ಕವಿ ಸುಬ್ಬು ಹೊಲೆಯಾರ್ ‘ದೇವರನ್ನು ಸಾಕಿಕೊಂಡವರಲ್ಲಿ’ ಎಂಬ ತಮ್ಮ ಪದ್ಯದಲ್ಲಿ ‘ದೇವರ ಕೆಲಸ ಮಾಡುವ ಸರ್ಕಾರಕ್ಕೆ ಒಂದು ಅರ್ಜಿ ಸಲ್ಲಿಸಿದ್ದೇನೆ. ಮೊದಲು ಈ ದೇಶವನ್ನು ಸ್ವಲ್ಪ ದೊಡ್ಡದು ಮಾಡಿ, ಇಲ್ಲದಿದ್ದರೆ ನಾನು ಸತ್ತಾಗಲಾದರೂ ಒಂದಿಷ್ಟು ಜಾಗ ಕೊಡಿ’ ಎಂದು ಬರೆಯುತ್ತಾರೆ. ರಾಜ್ಯದಲ್ಲಿ ಈಗ ನಡೆಯುತ್ತಿರುವ ಉಪ ಚುನಾವಣೆಯನ್ನು ನೋಡಿ ಜನರೂ ಕೂಡ ‘ಮತದಾರರನ್ನು ಸಾಕಿಕೊಂಡವರಿಗೊಂದು ಅರ್ಜಿ’ ಬರೆಯಬೇಕಾಗಿದೆ. ‘ಮತದಾರರನ್ನು ಸಾಕಿಕೊಂಡವರೇ ಮೊದಲು ನಿಮ್ಮ ಹೃದಯವನ್ನು ಕೊಂಚ ದೊಡ್ಡದು ಮಾಡಿಕೊಳ್ಳಿ. ನಿಮ್ಮ ಪತ್ನಿ, ಮಕ್ಕಳು, ಸಹೋದರರು, ಮೊಮ್ಮಕ್ಕಳನ್ನು ಬಿಟ್ಟು ಉಳಿದವರಿಗೂ ಅವಕಾಶ ಕೊಡಿ. ಪ್ರಜಾಪ್ರಭುತ್ವ ಸಾಯುವ ಮೊದಲು ಎಚ್ಚೆತ್ತುಕೊಳ್ಳಿ’ ಎಂದು.
ರಾಜ್ಯದಲ್ಲಿ ಮಂಡ್ಯ, ಬಳ್ಳಾರಿ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಿಗೆ ಈಗ ಉಪ ಚುನಾವಣೆ ನಡೆಯುತ್ತಿದೆ. ಸಾರ್ವತ್ರಿಕ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇರುವ ಸಮಯದಲ್ಲಿ ಈ ಉಪ ಚುನಾವಣೆ ಎಲ್ಲರಿಗೂ ಬಲವಂತದ ಮಾಘಸ್ನಾನ. ಆದರೂ ರಾಜಕಾರಣಿಗಳ ಉತ್ಸಾಹಕ್ಕೆ ಕಡಿಮೆ ಏನಿಲ್ಲ. ಆರೋಪ ಪ್ರತ್ಯಾರೋಪಗಳು, ಹೊಲಸು ಮಾತುಗಳು ಎಲ್ಲ ಕಡೆಯಿಂದಲೂ ಕೇಳಿಬರುತ್ತಿವೆ. ಮತದಾರ ಕಿವಿ ಮುಚ್ಚಿಕೊಳ್ಳುವುದೇ ಲೇಸು ಎನ್ನುವಂತಹ ಪರಿಸ್ಥಿತಿ.
