ADVERTISEMENT

ಅರುಣ್‌ ಸಿನ್ಹಾ ಅಂಕಣ| ವಿರೋಧ ಪಕ್ಷಗಳಲ್ಲಿ ಆಸೆ ಚಿಗುರಿಸಿದ ನಿತೀಶ್‌

ಸ್ವೀಕಾರಾರ್ಹ ನಾಯಕನಾಗಿ ಹೊರಹೊಮ್ಮಲು ಇರುವ ಅವಕಾಶ ಮತ್ತು ಅಡೆತಡೆ

ಅರುಣ್ ಸಿನ್ಹಾ
Published 5 ಸೆಪ್ಟೆಂಬರ್ 2022, 19:30 IST
Last Updated 5 ಸೆಪ್ಟೆಂಬರ್ 2022, 19:30 IST
   

ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದಿಂದ (ಎನ್‌ಡಿಎ) ಹೊರನಡೆದಿರುವ ನಿತೀಶ್‌ ಕುಮಾರ್‌ ಅವರು ಮಹಾಘಟಬಂಧನದ (ಮಹಾ ಮೈತ್ರಿಕೂಟ) ಜತೆ ಪುನಃ ಸೇರಿಕೊಂಡಿರುವುದು ದೇಶದಾದ್ಯಂತ ಬಿಜೆಪಿ ವಿರೋಧಿ ಮತದಾರರಲ್ಲಿ ಹೊಸ ಆಶಾಕಿರಣವನ್ನು ಮೂಡಿಸಿದೆ. ಕಾಂಗ್ರೆಸ್‌ ಪಕ್ಷದ ಸಾಮರ್ಥ್ಯ ಕ್ರಮೇಣ ಕ್ಷೀಣಿಸತೊಡಗಿದ್ದು ಮತ್ತು ವಿರೋಧ ಪಕ್ಷಗಳು ಒಗ್ಗೂಡುವ ಯಾವ ಲಕ್ಷಣಗಳೂ ಗೋಚರಿಸದೆ ಹೋಗಿದ್ದು, ಅವರನ್ನು ಇದುವರೆಗೆ ನಿರಾಶೆಯ ಮಡುವಿನೊಳಗೆ ನೂಕಿಬಿಟ್ಟಿತ್ತು. ಎರಡೂ ಮೈತ್ರಿಕೂಟಗಳಲ್ಲಿ ಈಗ ಉಂಟಾಗಿರುವ ಪಲ್ಲಟದಿಂದಾಗಿ 2024ರ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ವಿರುದ್ಧ ನಿತೀಶ್‌ ಅವರು ವಿರೋಧಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಿರುವ ಕುರಿತು ಊಹಾಪೋಹಗಳು ಹರಿದಾಡುತ್ತಿವೆ.

ಅರುಣ್‌ ಸಿನ್ಹಾ

ನಿತೀಶ್‌ ಅವರು, ತಮ್ಮ ರಾಜಕೀಯ ಬದುಕಿನಲ್ಲಿ ವಿರೋಧಪಕ್ಷಗಳ ಸಂಭಾವ್ಯ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿತವಾಗುತ್ತಿರುವುದು ಇದು ಎರಡನೇ ಬಾರಿ. ಮೊದಲ ಬಾರಿ ಅವರನ್ನು ಈ ಹುದ್ದೆಗೆ ಪರಿಗಣಿಸಿದ ಸಂದರ್ಭವೆಂದರೆ ಅದು 2010ರ ದಶಕದಲ್ಲಿ. ಬಿಹಾರ ವಿಧಾನಸಭೆಗೆ 2010ರಲ್ಲಿ ನಡೆದ ಚುನಾವಣೆಯಲ್ಲಿ ಅವರು ದೊಡ್ಡ ಬಹುಮತ ಪಡೆದಿದ್ದರು. ಬಡತನ ಮತ್ತು ಜಡತ್ವದಿಂದ ಕುಸಿದುಹೋಗಿದ್ದ ಬಿಹಾರವನ್ನು ಮೇಲೆತ್ತಿದ ನಾಯಕನೆಂದು ಬಿಂಬಿತವಾಗಿ ದೇಶದಾದ್ಯಂತ ಜನಪ್ರಿಯರಾಗಿದ್ದರು. ಬಿಜೆಪಿ ಜತೆ ಸಖ್ಯವಿದ್ದರೂ ಮೋದಿ ಅವರನ್ನೂ ಅವರ ಉಗ್ರ ಹಿಂದುತ್ವವನ್ನೂ ಬಹಿರಂಗವಾಗಿಯೇ ವಿರೋಧಿಸುವ ಮೂಲಕ ದೊಡ್ಡ ಗೌರವವನ್ನು ಸಂಪಾದಿಸಿದ್ದರು. ಹೀಗಾಗಿ, 2014ರ ಲೋಕಸಭಾ ಚುನಾವಣೆ ಕಾಲಕ್ಕೆ ಸಾರ್ವಜನಿಕ ಗ್ರಹಿಕೆಯಲ್ಲಿ ಅವರು ಮೋದಿಯವರ ಪ್ರಬಲ ಪ್ರತಿಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರಲ್ಲಿ ಯಾವುದೇ ಆಶ್ಚರ್ಯವಿಲ್ಲ.

