸರ್ಕಾರಕ್ಕೆ ಸಡ್ಡು ಹೊಡೆದರು.

‘ಮುಖ್ಯಮಂತ್ರಿ ಅವರು ಉದ್ಘಾಟನಾ ಸಮಾರಂಭಕ್ಕೆ ಬರುವುದು ಬೇಡ. ಅವರು ಸಮಾರೋಪ ಸಮಾರಂಭಕ್ಕೆ ಬರಲಿ’ ಎಂದು ಷರತ್ತು ವಿಧಿಸಿದ್ದರು. ಅಲ್ಲದೆ ಗೌರಿ ಲಂಕೇಶ್ ಮತ್ತು ಕಲ್ಕುಳಿ ವಿಠಲ ಹೆಗ್ಡೆ ಅವರನ್ನು ಸಮ್ಮೇಳನದ ಗೋಷ್ಠಿಗೆ ಕರೆದಿರುವುದಕ್ಕೆ ವಿರೋಧ ವ್ಯಕ್ತವಾಯಿತು. ಯಡಿಯೂರಪ್ಪ, ಈಶ್ವರಪ್ಪ, ಶಂಕರಮೂರ್ತಿ ಅವರಲ್ಲದೆ ಬಿಜೆಪಿಯ ಹಲವಾರು ಮಂದಿ ಆಕ್ಷೇಪ ವ್ಯಕ್ತಪಡಿಸಿದರು.

‘ಸಮ್ಮೇಳನಕ್ಕೆ ಸರ್ಕಾರ ಹಣ ಕೊಟ್ಟಿರುವುದರಿಂದ ಸರ್ಕಾರ ಹೇಳಿದಂತೆ ಕೇಳಬೇಕು. ‘ವಿವಾದಾತ್ಮಕ ವ್ಯಕ್ತಿ’ ಗಳನ್ನು ಸಮ್ಮೇಳನಕ್ಕೆ ಕರೆಯಬಾರದು’ ಎಂದು ಕಟ್ಟಪ್ಪಣೆ ಮಾಡಲಾಯಿತು. ಆದರೆ ಅದಕ್ಕೆ ಚಂಪಾ ಜಗ್ಗಲಿಲ್ಲ. ‘ಸಮ್ಮೇಳನಕ್ಕೆ ಹಣ ಕೊಡುವುದು ನಿಮ್ಮ ಕರ್ತವ್ಯ, ಕೊಟ್ಟಿದ್ದೀರಿ. ಕನ್ನಡಿಗರ ಹಣವನ್ನು ಕೊಟ್ಟಿದ್ದೀರಿ ಅಷ್ಟೆ. ಹಣ ಕೊಟ್ಟ ಮಾತ್ರಕ್ಕೆ ಇಂತಹವರನ್ನು ಕರೆಯಬೇಕು, ಇಂತಹವರನ್ನು ಕರೆಯಬಾರದು ಎಂದು ನಿರ್ದೇಶನ ನೀಡಲು ಸಾಧ್ಯವಿಲ್ಲ’ ಎಂದು ಹೇಳಿದರಲ್ಲದೆ ಗೌರಿ ಮತ್ತು ಕಲ್ಕುಳಿ ಇಬ್ಬರಿಗೂ ಅವಕಾಶ ನೀಡಿದರು. ಗೌರಿ ಲಂಕೇಶ್ ಅವರು ಭಾಗವಹಿಸಿದ್ದ ಗೋಷ್ಠಿಯನ್ನು ಪೊಲೀಸ್ ಭದ್ರತೆ ಯಲ್ಲಿ ನಡೆಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಸರ್ಕಾರದ ಅಡಿಯಾಳಲ್ಲ ಎಂಬ ಸ್ಪಷ್ಟ ಸಂದೇಶ ವನ್ನು ಸಾರಿದರು.

