‘ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವುದು’ ಎಂದು ಸಾಹಿತಿ ದೇವನೂರ ಮಹಾದೇವ ಹೇಳುತ್ತಾರೆ. ಆದರೆ ಹವಾಮಾನ ವೈಪರೀತ್ಯದಿಂದ ಭೂಮಿಗೆ ಬಿದ್ದ ಬೀಜ ಮೊಳಕೆಯೊಡೆಯವುದೇ ಇಲ್ಲ. ಅಕಸ್ಮಾತ್ ಮೊಳಕೆ ಒಡೆದರೂ ಅದು ಬರೀ ಹುಳುಕು. ಎದೆಯಲ್ಲಿ ಬರೀ ವಿಷವೇ ತುಂಬಿದ್ದರಿಂದ ಅಲ್ಲಿ ಬಿದ್ದ ಅಕ್ಷರವೂ ಫಲ ಕೊಡುವುದು ಡೌಟು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲ್ವಿಚಾರಣೆ ಮತ್ತು ಬಲವರ್ಧನ ಸಮಿತಿ ಹಾಗೂ ಕರ್ನಾಟಕ ದಲಿತ ಮಹಿಳಾ ವೇದಿಕೆಯು ಸಿದ್ಧಪಡಿಸಿದ ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅನುಷ್ಠಾನದ 2017ರ ವಾರ್ಷಿಕ ವರದಿಯನ್ನು ನೋಡಿದರೆ ಈ ಸಂಶಯ ಇನ್ನಷ್ಟು ಗಟ್ಟಿಯಾಗುತ್ತದೆ. ಈ ವರದಿಯ ಪ್ರಕಾರ ರಾಜ್ಯದಲ್ಲಿ ಪ್ರತಿ ಐದು ದಿನಕ್ಕೊಬ್ಬ ದಲಿತನ ಕೊಲೆಯಾಗುತ್ತದೆ. ಪ್ರತಿ ಎರಡು ದಿನಕ್ಕೆ ದಲಿತ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ನಡೆಯುತ್ತದೆ. ಪ್ರತಿ ನಾಲ್ಕು ಗಂಟೆಗೊಮ್ಮೆ ದಲಿತನೊಬ್ಬನ ಮೇಲೆ ದೌರ್ಜನ್ಯ ನಡೆಯುತ್ತದೆ. 2017ರಲ್ಲಿ 73 ಮಂದಿ ದಲಿತರನ್ನು ಕೊಲೆ ಮಾಡಲಾಗಿದೆ. 190 ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದೆ. ಗಮನಿಸಬೇಕಾದ ಮತ್ತು ಹೆಚ್ಚು ಆತಂಕಕ್ಕೆ ದೂಡುವ ಇನ್ನೊಂದು ಸಂಗತಿ ಎಂದರೆ, ದಲಿತರ ಮೇಲಿನ ದೌರ್ಜನ್ಯ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿಯೇ ಹೆಚ್ಚು ಎಂಬುದು.
ಕರುನಾಡ ರಾಜಧಾನಿ ಬೆಂಗಳೂರು, ವಿವಿಧ ಸಂಸ್ಕೃತಿಗಳ ಮಿಶ್ರಣದ ನಗರ. ದೇಶದ ಮತ್ತು ವಿಶ್ವದ ಎಲ್ಲ ಭಾಗದ ಜನರೂ ಇಲ್ಲಿದ್ದಾರೆ. ಎಲ್ಲ ಜನರನ್ನೂ ಇಲ್ಲಿ ಮುಕ್ತ ಮನಸ್ಸಿನಿಂದ ಸ್ವಾಗತಿಸಲಾಗುತ್ತದೆ. ಅಕ್ಷರಸ್ಥರೇ ಹೆಚ್ಚಿದ್ದಾರೆ. ಆದರೂ ದಲಿತರ ಮೇಲಿನ ದೌರ್ಜನ್ಯ ಇಲ್ಲೇ ಹೆಚ್ಚು ಎನ್ನುವುದು ಸಾಮಾನ್ಯ ಸಂಗತಿ ಅಲ್ಲ. ಬೆಂಗಳೂರಿನ ಎಲ್ಲ ಪ್ರಜ್ಞಾವಂತ ನಾಗರಿಕರು ತಲೆ ತಗ್ಗಿಸುವ ವಿಚಾರ ಇದು.