ಆದರೆ, ವಾಸ್ತವವಾಗಿ ಅವರು ಮೋದಿಗೆ ಪ್ರತಿ
ಸ್ಪರ್ಧಿಯಾಗಿ ನಿಲ್ಲಲಿಲ್ಲ. 2013ರ ಜೂನ್‌ನಲ್ಲಿ ಗೋವಾದಲ್ಲಿ ನಡೆದ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ
ಯಲ್ಲಿ ಮೋದಿ ಅವರನ್ನು ಆ ಪಕ್ಷದ ಪ್ರಧಾನಿ ಅಭ್ಯರ್ಥಿ
ಯನ್ನಾಗಿ ಘೋಷಿಸಲಾಯಿತು. ಅದನ್ನು ವಿರೋಧಿಸಿ ನಿತೀಶ್‌ ಎನ್‌ಡಿಎಯಿಂದಲೇ ನಿರ್ಗಮಿಸಿದರು. ಆ ಸಂದರ್ಭದಲ್ಲಿ ಸಂಯುಕ್ತ ಪ್ರಗತಿಪರ ಒಕ್ಕೂಟವು (ಯುಪಿಎ) ಸಂಯುಕ್ತ ಜನತಾದಳವನ್ನು ತನ್ನೊಂದಿಗೆ ಸೇರಿಸಿಕೊಳ್ಳುವ ಹಾಗೂ ನಿತೀಶ್‌ ಅವರನ್ನು ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯನ್ನಾಗಿಸುವ ಪ್ರಸ್ತಾವದೊಂದಿಗೆ ಅವರನ್ನು ತಲುಪುವ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಅದೇ ರೀತಿ ನಿತೀಶ್‌ ಸಹ ಯುಪಿಎ ಜತೆ ಸೇರುವ ಇರಾದೆಯನ್ನು ವ್ಯಕ್ತಪಡಿಸಲಿಲ್ಲ. ಅದರ ಪರಿಣಾಮವಾಗಿ 2014ರ ಚುನಾವಣೆಯಲ್ಲಿ ಮೋದಿ ವಿರುದ್ಧದ ಅವರ ಹೋರಾಟವು ಬಿಹಾರಕ್ಕೆ ಸೀಮಿತಗೊಂಡಿತು. ಮೋದಿ ಪ್ರಧಾನಿ ಆಗುವುದನ್ನು ತಡೆಯುವುದಕ್ಕಿಂತ, ಅವರು ತಮ್ಮ ರಾಜಕೀಯ ನೆಲೆಯನ್ನು ಆಕ್ರಮಿಸುವುದನ್ನು ತಡೆಯುವುದಕ್ಕೇ ನಿತೀಶ್‌ ಗಮನವನ್ನು ಕೇಂದ್ರೀಕರಿಸಬೇಕಾಯಿತು. ಈ ಏಕಾಂಗಿ ಹೋರಾಟವು ನಿತೀಶ್‌ ಅವರಿಗೆ ಸುಸ್ತು ಹೊಡೆಸಿತು.

