‘ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು’ ಎಂಬ ಮಾತು ಎಲ್ಲರಿಗೂ ಗೊತ್ತು. ಆದರೂ ಕೆಲವು ಬುದ್ಧಿವಂತರು ಪದೇ ಪದೇ ಮುತ್ತು ಒಡೆಯುತ್ತಾರೆ. ಮಾತೆಂಬುದು ಜ್ಯೋತಿರ್ಲಿಂಗ ಎಂಬ ಕಾಲದಿಂದ ನಾವು ಈಗ, ಮಾತೆಂಬುದು ಜಾತಿರ್ಲಿಂಗ ಎಂಬ ಕಾಲಕ್ಕೆ ಬಂದು ತಲುಪಿದ್ದೇವೆ. ಆದರೂ ನಾವು ಎಚ್ಚರ ತಪ್ಪುತ್ತೇವೆ ಎಂದರೆ ಅದೊಂದು ಚಟವಾಗಿದೆ ಎಂದೇ ಅರ್ಥ. ಅಧಿಕಾರದಲ್ಲಿ ಇರುವವರಂತೂ ಈಗ ತುಂಬಾ ಎಚ್ಚರಿಕೆಯಿಂದಲೇ ಮಾತನಾಡಬೇಕು. ಕೊಂಚ ಎಚ್ಚರ ತಪ್ಪಿದರೂ ಬಲಿ ಹಾಕುವವರು ಕಾಯುತ್ತಲೇ ಇರುತ್ತಾರೆ. ಆದರೂ ನಮ್ಮ ಅಧಿಕಾರಸ್ಥರ ಮಾತಿಗೆ ಕಡಿವಾಣವೇ ಇಲ್ಲ.
ಕೊರೊನಾ ವೈರಸ್ ಹರಡಿದ ಈ ಕಾಲದಲ್ಲಿ ವೈರತ್ವ ಹರಡುವ ಮಾತುಗಳನ್ನು ಆಡುವುದು ಯಾರ ಘನತೆಗೂ ತಕ್ಕುದಲ್ಲ. ಆದರೂ ನಾವು ನಾಲಿಗೆಯನ್ನು ಹರಿಯಬಿಡುತ್ತೇವೆ. ಅದು ಜನರ ಪಾಲಿಗೆ ಕರ್ಕಶ ಶಬ್ದವಾಗಿ ಕೇಳುವುದು ಸಹಜ. ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರು ‘ಕೊರೊನಾ ಹರಡುವವರು ಭಯೋತ್ಪಾದಕರು, ಅವರನ್ನು ಗುಂಡಿಟ್ಟು ಕೊಲ್ಲಬೇಕು’ ಎಂದು ಅಪ್ಪಣೆ ಕೊಡಿಸಿದರು. ಒಂದು ಸಮುದಾಯವನ್ನು ಗುರಿಯಾಗಿ ಇಟ್ಟುಕೊಂಡು ಅವರು ಆಡಿದ ಮಾತು ಈಗ ಅವರಿಗೇ ತಗಲುತ್ತಿದೆ. ಅದರ ಅರಿವು ಅವರಿಗೆ ಇದ್ದಂತಿಲ್ಲ.
