ADVERTISEMENT

ಅನುಸಂಧಾನ: ಎದೆಗೆ ಗುದ್ದಿದ ಅಕ್ಷರ ರಾಕ್ಷಸ!

ಸತ್ತಂತಿಹರನು ಬಡಿದೆಬ್ಬಿಸಲು ಬೇಕು ಬಡಿಗೆ, ಅಂತಹವರಿಗೆ ಕಾಯುತ್ತಿದೆ ಕರ್ನಾಟಕ

ರವೀಂದ್ರ ಭಟ್ಟ
Published 29 ಮೇ 2022, 19:30 IST
Last Updated 29 ಮೇ 2022, 19:30 IST
   

‘ವಿಧಾನಸೌಧದಲ್ಲಿ ಇರುವವರು ಇದ್ದರೂ ಸತ್ತಂತೆ ಇದ್ದಾರೆ. ಅವರನ್ನು ಆಯ್ಕೆ ಮಾಡಿ ಕಳಿಸಿದ ಜನರಿಗೆ ಅವರು ಯಾವಾಗಲೂ ಸತ್ತಂತೆಯೇ ಇರುತ್ತಾರೆ. ಯಾಕೆಂದರೆ ಅವರಿಂದ ಮತದಾರರಿಗೆ ಯಾವುದೇ ಪ್ರಯೋಜನ ಇಲ್ಲ. ನೀನು ಇದ್ದೀಯಾ, ಸತ್ತಿದ್ದೀಯಾ ಅಂತ ಅವರು ಯಾವಾಗಲೂ ಮತದಾರರನ್ನು ಕೇಳಿಲ್ಲ. ಲಂಚ ತೆಗೆದುಕೊಳ್ಳಲು ಕೈಯಾಡಿಸುವುದರಿಂದ ಅವರು ಬದುಕಿದ್ದಾರೆ ಎಂದು ನಾವು ಅರ್ಥ ಮಾಡಿಕೊಳ್ಳಬೇಕು ಅಷ್ಟೆ’ ಎಂದು ಮಾಸ್ಟರ್ ಹಿರಣ್ಣಯ್ಯ ಅವರು ತಮ್ಮ ನಾಟಕಗಳಲ್ಲಿ ಹೇಳುತ್ತಿದ್ದರು. ಅವರು ಈ ಮಾತನ್ನು ಹೇಳುತ್ತಿದ್ದುದು 20–30 ವರ್ಷಗಳ ಹಿಂದೆ. ಈಗ ಅವರು ಬದುಕಿದ್ದಿದ್ದರೆ ಏನು ಹೇಳುತ್ತಿದ್ದರೋ?

ಸದ್ಯದ ರಾಜಕೀಯ ಪರಿಸ್ಥಿತಿಯನ್ನು ನೋಡಿದರೆ ಯಾರೂ ನೈತಿಕವಾಗಿ ಬದುಕಿರುವಂತೆ ಕಾಣುತ್ತಿಲ್ಲ. ಆಳುವ ಅರಸರೂ ಅಷ್ಟೆ, ಆರಿಸುವ ಮತದಾರರೂ ಅಷ್ಟೆ. ಕೂಡಿಸಿ ಒಲಿಸಬೇಕಾದ ಮಂದಿ ಕಚ್ಚಾಡುತ್ತಿದ್ದಾರೆ.
ತಾಪಕ್ಕೆ ತಣ್ಣೀರು ಸುರಿಯಬೇಕಾದ ಮಂದಿ ಹೊಟ್ಟೆಕಿಚ್ಚಿನಿಂದ ಬಳಲುತ್ತಿದ್ದಾರೆ. ಒಟ್ಟಿಗೆ ಬಾಳುವ ತೆರದಲಿ ಹರಸಬೇಕಾದ ಮಂದಿ ಮುಖ ತಿರುಗಿಸಿ ಕುಳಿತಿದ್ದಾರೆ. ಮಂಗಳ ಮೂಡಿಸುವ ಮತಿ ಯಾರಿಗೂ ಇಲ್ಲ. ಒಟ್ಟಿನಲ್ಲಿ, ಸತ್ತಂತಿಹರನು ಬಡಿದೆಬ್ಬಿಸಲು ಬಡಿಗೆ ತೆಗೆದುಕೊಂಡು ಬರುವವರಿಗಾಗಿ ರಾಜ್ಯ ಈಗ ಕಾಯುತ್ತಿದೆ.