ನಗರ ಕಟ್ಟುವುದು ಎಂದರೆ ಕಟ್ಟಡವನ್ನು ಕಟ್ಟಿದ ಹಾಗಲ್ಲ. ಮೇಲ್ಸೇತುವೆಗಳು, ಗಗನಚುಂಬಿ ಕಟ್ಟಡಗಳು, ಮೆಟ್ರೊ ರೈಲು, ವಿಮಾನ, ಹೆಲಿಕಾಪ್ಟರ್, ವಿಶಾಲವಾದ ರಸ್ತೆ, ದಿನದ 24 ಗಂಟೆ ವಿದ್ಯುತ್, ವೈಫೈ, ಮಾಲ್ ಗಳು, ಪಬ್, ಬಾರ್ ಹೀಗೆ ನಾವು ‘ನಾಗರಿಕ’ ಎಂದುಕೊಂಡ ಸೌಲಭ್ಯಗಳನ್ನು ಒದಗಿಸುವುದಷ್ಟೇ ಅಲ್ಲ. ನಮ್ಮ ನಿಮ್ಮ ಹಾಗೆಯೇ ಮನುಷ್ಯರಾಗಿ ಹುಟ್ಟಿದ ಮನುಷ್ಯರಾಗಿಯೇ ಬದುಕಬೇಕು ಎಂದು ಕನಸು ಕಂಡ ದಲಿತರನ್ನೂ ನಮ್ಮಂತೇ ಮನುಷ್ಯರೆಂದು ಗುರುತಿಸುವ ಮನೋಭಾವ ಬೆಳೆಯುವವರೆಗೂ ಇದನ್ನು ಆರೋಗ್ಯಪೂರ್ಣ ಸಮಾಜ ಎಂದು ಕರೆಯಲಾಗದು. ಕರೆಯಬಾರದು ಕೂಡ.
ಇಂತಹ ಸ್ಥಿತಿಯನ್ನು ಕಂಡೇ ಕವಿ ಸುಬ್ಬು ಹೊಲೆಯಾರ್, ‘ಹಿಂಸಿಸಿ ಕೊಲ್ಲಬಹುದೇ ಹೀಗೆಲ್ಲ, ಮತ್ತೂ ಈ ಉದ್ದೇಶವಿದ್ದರೆ, ಇರುವುದಾದರೆ ಅವ್ವನಿಗೆ ಮೊದಲೇ ಹೇಳಿದ್ದರೆ ಕಾಣಿಸಿಕೊಳ್ಳುತ್ತಿರಲಿಲ್ಲ ಹೀಗೆ...’ ಎಂದು ಹೇಳುತ್ತಾರೆ. ಇದು ಬೆಂಗಳೂರು ಮಹಾನಗರ ಮತ್ತು ಕರ್ನಾಟಕದ ಮೂಲೆ ಮೂಲೆಗಳಲ್ಲಿ ಇರುವ ದಲಿತರ ಪ್ರಾತಿನಿಧಿಕ ಹೇಳಿಕೆಯೂ ಹೌದು.
