ADVERTISEMENT

ಅನುಸಂಧಾನ ಅಂಕಣ | ಹೊಸ ಹುರಿಯಾಳು ಹುಟ್ಟುವ ಹೊತ್ತು!

ರವೀಂದ್ರ ಭಟ್ಟ
Published 27 ಫೆಬ್ರುವರಿ 2023, 0:00 IST
Last Updated 27 ಫೆಬ್ರುವರಿ 2023, 0:00 IST
   

ಹದಿನೈದನೇ ವಿಧಾನಸಭೆಯ ಅವಧಿ ಮುಗಿಯುತ್ತಾ ಬಂದಿದೆ. ವಿಧಾನಮಂಡಲದ ಕೊನೆಯ ಅಧಿವೇಶನಕ್ಕೆ ತೆರೆಬಿದ್ದಿದೆ. ಹದಿನಾರನೇ ವಿಧಾನಸಭೆ ಆಯ್ಕೆಗೆ ವೇದಿಕೆ ಸಿದ್ಧವಾಗುತ್ತಿದೆ. ಈಗ ಬರುವ ಚುನಾವಣೆ ಕರ್ನಾಟಕದ ಮಟ್ಟಿಗೆ ಅತ್ಯಂತ ಮಹತ್ವದ್ದು. ಇದು ರಾಜಕಾರಣಿಗಳಿಗೆ ಎಷ್ಟು ಮುಖ್ಯವೋ ಮತದಾರರಿಗೂ ಅಷ್ಟೇ ಮುಖ್ಯ.

ಕರ್ನಾಟಕದಲ್ಲಿ ‘ಮಾಸ್ ಲೀಡರ್’ ಎಂಬ ಹಣೆಪಟ್ಟಿ ಹಚ್ಚಿಕೊಂಡ ಬಹುತೇಕ ನಾಯಕರಿಗೆ ಇದು ಕೊನೆಯ ಚುನಾವಣೆ. ಕೆಲವರು ಕಣದಲ್ಲಿ ಇರುತ್ತಾರೆ. ಇನ್ನು ಕೆಲವರು ಅಖಾಡದ ಹೊರಗೆ ನಿಲ್ಲುತ್ತಾರೆ. ಕಣದಲ್ಲಿ ಇದ್ದವರಿಗೂ ಇದು ಕೊನೆಯ ಚುನಾವಣೆ. ಕಣದ ಹೊರಕ್ಕೆ ಇದ್ದು ಪಕ್ಷದ ಗೆಲುವಿಗೆ ಶ್ರಮಿಸುವ ನಾಯಕರಿಗೂ ಇದು ಕೊನೆಯ ಚುನಾವಣೆ. ಅಂದರೆ, 2028ರ ಚುನಾವಣೆ ವೇಳೆಗೆ ಅವರೆಲ್ಲಾ ನೇಪಥ್ಯಕ್ಕೆ ಸರಿದಿರುತ್ತಾರೆ. ಹಾಗಾಗಿ ಈ ಚುನಾವಣೆ ಹೊಸ ನಾಯಕನ ಉದಯಕ್ಕೂ ನಾಂದಿ ಹಾಡಲಿದೆ. 2023ರ ವಿಧಾನಸಭೆ ಚುನಾವಣೆ ಬರೀ ಆಡಳಿತ ಪಕ್ಷ, ವಿರೋಧ ಪಕ್ಷವನ್ನು ಆಯ್ಕೆ ಮಾಡುವ ಚುನಾವಣೆಯಲ್ಲ. ಸಮಗ್ರ ಕರ್ನಾಟಕವನ್ನು ಮುನ್ನಡೆಸುವ ನಾಯಕನೊಬ್ಬನನ್ನು ಹುಟ್ಟುಹಾಕುವ ಚುನಾವಣೆಯೂ ಹೌದು. ಆ ಜವಾಬ್ದಾರಿಯೂ ಈ ಬಾರಿ ರಾಜ್ಯದ ಮತದಾರರಿಗೆ ಲಭಿಸಿದೆ. ಅದನ್ನು ಸರಿಯಾಗಿ ನಿಭಾಯಿಸಬೇಕು ಅಷ್ಟೆ.