ಇಡೀ ರಾಜ್ಯ ಈಗ ಮಾನಸಿಕವಾಗಿ ಪ್ರಕ್ಷುಬ್ಧವಾಗಿದೆ.ಯಾರೂ ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಇಲ್ಲ. ಒಬ್ಬೊಬ್ಬರು ಒಂದೊಂದು ಹೇಳುತ್ತಿದ್ದಾರೆ. ದಿನಕ್ಕೊಂದು ವಿವಾದ ಹುಟ್ಟಿಕೊಳ್ಳುತ್ತಿದೆ. ಅಭಿವೃದ್ಧಿಗೆ ಮನಸ್ಸು ಮಾಡಬೇಕಾದ ಜನರು ಮಸೀದಿಯ ಕೆಳಗೆ ಏನಿದೆ ಎಂದು ಹುಡುಕುತ್ತಿದ್ದಾರೆ. ಒಳಗೇನಿದೆ ಎಂದು ತಡಕಾಡುತ್ತಿದ್ದಾರೆ. ಆಡಳಿತದಲ್ಲಿ ಇರುವ ಜನರು ಇಸ್ಲಾಂ ಧರ್ಮದ ಜನರನ್ನು ಹೊರಕ್ಕೆ ಕಳಿಸುವ ಹುಚ್ಚಿನಲ್ಲಿದ್ದಾರೆ. ಧರ್ಮ ಧರ್ಮದ ನಡುವೆಯೂ ತಿಕ್ಕಾಟ ನಡೆದಿದೆ. ಜಾತಿ ಜಾತಿಗಳ ನಡುವಿನ ಸಂಘರ್ಷವೂ ಮಿತಿಮೀರಿದೆ. ಕೆಲವರು ಬೆಂಕಿ ಹಚ್ಚುತ್ತಾರೆ. ಇನ್ನು ಕೆಲವರು ತುಪ್ಪ ಸುರಿಯುತ್ತಾರೆ. ಲಂಗು ಲಗಾಮಿಲ್ಲ. ಯಾರನ್ನೂ ನಿಯಂತ್ರಿಸುವ ಸ್ಥಿತಿ ಇಲ್ಲ. ಆಡಳಿತದಲ್ಲಿರುವ ಜನರನ್ನು ಸರಿದಾರಿಗೆ ತರಬೇಕಾದ ವಿರೋಧ ಪಕ್ಷಗಳು ಸಹ ಆರ್ಯ ದ್ರಾವಿಡರ ಮೂಲ ಹುಡುಕುತ್ತಿವೆ. ಒಟ್ಟಿನಲ್ಲಿ ಯಾವುದಕ್ಕೂ ತಾಳಮೇಳ ಇಲ್ಲ. ಕುಣಿದಾಟ ಮಾತ್ರ ನಡೆಯುತ್ತಲೇ ಇದೆ. ಯಾರೋ ಎಲ್ಲೋ ದಾಳ ಉರುಳಿಸುತ್ತಿದ್ದಾರೆ. ಇವರು ಇಲ್ಲಿ ಕುಣಿಯುತ್ತಿದ್ದಾರೆ.

ADVERTISEMENT

ಹಿಜಾಬ್‌ನಿಂದ ಶುರುವಾದ ರಾಜಕೀಯ ರಗಳೆ ಈಗ ಪಠ್ಯಪುಸ್ತಕದ ರಾಮಾಯಣದವರೆಗೆ ಬಂದು ನಿಂತಿದೆ. ಜನರ ಬದುಕು ಮೂರಾಬಟ್ಟೆಯಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವುದು, ಹಣದುಬ್ಬರ ಹೆಚ್ಚಾಗುತ್ತಿರುವುದು, ಜನರು ಕೆಲಸ ಕಳೆದುಕೊಂಡು ತಲೆ ಮೇಲೆ ಕೈ ಇಟ್ಟುಕೊಂಡು ಕುಳಿತಿರುವುದು, ಕೆಲಸದಲ್ಲಿ ಇರುವವರಿಗೂ ವೇತನ ಕಡಿತವಾಗುತ್ತಿರುವುದು ಯಾವುದೂ ಯಾರಿಗೂ ಕಾಣುತ್ತಿಲ್ಲ. ಎಲ್ಲರೂ ಹಿಂದೆ ಏನೇನಾಗಿದೆ ಎಂಬುದನ್ನು ಪತ್ತೆ ಮಾಡಲು ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. ತೋಡುವವರು ತೋಡುತ್ತಿದ್ದಾರೆ. ಹಳ್ಳಕ್ಕೆ ಬೀಳುವವರು ಬೀಳುತ್ತಿದ್ದಾರೆ. ಮುಂದೇನು? ಇಂದೇನು ಎನ್ನುವುದು ಗೌಣವಾಗಿದೆ. ಮತದಾರರಂತೂ ದಾರಿ ಕಾಣದಂತೆ ಕಂಗೆಟ್ಟಿದ್ದಾರೆ.

