ವಿಧಾನ ಮಂಡಲದ ಅಂಗಳದಿಂದ ಹಿಡಿದು ಜನ ಓಡಾಡುವ ಹಾದಿಬೀದಿಗಳವರೆಗೆ ಈಗ ಸಿ.ಡಿಯದ್ದೇ ಮಾತು.ಮಾಧ್ಯಮಗಳಲ್ಲಿಯಂತೂ ಸಿ.ಡಿ ಹೊರತುಪಡಿಸಿ ಬೇರೆ ವಿಷಯಗಳೇ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹೈಸ್ಪೀಡಲ್ಲಿ ಓಡುವ ವಿಷಯ ಅದು. ಅದಕ್ಕೇ ಲೈಕ್‌ಗಳು, ಕಮೆಂಟ್‌ಗಳು ಜಾಸ್ತಿ. ಸಿ.ಡಿಗೆ ಹೋದ ಮಾನ ಯಾವ ಸಿರಿ ಕೊಟ್ಟರೂ ವಾಪಸು ಬರುವುದಿಲ್ಲ ಎಂದು ಗೊತ್ತಿದ್ದರೂ ಸಿ.ಡಿ ಜಾಲಕ್ಕೆ ಜಾರುವವರು ಇದ್ದಾರೆ. ಸಿ.ಡಿ ಇಟ್ಟುಕೊಂಡೇ ರಾಜಕೀಯ ಮಾಡುವವರೂ ಇದ್ದಾರೆ. ಹೊಸ ಹೊಸ ಸಿ.ಡಿ ಬಿಡುಗಡೆ ಮಾಡುವವರೂ ಇದ್ದಾರೆ. ಬಿಡುಗಡೆ ಮಾಡುತ್ತೇನೆ ಎಂದು ಬೆದರಿಸುವವರೂ ಇದ್ದಾರೆ. ಫೈಲ್‌ಗಳನ್ನು ಇಟ್ಟುಕೊಂಡು ರಾಜಕೀಯ ಮಾಡಿದ್ದು, ದೂರವಾಣಿ ಸಂಭಾಷಣೆ ಇಟ್ಟುಕೊಂಡು ಲಾಭ ಮಾಡಿಕೊಂಡಿದ್ದು, ಆಡಿಯೊ ಬಿಡುಗಡೆ ಮಾಡಿ ಬಲಿ ಪಡೆದಿದ್ದು ಎಲ್ಲವೂ ಈ ನೆಲದಲ್ಲಿ ಆಗಿಹೋಗಿವೆ. ಈಗ ಸದ್ಯಕ್ಕೆ ಸಿ.ಡಿ ಕಾಲ. ಈ ಎಲ್ಲ ವಿದ್ಯಮಾನಗಳ ಒಳಗೆ ನಿಜವಾಗಿ ಚರ್ಚೆಯಾಗಲೇಬೇಕಾದ ವಿಷಯಗಳು ಹಿಂದೆ ಸರಿದಿವೆ. ರಾಜ್ಯ ಎದುರಿಸುತ್ತಿರುವ ಸಮಸ್ಯೆಗಳ ಮಾತು ಹಾಗಿರಲಿ, ಸಿ.ಡಿ ವಿಚಾರದಲ್ಲಿಯೇ ಹಲವಾರು ವಿಷಯಗಳು ಚರ್ಚೆಯಾಗದೆ ಹಿಂದಕ್ಕೆ ಸರಿದಿವೆ.
