ಕನ್ನಡದಲ್ಲಿ ಒಂದು ಮಾತಿದೆ. ಆನೆ ಕದ್ದರೂ ಕಳ್ಳ, ಅಡಿಕೆ ಕದ್ದರೂ ಕಳ್ಳ ಅಂತ. ಆದರೆ ರಾಜ್ಯದಲ್ಲಿ ಈವರೆಗೆ ಯಾರನ್ನೂ ಅದಿರು ಕದ್ದ ಕಾರಣಕ್ಕಾಗಿ ಕಳ್ಳತನದ ಆರೋಪ ಹೊರಿಸಿ ಶಿಕ್ಷೆಗೆ ಗುರಿಪಡಿಸಿರಲಿಲ್ಲ. ಇದೇ ಮೊದಲ ಬಾರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರು ಕಾರವಾರ– ಅಂಕೋಲಾ ಶಾಸಕ ಸತೀಶ್ ಸೈಲ್ ಅವರನ್ನು ಅದಿರು ಕಳ್ಳ ಎಂದು ತೀರ್ಮಾನಿಸಿ 7 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದ್ದಾರೆ. ಸತೀಶ್ ಜೊತೆಗೆ ನಿವೃತ್ತ ಬಂದರು ಅಧಿಕಾರಿ ಮಹೇಶ್ ಬಿಲಿಯೆ, ಲಕ್ಷ್ಮಿ ವೆಂಕಟೇಶ್ವರ ಟ್ರೇಡರ್ಸ್‌ನ ಮಾಲೀಕ ಖಾರದಪುಡಿ ಮಹೇಶ್, ಸ್ವಸ್ತಿಕ್ ಕಂಪನಿ ಮಾಲೀಕರಾದ ಕೆ.ವಿ.ನಾಗರಾಜ್, ಕೆ.ವಿ.ಎನ್. ಗೋವಿಂದರಾಜ್, ಆಶಾಪುರ ಮೈನಿಂಗ್ ಕಂಪನಿ ಮಾಲೀಕ ಚೇತನ್ ಶಾ, ಲಾಲ್ ಮಹಲ್ ಕಂಪನಿ ಮಾಲೀಕ ಪ್ರೇಮಚಂದ್ ಗರಗ್ ಜೈಲು ಸೇರಿದ್ದಾರೆ.
ಇವರದ್ದು ಒಂದು ಅರ್ಥದಲ್ಲಿ ಡಬಲ್ ಕಳ್ಳತನ. ಅಕ್ರಮವಾಗಿ ಗಣಿಗಾರಿಕೆ ನಡೆಸಿ ವಿದೇಶಗಳಿಗೆ ರಫ್ತು ಮಾಡುವುದಕ್ಕಾಗಿ ಕಾರವಾರದ ಬೇಲೆಕೇರಿ ಬಂದರಿಗೆ ಸಾಗಿಸಿದ್ದ ಅದಿರನ್ನು ಲೋಕಾಯುಕ್ತ ತನಿಖಾ ತಂಡದ ಅಧಿಕಾರಿಗಳು ಜಪ್ತಿ ಮಾಡಿ ಇಟ್ಟಿದ್ದರು. ತನಿಖಾ ಪ್ರಕ್ರಿಯೆ ಭಾಗವಾಗಿ ವಶಕ್ಕೆ ಪಡೆದಿದ್ದ ಅದಿರನ್ನೇ ಇವರು ಕಳ್ಳತನ ಮಾಡಿ ವಿದೇಶಕ್ಕೆ ರಫ್ತು ಮಾಡಿದ್ದರು. ಹೀಗೆ ಕಳ್ಳತನ ಮಾಡಲು ಭಾರಿ ಭಂಡತನ ಬೇಕು. ಇಲ್ಲಿ ಬೇಲಿಯೂ ಹೊಲ ಮೇಯ್ದಿದ್ದರಿಂದ ಇದು ಸಾಧ್ಯವಾಯಿತು. ಈಗ ಆ ಬೇಲಿಯೂ ಸೇರಿದಂತೆ ಅದಕ್ಕೆ ಕಾರಣರಾದ ಎಲ್ಲರೂ ಜೈಲು ಸೇರಿದ್ದಾರೆ. ಆದರೆ ಗಮನಿಸಬೇಕಾದ ಅಂಶ ಎಂದರೆ, ಇದು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಆದೇಶ ಅಲ್ಲ. ಕಳ್ಳತನ ಮಾಡಿದ್ದಕ್ಕೆ ಶಿಕ್ಷೆ ಅಷ್ಟೆ.