ಸಾಹಿತಿ ದೇವನೂರ ಮಹಾದೇವ ‘ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವುದು’ ಎಂಬ ನಂಬಿಕೆಯನ್ನು ಹುಟ್ಟುಹಾಕಿದರು. ಆದರೆ ಈಗ ಎದೆಗೆ ಬಿದ್ದ ಅಕ್ಷರದ ಅವಾಂತರಗಳನ್ನು ಸಹಿಸಿಕೊಳ್ಳಲಾಗುತ್ತಿಲ್ಲ.
ಇದು ಎದೆಗೆ ಬಿದ್ದ ಅಕ್ಷರ ಅಲ್ಲ. ಎದೆಗೆ ಗುದ್ದಿದ ರಾಕ್ಷಸ ಎನ್ನುವಂತಾಗಿದೆ. ಸ್ವಾತಂತ್ರ್ಯ ಬಂದ ಹೊಸತರಲ್ಲಿ ಒಂದು ನಂಬಿಕೆ ಇತ್ತು. ಆಗ ದೇಶದಲ್ಲಿ ಸಾಕ್ಷರರ ಪ್ರಮಾಣ ಕಡಿಮೆ ಇತ್ತು. ಎಲ್ಲರೂ ಸಾಕ್ಷರರಾದರೆ ಎಲ್ಲರ ಹೃದಯದಲ್ಲಿಯೂ ಅಕ್ಷರದ ದೀವಿಗೆ ಹೊತ್ತಿಕೊಂಡರೆ ಮೌಢ್ಯ ಕಳೆಯುತ್ತದೆ, ಜಾತಿ ಜಾತಿಗಳ ನಡುವಿನ ಸಂಘರ್ಷ ಕಳೆಯುತ್ತದೆ, ಧರ್ಮ ಧರ್ಮಗಳ ನಡುವಿನ ಕಂದರ ಕಳೆಯುತ್ತದೆ, ಅಸ್ಪೃಶ್ಯತೆಯ ಕಳಂಕ ಮಾಯವಾಗುತ್ತದೆ, ಸೌಹಾರ್ದದ ಬೆಳಕು ಮೂಡುತ್ತದೆ ಎಂಬ ನಂಬಿಕೆ ಬಲವಾಗಿತ್ತು. ಆದರೆ ಈಗ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊತ್ತಿಗೆ ಅವೆಲ್ಲವನ್ನೂ ನಾವು ಸುಳ್ಳು
ಮಾಡಿದ್ದೇವೆ. ಈಗಲೂ ನಮಗೆ ತಾಂಬೂಲ ಶಾಸ್ತ್ರದ ಮೇಲೆ ಇರುವ ನಂಬಿಕೆ ಶಾಸನಗಳ ಮೇಲೆ ಇಲ್ಲ. ಸನಾತನ ಧರ್ಮದ ಬಗ್ಗೆ ಇರುವ ವಿಶ್ವಾಸ ಸಂವಿಧಾನದ ಮೇಲೆ ಇಲ್ಲ.