ವರದಿಯಲ್ಲಿ ಇನ್ನಷ್ಟು ಆತಂಕದ ವಿಷಯಗಳಿವೆ. 2017ರಲ್ಲಿ ದಲಿತರ ಮೇಲಿನ ದೌರ್ಜನ್ಯದ ಪ್ರಮಾಣ ಶೇ 11.92ರಷ್ಟು ಹೆಚ್ಚಾಗಿದೆ. ಕೊಲೆ ಯತ್ನದ ಪ್ರಕರಣಗಳು ಶೇ 6.4ರಷ್ಟು ಕಡಿಮೆಯಾಗಿದ್ದರೂ ಅತ್ಯಾಚಾರದ ಪ್ರಕರಣಗಳು ಶೇ 15.85ರಷ್ಟು ಹೆಚ್ಚಾಗಿವೆ. ಶಿಕ್ಷೆಯ ಪ್ರಮಾಣ ಶೇ 3.79ರಷ್ಟು ಮಾತ್ರ ಇದೆ. ಇದು ನಮ್ಮ ವ್ಯವಸ್ಥೆಯನ್ನು, ನಮ್ಮ ಸಮಾಜವನ್ನು ಬಯಲು ಮಾಡುತ್ತದೆ. ಸರ್ಕಾರ, ಪೊಲೀಸ್ ವ್ಯವಸ್ಥೆ ಮತ್ತು ನ್ಯಾಯಾಂಗ ಎಲ್ಲವೂ ಇಲ್ಲಿ ಬೆತ್ತಲಾಗಿವೆ. ಇಲ್ಲಿ ಲಿಖಿತ ಸಂವಿಧಾನಕ್ಕಿಂತ ಅಲಿಖಿತ ಸಂವಿಧಾನವೇ ಚಾಲ್ತಿಯಲ್ಲಿದೆ. ಅಲಿಖಿತ ಸಂವಿಧಾನವನ್ನು ನಾಗರಿಕರೆಂಬೋ ನಾಗರಿಕರ ತಲೆಯಿಂದ ಕಿತ್ತು ಹಾಕಿ ಅಂಬೇಡ್ಕರ್ ಕೊಟ್ಟ ಸಂವಿಧಾನವನ್ನು ನೆಲೆಸುವಂತೆ ಮಾಡುವವರೆಗೆ ದಲಿತರ ಮೇಲಿನ ದೌರ್ಜನ್ಯ ಕಡಿಮೆಯಾಗುವುದಿಲ್ಲ. ಎದೆಗೆ ಬಿದ್ದ ಅಕ್ಷರಕ್ಕೆ ಮಾನವೀಯತೆಯ ಗೊಬ್ಬರವನ್ನೂ ಹಾಕಿ ಬೆಳೆಸಬೇಕಿದೆ.
ದೇವನೂರ ಮಹಾದೇವ ಒಂದು ಕಡೆ ಉಡುಪಿಯ ಕನಕನನ್ನು ಕಂಡು ಹೀಗೆ ಭಾವಿಸುತ್ತಾರೆ. ‘ಕೃಷ್ಣ ದೇವಾಲಯದ ಹೊರಗೆ ನಿಂತ ಕನಕನನ್ನು ಕಂಡು ಕನಕ ಜನಾಂಗಕ್ಕೆ ಸೇರಿದ ಒಬ್ಬನಿಗೆ ‘ನಮ್ಮ ಕನಕ ದೇವರನ್ನೇ ತಿರುಗಿಸಿಬಿಟ್ಟ, ಹೇಗೆ’ ಎಂಬ ಹೆಮ್ಮೆ ಉಂಟಾದರೆ ಅದೇ ಜನಾಂಗದ ಇನ್ನೊಬ್ಬನಿಗೆ ಕನಕ ಹೊರಗೆ ನಿಂತಿರುವುದು ಎದೆಗೆ ಭರ್ಜಿ ಚುಚ್ಚಿದಂತಾಗಿ ಆ ಮಠವನ್ನೇ ಭೂಮಿ ಮೇಲಿಂದ ಧ್ವಂಸ ಮಾಡಿಬಿಡಬೇಕು ಎನ್ನಿಸಬಹುದು. ಆದರೆ ಹೊರಗೆ ನಿಂತ ಕನಕನ ಪ್ರತಿಮೆಗೆ ಜೀವ ಬಂದರೆ ‘ಮಾಧ್ವ, ಕುರುಬ ಇಬ್ಬರೂ ಮೇಲು– ಕೀಳು ಎಂಬ ಜಾತಿಯ ಬಚ್ಚಲಲ್ಲಿ ಹುಳುಗಳಾಗಿ ವಿಲವಿಲ ಒದ್ದಾಡುತ್ತಿದ್ದಾರೆ. ನೋಡಲಾರೆ. ಇವರನ್ನು ಮನುಷ್ಯರನ್ನಾಗಿ ಮಾಡು ಪರಮಾತ್ಮ’ ಎಂದು ಬೇಡಿಕೊಳ್ಳಬಹುದು. ಜಾತಿ, ಮತ ಮೇಲು ಕೀಳು ಎನ್ನುವುದೆಲ್ಲ ನಮ್ಮ ದೇಶದಲ್ಲಿ ಏನಾದರೂ ಆಗಬಹುದು. ಆದರೆ ಕೇವಲ ಮನುಷ್ಯರಾಗಿ ಬಾಳುವುದು ಬಲು ಕಷ್ಟ. ಅದಕ್ಕೇ ನಮ್ಮ ಋಷಿಗಳು, ಸಂತರು ಭಿನ್ನಭಾವದ ಊರಿನಿಂದ ದೂರವಾಗಿ ಬೆಟ್ಟಗುಡ್ಡಗಳಲ್ಲಿ ವಾಸಿಸುತ್ತಿದ್ದರೇನೋ? ಅದಕ್ಕಾಗಿಯೇ ನಮ್ಮ ಜೋಗಿಗಳು ಭಿನ್ನಭಾವದ ಊರುಗಳಲ್ಲಿ ನೆಲೆಗೊಳ್ಳದೆ ಊರೂರು ಅಲೆಯುತ್ತಿದ್ದರೇನೋ? ಇದನ್ನೆಲ್ಲಾ ನೋಡಿದಾಗ ಮನುಷ್ಯನಾಗಿ ಹುಟ್ಟಿದ ಮನುಷ್ಯ ಮನುಷ್ಯನಾಗೇ ಉಳಿಯಲು ಎಷ್ಟೊಂದು ಕಷ್ಟ ಅನ್ನಿಸಿ ಸುಸ್ತಾಗುತ್ತದೆ’ ಎನ್ನುತ್ತಾರೆ. ಮನುಷ್ಯನಾಗಿ ಹುಟ್ಟುವ ಆಯ್ಕೆ ನಮಗೆ ಇಲ್ಲ. ಆದರೆ ಮನುಷ್ಯನಾಗಿ ಬದುಕುವ ಅವಕಾಶ ನಮಗೆ ಇದೆ. ಕೃತಕವಾಗಿ ಕಟ್ಟಿಕೊಂಡ ಸಮಾಜದಲ್ಲಿ ಮನುಷ್ಯತ್ವಕ್ಕೆ ಬೆಲೆಯೇ ಇಲ್ಲವಾದರೆ ಅದಕ್ಕೆ ಏನಂತ ಹೆಸರು ಇಡುವುದು?
ಮಾನವ ಎಷ್ಟೇ ಅಭಿವೃದ್ಧಿ ಹೊಂದಿದ್ದರೂ, 4ಜಿ, 5ಜಿ ಕಾಲಮಾನಕ್ಕೆ ಕಾಲಿಟ್ಟಿದ್ದರೂ, ಚಂದ್ರ, ಮಂಗಳನ ಮೇಲೆ ಪ್ರವಾಸ ಕೈಗೊಂಡಿದ್ದರೂ ಭಾರತೀಯ ಮನಸ್ಸು ಇನ್ನೂ ವಿಕಾಸ ಹೊಂದಿಯೇ ಇಲ್ಲ. ಅಲ್ಲಿ ಇನ್ನೂ ಕೊಳಕುಗಳು ತುಂಬಿಕೊಂಡಿವೆ. ಕೊಚ್ಚೆ ಉಚ್ಚೆಯ ಕಮಟು ವಾಸನೆ ಬಡಿಯುತ್ತಿದೆ. ಆ ಕೊಳಕಿನಲ್ಲಿಯೇ ಬಿದ್ದು ಒದ್ದಾಡುತ್ತಿದ್ದಾರೆ. ನಗರ, ಮಹಾನಗರಗಳನ್ನು ಕಟ್ಟಿದ್ದರೂ ಇನ್ನೂ ಮನಸ್ಸುಗಳನ್ನು