ಅಕ್ರಮ ಗಣಿಗಾರಿಕೆ, ಅಕ್ರಮ ಅದಿರು ಸಾಗಾಟ, ಪರಿಸರ ನಾಶ, ರಾಜ್ಯದ ಗಡಿರೇಖೆಯನ್ನೇ ಬದಲು ಮಾಡಿದ್ದು... ಇವೆಲ್ಲಾ ಇನ್ನೂ ವಿಚಾರಣೆಯ ಹಂತದಲ್ಲಿಯೇ ಇವೆ. ಜೊತೆಗೆ ಕಳ್ಳತನದ ಮಾಲನ್ನು ಖರೀದಿ ಮಾಡಿದ ಖದೀಮರೂ ಶಿಕ್ಷೆಯಿಂದ ಸದ್ಯಕ್ಕೆತಪ್ಪಿಸಿಕೊಂಡಿದ್ದಾರೆ. ಅಂದರೆ ಪಿಕ್ಚರ್ ಅಭಿ ಬಾಕಿ ಹೈ! ಅಂತಹ ಬಹುಭಾಷಾ ಚಿತ್ರವನ್ನು ನೋಡಲು ಜನ ಕಾತರರಾಗಿದ್ದಾರೆ. ಅದನ್ನು ಜನರಿಗೆ ತೋರಿಸುವ ಕೆಲಸವನ್ನು ರಾಜ್ಯ ಸರ್ಕಾರ ತ್ವರಿತವಾಗಿ ಮಾಡಬೇಕಿದೆ.
ರಾಜ್ಯದಲ್ಲಿ 2008ರಿಂದಲೂ ಅಕ್ರಮ ಗಣಿಗಾರಿಕೆ ಭಾರಿ ಸದ್ದು ಮಾಡಿದ್ದರೂ ಬಹುತೇಕ ಎಲ್ಲರೂ ಆರೋಪಿಗಳಾಗಿದ್ದರೇ ವಿನಾ ಅಪರಾಧಿಗಳು ಎಂದು ತೀರ್ಮಾನ ಆಗಿರಲಿಲ್ಲ. ಗಣಿ ಲೂಟಿ ಪ್ರಕರಣದಲ್ಲಿ ಹಲವಾರುಮಂದಿ ಜೈಲಿಗೆ ಹೋಗಿ ಬಂದಿದ್ದರೂ, ಸರ್ಕಾರವೇ ಪತನವಾಗಿದ್ದರೂ ಆರೋಪ ಸಾಬೀತಾಗಿರುವುದು ಇದೇ ಮೊದಲು. ಸತೀಶ್ ಸೈಲ್ ಹಾದಿಯಲ್ಲಿ ಇನ್ನಷ್ಟು ಮಂದಿ ಜೈಲಿನೆಡೆಗೆ ನಡೆದರೆ ಅಚ್ಚರಿಪಡಬೇಕಿಲ್ಲ. ಅಂತಹ ಕಾಲ ಬರಲಿ ಎಂದು ಕರುನಾಡಿನ ಜನ ಬಯಸಿದ್ದಾರೆ.
ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರು ಕರ್ನಾಟಕದ ಲೋಕಾಯುಕ್ತರಾಗಿದ್ದಾಗ, ರಾಜ್ಯದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಯ ಬಗ್ಗೆ ಎರಡು ಮಹತ್ವದ ತನಿಖಾ ವರದಿಗಳನ್ನು ನೀಡಿದ್ದರು. 2008ರ ಡಿಸೆಂಬರ್ 18ರಂದು ಮೊದಲ ವರದಿ ನೀಡಿದ ಅವರು, 2011ರ ಜುಲೈ 27ರಂದು ಎರಡನೇ ವರದಿಯನ್ನು ನೀಡಿದ್ದಾರೆ. ಲೋಡ್‌ಗಟ್ಟಲೆ ದಾಖಲೆಗಳನ್ನು ನೀಡಿದ್ದಾರೆ. ಆದರೂ ಯಾವುದೇ ಪಕ್ಷದ ನೇತೃತ್ವದ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಲಿಲ್ಲ. ಅಕ್ರಮ
ಗಣಿಗಾರಿಕೆಯನ್ನು ವಿರೋಧಿಸಿ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಸರ್ಕಾರ ಕೂಡ ಈ ವರದಿ ಆಧಾರದಲ್ಲಿ ಹೇಳಿಕೊಳ್ಳುವಂತಹ ಕಠಿಣ ಕ್ರಮ ಕೈಗೊಳ್ಳಲಿಲ್ಲ.
ಸಂತೋಷ್ ಹೆಗ್ಡೆ ವರದಿ ಆಧಾರದಲ್ಲಿ ಹಲವಾರು ರಾಜಕಾರಣಿಗಳು, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶವಿತ್ತು. ಕ್ರಿಮಿನಲ್ ಪ್ರಕರಣ ದಾಖಲಿಸಬಹುದಿತ್ತು. ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಬಹುದಿತ್ತು. ಆದರೆ ಸಂತೋಷ್ ಹೆಗ್ಡೆ ಅವರ ವರದಿಯಲ್ಲಿ ಉಲ್ಲೇಖವಾದ ಹಲವಾರು ಅಧಿಕಾರಿಗಳು ನಿಶ್ಚಿಂತೆಯಿಂದ ನಿವೃತ್ತರಾದರು. ಕೆಲವರು ಗಣಿ ಕಂಪನಿಗಳಿಗೆ ಸಲಹೆಗಾರರೂ ಆದರು. ಅಲ್ಲದೆ ಕರ್ನಾಟಕದ ಸಾಕ್ಷಿಪ್ರಜ್ಞೆ ಎಂದೇ ಗುರುತಿಸಲಾಗುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ನೇತೃತ್ವದ ನಿಯೋಗವೊಂದು 2013ರಲ್ಲಿಯೇ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತ್ತು. ಅದರಂತೆ ಸಿದ್ದರಾಮಯ್ಯ ಅವರು ಎಚ್.ಕೆ.ಪಾಟೀಲ್ ನೇತೃತ್ವದಲ್ಲಿ ಸಚಿವ ಸಂಪುಟ ಉಪ ಸಮಿತಿಯನ್ನೂ ರಚಿಸಿದ್ದರು. ಅಕ್ರಮ ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ 1.41 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ನಷ್ಟವಾಗಿದೆ ಎಂದು ಉಪ ಸಮಿತಿ ಅಂದಾಜು ಮಾಡಿತ್ತು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಲೋಕಾಯುಕ್ತರ ವರದಿಯ ಪರಿಶೀಲನೆಗಾಗಿ ಸಮಿತಿಯೊಂದನ್ನು ನೇಮಿಸಿತು. ವರದಿಯಲ್ಲಿ ಉಲ್ಲೇಖಗೊಂಡ ಬಹಳಷ್ಟು ಅಧಿಕಾರಿಗಳು ತಪ್ಪಿತಸ್ಥರು ಎಂದು ಸಮಿತಿ ಹೇಳಿತು. ಆದರೂ ಮುಂದೆ ಆಡಳಿತದ ಚುಕ್ಕಾಣಿ ಹಿಡಿದವರು ಬಹುತೇಕ ಅಧಿಕಾರಿಗಳಿಗೆ ಕ್ಲೀನ್‌ಚಿಟ್ ನೀಡಿದರು. ಸಿದ್ದರಾಮಯ್ಯ ನೇತೃತ್ವದ ಆಗಿನ ಸರ್ಕಾರ ಒಂದಿಷ್ಟು ಹಣವನ್ನು ವಸೂಲಿ ಮಾಡುವ ಕ್ರಮ ಕೈಗೊಂಡಿತ್ತಾದರೂ ಒಟ್ಟಾರೆ ಪ್ರಕರಣಕ್ಕೆ ಮುಕ್ತಿ ಸಿಗಲಿಲ್ಲ. ಇದರಿಂದಾಗಿ ಹಾವೂ ಸಾಯಲಿಲ್ಲ, ಕೋಲೂ ಮುರಿಯಲಿಲ್ಲ.
