ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೂರು ದಿನಗಳನ್ನು ಪೂರೈಸಿದೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು ಸಾಧನೆಯಾದರೂ ನೂರು ದಿನ ಕಳೆಯುವುದರೊಳಗೇ ಹಲವಾರು ಸಂಕಷ್ಟಗಳನ್ನು ಮೈಮೇಲೆ ಹಾಕಿಕೊಂಡಿದೆ. ಹೀಗಾಗಿ, ಪಾಯಸದಲ್ಲಿ ನೊಣ ಸಿಕ್ಕಂತಾಗಿದೆ. ವರ್ಷಕ್ಕೆ ₹ 54 ಸಾವಿರ ಕೋಟಿಗೂ ಹೆಚ್ಚು ಹಣ ಬೇಡುವ ಗ್ಯಾರಂಟಿ ಯೋಜನೆಗಳ ಜಾರಿಗೆ ಬದ್ಧತೆ ತೋರಿದ್ದು ಅಭಿನಂದನೆಗೆ ಅರ್ಹವಾದರೂ ಅಭಿವೃದ್ಧಿಗೆ ಹಣ ಸಿಗುತ್ತಿಲ್ಲ ಎಂದು ಕಾಂಗ್ರೆಸ್ ಪಕ್ಷದ ಶಾಸಕರೇ ಅಪಸ್ವರ ತೆಗೆಯಲು ಆರಂಭಿಸಿದ್ದು ಸರ್ಕಾರದ ಬಾಲಗ್ರಹಕ್ಕೆ ಮುನ್ಸೂಚನೆ. ಕಾಂಗ್ರೆಸ್ ಶಾಸಕರು ಪತ್ರ ಬರೆದು ರಂಪಾಟ ಮಾಡಿದ ನಂತರ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರು ಶಾಸಕರನ್ನು ಕರೆದು ಅಹವಾಲು ಆಲಿಸಿದ್ದು ಉತ್ತಮ ನಡೆಯೇ. ಆದರೂ ನೂರು ದಿನಗಳ ಒಳಗೇ ಪಕ್ಷವೊಂದಕ್ಕೆ ಇಂತಹ ಸ್ಥಿತಿ ಬಂದಿದ್ದು ನಗೆಯಾಡುವವರ ಮುಂದೆ ಎಡವಿ ಬಿದ್ದಂತಾಗಿದೆ.
ಕಾಂಗ್ರೆಸ್ ನೇತೃತ್ವದ ಸರ್ಕಾರದ ನೂರು ದಿನಗಳ ಅವಧಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಕಾರ್ಯವೈಖರಿಗಳೂ ಬಯಲಾಗಿವೆ. ಸಾಮಾನ್ಯವಾಗಿ ಕಾಂಗ್ರೆಸ್ ಪಕ್ಷವು ವಿರೋಧ ಪಕ್ಷದ ಸ್ಥಾನದಲ್ಲಿ ಇದ್ದಾಗ ಸೋಮಾರಿತನವನ್ನು ಪ್ರದರ್ಶಿಸುತ್ತದೆ. ಬಿಜೆಪಿಯು ಈ ಹಿಂದೆ ಆಡಳಿತದ ಚುಕ್ಕಾಣಿ ಹಿಡಿದಾಗ, ಮೊದಲ ಎರಡು ವರ್ಷ ಕಾಂಗ್ರೆಸ್‌ನ ಆರ್ಭಟಗಳು ಏನೂ ಇರಲಿಲ್ಲ. ಸರ್ಕಾರದ ಅವಧಿ ಮುಗಿಯುವ ಹೊತ್ತಿನಲ್ಲಿ ಅದು ಚುರುಕಾಯಿತು. ಈ ಮೊದಲು ಎರಡು ಬಾರಿ ಬಿಜೆಪಿ ಅಧಿಕಾರದಲ್ಲಿ ಇದ್ದಾಗಲೂ ಕಾಂಗ್ರೆಸ್ ಹೀಗೆಯೇ ಮಾಡಿದೆ. ಆದರೆ ಬಿಜೆಪಿ ಹಾಗಲ್ಲ. ಅಧಿಕಾರ ಕಳೆದುಕೊಂಡ ದಿನದಿಂದಲೇ ಸರ್ಕಾರದ ವಿರುದ್ಧ ಮುಗಿಬೀಳಲು ಆರಂಭಿಸುತ್ತದೆ. ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನಗಳು ಕಳೆದರೂ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಇನ್ನೂ ಯಾರನ್ನೂ ಆಯ್ಕೆ ಮಾಡುವುದು ಆ ಪಕ್ಷಕ್ಕೆ ಸಾಧ್ಯವಾಗದೇ ಇದ್ದರೂ ಸರ್ಕಾರದ ವಿರುದ್ಧ ಕತ್ತಿ ಮಸೆಯುವುದನ್ನು ಕಡಿಮೆ ಮಾಡಿಲ್ಲ. ಜಾತ್ಯತೀತ ಜನತಾದಳ ಕೂಡ ಕತ್ತಿ ಬೀಸುವುದನ್ನು ನಿಲ್ಲಿಸಿಲ್ಲ.
