ADVERTISEMENT

ರಾಜಕಾರಣಕ್ಕೂ ಬೇಕು ‘ಕುಟುಂಬ ಯೋಜನೆ’

ರವೀಂದ್ರ ಭಟ್ಟ
Published 6 ಅಕ್ಟೋಬರ್ 2018, 20:09 IST
Last Updated 6 ಅಕ್ಟೋಬರ್ 2018, 20:09 IST
   

ಜೆ.ಎಚ್. ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರ ಮಗ ತನ್ನನ್ನು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ನೇಮಕ ಮಾಡುವಂತೆ ತಂದೆಯನ್ನು ಕೇಳಿಕೊಂಡ. ಅದಕ್ಕೆ ಪಟೇಲರು ‘ನೋಡಯ್ಯಾ, ನನ್ನ ತಂದೆ ಆಗರ್ಭ ಶ್ರೀಮಂತರಾಗಿದ್ದರೂ ನಾನು ಅವರಿಗೆ ನನಗೆ ಅದು ಕೊಡು, ಇದು ಕೊಡು ಎಂದು ಕೇಳಲಿಲ್ಲ. ಲೋಹಿಯಾ ಮತ್ತು ಗೋಪಾಲ ಗೌಡರಿಗೆ ಹತ್ತಿರವಾಗಿದ್ದರೂ ಎಂದೂ ನಾನು ಅವರಿಗೆ ನನಗೆ ಆ ಸ್ಥಾನ ಕೊಡಿ, ಈ ಸ್ಥಾನ ಕೊಡಿ ಎಂದೂ ಕೇಳಿಕೊಂಡಿರಲಿಲ್ಲ. ನಾವು ನಮ್ಮ ವಿಚಾರ, ಕಾರ್ಯಸಾಧನೆಯ ಮೂಲಕ ವರ್ಚಸ್ಸು ಹೆಚ್ಚಿಸಿಕೊಂಡು ಸಾರ್ವಜನಿಕ ಜೀವನದಲ್ಲಿ ಮುಂದೆ ಬರಬೇಕೇ ವಿನಾ ಇನ್ನೊಬ್ಬರನ್ನು ಅಂಗಲಾಚಿ ಮುಂದೆ ಬರುವುದಲ್ಲ’ ಎಂದು ಬುದ್ಧಿ ಮಾತು ಹೇಳಿದರು.

ಆದರೆ ಆ ಹಿತನುಡಿಗಳು ಮಗನಿಗೆ ಹಿಡಿಸಲಿಲ್ಲ. ತಂದೆಯ ಮೇಲೆ ಕೋಪ ಬಂತು. ‘ಬೇರೆ ಬೇರೆ ರಾಜಕಾರಣಿಗಳು ತಮ್ಮ ಮಕ್ಕಳು ರಾಜಕಾರಣದಲ್ಲಿ ಮೇಲೆ ಬರಲು ಏನೆಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಮುಖ್ಯಮಂತ್ರಿಯಾಗಿದ್ದರೂ ನನ್ನ ತಂದೆ ನನ್ನನ್ನು ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡಲು ಸಿದ್ಧರಿಲ್ಲವಲ್ಲ’ ಎಂದು ಸಿಟ್ಟು ಮಾಡಿಕೊಂಡು ಹೊರ ನಡೆದ. ಆಗತಾನೆ ಹೊಸ ಪಕ್ಷ ಮಾಡಿದ್ದ ರಾಮಕೃಷ್ಣ ಹೆಗಡೆ ಅವರ ಬಳಿಗೆ ಹೋಗಿ ‘ನಾನು ನಿಮ್ಮ ಪಕ್ಷ ಸೇರುತ್ತೇನೆ’ ಎಂದ.