ಸಂತ್ರಸ್ತೆ ಎನ್ನಲಾದ ಯುವತಿಯು ಶಾಸಕ ರಮೇಶ ಜಾರಕಿಹೊಳಿ ಅವರ ವಿರುದ್ಧ ಹಲವು ಆರೋಪಗಳನ್ನು ಮಾಡುತ್ತಿದ್ದಾರೆ. ದಿನಕ್ಕೊಂದು ವಿಡಿಯೊ ಬಿಡುಗಡೆ ಮಾಡುತ್ತಿದ್ದಾರೆ. ಆ ಯುವತಿಯ ಪಾಲಕರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಈ ಸಿ.ಡಿ ಸ್ಫೋಟವಾಗಿ ಹತ್ತಿರ ಹತ್ತಿರ ಒಂದು ತಿಂಗಳಾಗುತ್ತಿದೆ. ಪ್ರಮುಖ ಆರೋಪಿಗಳ ಬಂಧನ ಆಗಿಲ್ಲ. ಹಾಗಾದರೆ ನಮ್ಮ ಪೊಲೀಸರು ಅಷ್ಟೊಂದು ಅಸಮರ್ಥರೇ? ಡಾ. ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣ ದಲ್ಲಿ ಚಾಣಾಕ್ಷತನ ಮೆರೆದವರು, ರಾಜೀವ್ ಗಾಂಧಿ ಹಂತಕರನ್ನು ಬಲೆಗೆ ಬೀಳಿಸಿದವರು ನಮ್ಮ ಪೊಲೀಸರು. ವಿದೇಶಕ್ಕೆ ಪರಾರಿಯಾದವರನ್ನು, ಪರಾರಿಯಾಗಲು ಹೊಂಚು ಹಾಕಿದವರನ್ನೂ ಪತ್ತೆ ಮಾಡಿ ಕಟಕಟೆಗೆ ತಂದು ನಿಲ್ಲಿಸುವ ಸಾಮರ್ಥ್ಯ ಇರುವ ಕರ್ನಾಟಕ ಪೊಲೀಸರು ಈ ಸಿ.ಡಿ ಪ್ರಕರಣದಲ್ಲಿ ನಿರೀಕ್ಷೆಯಂತೆ ಕೆಲಸ ಮಾಡಲು ಸಾಧ್ಯವಾಗದೇ ಇರುವುದಕ್ಕೆ ಏನಿರಬಹುದು ಕಾರಣ? ಯಾವ ಅಡಕತ್ತರಿಯಲ್ಲಿ ಅವರು ಸಿಲುಕಿದ್ದಾರೆ?
ಆರೋಪಿಯೊಬ್ಬರ ಮನೆಗೇ ತೆರಳಿ ಹೇಳಿಕೆ ಪಡೆಯುವಂತಹ ಔದಾರ್ಯವನ್ನೂ ನಮ್ಮ ಪೊಲೀಸರು ತೋರಿದ್ದಾರೆ. ದೂರು ದಾಖಲಾಗಿ ಇಷ್ಟು ದಿನವಾದರೂ ಮೇಲ್ನೋಟಕ್ಕೆ ಆರೋಪಿ ಎಂದು ಗೊತ್ತಾದವರನ್ನು ಬಂಧಿಸುವುದೂ ಇಲ್ಲ. ಸಂತ್ರಸ್ತ ಯುವತಿಯ ಪೋಷಕರು ಮಾಡುವ ಆರೋಪದ ಕುರಿತೂ ಯಾವುದೇ ಸ್ಪಷ್ಟನೆಯನ್ನು ನೀಡುವುದಿಲ್ಲ. ಸಾಮಾನ್ಯ ವ್ಯಕ್ತಿಯೊಬ್ಬರ ಪ್ರಕರಣ ಇದಾಗಿದ್ದರೆ ಪೊಲೀಸರು ಹೀಗೆ ನಡೆದುಕೊಳ್ಳುತ್ತಿದ್ದರೇ? ರಾಜ್ಯದ ಹೆಣ್ಣುಮಗಳೊಬ್ಬಳು ತನಗೆ ರಕ್ಷಣೆ ಇಲ್ಲ ಎಂದು ರೋದಿಸುತ್ತಿದ್ದರೂ ಗೃಹ ಸಚಿವರನ್ನು ಹೊರತುಪಡಿಸಿ ಅಧಿಕಾರಸ್ಥರಲ್ಲಿ ಪ್ರಮುಖರೆನಿಸಿಕೊಂಡ ಹಲವರು ಆ ಬಗ್ಗೆ ಚಕಾರವನ್ನೇ ಎತ್ತಿರಲಿಲ್ಲ. ಪೊಲೀಸರು ಅಡಕತ್ತರಿಯಲ್ಲಿ ಸಿಲುಕಿರುವುದಕ್ಕೆ ಇವೆಲ್ಲವೂ ಕಾರಣ ಇರಬಹುದೇ?
ಜಾರಕಿಹೊಳಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಸಿ.ಡಿ ಬಹಿರಂಗಗೊಂಡ ಸಂದರ್ಭದಲ್ಲಿಯೇ ಇನ್ನೂ ಹಲವು ಸಿ.ಡಿಗಳು ಹೊರಗೆ ಬರುತ್ತವೆ ಎಂಬ ಪ್ರಚಾರ ಜೋರಾಗಿತ್ತು. ಅವೆಲ್ಲ ಏನಾದವು? ಅವು ಕೇವಲ ಬ್ಲ್ಯಾಕ್‌ಮೇಲ್ ಮಾಡಲು ಬಳಕೆಯಾಗುತ್ತಿವೆಯೇ? ರಾಜಕೀಯ ಮೊಗಸಾಲೆಯಲ್ಲಿ ಇಂತಹ ಚರ್ಚೆಗಳು ಸಾಮಾನ್ಯವಾಗಿವೆ. ರಮೇಶ ಜಾರಕಿಹೊಳಿ ಸಿ.ಡಿ ವಿಚಾರವಾಗಿ ಕಠಿಣ ಕ್ರಮ ಕೈಗೊಂಡರೆ ಇನ್ನಷ್ಟು ಸಿ.ಡಿಗಳು ಹೊರಗೆ ಬರುತ್ತವೆ. ಕ್ರಮ ಕೈಗೊಳ್ಳದೆ ತಿಪ್ಪೆ ಸಾರಿಸಿದರೂ ಮತ್ತಷ್ಟು ಸಿ.ಡಿ ಗಳು ಹೊರಕ್ಕೆ ಬರುತ್ತವೆ. ಅವರನ್ನು ಇವರು, ಇವರನ್ನು ಅವರು ಸಿ.ಡಿ ಮೂಲಕವೇ ಬೆದರಿಸುತ್ತಿದ್ದಾರೆ ಎಂಬ ವದಂತಿಗಳು ಇವೆ. ಇವೆಲ್ಲಕ್ಕೂ ಉತ್ತರ ಹೇಳಲಾಗದ ಸ್ಥಿತಿಯಲ್ಲಿ ರಾಜ್ಯದ ಪೊಲೀಸರು ಇದ್ದಾರೆ. ‘ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ. ಕಾನೂನು ತನ್ನ ಕ್ರಮವನ್ನು ಕೈಗೊಳ್ಳುತ್ತದೆ. ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ಕಾದಿದೆ’ ಎಂದು ಗೃಹ ಸಚಿವರು ಬಹಿರಂಗವಾಗಿ ಹೇಳುತ್ತಾರಾದರೂ ಅವರ ಮಾತನ್ನು ನಂಬುವ ಸ್ಥಿತಿಯಲ್ಲಿ ರಾಜ್ಯದ ಜನ ಇಲ್ಲ, ಅವರಿಗೂ ಅವರ ಮಾತಿನಲ್ಲಿ ನಂಬಿಕೆ ಇರುವ ಹಾಗೆ ಕಾಣುತ್ತಿಲ್ಲ.
