ಈ ಕತೆಯನ್ನು ಯಾರು ಬರೆದಿದ್ದಾರೋ ಗೊತ್ತಿಲ್ಲ. ಆದರೆ ಅದು ನೀಡುವ ಸಂದೇಶ ಮಾತ್ರ ಅತ್ಯುತ್ತಮವಾದದ್ದು. ಮೊದಲು ಕತೆ ಕೇಳಿ ಬಿಡೋಣ; ಒಂದು ಊರಲ್ಲಿ ಒಬ್ಬ ರಾಜ. ಆತನಿಗೆ ತನ್ನ ಹುಟ್ಟು ಹಬ್ಬದ ಸಂದರ್ಭದಲ್ಲಿ ರಾಜ್ಯದ ಅತ್ಯಂತ ಶ್ರೇಷ್ಠ ವ್ಯಕ್ತಿಯನ್ನು ಸನ್ಮಾನಿಸುವ ತವಕ. ಅದಕ್ಕಾಗಿ ಒಂದು ಪ್ರಕಟಣೆ ನೀಡಿದ. ರಾಜನ ಪ್ರಕಟಣೆಯನ್ನು ಕೇಳಿದ್ದೇ ತಡ, ರಾಜ್ಯದಲ್ಲಿರುವ ಎಂಜಿನಿಯರ್‌ಗಳು, ವೈದ್ಯರು, ಸಮಾಜ ಸುಧಾರಕರು, ಜ್ಯೋತಿಷಿಗಳು, ರಾಜಕಾರಣಿಗಳು, ಪರ್ವತಾರೋಹಿಗಳು, ಕ್ರೀಡಾ
ಪಟುಗಳು, ಸಂಗೀತಗಾರರು, ನೃತ್ಯಪಟುಗಳು, ಶಿಕ್ಷಕರು, ಉದ್ಯಮಿಗಳು, ವಕೀಲರು, ಪೊಲೀಸರು ಹೀಗೆ ವಿವಿಧ ವರ್ಗದ ಜನರು ರಾಜನ ಆಸ್ಥಾನಕ್ಕೆ ಬಂದು ತಾವು ಯಾಕೆ ಶ್ರೇಷ್ಠ ವ್ಯಕ್ತಿಗಳು ಎನ್ನುವುದನ್ನು ನಿರೂಪಿಸಿದರು. ತನ್ನ ರಾಜ್ಯದಲ್ಲಿ ಇಷ್ಟೊಂದು ಶ್ರೇಷ್ಠ ವ್ಯಕ್ತಿಗಳು ಇದ್ದಾರಲ್ಲ ಎಂದು ರಾಜನಿಗೆ ಸಿಕ್ಕಾಪಟ್ಟೆ ಖುಷಿ ಆಯ್ತು. ಎಲ್ಲರಿಗೂ ಮುಂದಿನ ವರ್ಷದತನ್ನ ಹುಟ್ಟು ಹಬ್ಬಕ್ಕೆ ಬರುವಂತೆ ಸೂಚಿಸಿ ಕಳುಹಿಸಿದ. ಅಲ್ಲದೆ ಮಂತ್ರಿಯನ್ನು ಕರೆದು ಇವರಲ್ಲಿ ಶ್ರೇಷ್ಠ ವ್ಯಕ್ತಿ ಯಾರು ಎನ್ನುವುದನ್ನು ಪತ್ತೆ ಮಾಡಲು ಸೂಚಿಸಿದ.