ಪಟೇಲರ ವಿಚಾರ ಮತ್ತು ವ್ಯಕ್ತಿತ್ವವನ್ನು ಬಲ್ಲ ಹೆಗಡೆ ಅವರು ‘ನೀನಿನ್ನೂ ಚಿಕ್ಕವನು, ಆತುರ ಪಡಬೇಡ. ನಿನ್ನ ತಂದೆ ಏನೆಂದು ನನಗೆ ಚೆನ್ನಾಗಿ ಗೊತ್ತು. ಅವರ ಹಿತನುಡಿಗಳಿಂದ ನಿನಗೆ ಈಗ ಬೇಸರವಾಗಿರಬಹುದು. ಆದರೆ ಅವರು ನಿನ್ನ ಏಳಿಗೆಗಾಗಿಯೇ ಅಂತಹ ಮಾತುಗಳನ್ನು ಹೇಳಿದ್ದಾರೆ. ಆತುರ ಪಡಬೇಡ ಹೋಗು’ ಎಂದು ಕಳಿಸಿದರು.

ADVERTISEMENT

ಇನ್ನೊಮ್ಮೆ ಮತ್ತೊಬ್ಬ ಮಗ, ತನ್ನನ್ನು ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡು ಎಂದು ಪಟೇಲರಿಗೆ ಕೇಳಿದಾಗ ಅವರು ಕಡ್ಡಿ ಮುರಿದ ಹಾಗೆ ‘ನೀನು ಮೊದಲು ನಿನ್ನದೇ ವರ್ಚಸ್ಸಿನಿಂದ ಮುನ್ಸಿಪಾಲಿಟಿ ಸದಸ್ಯನಾಗಿ ಆಯ್ಕೆಯಾಗಿ ಬಾ. ಆ ಮೇಲೆ ನಿನ್ನನ್ನು ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡುವ ಕುರಿತಂತೆ ಆಲೋಚಿಸೋಣ’ ಎಂದರು.

ಈ ಘಟನೆ ಈಗ ನೆನಪಾಗಿದ್ದಕ್ಕೆ ಕಾರಣ ಇತ್ತೀಚೆಗೆ ಧಾರವಾಡದಲ್ಲಿ ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಅವರು ‘ರಾಜಕಾರಣ ಎಂದರೆ ಕೆಲವೇ ಕುಟುಂಬಗಳ ಬೀಡಾಗಿದೆ. ವಿಧಾಸೌಧ ಎಂದರೆ ಅವರ ಅಪ್ಪನ ಮನೆ ಆಸ್ತಿಯಂತಾಗಿದೆ. ಎಲ್ಲ ಕಡೆ ವಂಶಾಡಳಿತ ಹೆಚ್ಚಾಗಿದೆ...’ ಎಂದು ಕಿಡಿಕಾರಿದ್ದಾರೆ. ಇದು ಈಗ ರಾಜ್ಯದ ಸಾಮಾನ್ಯ ಮತದಾರನ ಅಭಿಪ್ರಾಯವೂ ಆಗಿದೆ.

ರಾಜ್ಯದ ಇಂದಿನ ರಾಜಕೀಯವನ್ನೇ ನೋಡಿ. ಎಚ್.ಡಿ. ಕುಮಾರಸ್ವಾಮಿ ಈಗ ಮುಖ್ಯಮಂತ್ರಿ. ಅವರ ಹಿರಿಯ ಸಹೋದರ ಸಂಪುಟ ದರ್ಜೆ ಸಚಿವ. ಅವರ ತಂದೆ ಲೋಕಸಭಾ ಸದಸ್ಯ. ಅವರ ಬೀಗರು ರಾಜ್ಯ ಸಚಿವ ಸಂಪುಟದಲ್ಲಿ ಪ್ರಭಾವಿ ಸಚಿವರು. ಮುಂದಿನ ಲೋಕಸಭಾ ಚುನಾವಣೆಗೆ ಅವರ ಪಾಳಯದಿಂದ ಕೇಳಿಬರುತ್ತಿರುವ ಹೆಸರು ಗೌಡರ ಮೊಮ್ಮಗನದು. ರಾಮನಗರ ಉಪ ಚುನಾವಣೆಗೆ ಕೇಳಿಬರುವ ಹೆಸರು ಮುಖ್ಯಮಂತ್ರಿ ಪತ್ನಿಯದ್ದು. ಇಲ್ಲಾ ಅವರ ಪುತ್ರನದ್ದು.