ಜಾತ್ಯತೀತ ಜನತಾದಳದ ಅತ್ಯುನ್ನತ ನಾಯಕ ಎಚ್.ಡಿ.ದೇವೇಗೌಡ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಈ ವಿಧಾನಸಭೆ ಚುನಾವಣೆ ಕಣದಲ್ಲಿ ಇರುವುದಿಲ್ಲ. ಆದರೆ ಈ ಮೂವರು ನಾಯಕರೂ ತಮ್ಮ ಪ್ರಭಾವವನ್ನು ಬೀರುತ್ತಾರೆ. ದೇವೇಗೌಡರು ದೇಶದ ಪ್ರಧಾನಿಯಾಗಿದ್ದವರು. ಮುಖ್ಯಮಂತ್ರಿಯೂ ಆಗಿದ್ದರು. ಆದರೆ ಈಗ ವಯಸ್ಸಿನ ಕಾರಣಕ್ಕಾಗಿ ಕೊಂಚ ಹಿಂದೆ ಸರಿದಿದ್ದಾರೆ. ಆದರೂ ಅವರ ನಾಮದ ಬಲ ಜಾತ್ಯತೀತ ಜನತಾದಳಕ್ಕೆ ಇದೆ. ಮನೆಯಲ್ಲಿಯೇ ಕುಳಿತು ‘ಮ್ಯಾಜಿಕ್’ ಮಾಡುವ ಶಕ್ತಿಯಂತೂ ಅವರಿಗೆ ಇದೆ. ಇಷ್ಟಾದರೂ ಆ ಪಕ್ಷದ ಶಿಥಿಲತೆ ಅಲ್ಲಲ್ಲಿ ಗೋಚರಿಸುತ್ತಿದೆ. ಮಾಜಿ ಮುಖ್ಯಮಂತ್ರಿ
ಎಚ್.ಡಿ.ಕುಮಾರಸ್ವಾಮಿ ಅದನ್ನು ಮೀರುವ ಭರವಸೆ ತೋರುತ್ತಿದ್ದಾರೆ.

ADVERTISEMENT

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದಲ್ಲಿ ತಮ್ಮದೇ ಪ್ರಭಾವ ಉಳಿಸಿಕೊಂಡವರು. ಮುಖ್ಯಮಂತ್ರಿಯಾಗುವ ಅವಕಾಶ ಅವರಿಗೆ ಲಭ್ಯವಾಗದೆ ಇದ್ದರೂ ಕರ್ನಾಟಕದ ರಾಜಕೀಯದಲ್ಲಿ ಹಲವಾರು ಹೆಜ್ಜೆ ಗುರುತುಗಳನ್ನು ಮೂಡಿಸಿದವರು. ದಕ್ಷ ಆಡಳಿತಗಾರ ಎಂದು ಹೆಸರಾದವರು. ಈಗ ಪಕ್ಷದ ಅತ್ಯುನ್ನತ ಪದವಿಗೆ ಏರಿದವರು. ಈ ಬಾರಿ ಪಕ್ಷದ ಗೆಲುವಿಗೆ ಟೊಂಕಕಟ್ಟಿ ನಿಂತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುವುದು ಅವರಿಗೆ ಪ್ರತಿಷ್ಠೆಯ ಪ್ರಶ್ನೆಯೂ ಹೌದು.

ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ವಿಧಾನಸೌಧದ ಮೂರನೇ ಮಹಡಿಯಲ್ಲಿ ಅದನ್ನು ಸ್ಥಾಪಿಸುವಲ್ಲಿ ಶಕ್ತಿಮೀರಿ ಶ್ರಮಿಸಿದ ಬಿ.ಎಸ್.ಯಡಿಯೂರಪ್ಪ ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ವಿಧಾನಸಭೆಯಲ್ಲಿ ವಿದಾಯದ ಭಾಷಣವನ್ನೂ ಮಾಡಿ ಮುಗಿಸಿದ್ದಾರೆ. ಆದರೆ ರಾಜ್ಯದ ಮೂಲೆ ಮೂಲೆಗೂ ಓಡಾಡಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ ಎಂದು ಶಪಥ ಮಾಡಿದ್ದಾರೆ. ಅವರ ಪ್ರಭಾವವಂತೂ ಈ ಚುನಾವಣೆಯ ಮೇಲೆ ಇದ್ದೇ ಇರುತ್ತದೆ. ಹೋರಾಟದಿಂದಲೇ ರಾಜಕೀಯವಾಗಿ ಮೇಲೆ ಬಂದ ಯಡಿಯೂರಪ್ಪ ಕೊನೆಯ ಕಾಲದವರೆಗೂ ಹೋರಾಡುವುದಾಗಿ ಪ್ರಕಟಿಸಿದ್ದಾರೆ. ಆದರೂ ಈ ಮೂವರೂ ನಾಯಕರು ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರುವುದಿಲ್ಲ ಎನ್ನುವುದು ಸ್ಪಷ್ಟ. ಇವರೆಲ್ಲಾ ಹಿಂದಿನ ಶಕ್ತಿಯಾಗಿರುತ್ತಾರೆಯೇ ವಿನಾ ನೇರವಾಗಿ ಕಣದಲ್ಲಿ ಹೋರಾಡುವುದಿಲ್ಲ. ಆಯಾ ಪಕ್ಷಗಳಿಗೆ ಈ ನಾಯಕರ ನಾಮದ ಬಲ ಇರುತ್ತದೆ ಅಷ್ಟೆ. ಕಣದಲ್ಲಿ ಇದ್ದು ಹೋರಾಡುವುದಕ್ಕೂ ಹೊರಗಿನಿಂದ ಹೋರಾಡುವುದಕ್ಕೂ ಬಹಳಷ್ಟು ವ್ಯತ್ಯಾಸ ಇದ್ದೇ ಇರುತ್ತದೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಣದಲ್ಲಿಯೇ ಇರುವ ಮಾಸ್ ಲೀಡರ್. ಅವರಿಗೂ ವಯಸ್ಸಾಗಿದೆ. ಆದರೂ ಈ ಬಾರಿ ಹೋರಾಟದ ಹಾದಿ ತುಳಿದಿದ್ದಾರೆ. ಅವರನ್ನು ಇನ್ನೊಮ್ಮೆ ಮುಖ್ಯಮಂತ್ರಿಯನ್ನಾಗಿ ನೋಡಬೇಕು ಎನ್ನುವ ಅಭಿಲಾಷೆ ಅವರ ಬೆಂಬಲಿಗರಿಗೆ ಇದೆ. ಮುಂದಿನ ಚುನಾವಣೆ ವೇಳೆಗೆ ಅವರೂ ನೇಪಥ್ಯಕ್ಕೆ ಸರಿಯಬಹುದು. ಕಾಂಗ್ರೆಸ್ ಪಕ್ಷದಲ್ಲಿ ಇನ್ನೂ ಕೆಲವು ಮಂದಿ ವಯಸ್ಸಾದ ಮುಖಂಡರಿದ್ದಾರೆ. ಆದರೆ ಅವರಲ್ಲಿ ಯಾರೂ ಕಣಕ್ಕಿಳಿದು ಹೋರಾಡುವ ಚೈತನ್ಯ ಉಳಿಸಿಕೊಂಡಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೋರಾಟದ ಮುಂಚೂಣಿಯಲ್ಲಿ ಇದ್ದಾರಾದರೂ ಇಡೀ ರಾಜ್ಯ ಒಪ್ಪುವ ನಾಯಕ ತಾನು ಎನ್ನುವುದನ್ನು ಅವರು ಇನ್ನಷ್ಟೇ ಸಾಬೀತುಪಡಿಸ ಬೇಕಾಗಿದೆ. ಅದಕ್ಕೆ ಅವರಿಗೆ ಅವಕಾಶವಂತೂ ಇದೆ. ಈ ಚುನಾವಣೆ ಅದಕ್ಕೊಂದು ಮುನ್ನುಡಿಯಾಗಬಹುದು.

