ADVERTISEMENT

ಅನುಸಂಧಾನ | ಇಂದಿರಾ–ನರೇಂದ್ರ: ಬಿಂಬ, ಪ್ರತಿಬಿಂಬ!

ದೇಶದ ಸದ್ಯದ ರಾಜಕೀಯ ಪರಿಸ್ಥಿತಿ 1967ರ ಸ್ಥಿತಿಯನ್ನೇ ಹೋಲುವಂತಿದೆ!

ರವೀಂದ್ರ ಭಟ್ಟ
Published 29 ಡಿಸೆಂಬರ್ 2023, 0:12 IST
Last Updated 29 ಡಿಸೆಂಬರ್ 2023, 0:12 IST
.
.   

ಮೊನ್ನೆಮೊನ್ನೆಯಷ್ಟೇ ಸಂಸತ್ತಿನ ಒಳಗೆ ಇಬ್ಬರು ಯುವಕರು ಜಿಗಿದರು. ‘ನಿರುದ್ಯೋಗ ಸಮಸ್ಯೆ ಮತ್ತು ನಿರಂಕುಶ ಆಡಳಿತ’ದ ವಿರುದ್ಧ ಪ್ರತಿಭಟನೆ ನಡೆಸಿದರು. ಈ ಯುವಕರು ಎತ್ತಿದ ಪ್ರಶ್ನೆಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗಲೇ ಇಲ್ಲ. ಗೃಹ ಸಚಿವರ ಹೇಳಿಕೆಗೆ ವಿರೋಧ ಪಕ್ಷಗಳು ಪಟ್ಟು ಹಿಡಿದವು. ಇದಕ್ಕೆ ಕೆರಳಿದ ಆಡಳಿತ ಪಕ್ಷ, 146 ಸಂಸದರನ್ನು ಅಮಾನತುಗೊಳಿಸಿ ಕಲಾಪ ನಡೆಸಿತು. ತನಗೆ ಬೇಕಾದ ಮಸೂದೆಗಳಿಗೆ ಅಂಗೀಕಾರ ಪಡೆದ ಬಳಿಕ ಸಂಸತ್ ಅಧಿವೇಶನಕ್ಕೆ ಮಂಗಳ ಹಾಡಲಾಯಿತು. ಸರ್ವಾಧಿಕಾರಿ ಧೋರಣೆಗೆ ಇದು ಒಂದು ನಿದರ್ಶನದಂತೆಯೇ ಇತ್ತು.

ಭಾರತದ ರಾಜಕೀಯ ಇತಿಹಾಸದಲ್ಲಿ ಇಂತಹ ಬಹಳಷ್ಟು ಸನ್ನಿವೇಶಗಳು ನಡೆದಿವೆ. ಆಡಳಿತ ಪಕ್ಷ ಮತ್ತು ಸರ್ಕಾರದ ಮೇಲೆ ಬಿಗಿ ಹಿಡಿತ ಸಾಧಿಸಿ, ತಾನು ಬಯಸಿದಂತೆ ನಡೆದುಕೊಳ್ಳುವುದರಲ್ಲಿ ಇಂದಿರಾ ಗಾಂಧಿ ಹೆಸರಾಗಿದ್ದರು. ಈಗ ನರೇಂದ್ರ ಮೋದಿ ಅವರನ್ನು ನೋಡಿದಾಗಲೂ ಅಂತಹುದೇ ಭಾವನೆ ಬಂದರೆ ಅದು ಭಾರತದ ಪ್ರಜೆಗಳ ತಪ್ಪಲ್ಲ. ಅವರು ಗಾಂಧಿ, ಇವರು ಮೋದಿ, ಅಷ್ಟೇ ವ್ಯತ್ಯಾಸ.