ಕಾಂಗ್ರೆಸ್ ನೇತೃತ್ವದ ಸರ್ಕಾರ ಬರೀ ಗ್ಯಾರಂಟಿಗಳನ್ನಷ್ಟೇ ಜಾರಿಗೆ ತಂದಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಕೆಲವು ಹಗರಣಗಳ ಬಗ್ಗೆ ತನಿಖೆ ನಡೆಸಲೂ ಮುಂದಾಗಿದೆ. ಕೋವಿಡ್ ಕಾಲದಲ್ಲಿ ಆರೋಗ್ಯ ಇಲಾಖೆಯಲ್ಲಿ ನಡೆದ ಹಗರಣ, ಶೇ 40ರಷ್ಟು ಲಂಚ ಪ್ರಕರಣ ಕುರಿತ ತನಿಖೆ ಹಾಗೂ ಪಿಎಸ್ಐ ನೇಮಕಾತಿಯಲ್ಲಿ ನಡೆದ ಹಗರಣಗಳ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶ ಮಾಡಿದ್ದು ಕೂಡ ಸಾಧನೆಯೆ. ಜೊತೆಗೆ ಬಿಟ್ ಕಾಯಿನ್, ಬಿಬಿಎಂಪಿ ಕಾಮಗಾರಿಗಳ ಬಿಲ್ ಪಾವತಿ ಪ್ರಕರಣಗಳ ತನಿಖೆಗೆ ಎಸ್ಐಟಿ ನೇಮಕ, ಉಡುಪಿಯ ಖಾಸಗಿ ಕಾಲೇಜೊಂದರ ಶೌಚಾಲಯದಲ್ಲಿ ವಿಡಿಯೊ ಚಿತ್ರೀಕರಣ, ಬೆಳಗಾವಿ ಜೈನ ಮುನಿ ಹತ್ಯೆ ಪ್ರಕರಣ ಹಾಗೂ ಕೃಷಿ ಸಚಿವರಿಗೆ ಸಂಬಂಧಿಸಿದ ಲಂಚದ ಕುರಿತ ನಕಲಿ ಪತ್ರಗಳ ಪ್ರಕರಣಗಳನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ. ಈ ಎಲ್ಲವೂ ಸ್ವಾಗತಾರ್ಹ ಕ್ರಮಗಳೇ ಆಗಿವೆ. ಈ ಎಲ್ಲ ತನಿಖೆಗಳೂ ಕಾಲಮಿತಿಯಲ್ಲಿ ಪೂರ್ಣಗೊಂಡು ನಿಜವಾದ ಅಪರಾಧಿಗಳನ್ನು ಪತ್ತೆ ಮಾಡಿದರೆ ಕಾಂಗ್ರೆಸ್ ನೇತೃತ್ವದ ಸರ್ಕಾರ ನಿಜಕ್ಕೂ ಅಭಿನಂದನೆಗೆ ಅರ್ಹವಾಗುತ್ತದೆ. ಇಲ್ಲವಾದರೆ ಹತ್ತರ ಜೊತೆಗೆ ಹನ್ನೊಂದರ ಸರ್ಕಾರವಾಗುತ್ತದೆ.
ಒಂದು ಚುನಾಯಿತ ಸರ್ಕಾರದ ಸಾಧನೆಯನ್ನು ಅಳೆಯಲು ನೂರು ದಿನ ಸಾಲದು. ಯಾವುದೇ ಸರ್ಕಾರಕ್ಕೆ ಕನಿಷ್ಠ ಆರು ತಿಂಗಳ ಅವಕಾಶವನ್ನಾದರೂ ನೀಡಬೇಕು. ಆದರೂ ಕಾಂಗ್ರೆಸ್ ನೇತೃತ್ವದ ಸರ್ಕಾರದ ನೂರು ದಿನದ ನಡೆ ನಿರಾಶಾದಾಯಕವೇನಲ್ಲ. ‘ಚುನಾವಣೆಗೂ ಮೊದಲು ನೀಡಿದ್ದ ಐದು ಗ್ಯಾರಂಟಿಗಳನ್ನು ಜಾರಿ ಮಾಡುತ್ತಾ ನಾವು ಸೆಂಚುರಿ ಬಾರಿಸಿದ್ದೇವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ. ಇಂತಹ ಪ್ರತಿಕ್ರಿಯೆ ಅವರಿಂದ ಸಹಜವಾದದ್ದೆ. ಆದರೆ ಬರೀ ಕೆಲವು ಆಟಗಾರರು ಸೆಂಚುರಿ ಹೊಡೆದಾಗಲೂ ತಂಡವು ಪಂದ್ಯವನ್ನು ಸೋತ ಉದಾಹರಣೆಗಳು ಬಹಳಷ್ಟಿವೆ ಎನ್ನುವುದು ನಮ್ಮ ಉಪಮುಖ್ಯಮಂತ್ರಿಯವರ ಗಮನದಲ್ಲಿ ಇರಬೇಕು. ಇಲ್ಲವಾದರೆ ಸೆಂಚುರಿಯು ದಾಖಲೆ ಪಟ್ಟಿಗೆ ಸೇರುತ್ತದೆ, ಸರ್ಕಾರ ಸೋಲಿನ ಹಾದಿ ಹಿಡಿಯುತ್ತದೆ.