ಸಮಾವೇಶವೊಂದರಲ್ಲಿ ಭಾಗವಹಿಸಿದ ತಬ್ಲಿಗ್ ಸಂಘಟನೆಯ ಸದಸ್ಯರು ಕೊರೊನಾ ತಪಾಸಣೆಗೆ ತಕರಾರು ಮಾಡಿದ್ದನ್ನು ಯಾರೂ ಮೆಚ್ಚುವುದಿಲ್ಲ. ಆದರೆ ಅದನ್ನೇ ನೆಪವಾಗಿ ಇಟ್ಟುಕೊಂಡು ಇಡೀ ಸಮುದಾಯವನ್ನು ದೂರುವುದೂ ಸರಿಯಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದನ್ನು ಖಚಿತ ಮಾತುಗಳಲ್ಲಿ ಹೇಳಿದ್ದರೂ ಅವರ ಆಪ್ತರು ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಮುಂದುವರಿಸಿದರು. ಲೋಕಸಭಾ ಸದಸ್ಯ ಅನಂತಕುಮಾರ್ ಹೆಗಡೆ ಅವರಂತೂ ಈ ಬಗ್ಗೆ ಸರಣಿ ಲೇಖನಗಳನ್ನೇ ಬರೆಯತೊಡಗಿದರು. ನೋಡಿ ಈಗ ಕಾಲ ಬದಲಾಗಿದೆ. ಮುಂಬೈಯಿಂದ ಬಂದವರು, ರಾಜಸ್ಥಾನದಿಂದ ಬಂದವರು, ಉತ್ತರ ಪ್ರದೇಶದಿಂದ ಬಂದವರು, ವಿದೇಶಗಳಿಂದ ಬಂದವರೂ ರೋಗ ಹರಡುತ್ತಿದ್ದಾರೆ. ಅವರಲ್ಲಿಯೂ ಸಾಕಷ್ಟು ಮಂದಿ ತಪಾಸಣೆಗೆ ತಕರಾರು ತೆಗೆಯುತ್ತಿದ್ದಾರೆ. ಕೆಲವರಂತೂ ತಪ್ಪಿಸಿಕೊಂಡು ಓಡುತ್ತಿದ್ದಾರೆ. ಅವರನ್ನೂ ನಾವು ಗುಂಡಿಟ್ಟು ಕೊಲ್ಲಬೇಕೇ?
ತಬ್ಲಿಗ್ ಸಂಘಟನೆಯ ಸದಸ್ಯರ ವಿರುದ್ಧ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದ ವ್ಯಕ್ತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರೆ ಪೊಲೀಸರ ವಿರುದ್ಧ ಸಚಿವ ಸಿ.ಟಿ.ರವಿ ಕಿಡಿಕಾರಿದರು. ಗೃಹ ಸಚಿವರಿಗೆ ದೂರನ್ನೂ ನೀಡಿ ತಕ್ಷಣವೇ ಪ್ರಕರಣ ರದ್ದು ಮಾಡುವಂತೆ ಒತ್ತಾಯಿಸಿದರು. ಶೋಭಾ ಕರಂದ್ಲಾಜೆ, ಬಸನಗೌಡ ಪಾಟೀಲ ಯತ್ನಾಳ ಮುಂತಾದವರೂ ಮುಸ್ಲಿಮರ ವಿರುದ್ಧ ಎಗರಿಬಿದ್ದರು. ‘ಮಾತು ಮನೆ ಕೆಡಿಸಿತು’ ಎನ್ನುವಂತೆ, ಅವರ ಮಾತುಗಳು ಈಗ ನಿಜದ ಅರ್ಥದಲ್ಲಿ ಕರ್ನಾಟಕದ ಮಾನ ಕಳೆಯುತ್ತಿವೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಮಾತುಗಳಿಗೆ ಸ್ಪಷ್ಟನೆ ನೀಡಿ, ಕ್ಷಮೆ ಕೇಳಿ ಸುಸ್ತಾಗಿದ್ದಾರೆ. ಅಧಿಕಾರದಲ್ಲಿ ಇದ್ದವರು ಮಾತನಾಡುವಾಗ ಎರಡು ಬಾರಿ ಯೋಚಿಸಬೇಕು. ಅಧಿಕಾರದ ದರ್ಪ ತೋರಿದರೆ ಜನ ಕ್ಷಮಿಸುವುದಿಲ್ಲ. ಸೂಕ್ತ ಕಾಲದಲ್ಲಿ ಪಾಠ ಕಲಿಸದೆ ಬಿಡುವುದಿಲ್ಲ. ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದವರ ಬಗ್ಗೆಯೂ ನಮಗೆ ಕನಿಷ್ಠ ಕನಿಕರವಾದರೂ ಇರಬೇಕು. ಅಧಿಕಾರದಲ್ಲಿ ಇರುವವರಿಗೆ ಮಾತೃಹೃದಯ ಇರಬೇಕು ಎನ್ನುವುದು ನಮ್ಮ ಬಯಕೆ. ಮಲತಾಯಿ ಹೃದಯ ಅಲ್ಲ.