ಇಂದಿರಾ ಗಾಂಧಿ ಮತ್ತು ನರೇಂದ್ರ ಮೋದಿ ಅವರ ನಡುವೆ ಬಹಳಷ್ಟು ಸಾಮ್ಯಗಳಿವೆ. ಒಂದು ಕಾಲದಲ್ಲಿ ‘ಇಂದಿರಾ ಅಂದರೆ ಇಂಡಿಯಾ, ಇಂಡಿಯಾ ಅಂದರೆ ಇಂದಿರಾ’ ಎಂಬ ಭಾವನೆ ಇತ್ತು. ಈಗಲೂ ಅಷ್ಟೆ. ‘ಮೋದಿ ಅಂದರೆ ಭಾರತ, ಭಾರತ ಅಂದರೆ ಮೋದಿ’ ಎಂದೇ ಬಿಂಬಿಸಲಾಗುತ್ತಿದೆ. ತಂತ್ರ, ಪ್ರತಿತಂತ್ರ ಹೂಡಿಕೆಯಲ್ಲಿಯೂ ಸಾಮ್ಯ ಕಾಣುತ್ತದೆ. ಇಂದಿರಾ ಗಾಂಧಿ ಅವರು ರಾಜ್ಯ ಸರ್ಕಾರಗಳನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರುವುದರಲ್ಲಿ ಪ್ರಸಿದ್ಧರಾಗಿದ್ದರು. ಈಗ ರಾಜ್ಯ ಸರ್ಕಾರವನ್ನು ವಜಾ ಮಾಡುತ್ತಿಲ್ಲ. ಶಾಸಕರನ್ನೇ ಖರೀದಿ ಮಾಡುವ ‘ಆಪರೇಷನ್ ಕಮಲ’ ಎಂಬ ಹೊಸ ಪದ್ಧತಿ ಜಾರಿಗೆ ಬಂದಿದೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಬಿಜೆಪಿ ನೇತೃತ್ವದ ಸರ್ಕಾರ ಸ್ಥಾಪಿಸಲಾಯಿತು. ಇಂದಿರಾ ಗಾಂಧಿ ರೂಪಾಯಿ ಅಪಮೌಲ್ಯ ಮಾಡಿದ್ದರೆ, ಮೋದಿ ಅಧಿಕ ಮುಖಬೆಲೆಯ ನೋಟು ರದ್ದತಿ ಮಾಡಿದರು. ಅವರು ಪೋಖ್ರಾನ್‌ನಲ್ಲಿ ಅಣು ಸ್ಫೋಟ ನಡೆಸಿದರೆ ಇವರು ಸರ್ಜಿಕಲ್ ಸ್ಟ್ರೈಕ್ ಮಾಡಿದರು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವರು ಬೆಲೆ ಕೊಡಲಿಲ್ಲ. ಇವರೂ ಕೊಡಲಿಲ್ಲ. ಅವರು ಮಾಧ್ಯಮಗಳನ್ನು ನಿಯಂತ್ರಿಸಿದರು. ಇವರೂ ಅದನ್ನೇ ಮಾಡಿದ್ದಾರೆ. ಅವರು ಸಂಕಷ್ಟ ಬಂದಾಗಲೆಲ್ಲಾ ಗರೀಬಿ ಹಠಾವೋ ಎಂದರು. ಇವರು ಸಂಕಷ್ಟ ಬಂದಾಗಲೆಲ್ಲಾ ರಾಮ ಜಪ ಮಾಡುತ್ತಾರೆ. ನ್ಯಾಯಾಂಗ ನಿಯಂತ್ರಣಕ್ಕೂ ಅವರು ಮುಂದಾಗಿದ್ದರು. ಇವರು ಬಹಿರಂಗವಾಗಿ ಹಾಗೆ ಮಾಡಲಿಲ್ಲ, ಒಳ ಏಟು ಕೊಟ್ಟರು.