ಆದರೆ ಇಷ್ಟರಲ್ಲಿ ಒಂದು ಘಟನೆ ನಡೆಯಿತು. ಅದು ಯಾರ ಗಮನಕ್ಕೂ ಬರಲಿಲ್ಲ. ರಾಜನ ಆಸ್ಥಾನದಲ್ಲಿ ವಿದ್ವಾಂಸರು ಮತ್ತು ಇತರ ವ್ಯಕ್ತಿಗಳು ತಾವು ಯಾಕೆ ಶ್ರೇಷ್ಠರು ಎಂದು ಹೇಳಿಕೊಳ್ಳುತ್ತಿದ್ದ ಸಂದರ್ಭದಲ್ಲಿಯೇ ಮೈಯೆಲ್ಲಾ ಕೆಸರುಮಯವಾಗಿರುವ, ತಲೆಗೆ ಶಾಲು ಸುತ್ತಿದ್ದ ವ್ಯಕ್ತಿಯೊಬ್ಬ ಓಡುತ್ತಾ ಬಂದು ರಾಜನ ಆಸ್ಥಾನ ಪ್ರವೇಶಿಸಲು ಯತ್ನಿಸಿದ. ಆದರೆ ಅದಕ್ಕೆ ಬಾಗಿಲ ಭಟರು ಅವಕಾಶವನ್ನೇ ನೀಡಲಿಲ್ಲ. ‘ಏ ಭಿಕ್ಷುಕ, ನೀನು ಒಳಕ್ಕೆ ಹೋಗಲು ಸಾಧ್ಯವಿಲ್ಲ’ ಎಂದು ಆತನನ್ನು ತಡೆದುಬಿಟ್ಟರು. ‘ನಾನು ಭಿಕ್ಷುಕ ಅಲ್ಲ. ರೈತ. ಈ ರಾಜ್ಯದ ಎಲ್ಲರಿಗೂ ಬೇಕಾಗುವ ಆಹಾರಧಾನ್ಯ ಬೆಳೆದುಕೊಡುವವನು’ ಎಂದು ಹೇಳಿದರೂ ಭಟರು ಆತನನ್ನು ಒಳಕ್ಕೆ ಬಿಡಲೇ ಇಲ್ಲ. ಅದರಿಂದ ಬೇಸರಗೊಂಡ ಆ ರೈತ ಮನೆಗೆ ಹೋಗಿ ಮಲಗಿ ಬಿಟ್ಟ.
ಮುಂದಿನ ವರ್ಷ ರಾಜನ ಹುಟ್ಟು ಹಬ್ಬ ಬಂತು. ಶ್ರೇಷ್ಠ ವ್ಯಕ್ತಿಯನ್ನು ಸನ್ಮಾನ ಮಾಡಲು ರಾಜ ಸಿದ್ಧನಾಗಿ ಕುಳಿತಿದ್ದ. ಆದರೆ ಎಂಜಿನಿಯರ್, ಪರ್ವತಾರೋಹಿ, ಈಜುಗಾರ, ಕ್ರೀಡಾಪಟು, ವಿದ್ವಾಂಸ, ಸಮಾಜ ಸುಧಾರಕ ಹೀಗೇ ಯಾರೂ ರಾಜನ ಆಸ್ಥಾನದತ್ತ ಸುಳಿಯಲೇ ಇಲ್ಲ. ರಾಜ ಮಂತ್ರಿಯನ್ನು ಕರೆದು ಯಾಕೆ ಯಾರೂ ಬಂದಿಲ್ಲ ಎಂದು ಕೇಳಿದ. ತಕ್ಷಣವೇ ಬೇಹುಗಾರರನ್ನು ಕಳುಹಿಸಿ ತಪಾಸಣೆ ಮಾಡಿದಾಗ ಮಂತ್ರಿಗೆ ನಿಜವಾದ ಹಕೀಕತ್ ಗೊತ್ತಾಯಿತು.