ADVERTISEMENT

1978ರಲ್ಲಿ ಪ್ರೊ. ಹಂಪ ನಾಗರಾಜಯ್ಯ ಅವರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದರು. ಅಕ್ಟೋಬರ್ ತಿಂಗಳಿನಲ್ಲಿ ಅವರು ಅಧಿಕಾರ ಸ್ವೀಕರಿಸಿದ್ದರು. ಆಗ ಪತ್ರಕರ್ತರು ಕರ್ನಾಟಕ ರಾಜ್ಯೋತ್ಸವ ಆಚರಣೆ ಬಗ್ಗೆ ಪ್ರಶ್ನೆ ಕೇಳಿದಾಗ ‘ಕರ್ನಾಟಕದಲ್ಲಿ ಕನ್ನಡ ಇನ್ನೂ ಆಡಳಿತ ಭಾಷೆಯಾಗಿಲ್ಲ. ಕನ್ನಡಕ್ಕೆ ಸಾರ್ವಭೌಮತ್ವ ಸಿಕ್ಕಿಲ್ಲ. ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ. ರಾಜ್ಯ ಸರ್ಕಾರ ಕನ್ನಡದ ಕೆಲಸ ಮಾಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಯಾವ ಉದ್ದೇಶದಿಂದ ಆಚರಿಸಬೇಕು’ ಎಂದು ಉತ್ತರಿಸಿದರು. ಮರುದಿನ ಇದು ಎಲ್ಲ ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಯಿತು. ಅದೇ ಸಂದರ್ಭದಲ್ಲಿ ವಿಧಾನಮಂಡಲ ಅಧಿವೇಶನ ನಡೆಯುತ್ತಿತ್ತು. ಹಂಪನಾ ಅವರ ಹೇಳಿಕೆ ವಿಧಾನ ಮಂಡಲದಲ್ಲಿಯೂ ಪ್ರಸ್ತಾಪವಾಯಿತು. ‘ರಾಜ್ಯ ಸರ್ಕಾರದ ಅನುದಾನವನ್ನು ಪಡೆದು ಸರ್ಕಾರದ ವಿರುದ್ಧವೇ ಮಾತನಾಡುವುದು ಸರಿಯಲ್ಲ. ತಕ್ಷಣವೇ ಅನುದಾನವನ್ನು ನಿಲ್ಲಿಸಬೇಕು’ ಎಂದು ಶಾಸಕರು ಒತ್ತಾಯಿಸಿದರು.

ಆಗ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರು ತಾವು ಹಂಪನಾ ಅವರ ಜೊತೆ ಮಾತನಾಡುವುದಾಗಿ ಭರವಸೆ ನೀಡಿದರು. ಅದರಂತೆಯೇ ಹಂಪನಾ ಅವರನ್ನು ‘ಬಾಲಬ್ರೂಯಿ’ಗೆ ಕರೆಸಿದರು. ಹೇಳಿಕೆಯ ಬಗ್ಗೆ ವಿಚಾರಿಸಿದರು. ಹಂಪನಾ ತಮ್ಮ ನಿಲುವನ್ನು ಸಮರ್ಥಿಸಿಕೊಂಡಾಗ ಅರಸು ಅವರು ‘ಕನ್ನಡಕ್ಕಾಗಿ ಸರ್ಕಾರ ಏನು ಮಾಡಬೇಕು, ಅಧಿ ಕಾರಿಗಳು ಹೇಗೆ ನಡೆದುಕೊಳ್ಳಬೇಕು ಎನ್ನುವ ಬಗ್ಗೆ ನಮ್ಮ ಐಎಎಸ್ ಅಧಿಕಾರಿಗಳಿಗೆ ಒಂದು ಉಪನ್ಯಾಸ ನೀಡಿ’ ಎಂದು ಆಹ್ವಾನಿಸಿದರು. ಅದರಂತೆ ಕೆಲವೇ ದಿನಗಳಲ್ಲಿ ಆಗಿನ ಮುಖ್ಯ ಕಾರ್ಯದರ್ಶಿಯೂ ಸಹಿತ ನೂರಾರು ಅಧಿಕಾರಿಗಳಿಗೆ ಹಂಪನಾ ಕನ್ನಡದ ಬಗ್ಗೆ ಪಾಠ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಸರ್ಕಾರದ ಅಡಿಯಾಳಲ್ಲ ಎಂಬುದನ್ನು ಸ್ವತಃ ಮುಖ್ಯಮಂತ್ರಿ ಅರಸು ಅವರೇ ಅಂದು ತೋರಿಸಿ ಕೊಟ್ಟರು.

ಕನ್ನಡ ಸಾಹಿತ್ಯ ಪರಿಷತ್ ಅನ್ನು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೇ ಸ್ಥಾಪಿಸಿದ್ದರೂ ಅದು ಪ್ರಭುತ್ವದ ಹಂಗಿನಲ್ಲಿಯೇ ಇರಬೇಕು ಎಂದು ಅವರು ಬಯಸಿರಲಿಲ್ಲ. ಮಹಾರಾಜರು ಅನುದಾನ ನೀಡುತ್ತಿದ್ದರೂ ಕಸಾಪ ಸ್ವತಂತ್ರ ಸಂಸ್ಥೆಯಾಗಿ ಮುಂದು ವರಿಯುವುದಕ್ಕೆ ಉತ್ತೇಜಿಸಿದ್ದರು. ಆರಂಭದ ಹಲವಾರು ವರ್ಷಗಳ ಕಾಲ ಮಹಾರಾಜರೇ ಅದರ ಅಧ್ಯಕ್ಷ ರಾಗಿದ್ದರು. ಸಾಹಿತಿಗಳು ಉಪಾಧ್ಯಕ್ಷರಾಗಿ ಪರಿಷತ್ ಕೆಲಸ ನಡೆಸಿಕೊಂಡು ಹೋಗುತ್ತಿದ್ದರು. ಹರಿದು ಹಂಚಿಹೋಗಿದ್ದ ಕನ್ನಡ ಪ್ರದೇಶಗಳನ್ನು ಒಟ್ಟುಗೂಡಿಸುವುದು, ಕನ್ನಡ ಸಾಹಿತ್ಯಕ್ಕೆ ಉತ್ತೇಜನ ನೀಡುವುದು, ಸಂಶೋಧನೆಗಳಿಗೆ ಅವಕಾಶ ನೀಡುವುದು, ಪುಸ್ತಕಗಳನ್ನು ಪ್ರಕಟಿಸಿ ಸುಲಭ ಬೆಲೆಯಲ್ಲಿ ಸಿಗುವಂತೆ ಮಾಡುವುದು ಮುಂತಾದ ಉದ್ದೇಶಗಳನ್ನು ಇಟ್ಟುಕೊಂಡು ಸಾಹಿತ್ಯ ಪರಿಷತ್ ಆರಂಭಿಸಲಾಗಿತ್ತು.