ADVERTISEMENT

ಪ್ರಧಾನ ಮಂತ್ರಿ ಸ್ಥಾನಕ್ಕೆ ಇಂದಿರಾ ಗಾಂಧಿ ಆಯ್ಕೆಯಾದ ಸನ್ನಿವೇಶ ಮತ್ತು ನರೇಂದ್ರ ಮೋದಿ ಪ್ರಧಾನಿಯಾದ ಸನ್ನಿವೇಶ ಕೂಡ ಹೆಚ್ಚೂ ಕಡಿಮೆ ಒಂದೇ ರೀತಿ ಇತ್ತು. 1966ರ ಜನವರಿ 11ರಂದು ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ನಿಧನರಾದರು. ಆಗ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಮೊರಾರ್ಜಿ ದೇಸಾಯಿ ಅವರು ತಾವು ಪ್ರಧಾನಿ ಸ್ಥಾನದ ಆಕಾಂಕ್ಷಿ ಎಂದು ಬಹಿರಂಗವಾಗಿಯೇ ಘೋಷಿಸಿದರು. ಸ್ವಾತಂತ್ರ್ಯ ಹೋರಾಟಗಾರ, ಉತ್ತಮ ಆಡಳಿತಗಾರ ಎಂದು ಹೆಸರು ಮಾಡಿದ್ದ ಮತ್ತು ಕಟ್ಟುನಿಟ್ಟಿನ ಧೋರಣೆ ಹೊಂದಿದ್ದ ಮೊರಾರ್ಜಿ ಅವರನ್ನು ಪ್ರಧಾನಿ ಮಾಡಿದರೆ ಅವರನ್ನು ನಿಯಂತ್ರಿಸುವುದು ಕಷ್ಟ ಎನ್ನುವುದು ಕಾಂಗ್ರೆಸ್‌ನ ಆಗಿನ ಅಧ್ಯಕ್ಷ ಕೆ.ಕಾಮರಾಜ್, ಇತರ ಮುಖಂಡರಾದ ನಿಜಲಿಂಗಪ್ಪ, ಸಂಜೀವ ರೆಡ್ಡಿಯಂತಹವರ ಅಭಿಪ್ರಾಯವಾಗಿತ್ತು. ಅದಕ್ಕಾಗಿಯೇ ಮೊರಾರ್ಜಿ ಅವರಿಗೆ ಪ್ರಧಾನಿ ಸ್ಥಾನ ತಪ್ಪಿಸಲಾಯಿತು. ಇಂದಿರಾ ಗಾಂಧಿ ಪ್ರಧಾನಿಯಾದರು.

2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ಸನ್ನಿವೇಶವನ್ನು ನೆನಪಿಸಿಕೊಳ್ಳಿ. ಆಗಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಪಕ್ಷದ ಅತ್ಯಂತ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಪ್ರಧಾನಿಯಾಗಬಹುದು ಎಂಬ ಭಾವನೆ ಇತ್ತು. ಆದರೆ ಅದು ತಪ್ಪಾಯಿತು. 1966ರಲ್ಲಿ ಮೊರಾರ್ಜಿ ದೇಸಾಯಿ ಅವರನ್ನು ಉಪ ಪ್ರಧಾನಿ ಮಾಡಿ ಹಣಕಾಸು ಖಾತೆಯ ಹೊಣೆಯನ್ನು ವಹಿಸಲಾಗಿತ್ತು. 2014ರಲ್ಲಿ ಅಂತಹ ಭಾಗ್ಯ ಅಡ್ವಾಣಿ ಅವರಿಗೆ ಸಿಗಲಿಲ್ಲ. 1966ರಲ್ಲಿ ಪ್ರಧಾನಿ ಸ್ಥಾನಕ್ಕೆ ಏರಿದ ಇಂದಿರಾ ಗಾಂಧಿ ಅವರನ್ನು ನಿಯಂತ್ರಿಸುವುದು ಪಕ್ಷಕ್ಕೆ ಸಾಧ್ಯವಾಗಲಿಲ್ಲ. ಹಿರಿಯರನ್ನು ಬದಿಗೆ ತಳ್ಳಿ ಅವರು ತಮ್ಮದೇ ತಂಡ ಕಟ್ಟಿದರು. ಈಗಲೂ ಹಾಗೆಯೇ ಆಗಿದೆ. ಮೋದಿ ಅವರನ್ನು ನಿಯಂತ್ರಿಸುವುದೂ ಪಕ್ಷಕ್ಕೆ
ಸಾಧ್ಯವಾಗಲಿಲ್ಲ. ಹಿರಿಯ ನಾಯಕರೆಲ್ಲಾ ಬದಿಗೆ ಸರಿದರು. ಅವರೂ ತಮ್ಮದೇ ತಂಡವನ್ನು ಕಟ್ಟಿಕೊಂಡರು. ಮೋದಿ ಅವರು ಪಕ್ಷಕ್ಕಿಂತಲೂ ಆರ್‌ಎಸ್ಎಸ್‌ಗಿಂತಲೂ ಮಿಗಿಲಾಗಿ ಬೆಳೆದರು.