ಚುನಾವಣೆಗೆ ಮುನ್ನ ಘೋಷಿಸಿದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಮೂರು ಯೋಜನೆಗಳು ಜಾರಿಗೆ ಬಂದಿವೆ. ‘ಗೃಹಲಕ್ಷ್ಮಿ’ ಅನುಷ್ಠಾನಕ್ಕೆ ಸಿದ್ಧತೆ ನಡೆದಿದೆ. ‘ಯುವನಿಧಿ’ ವರ್ಷಾಂತ್ಯಕ್ಕೆ ಜಾರಿಗೆ ಬರುತ್ತದೆ ಎಂದು ಭರವಸೆ ನೀಡಲಾಗಿದೆ. ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ಜಾರಿಗೊಳಿಸಲು ಹಣ ಎಲ್ಲಿಂದ ಸಂಗ್ರಹಿಸಲಾಗುತ್ತದೆ ಎನ್ನುವುದುನ್ನು ಸರ್ಕಾರ ಇನ್ನೂ ಬಹಿರಂಗ ಮಾಡಿಲ್ಲ. ‘ಈ ವರ್ಷ ಅಭಿವೃದ್ಧಿಗೆ ಹಣ ಇಲ್ಲ. ಎಲ್ಲ ಶಾಸಕರೂ ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಾರೆ. ಪರಿಶಿಷ್ಟರ ಕಲ್ಯಾಣಕ್ಕೆ ಇಟ್ಟಿರುವ ಹಣದಲ್ಲಿಯೂ ಒಂದು ಪಾಲನ್ನು (₹ 11 ಸಾವಿರ ಕೋಟಿ) ಗ್ಯಾರಂಟಿ ಯೋಜನೆಗಳಿಗೆ ಬಳಸುವುದಾಗಿ ಸರ್ಕಾರ ಹೇಳಿಕೊಂಡಿದೆ. ಇದಕ್ಕೆ ಈಗಾಗಲೇ ವಿರೋಧ ವ್ಯಕ್ತವಾಗಿದೆ. ಇದರ ಜೊತೆಗೆ ನಿರುದ್ಯೋಗ ನಿವಾರಣೆಯ ಗ್ಯಾರಂಟಿಯೂ ಅನುಷ್ಠಾನಕ್ಕೆ ಬಾಕಿ ಇದೆ.
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2.5 ಲಕ್ಷ ಉದ್ಯೋಗಗಳನ್ನು ಹಂತ ಹಂತವಾಗಿ ಭರ್ತಿ ಮಾಡುವುದಾಗಿ ಕಾಂಗ್ರೆಸ್ ಪಕ್ಷ ಹೇಳಿಕೊಂಡಿತ್ತು. ಆದರೆ ಸರ್ಕಾರ ನೂರು ದಿನಗಳ ಅವಧಿಯಲ್ಲಿ ಈ ಬಗ್ಗೆ ಯಾವುದೇ ಹೆಜ್ಜೆ ಇಟ್ಟಂತೆ ಕಾಣುತ್ತಿಲ್ಲ. ನಿರುದ್ಯೋಗ ಭತ್ಯೆ ಕೊಡುವುದಷ್ಟೇ ಸರ್ಕಾರದ ಜವಾಬ್ದಾರಿಯಲ್ಲ. ಉದ್ಯೋಗ ಸೃಷ್ಟಿ ಮತ್ತು ನೇಮಕಾತಿಯೂ ಸರ್ಕಾರದ ಜವಾಬ್ದಾರಿ. ಇದರ ಜೊತೆಗೆ ಮಳೆ ಕೊರತೆ ಉಂಟಾಗಿದ್ದು ಬರ ಪರಿಸ್ಥಿತಿಯನ್ನೂ ನಿಭಾಯಿಸಬೇಕಾಗಿದೆ.