ಈ ಉಪ ಚುನಾವಣೆಗೆ ಕಾರಣರಾದವರನ್ನುಗಮನಿಸಿ. ಇವರಿಗೆ ಚುನಾವಣೆಗೆ ನಿಲ್ಲುವುದೇ ಒಂದು ಚಟವಾಗಿ ಬಿಟ್ಟಿದೆ. ಇವರು ವಿಧಾನಸಭೆ ಚುನಾವಣೆ ಬಂದರೆ ಅದಕ್ಕೂ ನಿಲ್ಲುತ್ತಾರೆ. ಲೋಕಸಭೆ ಚುನಾವಣೆ ಬಂದರೆ ಅದಕ್ಕೂ ನಿಲ್ಲುತ್ತಾರೆ. ಅಲ್ಲಿಯೂ ಗೆಲ್ಲುತ್ತಾರೆ. ಇಲ್ಲಿಯೂ ಗೆಲ್ಲುತ್ತಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಇನ್ನೊಬ್ಬ ನಾಯಕ ಶ್ರೀರಾಮುಲು ಹಾಗೂ ಹಾಲಿ ಮುಖ್ಯಮಂತ್ರಿಎಚ್.ಡಿ. ಕುಮಾರಸ್ವಾಮಿ ಅವರಿಗೆ ಬಂದ ಚುನಾವಣೆಗಳಿಗೆಲ್ಲಾ ನಿಲ್ಲುವ ಚಟ ಹತ್ತಿಕೊಂಡಂತೆ ಕಾಣುತ್ತದೆ. ಸದ್ಯ ಇವರು ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿ ಚುನಾವಣೆಗೆ ನಿಲ್ಲೋದಿಲ್ಲ ಎನ್ನುವುದೇ ದೊಡ್ಡ ಸಮಾಧಾನ.
ವಿಧಾನಸಭೆ ಚುನಾವಣೆ ಬಂದರೆ ಯಡಿಯೂರಪ್ಪ ಅವರು ಶಿಕಾರಿಪುರದಲ್ಲಿ ನಿಲ್ಲುತ್ತಾರೆ. ಲೋಕಸಭೆ ಚುನಾವಣೆ ಬಂದರೆ ಶಿವಮೊಗ್ಗ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಾರೆ. ಶಿಕಾರಿಪುರದಲ್ಲಿ ತಮ್ಮ ಪುತ್ರನನ್ನು ನಿಲ್ಲಿಸಿ ಗೆಲ್ಲಿಸುತ್ತಾರೆ. ಮತ್ತೆ ವಿಧಾನಸಭೆ ಚುನಾವಣೆಗೆ ಶಿಕಾರಿಪುರದಲ್ಲಿ ನಿಲ್ಲುತ್ತಾರೆ. ಲೋಕಸಭೆಗೆ ಪುತ್ರನನ್ನು ನಿಲ್ಲಿಸುತ್ತಾರೆ. ಅದೇ ರೀತಿ ಶ್ರೀರಾಮುಲು ಕೂಡ. ತಾವು ಬಿಟ್ಟ ಸ್ಥಾನಕ್ಕೆ ತಮ್ಮ ಸಹೋದರಿಯನ್ನು ನಿಲ್ಲಿಸಿ ಗೆಲ್ಲಿಸುತ್ತಾರೆ. ಕುಮಾರಸ್ವಾಮಿ ಅವರ ಕತೆಯೂ ಇದೇ. ಅವರು ನಿಂತು ಗೆಲ್ಲುತ್ತಾರೆ. ತಾವು ಬಿಟ್ಟ ಸ್ಥಾನಕ್ಕೆ ತಮ್ಮ ಪತ್ನಿಯನ್ನು ನಿಲ್ಲಿಸುತ್ತಾರೆ. ಒಂದು ಅರ್ಥದಲ್ಲಿ ಇವರೆಲ್ಲಾ ಮತದಾರರನ್ನು ಸಾಕಿಕೊಂಡವರು. ಸಾಕಿಕೊಂಡವರು ಎಂದರಷ್ಟೇ ಸಾಕು. ಇಲ್ಲಿ ಮತದಾರರಿಗೆ ಬೆಲೆಯೇ ಇಲ್ಲ.