1967ರಲ್ಲಿ ಲೋಕಸಭಾ ಚುನಾವಣೆಯನ್ನು ಗೆಲ್ಲುವುದು ಇಂದಿರಾ ಗಾಂಧಿ ಅವರಿಗೆ ಸವಾಲಾಗಿತ್ತು. ದೇಶದ ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ. ನಿರುದ್ಯೋಗ ಹೆಚ್ಚಾಗಿತ್ತು. ಕೈಗಾರಿಕಾ ಉತ್ಪಾದನೆ ಕುಸಿದಿತ್ತು. ರಫ್ತು ಪ್ರಮಾಣ ಇಳಿಕೆಯಾಗಿತ್ತು. ಆಹಾರಧಾನ್ಯಗಳ ಕೊರತೆ ಕಾಡುತ್ತಿತ್ತು. ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಪರೀತವಾ
ಗಿತ್ತು. 2024ರ ಲೋಕಸಭಾ ಚುನಾವಣೆ ಹೊತ್ತಿನಲ್ಲಿಯೂ ಇಂತಹುದೇ ಸ್ಥಿತಿ ದೇಶದಲ್ಲಿ ಇದೆ. ಈಗಲೂ ಭಾರತ ಹಸಿವಿನ ಸೂಚ್ಯಂಕದಲ್ಲಿ ಪಾತಾಳದಲ್ಲಿದೆ. ಬೆಲೆ ಏರಿಕೆ ವಿಪರೀತವಾಗಿದೆ. ಆಗಲೂ ಮಿಲಿಟರಿ ವೆಚ್ಚ ಅಧಿಕವಾಗಿತ್ತು. ಈಗಲೂ ಅಧಿಕವಾಗಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ದೇಶದ ಯುವಕರು ದಿಕ್ಕುಗಾಣದೆ ಸಂಸತ್ತಿನ ಒಳಕ್ಕೆ ಜಿಗಿಯುವ ಹಂತ ತಲುಪಿದ್ದಾರೆ.