ಕೊರೊನಾ ಕಾಲದಲ್ಲಿ ಕೆಟ್ಟ ಘಟನೆಗಳೂ ನಡೆದವು. ದಾವಣಗೆರೆ ಜಿಲ್ಲೆಯಲ್ಲಿ ಲಾಕ್‌ಡೌನ್ ಸಂತ್ರಸ್ತರಿಗೆ ಆಹಾರ ವಿತರಣೆ ಕಾರ್ಯಕ್ರಮವೊಂದಿತ್ತು. ಸನ್ಮಾನ್ಯ ರೇಣುಕಾಚಾರ್ಯ ಅವರು ಕಾರ್ಯಕ್ರಮಕ್ಕೆ ಬರುವುದು ತಡವಾಯಿತು. ಸಂತ್ರಸ್ತರು ಬಿಸಿಲಿನಲ್ಲಿ ಕಾದು ಕಾದು ಸುಸ್ತಾಗಿದ್ದರು. ಅಂತೂ ಅವರು ಬಂದಾಗ ಸಾಕಷ್ಟು ಬಿಸಿಲೇರಿತ್ತು. ಅವರು ತಡವಾಗಿ ಬಂದಿದ್ದಕ್ಕೆ ಜನ ಆಕ್ಷೇಪ ವ್ಯಕ್ತಪಡಿಸಿದರು. ಮೊದಲೇ ಹಸಿದಿದ್ದರು. ಮನೆಯಲ್ಲಿಯೂ ಹಸಿದ ಹೊಟ್ಟೆಗಳು ಕಾಯುತ್ತಿದ್ದವು. ಬಿಸಿಲಲ್ಲಿ ಕಾದು ತಲೆಯೂ ಬಿಸಿಯಾಗಿತ್ತು. ಅದು ಹಸಿದವರ ಆಕ್ರೋಶವಾಗಿತ್ತು. ಆದರೆ ನಮ್ಮ ರಾಜಕೀಯ ಕಾರ್ಯದರ್ಶಿಗಳು ‘ಕಾಯಲು ಆಗಲ್ಲ ಎಂದರೆ ಎದ್ದು ಹೋಗ್’ ಎಂದು ಅಬ್ಬರಿಸಿದರು. ಪ್ರಜೆಗಳ ಹೆಗಲ ಮೇಲೆ ಕುಳಿತ ಮಂದಿಗೆ ಇದು ಶೋಭೆಯಲ್ಲ.
ಇನ್ನೊಬ್ಬ ಮಂತ್ರಿ ಜೆ.ಸಿ.ಮಾಧುಸ್ವಾಮಿ ಅವರಂತೂ ಪದೇ ಪದೇ ಇಂತಹ ಎಡವಟ್ಟು ಮಾಡಿಕೊಳ್ಳುತ್ತಲೇ ಇರುತ್ತಾರೆ. ಅವರ ಪರವಾಗಿ ಮುಖ್ಯಮಂತ್ರಿ ಕ್ಷಮೆ ಕೇಳುತ್ತಲೇ ಇರುತ್ತಾರೆ. ಮಾಧುಸ್ವಾಮಿ ಬುದ್ಧಿವಂತರು. ಅತ್ಯುತ್ತಮ ಸಂಸದೀಯಪಟು ಎಂದು ಹೆಸರು ಮಾಡಿದವರು. ಅವರೂ ಹೀಗೆ ಮಾತನ್ನು ಹರಿಯಬಿಡುತ್ತಾರೆ ಎಂದರೆ ಅಚ್ಚರಿ. ಅದೂ ಪದೇ ಪದೇ ಹೀಗೆ ಜನರ ಮೇಲೆ ಕರ್ಕಶ ಶಬ್ದಗಳನ್ನು ಹರಿಯಬಿಡುವುದು ಸೌಜನ್ಯದ ಲಕ್ಷಣವಲ್ಲ.