ನಮ್ಮ ರಾಜ್ಯದಲ್ಲಿ ಮೊದಲೆಲ್ಲಾ ನಾಯಕತ್ವ ಬೆಳೆಸುವುದು ಎಂದರೆ ಹೀಗಿರಲಿಲ್ಲ. ಯಾರಿಗೆ ಸಮಾಜ ಸೇವೆಯಲ್ಲಿ ಆಸಕ್ತಿ ಇದೆಯೋ, ಅವಕಾಶದಿಂದ ಯಾರು ವಂಚಿತರಾಗಿದ್ದರೋ ಅವರನ್ನು ತಮ್ಮ ಜನಪ್ರಿಯತೆಯ ಪ್ರಭಾವದಿಂದ ಗೆಲ್ಲಿಸಿ ಮುನ್ನೆಲೆಗೆ ತರುವ ಪರಿಪಾಟ ಇತ್ತು. ಅಂತಹ ನಾಯಕರು ನಮ್ಮ ಮುಂದೆ ಇದ್ದರು. ಈಗ ನಾಯಕತ್ವ ಬೆಳೆಸುವುದು ಎಂದರೆ ತಮ್ಮ ಕುಟುಂಬದ ಕುಡಿಯನ್ನು ಬೆಳೆಸುವುದಷ್ಟೇ ಆಗಿಬಿಟ್ಟಿದೆ.
ದೇವರಾಜ ಅರಸರು ಎಷ್ಟೊಂದು ಮರಿ ನಾಯಕರನ್ನು ಹುಟ್ಟಿ ಹಾಕಿದ್ದರು. ತಮ್ಮ ಜನಪ್ರಿಯತೆಯನ್ನು ಧಾರೆ ಎರೆದು ಅವರನ್ನು ರಕ್ಷಿಸಿದ್ದರು. ದೇವರಾಜ ಅರಸರ ಗರಡಿಯಲ್ಲಿ ಪಳಗಿದ ಹಲವಾರು ಮಂದಿ ಈಗಲೂ ಸಕ್ರಿಯ ರಾಜಕಾರಣದಲ್ಲಿ ಇದ್ದಾರೆ. ರಾಮಕೃಷ್ಣ ಹೆಗಡೆ, ಬಂಗಾರಪ್ಪ ಮುಂತಾದವರೂ ತಮ್ಮ ನಂತರದ ರಾಜಕಾರಣಕ್ಕೆ ಒಂದಿಷ್ಟು ಮಂದಿಯನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ. ಬಂಗಾರಪ್ಪ ಅವರ ಮಕ್ಕಳೂ ಈಗ ರಾಜಕಾರಣದಲ್ಲಿ ಇದ್ದಾರೆ ಆ ಮಾತು ಬೇರೆ. ಜನತಾ ದಳ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರೂ ಕೆಲವು ನಾಯಕರನ್ನು ಬೆಳೆಸಿದ್ದಾರೆ. ಈಗ ಅವರ ಗಮನ ಬೇರೆ ಕಡೆ ಹರಿದಿದೆ. ಇತ್ತೀಚಿನ ದಿನಗಳಲ್ಲಿ ನಾಯಕತ್ವ ಬೆಳೆಸುವುದು ಎಂದರೆ ಕುಟುಂಬದ ವ್ಯವಹಾರ ಆಗಿಬಿಟ್ಟಿದೆ. ಈ ಬಗ್ಗೆ ಅಧ್ಯಯನ ನಡೆಯಬೇಕು. ಅದಕ್ಕೊಂದು ಔಷಧಿಯನ್ನು ಕಂಡುಕೊಳ್ಳಬೇಕು. ಇಲ್ಲವಾದರೆ ಮತದಾರರಾದರೂ ಶಸ್ತ್ರ ಚಿಕಿತ್ಸೆ ಮಾಡಬೇಕು.