ಕಳೆದ ಬಾರಿ ರಾಜನ ಆಸ್ಥಾನ ಪ್ರವೇಶಿಸಲು ಸಾಧ್ಯವಾಗದ್ದರಿಂದ ರೈತ ಮನೆಯಲ್ಲಿ ಮಲಗಿಬಿಟ್ಟಿದ್ದ. ಆತ ಮಲಗಿದ್ದರಿಂದ ಈ ಬಾರಿ ಆಹಾರಧಾನ್ಯದ ಉತ್ಪಾದನೆಯೇ ಆಗಿರಲಿಲ್ಲ. ಆಹಾರವೇ ಇಲ್ಲದ್ದರಿಂದ ಎಂಜಿನಿಯರ್‌ಗಳಿಗಾಗಲೀ, ಕ್ರೀಡಾಪಟುಗಳಿಗಾಗಲೀ, ವಿದ್ವಾಂಸರಿಗಾಗಲೀ... ತಾವೇ ಶ್ರೇಷ್ಠ ಅಂದುಕೊಂಡಿದ್ದ ಯಾವುದೇ ವ್ಯಕ್ತಿಗೂ ರಾಜನ ಆಸ್ಥಾನಕ್ಕೆ ಬರುವಷ್ಟು ಶಕ್ತಿಯೇ ಇರಲಿಲ್ಲ. ಈ ವಿಷಯ ರಾಜನಿಗೆ ಗೊತ್ತಾದ ತಕ್ಷಣವೇ ಆತನಿಗೆ ಅರಿವಾಯಿತು. ತನ್ನ ರಾಜ್ಯದಲ್ಲಿ ಅತ್ಯಂತ ಶ್ರೇಷ್ಠ ವ್ಯಕ್ತಿ ಎಂದರೆ ರೈತ ಎಂದುಕೊಂಡು ರಾಜ ಸೀದಾ ರೈತನ ಮನೆಗೆ ಹೋಗಿ ಆತನನ್ನು ಸನ್ಮಾನಿಸಿದ. ಜೊತೆಗೆ ಕಳೆದ ಬಾರಿ ರಾಜಭಟರು ಅರಮನೆ ಪ್ರವೇಶಿಸುವುದಕ್ಕೆ ಅವಕಾಶ ನೀಡದೇ ಇರುವುದಕ್ಕೆ ಕ್ಷಮೆಯನ್ನೂ ಯಾಚಿಸಿದ.
ಅನ್ನದಾತನಿದ್ದರೆ ಮಾತ್ರ ಅರಮನೆ ಎನ್ನುವುದು ಆ ರಾಜನಿಗೆ ಅರ್ಥವಾಗಿತ್ತು. ಅನ್ನದಾತ ಮುನಿದರೆ ಯಾರೂ ಯಾವುದೇ ಸಾಧನೆ ಮಾಡುವುದು ಸಾಧ್ಯವಿಲ್ಲ ಎನ್ನುವುದೂ ಆತನಿಗೆ ಗೊತ್ತಾಯಿತು. ಈ ಸತ್ಯ ಆಧುನಿಕ ರಾಜ ಮಹಾರಾಜರಿಗೆ ಗೊತ್ತಾಗುವುದು ಯಾವಾಗ?
ಬಾಲಿವುಡ್‌ನ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಇತ್ತೀಚೆಗೆ ಟ್ವೀಟ್ ಮಾಡಿ, ತಾವು 1,300ಕ್ಕೂ ಹೆಚ್ಚು ರೈತರ ಸಾಲ ತೀರಿಸಿದ್ದಾಗಿ ಹೇಳಿಕೊಂಡಿದ್ದಾರೆ. ಕಳೆದ ವರ್ಷವೂ ತಾವು ಹಲವಾರು ರೈತರ ಸಾಲ ತೀರಿಸಿದ್ದು, ಅದರಿಂದ ತಮಗೆ ತೃಪ್ತಿ ದೊರಕಿದೆ ಎಂದೂ ಹೇಳಿದ್ದಾರೆ. ಹಿಂದಿ ಚಲನಚಿತ್ರ ರಂಗದ ಇನ್ನೊಬ್ಬ ನಾಯಕ ನಟ ನಾನಾ ಪಾಟೇಕರ್ ರೈತರ ಪರವಾಗಿ ಆಂದೋಲನವನ್ನೇ ನಡೆಸಿದ್ದಾರೆ. ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ತೆರಳಿ ಅವರಿಗೆ ಸಹಾಯಹಸ್ತ ಚಾಚಿದ್ದೇ ಅಲ್ಲದೆ ಹಲವಾರು ಹಳ್ಳಿಗಳನ್ನು ದತ್ತು ಪಡೆದು ರೈತರ ಬಾಳಿನಲ್ಲಿ ಬೆಳಕು ಮೂಡಿಸಲು ಯತ್ನಿಸಿದ್ದಾರೆ.