ಎಲ್ಲ ಧರ್ಮದವರಿಗೂ ಅವರವರ ಧರ್ಮವೇ ಶ್ರೇಷ್ಠ. ಅದರ ಕಟ್ಟುಪಾಡುಗಳೇ ಮುಖ್ಯ. ಸೌಹಾರ್ದಕ್ಕಾಗಿ ಅವರೂ ಒಂದು ಹೆಜ್ಜೆ ಮುಂದೆ ಇಡುತ್ತಿಲ್ಲ, ಇವರೂ ಆಲಿಂಗನಕ್ಕೆ ಬಾಹು ಚಾಚುತ್ತಿಲ್ಲ. ಸೌಹಾರ್ದಕ್ಕಾಗಿ ತನ್ನ ಇಡೀ ಬದುಕನ್ನೇ ಸವೆಸಿದ ಮಹಾತ್ಮನ ಆದರ್ಶದಲ್ಲಿ ನಂಬಿಕೆ ಹೋಗಿ ಮಹಾತ್ಮನನ್ನು ಹತ್ಯೆ ಮಾಡಿದವನೇ ದೇಶಪ್ರೇಮಿಯಂತೆ ಕಾಣುತ್ತಿದ್ದಾನೆ. ಮನುಜ ಮತವೇ ವಿಶ್ವಪಥ ಎಂದು ಹೊಸ ದಾರಿ ತೋರಿಸಿದವರು ಈಗ ಬ್ರಾಹ್ಮಣ ವಿರೋಧಿಯಾಗಿ ಕಾಣುತ್ತಾರೆ. ಸರ್ವ ಜನಾಂಗದ ಶಾಂತಿಯ ತೋಟದ ಕಡೆಗೆ ಸಾಗುವ ಬದಲು ನಾವು ಈಗ ಏಕಬೆಳೆಯ ತೋಟದ ಕೃಷಿಯಲ್ಲಿ ತೊಡಗಿದ್ದೇವೆ. ಇದನ್ನೆಲ್ಲಾ ನೋಡುತ್ತಿದ್ದರೆ ನಮ್ಮ ಎದೆಯಲ್ಲಿ ಬಿದ್ದಿದ್ದು ಅಕ್ಷರವೋ ಅಥವಾ ರಕ್ತ ಬೀಜಾಕ್ಷರವೋ ಎಂಬ ಅನುಮಾನ ಕಾಡುತ್ತಿದೆ.

ನಮ್ಮ ಎದೆಯಲ್ಲಿ ನಿಜವಾಗಿಯೂ ಅಕ್ಷರವೇ ಬಿತ್ತನೆ
ಯಾಗಿದ್ದರೆ ನಾವು ಮಹಾತ್ಮನನ್ನು ಹಳಿಯುತ್ತಿರಲಿಲ್ಲ.
ಮನುಜಪಥ ತೋರಿದ ವ್ಯಕ್ತಿಯನ್ನು ಜಾತಿಯ ಸಂಕೋಲೆಗೆ ಸಿಲುಕಿಸುತ್ತಿರಲಿಲ್ಲ. ಅವರ ತತ್ವಗಳನ್ನು ಅನುಮಾನಿಸುತ್ತಿರಲಿಲ್ಲ. ಇತಿಹಾಸದ ಕರಾಳ ಪುಟದಲ್ಲಿ ನಡೆದ ಘಟನಾವಳಿಗೆ ಈಗ ಸೇಡು ತೀರಿಸಿಕೊಳ್ಳುವ ಮಾತನಾಡುತ್ತಿರಲಿಲ್ಲ. ಇತಿಹಾಸದ ಗರ್ಭವನ್ನು ಬಗೆದು ಬಗೆದು ವರ್ತಮಾನದ ಒಡಲಿಗೆ ಬೆಂಕಿ ಹಚ್ಚುತ್ತಿರಲಿಲ್ಲ.

ಬಾಬಾ ಸಾಹೇಬ್‌ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನವನ್ನು ಅವಮಾನಿಸುತ್ತಿರಲಿಲ್ಲ. ಸರಳ ಬದುಕಿನ ಹಾದಿಯನ್ನು ತೋರಿದ ಗಾಂಧೀಜಿಯನ್ನು ನಗೆಪಾಟಲು ಮಾಡಿ ಐಷಾರಾಮಿ ಬದುಕಿಗೆ ಹಾತೊರೆಯುತ್ತಿರಲಿಲ್ಲ. ಇಲ್ಲ, ಇಲ್ಲವೇ ಇಲ್ಲ. ನಮ್ಮ ಎದೆಯಲ್ಲಿ ಬಿದ್ದಿದ್ದು ಅಕ್ಷರ ಅಲ್ಲವೇ ಅಲ್ಲ. ಅದು ಬೆಂಕಿ. ಸುಡುತ್ತಿದೆ ಅಷ್ಟೆ. ನಮ್ಮ ಹೊಲದಲ್ಲಿ ಬಿತ್ತಿದ್ದು ಬೀಜ ಅಲ್ಲ, ಬ್ರಹ್ಮರಾಕ್ಷಸ.
ಒಂದೋ ಬೀಜ ಸರಿ ಇಲ್ಲ ಅಥವಾ ಹೊಲವೇ ಸರಿ ಇಲ್ಲ. ಇದೆಲ್ಲ ಕಳೆನಾಶಕವನ್ನು ಸಿಂಪಡಿಸದೇ ಇರುವುದರ ಫಲ ಇರಬೇಕು. ಕಳೆ ಹುಲುಸಾಗಿದೆ. ಫಲ ಮಸುಕಾಗಿದೆ. ನಾವು ಕಂಗಾಲಾಗಿದ್ದೇವೆ.