ರಾಜ್ಯದಲ್ಲಿ ಉಪ ಚುನಾವಣೆ ಘೋಷಣೆಯಾದ ಹೊತ್ತಿನಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ಒಂದು ಆಂದೋಲನ ಶುರುವಾಯಿತು. ಅದೂ ಅತ್ಯಂತ ತಮಾಷೆಯಾಗಿ ಕಾಣುತ್ತಿತ್ತು. ಕೇವಲ ಆರು ತಿಂಗಳಿಗಾಗಿ ಈಗ ಮೂರು ಕ್ಷೇತ್ರಗಳ ಉಪ ಚುನಾವಣೆ ಬಂದಿದೆ. ಅದಕ್ಕಾಗಿ ಎಲ್ಲ ರಾಜಕೀಯ ಪಕ್ಷಗಳೂ ಈ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸದೆ ಸಾಮಾಜಿಕವಾಗಿ ಕೆಲಸ ಮಾಡಿದ ಯಾವುದಾದರೂ ಒಬ್ಬ ವ್ಯಕ್ತಿಯನ್ನು ಅಥವಾ ಒಬ್ಬ ಶ್ರೇಷ್ಠ ಸಾಹಿತಿಯನ್ನೋ, ಇಲ್ಲವೇ ಸಾಮಾಜಿಕ ಕಾಳಜಿ ಇರುವ ಯಾವುದಾದರೂ ಒಬ್ಬ ವಿಜ್ಞಾನಿಯನ್ನು ಅವಿರೋಧವಾಗಿ ಆಯ್ಕೆ ಮಾಡಬೇಕು ಎಂಬ ಕಳಕಳಿ ಈ ಆಂದೋಲನದಲ್ಲಿ ಇತ್ತು. ಅದಕ್ಕೆ ಹಲವಾರು ಮಂದಿಯ ಹೆಸರನ್ನೂ ಸೂಚಿಸಲಾಗಿತ್ತು. ನಿಜ, ಅನಗತ್ಯವಾಗಿ ಹಣದ ಹೊಳೆಯನ್ನು ಹರಿಸುವುದರ ಬದಲು ಇದು ಅತ್ಯಂತ ಉಪಯುಕ್ತ ಸಲಹೆಯೂ ಆಗಿತ್ತು. ಆದರೆ ಇಲ್ಲೊಂದು ಸೂಕ್ಷ್ಮವಿದೆ. 6 ತಿಂಗಳ ಮಟ್ಟಿಗೆ ಲೋಕಸಭೆ ಸದಸ್ಯರಾಗುವಾಗ ಮಾತ್ರ ನಮಗೆ ಇಂತಹ ಆಲೋಚನೆ ಯಾಕೆ ಬರುತ್ತದೆ? ಪೂರ್ತಿ ಐದು ವರ್ಷ ಇಂತಹ ಒಳ್ಳೆಯ ವ್ಯಕ್ತಿಗಳನ್ನು ಲೋಕಸಭೆಗೆ ಕಳಿಸಬೇಕು ಎಂದು ಯಾಕೆ ನಮಗೆ ಅನ್ನಿಸುವುದಿಲ್ಲ? ಇದೊಂಥರ ‘ಸೇವೆಗೆ ಸಾಹಿತಿಗಳು, ಲೂಟಿಗೆ ರಾಜಕಾರಣಿಗಳು’ ಎಂದ ಹಾಗೆ ಆಗುತ್ತದೆ. ಆರು ತಿಂಗಳ ಮಟ್ಟಿಗೂ ರಾಜಕಾರಣಿಗಳು ತಮ್ಮ ಸ್ಥಾನವನ್ನು ಯಾರಿಗೂ ಬಿಟ್ಟುಕೊಡಲು ಒಪ್ಪಲಿಲ್ಲ.