ಆದರೆ ಸ್ವಾತಂತ್ರ್ಯಾನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿವಿಧ ಅಕಾಡೆಮಿಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂತಾದವುಗಳನ್ನು ಸರ್ಕಾರವೇ ಹುಟ್ಟುಹಾಕಿದ್ದರಿಂದ ಸಾಹಿತ್ಯ ಪರಿಷತ್ ಮಾಡಬೇಕಾಗಿದ್ದ ಕೆಲಸಗಳನ್ನು ಈ ಸಂಸ್ಥೆಗಳು ಮಾಡತೊಡಗಿದವು. ಸಾಹಿತ್ಯ ಪರಿಷತ್ ಕೂಡ ತನ್ನ ಕಾರ್ಯಚಟುವಟಿಕೆಗಳನ್ನು ಬದಲಾಯಿಸಿಕೊಂಡಿತು.

ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಸಾರ್ವಭೌಮ ಸಂಸ್ಥೆ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ. ಇದೊಂದು ಸ್ವತಂತ್ರ ಸಂಸ್ಥೆ. ಇಲ್ಲಿ ರಾಜಕೀಯ ಇರಬಾರದು. ರಾಜಕೀಯ ಪಕ್ಷಗಳ ಹಸ್ತಕ್ಷೇಪವೂ ಇರಕೂಡದು. ಈ ಹಿಂದೆ ಇಲ್ಲಿ ಬಹಳಷ್ಟು ಮಂದಿ ವಿವಿಧ ರಾಜಕೀಯ ಒಲವಿನ ವ್ಯಕ್ತಿ ಗಳು, ವಿವಿಧ ಸಿದ್ಧಾಂತಗಳಲ್ಲಿ ನಂಬಿಕೆ ಇಟ್ಟವರು ಅಧ್ಯಕ್ಷರಾಗಿದ್ದರು. ಆದರೆ ಪಕ್ಷ ರಾಜಕೀಯ ಪ್ರವೇಶ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ಅಂತಹ ಒಂದು ಸನ್ನಿವೇಶಕ್ಕೆ ಸಾಹಿತ್ಯ ಪರಿಷತ್ ಸಾಕ್ಷಿಯಾಗಿದೆ. ಮಹೇಶ್ ಜೋಶಿ ಅವರು ಈ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಲು ಬಿಜೆಪಿ ನೇರವಾಗಿ ಕಾರಣವಾಗಿದೆ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ. ‘ನಾನು ಯಾವುದೇ ಪಕ್ಷದ ಬೆಂಬಲಿಗ ಅಲ್ಲ. ಚುನಾವಣೆ ಸಂದರ್ಭದಲ್ಲಿ ಬೆಂಬಲ ನೀಡುವಂತೆ ಎಲ್ಲ ರಾಜಕೀಯ ಪಕ್ಷದವರನ್ನು ಕೇಳಿಕೊಂಡಿದ್ದೇನೆ.