ಇದು ಜಾತ್ಯತೀತ ಜನತಾ ದಳದ ಸ್ಥಿತಿ ಮಾತ್ರ ಅಲ್ಲ. ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಕತೆಯೂ ಇದೇ. ಲೋಕಸಭಾ ಚುನಾವಣೆಗೆ ಅವರ ಮಗ ಸ್ಪರ್ಧಿಸುತ್ತಾನೆ. ಇನ್ನೊಬ್ಬ ಪುತ್ರ ವರುಣಾದಲ್ಲಿ ಸ್ಪರ್ಧಿಸುವುದನ್ನು ಸ್ವಲ್ಪದರಲ್ಲಿ ತಪ್ಪಿಸಿಕೊಂಡರು. ಅಪ್ಪ ವಿಧಾನಸಭೆಗೆ ಬಂದರೆ ಮಗ ಲೋಕಸಭೆಗೆ, ಮಗ ವಿಧಾನಸಭೆಗೆ ಬಂದರೆ ಅಪ್ಪ ಲೋಕಸಭೆಗೆ. ಜಗದೀಶ್ ಶೆಟ್ಟರ್ ಮತ್ತು ಅವರ ಸಹೋದರ ಇಬ್ಬರೂ ಶಾಸಕರು. ಜಾರಕಿಹೊಳಿ ಸಹೋದರರು ರಾಜಕೀಯದಲ್ಲಿ ಖ್ಯಾತಿಯನ್ನೇ ಪಡೆದಿದ್ದಾರೆ. ಡಿ.ಕೆ. ಶಿವಕುಮಾರ್ ಸಹೋದರರು ಅದೇ ದಾರಿಯಲ್ಲಿ ನಡೆಯುತ್ತಿದ್ದಾರೆ. ಧರ್ಮಸಿಂಗ್ ಪುತ್ರರಿಬ್ಬರೂ ಶಾಸಕರು. ಮಲ್ಲಿಕಾರ್ಜುನ ಖರ್ಗೆ ಪುತ್ರ ರಾಜ್ಯದಲ್ಲಿ ಸಚಿವ. ಲೋಕಸಭಾ ಸದಸ್ಯ, ಕೋಲಾರದ ಮುನಿಯಪ್ಪ ಪುತ್ರಿಗೆ ಸಚಿವ ಸ್ಥಾನ ಕೊಡಿಸಲು ಓಡಾಡುತ್ತಿದ್ದಾರೆ. ರಾಮಲಿಂಗಾ ರೆಡ್ಡಿ ಮತ್ತು ಅವರ ಪುತ್ರಿ ಇಬ್ಬರೂ ಶಾಸಕರು. ಹೀಗೆ ಹುಡುಕುತ್ತಾ ಹೋದರೆ ಇನ್ನೂ ಸಾಕಷ್ಟು ಮಂದಿಯ ಹೆಸರುಗಳು ಸಿಗುತ್ತವೆ.

ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಂತೂ ಮಗನನ್ನು ಶಾಸಕನನ್ನಾಗಿ ಮಾಡಲು ತಮ್ಮ ರಾಜಕೀಯ ಭವಿಷ್ಯವನ್ನೇ ಒತ್ತೆ ಇಟ್ಟರು. ಮೊದಲ ಮಗ ರಾಕೇಶ್ ರಾಜಕಾರಣಕ್ಕೆ ಪ್ರವೇಶ ಮಾಡಲು ಬಯಸಿದಾಗ ತಕ್ಷಣಕ್ಕೆ ಒಪ್ಪಿಗೆ ನೀಡದ ಸಿದ್ದರಾಮಯ್ಯ ಇನ್ನೊಬ್ಬ ಮಗ ಯತೀಂದ್ರನನ್ನು ಶಾಸಕನನ್ನಾಗಿ ಮಾಡುವುದರಲ್ಲಿ ನಿಧಾನ ಮಾಡಲಿಲ್ಲ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಗನಿಗಾಗಿ ವರುಣಾ ಕ್ಷೇತ್ರವನ್ನು ಬಿಟ್ಟುಕೊಟ್ಟ ಸಿದ್ದರಾಮಯ್ಯ ಈಗ ಅದರ ಪರಿಣಾಮವನ್ನು ಅನುಭವಿಸುತ್ತಿದ್ದಾರೆ. ವರುಣಾದಲ್ಲಿ ಅವರೇ ಸ್ಪರ್ಧಿಸಿದ್ದರೆ ಚುನಾವಣೆ ಗೆಲ್ಲುವುದು ಅವರಿಗೆ ಕಷ್ಟವಾಗಿರಲಿಲ್ಲ. ಮಗನೇ 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದ ಮೇಲೆ ಅಪ್ಪನಿಗೆ ಇನ್ನೂ ಹೆಚ್ಚಿನ ಮತ ಬೀಳುತ್ತಿತ್ತು. ಚಾಮುಂಡೇಶ್ವರಿ ಮತ್ತು ಬಾದಾಮಿ ಕ್ಷೇತ್ರದಲ್ಲಿ ನಿಲ್ಲುವ ಮೂಲಕ ಎರಡು ದೋಣಿಗಳ ಮೇಲೆ ಕಾಲಿಟ್ಟು ಮುಳುಗುವುದನ್ನು ಕೊಂಚದರಲ್ಲಿ ತಪ್ಪಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ವರುಣಾದಲ್ಲಿಯೇ ನಿಂತಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಇನ್ನಷ್ಟು ಸ್ಥಾನಗಳು ದೊರಕುತ್ತಿದ್ದವು. ಅಲ್ಲದೆ ಈಗ ಅವರು ರಾಜಕೀಯವಾಗಿಯೂ ಹೆಚ್ಚು ಪ್ರಬಲರಾಗುತ್ತಿದ್ದರು. ಆಡಳಿತ ವಿರೋಧಿ ಅಲೆ ಹೆಚ್ಚು ಇಲ್ಲದಾಗಲೂ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಸಿದ್ದರಾಮಯ್ಯ ವಿಫಲರಾಗಿದ್ದರೆ ಅದಕ್ಕೆ ಪುತ್ರ ವ್ಯಾಮೋಹ ಕೂಡ ಕಾರಣ.

ಒಂದು ಕಾಲಕ್ಕೆ ಕಾಂಗ್ರೆಸ್ ಪಕ್ಷದ ನೆಹರೂ ವಂಶಾಡಳಿತವನ್ನು ವಿರೋಧಿಸಿಯೇ ದೇಶದಲ್ಲಿ ಹಲವಾರು ರಾಜಕಾರಣಿಗಳು ಪ್ರಸಿದ್ಧರಾಗಿದ್ದರು. ಆದರೆ ಕಾಲ ಕಳೆದಂತೆ ಅವರೂ ವಂಶಾಡಳಿಕ್ಕೇ ಮಣೆ ಹಾಕಿದ್ದು ಈ ದೇಶದ ದುರಂತ. ಅದು ಬಿಹಾರದ ಲಾಲೂಪ್ರಸಾದ್‌ ಆಗಲಿ, ಉತ್ತರ ಪ್ರದೇಶದ ಮುಲಾಯಂಸಿಂಗ್ ಆಗಲಿ, ಕರ್ನಾಟಕದ ದೇವೇಗೌಡರಾಗಲಿ ಎಲ್ಲರಿಗೂ ಈ ಮಾತು ಅನ್ವಯವಾಗುತ್ತದೆ. ಜನತಾ ಪಕ್ಷ ಮತ್ತು ಜನತಾ ದಳ ವಂಶಾಡಳಿತದ ವಿರುದ್ಧವೇ ಹುಟ್ಟಿಕೊಂಡ ಪಕ್ಷಗಳು. ಈಗ ಅಲ್ಲಿ ಬರೀ ಮಕ್ಕಳು, ಮೊಮ್ಮಕ್ಕಳೇ ಇದ್ದಾರೆ. ಕುಂ. ವೀರಭದ್ರಪ್ಪ ಅವರು ಹೇಳಿದ ಹಾಗೆ, ಈಗ ರಾಜಕಾರಣಕ್ಕಾಗಲೀ ವಿಧಾನಸೌಧಕ್ಕಾಗಲೀ ಮೊದಲಿನಷ್ಟು ಪಾವಿತ್ರ್ಯ ಉಳಿದಿಲ್ಲ. ‘ಅದೊಂದು ಬಿಗ್ ಬಜಾರ್ ತರಹ ಆಗಿದೆ’ ಎಂದು ಅವರು ಭಾವಿಸಿದ್ದರಲ್ಲಿಯೂ ತಪ್ಪಿಲ್ಲ.