ನಂತರ ಎಸ್.ಆರ್.ಹಿರೇಮಠ ಅವರಂಥವರು ಸುಪ್ರೀಂ ಕೋರ್ಟ್‌ಗೆ ಹೋಗಿದ್ದರಿಂದ ಈ ಹಗರಣದ ಬಗ್ಗೆ ಸಿಬಿಐ ತನಿಖೆ ನಡೆಯುವಂತಾಯಿತು. ಅಕ್ರಮ ಗಣಿ ಗಾರಿಕೆಯನ್ನು ನೆಪವಾಗಿಟ್ಟುಕೊಂಡು ರಾಜಕಾರಣಿಗಳು ಪರಸ್ಪರ ಬೈದಾಡಿಕೊಂಡರು ಅಷ್ಟೆ. ಜನ ಕೂಡ ಇದು ತಮಗೆ ಸಂಬಂಧಿಸಿದ ವಿಚಾರ ಅಲ್ಲ ಅಂತ ಸುಮ್ಮನಾಗಿ ಬಿಟ್ಟರು. ಅಷ್ಟೇ ಅಲ್ಲ, ಅಕ್ರಮ ಗಣಿಗಾರಿಕೆಯ ಆರೋಪ ಹೊತ್ತ ಗಾಲಿ ಜನಾರ್ದನ ರೆಡ್ಡಿ, ಆನಂದ್ ಸಿಂಗ್, ಅನಿಲ್ ಲಾಡ್, ನಾಗೇಂದ್ರ, ಸತೀಶ್ ಸೈಲ್ ಮುಂತಾದವರನ್ನು ಚುನಾವಣೆಯಲ್ಲಿ ಭಾರಿ ಬಹುಮತದಿಂದಲೇ ಗೆಲ್ಲಿಸಿದರು. ಅಲ್ಲಿಗೆ ಅವರೆಲ್ಲಾ ಪುನೀತರಾದರು. ಚುನಾವಣೆ ಸಂದರ್ಭದಲ್ಲಿ ಅಕ್ರಮ ಗಣಿಗಾರಿಕೆ ಎನ್ನುವುದು ಪರಸ್ಪರ ಕೆಸರೆರಚಾಟಕ್ಕೆ ವಸ್ತುವಾಯಿತೇ ವಿನಾ ರಾಜ್ಯಕ್ಕೆ ಬೇರೇನೂ ಲಾಭವಾಗಿಲ್ಲ.