ಕಟ್ಟಲು ಸಾಧ್ಯವಾಗಿಲ್ಲ. ಮಂಗಗಳೇ ಸೇರಿ ಕಟ್ಟಿದ ರಾಮಸೇತು ಹುಡುಕುತ್ತೇವೆ. ಆದರೆ ಮನುಷ್ಯರೇ ಕಟ್ಟಬಹುದಾದ ಮಾನವೀಯತೆಯ ಸೇತುವೆ ನಿರ್ಮಾಣ ಇನ್ನೂ ಪೂರ್ಣಗೊಂಡಿಲ್ಲ. ಆಗಾಗ ಕೆಲವು ಮಹಾನುಭಾವರು ಇದಕ್ಕೆ ಅಡಿಪಾಯ ಹಾಕಿದ್ದರೂ ಸೇತುವೆ ನಿರ್ಮಾಣ ಮುಗಿಯುತ್ತಲೇ ಇಲ್ಲ. ಅದಕ್ಕೇ ಈಗಲೂ ನಮ್ಮ ಬಡವರು, ‘ಬಡವರು ಸತ್ತರೆ ಸುಡಲಿಕ್ಕೆ ಸೌದಿಲ್ಲೋ, ಒಡಲ ಬೆಂಕೀಲಿ ಹೆಣ ಬೆಂದೊ, ದೇವರೇ ಬಡವರಿಗೆ ಸಾವ ಕೊಡಬ್ಯಾಡೊ’ ಎಂದು ಕನವರಿಸುತ್ತಿದ್ದಾರೆ.
ಕವಿ ಎಚ್.ಲಕ್ಷ್ಮೀನಾರಾಯಣ ಸ್ವಾಮಿ ತಮ್ಮ ಕವಿತೆಯೊಂದರಲ್ಲಿ, ‘ನಿಮ್ಮ ಚಿತ್ರಕಲೆಯ ತೆವಲಿಗೆ ಬೆನ್ನ ನೀಡಿ, ಲೇಖನಿಯ ಮೋಜಿನ ಬರಹಕ್ಕೆಲ್ಲಾ ಹಲಗೆಯಾಗಿದ್ದೆ ಬಂಡೆಯಂತೆ, ಇನ್ನು ನಿಮ್ಮ ಉಳಿಯ ಪೆಟ್ಟನ್ನು ತಾಳಲಾರೆ. ಬಾರುಗೋಲಿಡುದು ಬರುತ್ತಿದ್ದೇನೆ. ನಿಮ್ಮ ಮೊಸಳೆ ಮೈಗಳಿಗೆ ಇದೂ ಕಡಿಮೆಯೆ’ ಎಂದು ಹೇಳುತ್ತಾರೆ. ಬೆಂಗಳೂರು ಮತ್ತು ಕರ್ನಾಟಕದಲ್ಲಿ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯವನ್ನು ಕಂಡರೆ ಇಂತಹ ಮಾತುಗಳು ಹೆಚ್ಚಾಗಬಹುದು. ಅಷ್ಟರೊಳಗೆ ನಾವು ಮನುಷ್ಯರಾಗಬೇಕು. ಇಲ್ಲವಾದರೆ ಮನುಷ್ಯತ್ವವನ್ನು ಎಲ್ಲಿಂದಾದರೂ ಕಡ ತಂದು ಬೊಗಸೆಯಲ್ಲಿ ಇಟ್ಟುಕೊಳ್ಳಬೇಕು. ಮನುಷ್ಯ ಮನುಷ್ಯರ ನಡುವೆ ಮನುಷ್ಯತ್ವದ ಸೇತುವೆ ಕಟ್ಟಬೇಕು. ಎಲ್ಲಿಂದಾದರೂ ಕಡ ತಂದು ಮಾನವೀಯತೆಯ ಸೇತುವೆ ಕಟ್ಟಬೇಕು. ಅಲ್ಲಿ ಸುಂದರ ಹೂವುಗಳು ಹುಟ್ಟಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.