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರೂ ನನ್ನ ಪರವಾಗಿ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರಾದ ಎಚ್.ಕೆ.ಪಾಟೀಲ, ಡಿ.ಆರ್.ಪಾಟೀಲ ಅವರೂ ನನ್ನ ಪರವಾಗಿ ಕೆಲಸ ಮಾಡಿದ್ದಾರೆ. ಅದೇ ರೀತಿ ಬಿಜೆಪಿಯವರೂ ನನಗೆ ಬೆಂಬಲ ನೀಡಿದ್ದಾರೆ. ಇದರಲ್ಲಿ ತಪ್ಪೇನೂ ಇಲ್ಲ’ ಎಂದು ಮಹೇಶ್ ಜೋಶಿ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ ‘ನಾನು ಈಗಲೂ ಸ್ವತಂತ್ರ ವ್ಯಕ್ತಿ. ಚುನಾವಣೆಯಲ್ಲಿ ಬೆಂಬಲ ನೀಡಿದ್ದಾರೆ ಎಂಬ ಕಾರಣಕ್ಕೆ ಅವರ ಅಡಿಯಾಳಲ್ಲ. ಕನ್ನಡಕ್ಕೆ ಅನ್ಯಾಯವಾದರೆ ಸರ್ಕಾರದ ವಿರುದ್ಧ ಹೋರಾಡಲೂ ಸಿದ್ಧ’ ಎಂದು ಅವರು ಹೇಳಿಕೊಂಡಿದ್ದಾರೆ. ಆದರೆ ಈ ಬಾರಿಯ ಕಸಾಪ ಚುನಾವಣೆ ಮತ್ತು ನಂತರದ ವಿದ್ಯಮಾನಗಳು ಜೋಶಿ ಅವರ ಮಾತುಗಳನ್ನು ಜನರು ನಂಬುವ ಹಾಗಿಲ್ಲ.

ಸಾಹಿತ್ಯ ಪರಿಷತ್ ಚುನಾವಣೆಗೆ ರಾಜಕೀಯ ಪಕ್ಷಗಳ ಬೆಂಬಲವನ್ನು ಪಡೆದುಕೊಂಡಿದ್ದೇ ಸರಿಯಲ್ಲ. ಸಾಹಿತ್ಯ ಪರಿಷತ್‌ಗೆ ಕಾಂಗ್ರೆಸ್ ಪಕ್ಷದ ಅಭಯ ಹಸ್ತವಾಗಲೀ ಬಿಜೆಪಿ ಕಮಲದ ಸುವಾಸನೆಯಾಗಲೀ ಜೆಡಿಎಸ್ ತೆನೆಯಾಗಲೀ ಬೇಕಾಗಿಲ್ಲ. ಕನ್ನಡದ ಮತ್ತು ಕನ್ನಡಿಗರ ಅಸ್ಮಿತೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಕನ್ನಡಿಗರು ಹೇಳಿದಂತೆ ಕೇಳುವ, ಕನ್ನಡಿಗರ ಕಷ್ಟಸುಖಗಳಲ್ಲಿ ಭಾಗಿಯಾಗುವ ಅಧ್ಯಕ್ಷ ಬೇಕೇ ವಿನಾ ರಾಜಕೀಯ ಪಕ್ಷವೊಂದರ ಋಣಭಾರದಲ್ಲಿ ಸಿಲುಕಿದ ಅಧ್ಯಕ್ಷರಲ್ಲ.

ಒಂದು ಸಿದ್ಧಾಂತದ ಪಕ್ಷ ಅಧಿಕಾರಕ್ಕೆ ಬಂದರೆ ಅದು ಏನೆಲ್ಲಾ ಮಾಡುತ್ತದೆ ಎನ್ನುವುದು ಈಗಾಗಲೇ ಸಾಬೀತಾಗಿದೆ. ರಾಜ್ಯ ಸರ್ಕಾರದ ವಿವಿಧ ಅಕಾಡೆಮಿಗಳು, ಪ್ರಾಧಿಕಾರಗಳ ನಡವಳಿಕೆ ಹೇಗಿದೆ ಎನ್ನುವುದು ಜಗ ಜ್ಜಾಹೀರಾಗಿದೆ. ಅದೇ ಮಾದರಿ ಕನ್ನಡ ಸಾಹಿತ್ಯ ಪರಿಷತ್‌ ನಲ್ಲಿಯೂ ಮುಂದುವರಿಯುವ ಸಾಧ್ಯತೆಯೇ ಹೆಚ್ಚು. ಹಾಗಾಗದಿರಲಿ ಎಂದು ಆಶಿಸೋಣ.

ರಾಜಕೀಯ ಪಕ್ಷದ ಬೆಂಬಲದಿಂದಲೇ ಮಹೇಶ್ ಜೋಶಿ ಗೆದ್ದಿರಬಹುದು. ಆದರೆ ಈಗ ಅವರು ಗಟ್ಟಿತನ ಪ್ರದರ್ಶಿಸಬೇಕಿದೆ. ಋಣಭಾರಕ್ಕೆ ನಲುಗುವುದಿಲ್ಲ ಎಂಬ ಸಂದೇಶವನ್ನು ಸಾರಬೇಕಿದೆ. ಅದರಂತೆಯೇ ನಡೆದುಕೊಳ್ಳಬೇಕಿದೆ. ಕನ್ನಡಿಗರಿಗೆ ಶುಭವಾಗಲಿ, ಶುಭವಾಗಲಿ, ಶುಭವಾಗಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.