ಇನ್ನೊಂದು ಬಹಳ ಮುಖ್ಯವಾದ ಅಂಶ ಎಂದರೆ, ಸಿ.ಡಿಯಲ್ಲಿ ಇರುವ ಯುವತಿಯದ್ದೇ ತಪ್ಪು ಎಂಬುದಾಗಿ ಬಿಂಬಿಸಲು ಹೊರಟಿದ್ದು. ಯುವತಿ ತಪ್ಪು ಮಾಡಿರಬಹುದು. ಆದರೆ ಅದಕ್ಕೆ ಕುಮ್ಮಕ್ಕು ನೀಡಿದವರು ಯಾರು ಎನ್ನುವುದೂ ಬಹಿರಂಗವಾಗಬೇಕಲ್ಲ. ಜೊತೆಗೆ ಜಾರಕಿಹೊಳಿ ಅವರದ್ದು ಎನ್ನಲಾದ ಸಿ.ಡಿಯಲ್ಲಿ ಅವರು ಹೇಳಿದರೆನ್ನಲಾದ ‘ಯಡಿಯೂರಪ್ಪ ಭ್ರಷ್ಟ. ಸಿದ್ದರಾಮಯ್ಯ ಒಳ್ಳೆಯವರು, ಬೇರೆಯವರನ್ನು ಮುಖ್ಯಮಂತ್ರಿ ಮಾಡ್ತೇವೆ’ ಎನ್ನುವ ರಾಜಕೀಯ ವಿಷಯಗಳ ಬಗ್ಗೆ ಏಕೆ ಎಲ್ಲರೂ ಮೌನವಾಗಿದ್ದಾರೆ?
ರಾಜಕೀಯ ಮೊಗಸಾಲೆಯಲ್ಲಿ ಇನ್ನೊಂದು ರೀತಿಯ ಚರ್ಚೆಯೂ ನಡೆಯುತ್ತಿದೆ. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದವರನ್ನು ಬೇರೆ ಬೇರೆ ಕಾರಣಕ್ಕೆ ಮೂಲೆಗುಂಪು ಮಾಡುವುದೂ ಈ ಸಿ.ಡಿ ಪ್ರಕರಣದ ಉದ್ದೇಶ ಎಂದೂ ಹೇಳಲಾಗುತ್ತಿದೆ. ಅದರ ಸುಳಿವು ಸಿಕ್ಕೇ ಇತರ 6 ಸಚಿವರು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದುಕೊಂಡಿದ್ದಾರೆ ಎಂಬ ಅಭಿಪ್ರಾಯವೂ ಇದೆ. ಎಚ್.ವಿಶ್ವನಾಥ್ ಅವರನ್ನು ಈಗಾಗಲೇ ಬದಿಗೆ ಸರಿಸಲಾಗಿದೆ. ಮಹೇಶ್ ಕುಮಟಳ್ಳಿ, ಎನ್.ಆರ್.ಸಂತೋಷ್, ಮರಂಕಲ್ ಮುಂತಾದವರು ಹಿಂದಕ್ಕೆ ಸರಿದಿದ್ದಾರೆ. ಪ್ರತಾಪ ಗೌಡ ಪಾಟೀಲ ಅವರ ಭವಿಷ್ಯ ಇನ್ನೂ ನಿರ್ಧಾರ ಆಗಿಲ್ಲ. ಮುನಿರತ್ನ ಅವರಿಗೆ ನೀಡಿದ್ದ ಭರವಸೆ ಭರವಸೆಯಾಗಿಯೇ ಉಳಿದಿದೆ. ಇದೆಲ್ಲದರ ಮುಂದುವರಿದ ಭಾಗವಾಗಿಯೇ ಜಾರಕಿಹೊಳಿ ಸಿ.ಡಿ ಸ್ಫೋಟಗೊಂಡಿದೆ ಎಂದು ವಾದಿಸುವವರೂ ಇದ್ದಾರೆ.