ಇತ್ತೀಚೆಗೆ ಅವರು ಕೋಲಾರದಲ್ಲಿ ಮಹಿಳೆಯೊಬ್ಬರಿಗೆ ರ್‍ಯಾಸ್ಕಲ್ ಎಂದು ಬೈದಿದ್ದು ಬಹಳ ಸುದ್ದಿಯಾಯಿತು. ಅವರ ರಾಜೀನಾಮೆಗೂ ಒತ್ತಾಯಿಸಲಾಯಿತು. ಅವರು ಬಹಿರಂಗ ಕ್ಷಮೆ ಕೇಳಬೇಕು ಎಂಬ ಒತ್ತಾಯ ಕೂಡ ಕೇಳಿಬಂತು. ಒತ್ತಡಕ್ಕೆ ಮಣಿದ ಸಚಿವರು ಕ್ಷಮೆ ಕೇಳಿದರು. ಆದರೆ ಆ ಕ್ಷಮೆ ಎನ್ನುವುದು ಕ್ಷಮೆಯ ತರಹ ಇರಲೇ ಇಲ್ಲ.
‘ನನ್ನ ಮಾತಿನಿಂದ ಆ ಮಹಿಳೆಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ’ ಎಂದರು ಸಚಿವರು. ಅಂದರೆ ಮಾತಿನಲ್ಲಿ ಆ ಮಹಿಳೆಗೆ ನೋವೇನೂ ಆಗಿರಲಿಕ್ಕಿಲ್ಲ ಎಂಬ ಭಾವನೆಯೇ ಇದ್ದಂತೆ ಇತ್ತು. ಅಲ್ಲದೆ ಅವರು ರ್‍ಯಾಸ್ಕಲ್ ಎನ್ನುವುದು ಅಷ್ಟೇನೂ ಕೆಟ್ಟ ಶಬ್ದವಲ್ಲ ಎಂದೂ ಹೇಳಿದರು. ಅದೇ ಶಬ್ದವನ್ನು ಯಾರಾದರೂ ತಮಗೇ ಪ್ರಯೋಗಿಸಿದ್ದರೆ ತಮ್ಮ ಪ್ರತಿಕ್ರಿಯೆ ಹೇಗಿರುತ್ತಿತ್ತು ಎನ್ನುವುದನ್ನು ಅವರು ಆಲೋಚಿಸಲಿಲ್ಲ. ಮಾಧುಸ್ವಾಮಿ ಹೀಗೆ ಮಾತನ್ನು ಹರಿಯಬಿಟ್ಟು ಟೀಕೆಗೆ ಗುರಿಯಾಗುತ್ತಿರುವುದು ಇದೇ ಮೊದಲ ಬಾರಿ ಏನಲ್ಲ. ಕೆಲವೇ ದಿನಗಳ ಹಿಂದೆ ಅವರು ಕುರುಬ ಸಮುದಾಯದ ಸ್ವಾಮೀಜಿ ಅವರಿಗೆ ಅವಮಾನ ಮಾಡಿದರು ಎಂದು ಸಾಕಷ್ಟು ಗದ್ದಲ ಆಗಿತ್ತು. ಆಗಲೂ ಅವರು ಕ್ಷಮೆ ಕೇಳಿದ್ದರು. ಜೊತೆಗೆ ಮುಖ್ಯಮಂತ್ರಿ ಅವರೂ ಮಾಧುಸ್ವಾಮಿ ಪರವಾಗಿ ಕ್ಷಮೆ ಯಾಚಿಸಿದ್ದರು. ಮಾತನ್ನು ಬೇಕಾಬಿಟ್ಟಿ ಹರಿಯಬಿಡುವುದು, ಆಮೇಲೆ ಕ್ಷಮೆ ಕೇಳುವುದು ಮಾಡುವುದಕ್ಕಿಂತ ನಾಲಿಗೆಯ ಮೇಲೆ ಕೊಂಚ ಹಿಡಿತ ಸಾಧಿಸುವುದು ಒಳ್ಳೆಯದಲ್ಲವೇ? ಇದನ್ನು ಯಾರಿಗೆ ಹೇಳುವುದು? ಯಾರು ಕೇಳುವವರು?