ಯಾರಿಗೆ ನೇರ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸಾಧ್ಯವಿಲ್ಲವೋ, ನಮ್ಮ ದೇಶಕ್ಕೆ ಅಗತ್ಯವಾದ ನೀತಿ ನಿರೂಪಣೆ ಮಾಡಲು ಸಲಹೆ ಸೂಚನೆ ನೀಡುವ ಯೋಗ್ಯತೆ ಯಾರಿಗಿದೆಯೋ ಅಂಥವರು ಸಂಸತ್ತಿನಲ್ಲಿ ಇರಬೇಕು ಎಂಬ ಕಾರಣಕ್ಕಾಗಿಯೇ ಸಂವಿಧಾನಬದ್ಧವಾಗಿ ರಾಜ್ಯಸಭೆಯನ್ನು ರಚಿಸಲಾಗಿದೆ. ಸಾಹಿತಿಗಳು, ಕಲಾವಿದರು, ವಿಜ್ಞಾನಿಗಳಿಗೆ ಇಲ್ಲಿ ಅವಕಾಶವಿದೆ. ಆದರೆ ನಾವು ರಾಜ್ಯಸಭೆಗೆ ಯಾರನ್ನು ಆಯ್ಕೆ ಮಾಡಿ ಕಳಿಸುತ್ತೇವೆ ಮತ್ತು ಈಗಾಗಲೇ ಕಳಿಸಿದ್ದೇವೆ ಎನ್ನುವುದನ್ನು ನೆನಪಿಸಿಕೊಂಡರೆ ಸತ್ಯ ಗೊತ್ತಾಗುತ್ತದೆ. ಸಮಾಜ ಸೇವೆಯ ಹೆಸರಿನಲ್ಲಿ ಯಾರ‍್ಯಾರೋ ರಾಜ್ಯಸಭೆಯನ್ನು ಪ್ರವೇಶ ಮಾಡಿದ್ದಾರೆ. ಮದ್ಯದ ದೊರೆಯಿಂದ ಹಿಡಿದು, ರಿಯಲ್ ಎಸ್ಟೇಟ್ ಕುಳದವರೆಗೆ ಎಲ್ಲರನ್ನೂ ನಾವು ರಾಜ್ಯಸಭೆಗೆ ಕಳಿಸಿದ್ದೇವೆ.
ಸಾಹಿತಿಗಳನ್ನೂ ಜನರು ಗೆಲ್ಲಿಸಿ ಸಂಸತ್ತಿಗೆ ಕಳಿಸಿದ್ದು ಅಪರೂಪ. ಅವಕಾಶ ಇದ್ದಾಗಲೂ ರಾಜಕಾರಣಿಗಳು ಅಂತಹ ಕೆಲಸ ಮಾಡಲಿಲ್ಲ. ಇದಕ್ಕೆ ಮರುಳಸಿದ್ದಪ್ಪ ಮತ್ತು ಅನಂತಮೂರ್ತಿ ಅವರೇ ಉದಾಹರಣೆ. ರಾಜಕಾರಣಿಗಳು ಮನಸ್ಸು ಮಾಡಿದ್ದರೆ ಅಂತಹ ವ್ಯಕ್ತಿಗಳನ್ನು ಆಯ್ಕೆ ಮಾಡಿ ಕಳಿಸಬಹುದಿತ್ತು. ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗ ಅವರನ್ನು ಜನರೇ ಸೋಲಿಸಿದರು.
ಈಗಲೂ ನಮ್ಮ ಜನಕ್ಕೆ ರಾಜಕಾರಣಿಗಳು ಎಂದರೆ ಅದು ಬೇರೆಯದ್ದೇ ಜಾತಿ ಎಂಬ ನಂಬಿಕೆ. ಯಾರಾದರೂ ಒಳ್ಳೆಯವರು ರಾಜಕಾರಣಕ್ಕೆ ಬಂದರೆ ‘ಅಯ್ಯೋ ಅವರಿಗೆ ಯಾಕೆ ಬೇಕಿತ್ತು ರಾಜಕಾರಣ?’ ಎಂದೇ ಪ್ರಶ್ನಿಸುತ್ತಾರೆ. ರಾಜಕಾರಣದಲ್ಲಿ ಒಳ್ಳೆಯವರಿಗೆ ಅವಕಾಶವೇ ಇಲ್ಲ. ನಾವು ಯಾವಾಗಲೂ ಹಾಗಲಬೀಜ ಬಿತ್ತಿ ಬೆಲ್ಲ ಬೆಳೆಯಬೇಕು ಎಂದು ಬಯಸುತ್ತೇವೆ. ಆದರೆ ಹಾಗಲ ಬಿತ್ತಿದರೆ ಕಹಿಯೇ ಬರುತ್ತದೆ. ಅಲ್ಲಿ ಸಿಹಿ ಬಯಸಿದರೆ ನಿರಾಸೆ ಗ್ಯಾರಂಟಿ. ಸಿಹಿ ಬೇಕು ಎಂದರೆ ಅಂತಹ ಬೀಜವನ್ನೇ ಬಿತ್ತಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.