ಜಾರಕಿಹೊಳಿ ಅವರದ್ದು ಎನ್ನಲಾದ ಸಿ.ಡಿ ಕುರಿತಂತೆ ಕಾನೂನಾತ್ಮಕ ವಿಚಾರಣೆ, ತನಿಖೆ ನಡೆಯುವುದು ಒಂದು ಕಡೆ. ಅದನ್ನು ಪೊಲೀಸರು ತಮ್ಮ ಕೈಲಾದ ಮಟ್ಟಿಗೆ ಮಾಡುತ್ತಾರೆ. ಕಾನೂನು ತನ್ನ ಪರಿಧಿಯಲ್ಲಿ ಮಾಡಬಹುದಾದ ವಿಚಾರಣೆಯನ್ನು ಮುಂದುವರಿಸಬಹುದು. ಆದರೆ ಇನ್ನೊಂದು ಕಡೆ ಅದರ ರಾಜಕೀಯ ಕುತಂತ್ರದ ಬಗ್ಗೆ ತನಿಖೆ ನಡೆಸುವವರು ಯಾರು? ಎಲ್ಲಕ್ಕಿಂತ ಮುಖ್ಯವಾಗಿ ಇಡೀ ದೇಶದ ಮುಂದೆ, ಪ್ರಪಂಚದ ಮುಂದೆ ಕರ್ನಾಟಕದ ಗೌರವ, ಘನತೆ ಹರಾಜಾಗಿದೆಯಲ್ಲ. ಅದಕ್ಕೆ ಉತ್ತರ ಹೇಳುವವರು ಯಾರು? ಮಾಸ್ಟರ್ ಹಿರಣ್ಣಯ್ಯ ಅವರು ತಮ್ಮ ನಾಟಕಗಳಲ್ಲಿ ‘ಹುಟ್ಟಾ ಫಟಿಂಗರ ಕಟ್ಟಕಡೆಯ ಆಟ ರಾಜಕೀಯ’ ಎಂದು ಟೀಕೆ ಮಾಡುತ್ತಿದ್ದರು. ಈಗಿನ ಆಟ ಮೇಲಾಟಗಳನ್ನು ನೋಡಿದರೆ ಇದು ಹುಟ್ಟಾ ಫಟಿಂಗರ ಕಟ್ಟ ಕಡೆಯ ಆಟ ಅಲ್ಲ. ಮೊದಲ ಆಟವೇ ಇದು ಎಂಬ ಅನುಮಾನ ಬರುತ್ತಿದೆ. ಸಿ.ಡಿ ಕಿಡಿಗೇಡಿಗಳ ನಡುವೆ ಮಾನಗೇಡಿಗಳು ಕೈ ಬೆಚ್ಚಗೆ ಮಾಡಿಕೊಳ್ಳುತ್ತಿದ್ದಾರೆ. ನೈತಿಕತೆ, ಘನತೆ, ಗೌರವ ಎನ್ನುವ ಮಾತುಗಳಿಗೆ ಅರ್ಥವೇ ಇಲ್ಲದಂತಾಗಿದೆ. ಮಾನವಂತರು ಮೌನವಾಗಿದ್ದಾರೆ. ಮತದಾರರು ದಾರಿಕಾಣದಂತಾಗಿದ್ದಾರೆ.
ಇನ್ನೊಂದು ಗಂಭೀರ ಮತ್ತು ಅಧ್ಯಯನಕ್ಕೆ ಯೋಗ್ಯ ವಿಚಾರ ಎಂದರೆ, ಆರ್.ಡಿ.ಕಿತ್ತೂರ ಅವರಿಂದ ಹಿಡಿದು ರಮೇಶ ಜಾರಕಿಹೊಳಿವರೆಗೆ ರಾಜ್ಯದಲ್ಲಿ ಲೈಂಗಿಕ ಹಗರಣಕ್ಕೆ ತುತ್ತಾದವರೆಲ್ಲಾ ಹಿಂದುಳಿದ ವರ್ಗದವರು ಮತ್ತು ದಲಿತರು. ಇದು ಕಾಕತಾಳೀಯವೂ ಆಗಿರಬಹುದು. ಆದರೆ ಅವರೇ ಯಾಕೆ ಸಿಕ್ಕಿಬೀಳುತ್ತಿದ್ದಾರೆ. ಉಳಿದವರು ಸಿಕ್ಕಿ ಬೀಳುತ್ತಿಲ್ಲವೋ ಅಥವಾ ಇಂತಹ ಕೆಲಸವನ್ನೇ ಮಾಡಿಲ್ಲವೋ? ಈ ಪ್ರಶ್ನೆಗೆ ಉತ್ತರ ಹುಡುಕುವ ಕೆಲಸವೂ ಆಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.