ಅಕ್ರಮ ಗಣಿಗಾರಿಕೆಯಿಂದ ಹಾನಿಗೊಳಗಾದ ಪ್ರದೇಶದಲ್ಲಿ ಪರಿಸರ ರಕ್ಷಣೆಗೆ ಮತ್ತು ಕಾಡನ್ನು ಬೆಳೆಸುವುದಕ್ಕೆ ₹26 ಸಾವಿರ ಕೋಟಿ ಮೀಸಲಾಗಿಟ್ಟಿ ದ್ದರೂ ಅದನ್ನು ಅನ್ಯ ಉದ್ದೇಶಕ್ಕೆ ಬಳಸುವುದು ಹೇಗೆ ಎಂದು ನಮ್ಮ ರಾಜಕಾರಣಿಗಳು ಆಲೋಚಿಸಿದರೇ ವಿನಾ ಪರಿಸರ ರಕ್ಷಣೆಗೆ ಬಳಕೆ ಮಾಡಲಿಲ್ಲ.
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದಲೇ ಲೋಕಾಯುಕ್ತದ ಅಧಿಕಾರಿಗಳು ಜಪ್ತಿ ಮಾಡಿದ್ದ ಅದಿರನ್ನೂ ಕಳ್ಳತನ ಮಾಡುವ ಧೈರ್ಯ ಕೆಲವರಲ್ಲಿ ಬಂತು. ಕಳ್ಳಮಾಲನ್ನು ಕದ್ದು ಮಾರಿದ ಕಳ್ಳರಿಗೆ ಶಿಕ್ಷೆಯಾಗಿದೆ. ಕಳ್ಳತನಕ್ಕೆ ಪ್ರೇರಣೆ ನೀಡಿದವರು ಇನ್ನೂ ಹೊರಗೇ ಇದ್ದಾರೆ. ಅವರನ್ನು ಹಿಡಿದು ಕಂಬಿ ಹಿಂದೆ ತಳ್ಳುವ ಕೆಲಸವನ್ನು ಈಗಲಾದರೂ ಮಾಡಬೇಕಾಗಿದೆ. ಜಪ್ತಿ ಮಾಡಿದ್ದ ಅದಿರು ಕಳ್ಳತನದಿಂದ ರಾಜ್ಯ ಸರ್ಕಾರಕ್ಕೆ ₹200 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದ ಇನ್ನೂ 9 ಪ್ರಕರಣಗಳು ವಿಚಾರಣೆಯ ಹಂತದಲ್ಲಿ ಇವೆ. ಈ ಪ್ರಕ್ರಿಯೆ ಬೇಗ ಮುಗಿದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕಿದೆ.
ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರಿಗೆ ಶಿಕ್ಷೆ ಯಾಗಿರುವುದರಿಂದ ರಾಜ್ಯ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಇನ್ನೂ ಬಾಕಿ ಉಳಿದಿರುವ ಪ್ರಕರಣಗಳ ತನಿಖೆಗೆ ಕ್ರಮ ಕೈಗೊಳ್ಳಬೇಕು. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಬಳಿ ಸಂತೋಷ್ ಹೆಗ್ಡೆ ಅವರ ವರದಿ ಇದೆ, ಸಚಿವ ಸಂಪುಟ ಉಪ ಸಮಿತಿಯ ವರದಿಯೂ ಇದೆ. ಪರಿಶೀಲನಾ ಸಮಿತಿಯ ವರದಿಯೂ ಇದೆ. ಇವೆಲ್ಲವನ್ನೂ ಇಟ್ಟುಕೊಂಡು ಸುಮ್ಮನೆ ಕೂರುವುದು ರಾಜ್ಯದ ಹಿತದ ದೃಷ್ಟಿಯಿಂದ ಸರ್ವಥಾ ಸಲ್ಲ. ಈಗಲಾದರೂ ದಿಟ್ಟ ಕ್ರಮಕ್ಕೆ ಮುಂದಾಗದಿದ್ದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ.
ಅದಿರಂ ಮಧುರಂ ಎನ್ನುತ್ತಿದ್ದವರ ವದನಂ ಮಧುರ ಆಗಬಾರದು. ಅದಿರಾಧಿಪತಿಗಳಿಗೆ ಕಾರಾಗೃಹವೇ ಭೂಷಣಂ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.