ಸದ್ಯ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಅವರಿಗೆ ನಾಯಕತ್ವದ ಪರೀಕ್ಷೆಯಲ್ಲಿ ಗೆಲ್ಲುವ ಸುವರ್ಣ ಅವಕಾಶ ಇದೆ. ಆಡಳಿತ ಯಂತ್ರ ಅವರ ಕೈಯಲ್ಲಿಯೇ ಇದೆ. ಜನಪ್ರಿಯತೆಯ ಉತ್ತುಂಗದಲ್ಲಿ ಇರುವ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲವೂ ಇದೆ. ಬೇಕಾದಷ್ಟು ಬಾರಿ ರಾಜ್ಯಕ್ಕೆ ಬಂದು ತಮ್ಮ ಪ್ರಭಾವವನ್ನು ಬೀರುವುದಕ್ಕೆ ಅವರು ಮುಂದಾಗಿದ್ದಾರೆ. ಚುನಾವಣಾ ತಂತ್ರ ನಿಪುಣ ಎಂದೇ ಖ್ಯಾತರಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ಬೊಮ್ಮಾಯಿ ಬೆನ್ನಿಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೂ ಜೊತೆಯಾಗಿದ್ದಾರೆ. ಹಿಂದುತ್ವದ ಅಸ್ತ್ರವಿದೆ. ಆರ್‌ಎಸ್ಎಸ್ ಬೆಂಬಲವಿದೆ. ಇಷ್ಟೆಲ್ಲ ಇದ್ದೂ ಅವರು ಪಕ್ಷವನ್ನು ದಡಕ್ಕೆ ಸೇರಿಸದಿದ್ದರೆ ಅವರಿಗೆ ರಾಜಕೀಯವಾಗಿ ಹಿನ್ನಡೆಯಾಗುತ್ತದೆ.

ಬಿಜೆಪಿ ಸ್ವಂತ ಬಲದಲ್ಲಿ ರಾಜ್ಯದಲ್ಲಿ ಈವರೆಗೆ ಬಹುಮತ ಪಡೆದಿಲ್ಲ. ಎರಡು ಬಾರಿ ಸರ್ಕಾರ ನಡೆಸಿದರೂ ಅವೆಲ್ಲಾ ಹಿಂಬಾಗಿಲ ಪ್ರವೇಶವೇ ಆಗಿದ್ದವು. ಆಪರೇಷನ್ ಕಮಲವೇ ಬಿಜೆಪಿಗೆ ಅಧಿಕಾರವನ್ನು ತಂದುಕೊಟ್ಟಿತ್ತು. ಈ ಬಾರಿ ಪಕ್ಷವನ್ನು ಬಹುಮತದ ಗಡಿ ದಾಟಿಸುವ ಅವಕಾಶವಂತೂ ಬೊಮ್ಮಾಯಿ ಅವರಿಗೆ ಇದೆ. ತಮಗಿರುವ ಅವಕಾಶವನ್ನು ಬಳಸಿಕೊಂಡು ಬೊಮ್ಮಾಯಿ ಬಿಜೆಪಿಗೆ ಬಹುಮತ ತಂದುಕೊಟ್ಟರೆ ಆ ಪಕ್ಷಕ್ಕೆ ಅದೊಂದು ದಾಖಲೆಯೇ ಆಗುತ್ತದೆ. ಅಷ್ಟರಮಟ್ಟಿಗೆ ಅವರು ಆಪರೇಷನ್ ಕಮಲದಂತಹ ಅನಾಚಾರವನ್ನು ತಡೆದಂತಾಗುತ್ತದೆ.