ನನ್ನ ಸ್ನೇಹಿತನೊಬ್ಬ ಒಮ್ಮೆ ‘ನಮ್ಮ ದೇಶದಲ್ಲಿ ಅತ್ಯುನ್ನತ ಪದವಿ ಯಾವುದು?’ ಎಂದು ಕೇಳಿದ. ‘ಐಎಎಸ್’ ಎಂದು ನಾನು ಉತ್ತರಿಸಿದೆ. ‘ಭ್ರಷ್ಟಾಚಾರ ಮಾಡಬಾರದು ಎಂಬ ಸಾಮಾನ್ಯ ತಿಳಿವಳಿಕೆಯನ್ನೂ ಕಲಿಸದ ಅದೆಂತಹ ಪದವಿ’ ಎಂದು ಹಳಿದ. ನಿಜ, ನಾವು ಮಕ್ಕಳಿಗೆ ಕಲಿಸುವ ಶಿಕ್ಷಣವು ಭ್ರಷ್ಟಾಚಾರವನ್ನು
ತೊಲಗಿಸುವಂತೆ ಇರಬೇಕು. ಎಲ್ಲರೂ ಒಟ್ಟಾಗಿ ಬಾಳುವಂತಹ ಹಾದಿಯನ್ನು ಕಲಿಸಬೇಕು. ಯಾವುದೇ ಧರ್ಮವನ್ನು ದ್ವೇಷ ಮಾಡಬಾರದು ಎನ್ನುವುದನ್ನು ಹೇಳಿಕೊಡಬೇಕು. ಇನ್ನೊಬ್ಬರ ಆಸ್ತಿಯನ್ನು ಕಬಳಿಸಬಾರದು ಎಂಬ ಪ್ರಜ್ಞೆಯನ್ನು ಮೂಡಿಸಬೇಕು. ನಮ್ಮ ದೇಶ, ನಮ್ಮ ಪರಿಸರವನ್ನು ಪ್ರೀತಿಸುವುದನ್ನು ಕಲಿಸಬೇಕು. ದೇಶದ ಸಂವಿಧಾನವನ್ನು, ಕಾನೂನನ್ನು ಗೌರವಿಸುವುದನ್ನು ಕಲಿಸಬೇಕು. ಅದಕ್ಕೆ ಪ್ರೀತಿ ಸಾಕು, ಪಾತಾಳ ಗರಡಿ ಬೇಡ.

ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುತ್ತದೆ ನಿಜ. ಆದರೆ ಯಾವ ಅಕ್ಷರ ಬೀಳುತ್ತದೆ ಎನ್ನುವುದು ಮುಖ್ಯ. ಭೂಮಿಗೆ ಬಿದ್ದ ಬೀಜವೂ ಒಂದಲ್ಲಾ ಒಂದು ದಿನ ಫಲ ಕೊಟ್ಟೇ ಕೊಡುತ್ತದೆ. ಆದರೆ ಬಿತ್ತುವ ಬೀಜ ಎಂತಹದ್ದು ಎನ್ನುವುದು ಮುಖ್ಯ. ಯಾರೋ ಎಂದೋ ಬಿತ್ತಿದ ನಕಲಿ ಬೀಜ ಈಗ ಫಲ ಕೊಡುತ್ತಿದೆ. ಅಸಲಿ ಬೀಜ ಬಿತ್ತುವ ಕಾಲ ಬಂದಿದೆ. ಎದೆಗೆ ಬೆಂಕಿ ಬಿದ್ದಿದೆ. ಬೆಂಕಿ ಬಿದ್ದಿದೆ ಎದೆಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.