‘ಸರ್ಕಾರದ ನೂರು ದಿನಗಳ ಸಾಧನೆ ಓಕೆ. ಆದರೆ ಆಪರೇಷನ್ ಹಸ್ತ ಯಾಕೆ?’ ಎಂದು ಜನರು ಕೇಳುವಂತಾಗಿದೆ. ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷವನ್ನು ಇನ್ನಷ್ಟು ಬಲಗೊಳಿಸುವ ಆತುರದಲ್ಲಿ ಇತರ ಪಕ್ಷಗಳ ಕೆಲವರನ್ನು ಸೇರಿಸಿಕೊಳ್ಳುವ ಉತ್ಸಾಹದಲ್ಲಿ ಕಾಂಗ್ರೆಸ್ ಪಕ್ಷ ಇದೆ. ‘ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಮೆಚ್ಚಿ ಯಾರೇ ಬಂದರೂ ಸ್ವಾಗತ’ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ‘ನಾವು ಯಾರನ್ನೂ ಪಕ್ಷಕ್ಕೆ ಆಹ್ವಾನಿಸುತ್ತಿಲ್ಲ. ತಾವಾಗಿಯೇ ಯಾರಾದರೂ ಬಂದರೆ ಅವರನ್ನು ಸೇರಿಸಿಕೊಳ್ಳುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಹೇಳುತ್ತಾರೆ. ಇತರ ಸಚಿವರೂ ಅವ್ರು ಬರ್ತಾರೆ, ಇವ್ರು ಬರ್ತಾರೆ ಎಂದು ಹೇಳುತ್ತಲೇ ಇದ್ದಾರೆ. ಮಾಜಿ ಶಾಸಕರು, ಮಾಜಿ ಸಚಿವರು, ಕಾರ್ಯಕರ್ತರು, ಮುಖಂಡರು ಯಾರೇ ಕಾಂಗ್ರೆಸ್ ಪಕ್ಷ ಸೇರಿದರೂ ಯಾರದ್ದೂ ತಕರಾರಿಲ್ಲ. ಆದರೆ ಮೂರು ತಿಂಗಳ ಹಿಂದಷ್ಟೇ ಜನರಿಂದ ಆಯ್ಕೆಯಾಗಿರುವ ಶಾಸಕರು ತಾವು ಗೆದ್ದ ಪಕ್ಷವನ್ನು ಬಿಟ್ಟು ಈಗ ಕಾಂಗ್ರೆಸ್ ಸೇರುವುದು ಸರಿಯಲ್ಲ.
ಸುಮಾರು ಮೂರು ದಶಕಗಳ ನಂತರ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಮತದಾರರು ಅಪೂರ್ವವಾದ ಬಹುಮತವನ್ನು ನೀಡಿದ್ದಾರೆ. 135 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿದೆ. ಸಂಖ್ಯೆಯ ದೃಷ್ಟಿಯಿಂದ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿಯೇ ಇದೆ. ಆದರೂ ಇತರ ಪಕ್ಷಗಳ ಶಾಸಕರನ್ನು ಸೇರಿಸಿಕೊಳ್ಳುವುದು ಅನೈತಿಕ ನಡೆಯೂ ಹೌದು, ಮತದಾರರಿಗೆ ಮಾಡುವ ದ್ರೋಹವೂ ಹೌದು.
ಒಂದು ಪಕ್ಷದಿಂದ ಗೆದ್ದ ಮೇಲೆ ಅದನ್ನು ಬಿಟ್ಟು ಆಡಳಿತ ಪಕ್ಷಕ್ಕೆ ಹೋಗುವುದು ನೈತಿಕ ಅಧೋಗತಿಯ ಪರಮಾವಧಿ. ಚುನಾವಣೆ ಗೆಲ್ಲುವ ಕಲೆಯನ್ನು ಕರಗತ ಮಾಡಿಕೊಂಡಿದ್ದೇವೆ ಎಂಬ ಭ್ರಮೆಯಲ್ಲಿ ಇರುವ ವ್ಯಕ್ತಿಗಳೇ ಹೀಗೆ ಮಾಡುತ್ತಾರೆ. ಇದಕ್ಕೆ ತಡೆ ಹಾಕುವ ಶಕ್ತಿ ಇರುವುದು ಮತದಾರರಿಗೆ ಮಾತ್ರ. ರಾಜಕಾರಣಿಗಳು ಪದೇ ಪದೇ ತಪ್ಪು ಮಾಡಬಹುದು. ಆದರೆ ಮತದಾರರು ಮಾಡಬಾರದು. ಈ ಬಾರಿ ಉಪಚುನಾವಣೆ ನಡೆದರೆ ಮತದಾರರು ತಪ್ಪು ಮಾಡಲಿಕ್ಕಿಲ್ಲ. ಮತಾಸ್ತ್ರವೆಂಬ ದೊಣ್ಣೆ ಹಿಡಿದು ನಿಂತಾರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.