ರಾಜ್ಯದಲ್ಲಿ ಈಗ ಇರುವ ಮಾಸ್ ಲೀಡರ್‌ಗಳೆಲ್ಲಾ ಹಿಂದಕ್ಕೆ ಸರಿಯುತ್ತಾರೆ ಎಂಬ ಮುನ್ಸೂಚನೆಯಂತೂ ಸಿಕ್ಕಿದೆ. ಆದರೆ ರಾಜ್ಯದ ಎಲ್ಲ ಭಾಗಗಳ ಮತದಾರರನ್ನು ಪ್ರಭಾವಿಸುವ, ರಾಜ್ಯವನ್ನು ಸರಿಯಾದ ದಾರಿಯಲ್ಲಿ ಮುಂದಕ್ಕೆ ಕೊಂಡೊಯ್ಯುವ ನಾಯಕನ ಚಿತ್ರಣ ಸದ್ಯಕ್ಕಂತೂ ಗೋಚರಿಸುತ್ತಿಲ್ಲ. ಕರ್ನಾಟಕದ ಸದ್ಯದ ರಾಜಕೀಯ ಅಷ್ಟೊಂದು ಬರಡಾಗಿದೆ. ಜನರ ಮಧ್ಯದಿಂದ ಅಂತಹ ನಾಯಕನೊಬ್ಬ ಹುಟ್ಟಿ ಬರಬೇಕು. ಆ ನಾಯಕ ನಾಡಿನ ನಾಯಕನಾಗಬೇಕೆ ವಿನಾ ಪಕ್ಷದ ನಾಯಕನಾಗಬಾರದು. ಚುನಾವಣೆಯಲ್ಲಿ ಗೆದ್ದು ಬರುವುದಕ್ಕೆ ಪಕ್ಷ ಅನಿವಾರ್ಯವೇ ವಿನಾ ರಾಜ್ಯದ ಅಭಿವೃದ್ಧಿಗೆ ಪಕ್ಷದ ನಾಯಕ ಅನಿವಾರ್ಯವಲ್ಲ. ಅಂತಹ ನಾಯಕನೊಬ್ಬನ್ನು ಹುಟ್ಟುಹಾಕುವ ಜವಾಬ್ದಾರಿ ಈಗ ಮತದಾರರ ಮೇಲೆ ಇದೆ.

ಹೊಲ ಸಿದ್ಧವಾಗಿದೆ. ಬೀಜ ಬಿತ್ತುವ ಕೆಲಸ ಬಾಕಿ ಇದೆ. ಆದರೆ ಹಣಕ್ಕೆ ಮಾರಾಟವಾದರೆ, ಕೊಡುಗೆಗಳಿಗೆ ಮಾರುಹೋದರೆ, ಜಾತಿಯ ಸಂಕೋಲೆಗೆ ಸಿಲುಕಿಕೊಂಡರೆ, ಮಠಾಧೀಶರ ಮಾತಿಗೆ ಮರುಳಾದರೆ ಬಿತ್ತುವ ಬೀಜವೂ ವಿಫಲವಾಗುತ್ತದೆ. ಮೊಳಕೆ ಯೊಡೆಯುವುದಿಲ್ಲ. ಚಿಗುರೊಡೆಯುವುದೂ ಇಲ್ಲ. ಫಲ ನೀಡುವುದೂ ಇಲ್ಲ.

ಜಾತಿ ಆಧಾರದಲ್ಲಿ ಇವ ನಮ್ಮವ, ಇವ ನಮ್ಮವ ಎಂದು ಮತ ಹಾಕಬೇಡಿ. ಬಸವಣ್ಣ ಹೇಳಿದಂತೆ, ನಿಜವಾದ ಅರ್ಥದಲ್ಲಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸುವ ವ್ಯಕ್ತಿಯನ್ನು ಗುರುತಿಸಿ, ಅವನನ್ನು ಇವ ನಮ್ಮವ ಇವ ನಮ್ಮವ ಎನ್ನಿ. ಹೊಸ ನಾಯಕ ಹುಟ್ಟಿಬರಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.