ಜನರಿಂದ, ಜನರಿಗಾಗಿ ಮತ್ತು ಜನರಿಗೋಸ್ಕರ ಇರುವುದೇ ಪ್ರಜಾಪ್ರಭುತ್ವ ಎನ್ನಲಾಗುತ್ತದೆ. ಆದರೆ ಹಿರಿಯ ಸಾಹಿತಿ ಕೆ.ಟಿ. ಗಟ್ಟಿ ಅವರು ಬಹಳ ಕಾಲದ ಹಿಂದೆಯೇ ಇದನ್ನು ಎಷ್ಟು ಜನರಿಂದ, ಎಷ್ಟು ಜನರಿಗಾಗಿ ಮತ್ತು ಎಷ್ಟು ಜನರಿಗೋಸ್ಕರ ಎಂದು ಪ್ರಶ್ನೆ ಮಾಡಿದ್ದರು. ಕುಟುಂಬ ರಾಜಕಾರಣದ ಏರುಗತಿಯನ್ನು ಗಮನಿಸಿದರೆ ಇದು ಸದ್ಯಕ್ಕೆ ಗುಣವಾಗುವ ರೋಗದಂತೆ ಕಾಣುತ್ತಿಲ್ಲ.

ದೇಶದಲ್ಲಿ ಜನಸಂಖ್ಯಾ ಸ್ಫೋಟ ಹೆಚ್ಚಾದಾಗ ಕುಟುಂಬ ಯೋಜನೆಯನ್ನು ಜಾರಿಗೆ ತರಲಾಯಿತು. ಪುರುಷರಿಗೆ ಮತ್ತು ಮಹಿಳೆಯರಿಗೆ ಶಸ್ತ್ರ ಚಿಕಿತ್ಸೆ ಮತ್ತು ಇತರ ಕ್ರಮಗಳನ್ನು ಜನಪ್ರಿಯಗೊಳಿಸಲಾಯಿತು. ಸಂತಾನ ಶಕ್ತಿಹರಣ ಶಸ್ತ್ರ ಚಿಕಿತ್ಸೆ ಕ್ಯಾಂಪ್ ಗಳನ್ನೇ ನಡೆಸಲಾಯಿತು. ಕುಟುಂಬ ರಾಜಕಾರಣವನ್ನು ಕೊನೆಗಾಣಿಸಲು ಕೇವಲ ಪ್ರಚಾರಾಂದೋಲನ ನಡೆಸಿದರೆ ಸಾಕಾಗುವುದಿಲ್ಲ. ಅದಕ್ಕೆ ಕಠಿಣವಾದಕಾನೂನುಗಳೇ ಬೇಕು. ಆಗಲೂ ನಿಯಂತ್ರಣಕ್ಕೆ ಬಾರದಿದ್ದರೆ ಶಸ್ತ್ರ ಚಿಕಿತ್ಸೆಯೂ ಬೇಕು. ಅದಕ್ಕೆ ಪ್ರಜೆಗಳು ಸಿದ್ಧರಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.