ಮಾಧುಸ್ವಾಮಿ ಅವರ ರ್‍ಯಾಸ್ಕಲ್ ರಗಳೆ ನಡೆಯುತ್ತಿದ್ದ ಕಾಲದಲ್ಲಿಯೇ ಒಬ್ಬ ಸಚಿವರು ನನಗೆ ಫೋನ್ ಮಾಡಿ, ‘ಜನ ಕೂಡ ಕೊಂಚ ಆಲೋಚನೆ ಮಾಡಬೇಕು ಸರ್. ನಾವು ಬೆಳಿಗ್ಗೆಯಿಂದ ಎಲ್ಲೆಲ್ಲಿಯೋ ಸುತ್ತಾಡಿರುತ್ತೇವೆ, ಊಟವೂ ಆಗಿರುವುದಿಲ್ಲ, ಹೊಟ್ಟೆ ಹಸಿದಿರುತ್ತದೆ. ಜನರ ಮಾತುಗಳಿಗೆ ನಮ್ಮ ಕೈಲಿ ಆಗಬಹುದಾದ ಸಮಾಧಾನ ಹೇಳಿರುತ್ತೇವೆ. ಆದರೂ ಅವರು ಪದೇ ಪದೇ ಪೀಡಿಸುವುದನ್ನು ಬಿಡುವುದೇ ಇಲ್ಲ. ಆಗ ಎಂಥವನಿಗಾದರೂ ಸಿಟ್ಟು ಬಂದೇ ಬರುತ್ತದೆ’ ಎಂದರು. ಹೌದು, ಸಿಟ್ಟು ಬರುವುದು ಮಾನವನ ಸಹಜ ಗುಣ. ಆದರೆ ಅಧಿಕಾರದಲ್ಲಿ ಇದ್ದಾಗ ಸಿಟ್ಟನ್ನು ವ್ಯಕ್ತಪಡಿಸುವಾಗ ಹುಷಾರಾಗಿ ಇರಬೇಕು. ಇಲ್ಲವಾದರೆ ಎಡವಟ್ಟು ಗ್ಯಾರಂಟಿ. ಯಾಕೆಂದರೆ ಈಗಿನ ಕಾಲದಲ್ಲಿ ಯಾರೂ ನಿಮ್ಮನ್ನು ಜನಸೇವೆಗೆ ಬನ್ನಿ ಎಂದು ಕರೆದಿಲ್ಲ. ಜನರನ್ನು ಉದ್ಧಾರ ಮಾಡುತ್ತೇವೆ, ಜನಸೇವೆ ಮಾಡುತ್ತೇವೆ ಎಂದು ನೀವೇ ಬಂದು ಜನರ ಮನೆಯ ಬಾಗಿಲಿನಲ್ಲಿ ನಿಂತಿದ್ದೀರಿ. ಅದು ನಿಮ್ಮ ಹೊಟ್ಟೆಪಾಡು. ಹಸಿದ ಹೊಟ್ಟೆಗೆ ಒಂದಿಷ್ಟು ಅನ್ನ ಸಿಗಬೇಕು ಎಂದು ಬಯಸುವವರೂ ಕಾಯಬೇಕು. ಬಡಿಸುವವರೂ ಕೂಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.