ಅಮೀರ್ ಖಾನ್ ತಮ್ಮ ‘ಪಾನಿ’ ಫೌಂಡೇಷನ್ ಮೂಲಕ ರೈತರ ಆಶಾಕಿರಣವಾಗಿಯೇ ಬೆಳೆದಿದ್ದಾರೆ. ಆದರೆ ಇಂತಹ ಸನ್ನಿವೇಶ ಕನ್ನಡ ನಾಡಿನಲ್ಲಿ ಯಾಕೆ ಕಾಣುತ್ತಿಲ್ಲ. ಇಲ್ಲಿಯೂ ರೆಬೆಲ್ ಸ್ಟಾರ್, ರಿಯಲ್ ಸ್ಟಾರ್, ಪವರ್ ಸ್ಟಾರ್, ಸೂಪರ್ ಸ್ಟಾರ್, ರಾಕಿಂಗ್ ಸ್ಟಾರ್... ಎಲ್ಲ ಇದ್ದಾರೆ. ಯಶ್, ಸುದೀಪ್, ದರ್ಶನ್, ಶಿವರಾಜಕುಮಾರ್ ಮುಂತಾದವರು ಆಗಾಗ ರೈತರ ಪರವಾದ ಮಾತನ್ನಾಡುತ್ತಾರೆ.
ಕೊಂಚಮಟ್ಟಿಗೆ ನೆರವನ್ನೂ ನೀಡಿದ್ದಾರೆ. ಆದರೆ ಬಾಲಿವುಡ್‌ನಲ್ಲಿ ಆದ ಹಾಗೆ ಅದೊಂದು ಆಂದೋಲನವಾಗಿಲ್ಲ. ಜೊತೆಗೆ ಸಾವಿರಾರು ರೈತರನ್ನು ಋಣಮುಕ್ತರನ್ನಾಗಿ ಮಾಡಲು ಯಾರೂ ಮುಂದೆ ಬಂದಿಲ್ಲ. ಇದು ಕೇವಲ ಸಿನಿಮಾ ತಾರೆಯರ ಜವಾಬ್ದಾರಿ ಅಲ್ಲ. ನಮ್ಮ ಉದ್ಯಮಪತಿಗಳು, ರಿಯಲ್ ಎಸ್ಟೇಟ್ ಮಾಲಿಕರು, ಕೋಟಿ ಕೋಟಿ ಗಳಿಸುವ ಐಎಎಸ್ ಅಧಿಕಾರಿಗಳು, ಉದ್ಯಮಿಗಳು, ಸಿನಿಮಾ ನಟರು, ರಾಜಕಾರಣಿಗಳು, ಈ ಎಲ್ಲರನ್ನೂ ಕುಣಿಸುವ ಜ್ಯೋತಿಷಿಗಳು ಮತ್ತು ಮಠಾಧಿಪತಿಗಳು ರೈತರನ್ನು ಋಣಮುಕ್ತರನ್ನಾಗಿಸುವ ಕಾಯಕದಲ್ಲಿ ತೊಡಗಿಕೊಳ್ಳಬೇಕು. ಅಂದಾಗ ಮಾತ್ರ ಇದು ಕಲ್ಯಾಣ ರಾಜ್ಯವಾಗುತ್ತದೆ.