1967ರ ಲೋಕಸಭಾ ಚುನಾವಣೆಗೆ ಮೊದಲು ಸಮಾಜವಾದಿ ನಾಯಕ ರಾಮಮನೋಹರ ಲೋಹಿಯಾ ಅವರು ‘ದೇಶದ ಎಲ್ಲ ವಿರೋಧ ಪಕ್ಷಗಳೂ ಕಾಂಗ್ರೆಸ್ ವಿರುದ್ಧ ಒಂದಾಗಬೇಕು’ ಎಂದು ಕರೆ ನೀಡಿದರು. ಆಗ ದೇಶದಲ್ಲಿ ಸಂಚಲನ ಉಂಟಾಗಿ ವಿರೋಧ ಪಕ್ಷಗಳು ಒಂದಾದವು. ಈಗಲೂ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳು ಒಂದಾಗಿವೆ. 1967ರ ಫೆಬ್ರುವರಿಯಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಲ ಕುಸಿಯಿತು. ಆದರೆ ಲೋಕಸಭೆಯಲ್ಲಿ ಬಹುಮತ ಪಡೆಯುವಲ್ಲಿ ಯಶಸ್ವಿಯಾಯಿತು. 1952ರಲ್ಲಿ ಶೇ 45ರಷ್ಟು ಮತ ಪಡೆದು 363 ಸ್ಥಾನ ಗಳಿಸಿದ್ದ ಕಾಂಗ್ರೆಸ್, 1957ರಲ್ಲಿ ಶೇ 47.8ಕ್ಕೆ ಮತದ ಪ್ರಮಾಣವನ್ನು ಹೆಚ್ಚಿಸಿಕೊಂಡು 371 ಸ್ಥಾನ ಗೆದ್ದಿತ್ತು. 1962ರಲ್ಲಿ ಶೇ 44.7ರಷ್ಟು ಮತ ಪಡೆದು 361 ಸ್ಥಾನ ಗಳಿಸಿತ್ತು. ಆದರೆ 1967ರಲ್ಲಿ ಕಾಂಗ್ರೆಸ್ ಮತದ ಪ್ರಮಾಣ ಶೇ 40.8ಕ್ಕೆ ಕುಸಿಯಿತು. ಲೋಕಸಭೆಯಲ್ಲಿ 283 ಸ್ಥಾನಗಳನ್ನು ಮಾತ್ರ ಪಡೆಯಲು ಸಾಧ್ಯವಾಯಿತು. ಅಂದರೆ 83 ಸ್ಥಾನಗಳನ್ನು ಕಳೆದುಕೊಂಡಿತು. 

ಈಗಲೂ ದೇಶದ ರಾಜಕೀಯ ಪರಿಸ್ಥಿತಿ ಹಾಗೆಯೇ ಇದೆ. 2014ರಲ್ಲಿ ಬಿಜೆಪಿ ಶೇ 31ರಷ್ಟು ಮತಗಳನ್ನು ಪಡೆದು 282 ಸ್ಥಾನ ಗಳಿಸಿತ್ತು. ಎನ್‌ಡಿಎ 336 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. 2019ರಲ್ಲಿ ಬಿಜೆಪಿ ಮತದ ಪ್ರಮಾಣ ಶೇ 37.36ಕ್ಕೆ ಏರಿಕೆಯಾಗಿ 303 ಸ್ಥಾನಗಳನ್ನು ಗೆದ್ದುಕೊಂಡಿತು. ಎನ್‌ಡಿಎ 353 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. 1967ರಲ್ಲಿ ಕಾಂಗ್ರೆಸ್ ಪಕ್ಷ ಕುಸಿತ ಕಂಡ ಹಾಗೆಯೇ ಈಗ ಬಿಜೆಪಿ ಕುಸಿತ ಕಾಣುವ ಸಾಧ್ಯತೆ ಇದೆ. ಎನ್‌ಡಿಎಗೆ ಬಹುಮತ ಬರಬಹುದು. ಆದರೆ 2019ರಲ್ಲಿ ದೊರೆತಷ್ಟು ಭರ್ಜರಿ ಫಸಲು ದೊರೆಯದಿರಬಹುದು. ಮೇಲೇರಿದವರು ಕೆಳಕ್ಕೆ ಇಳಿಯಲೇಬೇಕಲ್ಲ. ಅದು ಇಂದಿರಾ ಆದರೂ ಸೈ, ನರೇಂದ್ರ ಆದರೂ ಸೈ.  

ಅಂದಹಾಗೆ, ಪ್ರಧಾನಿ ನರೇಂದ್ರ ಮೋದಿ ಅವರು ಜವಾಹರಲಾಲ್ ನೆಹರೂ ಅವರನ್ನು ಟೀಕೆ ಮಾಡಿದಷ್ಟು ಇಂದಿರಾ ಗಾಂಧಿ ಅವರನ್ನು ಟೀಕೆ ಮಾಡುವುದಿಲ್ಲ. ಯಾಕೆ?

ಯಾಕೆಂದರೆ, ಸ್ಫೂರ್ತಿದಾಯಕರನ್ನು ಟೀಕೆ ಮಾಡುವುದು ಭಾರತೀಯ ಸಂಪ್ರದಾಯ ಅಲ್ಲ!

.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.