ರಾಜ್ಯದಲ್ಲಿ ಈಗ ರೈತರ ಸಾಲ ಮನ್ನಾ ಮಾಡಲಾಗಿದೆ. ಆದರೂ ರೈತರ ಆತ್ಮಹತ್ಯೆ ನಿಂತಿಲ್ಲ. ಇದಕ್ಕೆ ಮುಖ್ಯ ಕಾರಣ ಈ ಸಮಾಜ ತನ್ನ ಬೆನ್ನಿಗೆ ನಿಂತಿಲ್ಲ ಎನ್ನುವ ಅನಾಥ ಪ್ರಜ್ಞೆ. ಇದನ್ನು ಹೋಗಲಾಡಿಸುವ ತನಕ ರೈತರ ಆತ್ಮಹತ್ಯೆ ನಿಲ್ಲುವುದಿಲ್ಲ. ಹೊಲ ಗದ್ದೆಗಳಲ್ಲಿ ಮಣ್ಣು, ಕೆಸರು ಮೆತ್ತಿಕೊಂಡು ದುಡಿಯುವುದು, ಬೆಳೆಯುವುದು ಅವನ ಕರ್ಮ. ಹಣಕೊಟ್ಟು ತಾವು ತಿನ್ನುತ್ತೇವೆ. ನಮಗೂ ರೈತರಿಗೂ ಸಂಬಂಧವೇ ಇಲ್ಲ ಎಂದುಕೊಂಡಿದ್ದರ ಪರಿಣಾಮವನ್ನು ಈಗ ನಾವು ನೋಡುತ್ತಿದ್ದೇವೆ. ಇದು ತಪ್ಪಬೇಕಾದರೆ ಇಡೀ ಸಮಾಜ ರೈತರ ಋಣ ತೀರಿಸುವುದಕ್ಕೆ ಕಟಿಬದ್ಧವಾಗಬೇಕು. ಕಬ್ಬು ಬೆಳೆಗಾರರ ಸಮಸ್ಯೆ ಇತ್ಯರ್ಥಕ್ಕೆ ವಿಧಾನಸೌಧದಲ್ಲಿ ಸೇರಿದ್ದ ಮುಖಂಡರೆಲ್ಲಾ ತಮ್ಮ ಸಂಬಳ ಅಲ್ಲ, ಗಿಂಬಳದ ಕೊಂಚ ಭಾಗವನ್ನು ಕೊಡುತ್ತೇನೆ ಎಂದಿದ್ದರೂ ರೈತರು ನೆಮ್ಮದಿಯಿಂದ ಮನೆಯತ್ತ ಸಾಗುತ್ತಿದ್ದರು. ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರು ಯಾವಾಗಲೂ ಹೇಳುತ್ತಿದ್ದ ಮಾತು, ‘ರೈತ ಸಾಲಗಾರನಲ್ಲ. ಸರ್ಕಾರವೇ ಸಾಲಗಾರ’ ಎಂದು. ನಿಜವಾದ ಅರ್ಥದಲ್ಲಿ ಸಮಾಜ ಕೂಡ ಸಾಲಗಾರ. ಅದನ್ನು ತೀರಿಸುವ ಜವಾಬ್ದಾರಿ ಸಮಾಜದ ಮೇಲೂ ಇದೆ.
ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತವರು ರೈತ ಹೋರಾಟವನ್ನು ಟೀಕೆ ಮಾಡುವ ಭರದಲ್ಲಿ ‘ಇಷ್ಟು ದಿನ ಎಲ್ಲಿ ನಿದ್ದೆ ಮಾಡುತ್ತಿದ್ದೆ’ ಎಂದು ಕೇಳುವ ಬದಲು ‘ಇಷ್ಟು ದಿನ ಎಲ್ಲಿ ಮಲಗಿದ್ದೆ’ ಎಂದು ಕೇಳಿದರು. ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು. ಮುಖ್ಯಮಂತ್ರಿ ಸಿಟ್ಟನ ಭರದಲ್ಲಿ ಹೇಳಿರಬಹುದು. ಆದರೆ ರೈತ ಮಹಿಳೆಯರೂ ಮಾತು ಆಡಲು ಆರಂಭಿಸಿದರೆ ಮುಖ್ಯಮಂತ್ರಿ ಸಿಟ್ಟೂ ಇಳಿಯುತ್ತದೆ. ಮುಖ್ಯಮಂತ್ರಿ ಸ್ಥಾನವೂ ಅಳಿಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.