ADVERTISEMENT

ಈಗ ಅವರು ಹಿಂದೆ ಇದ್ದುದಕ್ಕಿಂತಲೂ ಉತ್ತಮ ಸ್ಥಿತಿಯಲ್ಲಿದ್ದಾರೆ ಮತ್ತು ಮಹಾಘಟಬಂಧನದ ಭಾಗವಾಗಿದ್ದಾರೆ. ಅಂತೆಯೇ ಈ ಮಹಾಘಟ
ಬಂಧನವು ಯುಪಿಎ ಅಂಗವಾಗಿದೆ. ಜಮ್ಮು–ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ
ವನ್ನು ಮೋದಿ ನೇತೃತ್ವದ ಸರ್ಕಾರವು ರದ್ದುಗೊಳಿಸಿದಾಗ, ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿಗೆ ಸಂಬಂಧಿಸಿದಂತೆ ನಿತೀಶ್‌ ಅವರಿಂದ ಹೇಳಿಕೊಳ್ಳುವಂತಹ ಪ್ರತಿರೋಧ ವ್ಯಕ್ತ
ವಾಗಿರಲಿಲ್ಲ. ಇದರಿಂದ ಬಹುತ್ವದ ಪರ ಎಂಬ ಅವರ ವ್ಯಕ್ತಿಚಿತ್ರಣಕ್ಕೆ ಪೆಟ್ಟು ಬಿದ್ದಿದ್ದರೂ ತಟಸ್ಥ–ಎಡ ಸಿದ್ಧಾಂತದ ಪಕ್ಷಗಳಿಗೆ ಅವರು ಈಗಲೂ ಸ್ವೀಕಾರಾರ್ಹ ನಾಯಕ. ಭ್ರಷ್ಟಾಚಾರಮುಕ್ತ, ಚಿಂತನಶೀಲ ರಾಜಕಾರಣಿಯಾಗಿ ಅವರು ಕಾಣುತ್ತಿರುವುದೇ ಇದಕ್ಕೆ ಕಾರಣ ಆಗಿರಬಹುದು. ಹೀಗಿದ್ದೂ ಅವರನ್ನು ವಿರೋಧಪಕ್ಷಗಳ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸುವಲ್ಲಿ ಹಲವು ಅಡೆತಡೆಗಳೂ ಇವೆ.

ಮೊದಲನೆಯದಾಗಿ, ರಾಹುಲ್‌ ಗಾಂಧಿಯವರೇ ಯುಪಿಎಯ ಮೊದಲ ಆಯ್ಕೆ. ಆದರೆ, ಅವರು ಪ್ರಧಾನಿ ಅಭ್ಯರ್ಥಿಯಾಗುವ ಪ್ರಸ್ತಾವವನ್ನು ಒಪ್ಪಲಾರರು ಎಂದೂ ಹೇಳಲಾಗುತ್ತಿದೆ. ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಕುಟುಂಬದ ಯಾರನ್ನೂ ಆಯ್ಕೆ ಮಾಡುವುದು ಬೇಡ ಎಂದು ಹೇಳಿದಂತೆಯೇ ಪ್ರಧಾನಿ ಅಭ್ಯರ್ಥಿಯಾಗುವ ಅವಕಾಶವನ್ನೂ ಅವರು ನಿರಾಕರಿಸುವ ಸಾಧ್ಯತೆ ಇದೆ. ವಂಶಾಡಳಿತದ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ದಾಳಿ ನಡೆಸಬಾರದು ಎನ್ನುವುದು ಅವರ ಈ ನಿರ್ಧಾರದ ಹಿಂದಿನ ತಂತ್ರವಾಗಿರಬಹುದು. ಈ ಊಹೆ ಏನಾದರೂ ನಿಜವಾದರೆ ಪ್ರಧಾನಿ ಹುದ್ದೆಗಾಗಿ ಗಾಂಧಿ ಕುಟುಂಬಕ್ಕೆ ಹೊರತಾದ ವ್ಯಕ್ತಿಯನ್ನೇ ಶೋಧಿಸಬೇಕಾಗುತ್ತದೆ. ಆಗ ನಿತೀಶ್‌ ಅವರೇ ಅತ್ಯುತ್ತಮ ಆಯ್ಕೆಯಾಗಬಲ್ಲರು.

ಹೀಗಿದ್ದೂ ಇಲ್ಲಿ ಮತ್ತೊಂದು ಸಾಧ್ಯತೆಯೂ ಇದೆ. ರಾಹುಲ್‌ ಅಥವಾ ಪ್ರಿಯಾಂಕಾ ಗಾಂಧಿ ವಾದ್ರಾ ಅಭ್ಯರ್ಥಿಯಾಗದಿದ್ದರೆ ಕಾಂಗ್ರೆಸ್‌ ಪಕ್ಷದಲ್ಲೇ ಬೇರೊಬ್ಬರನ್ನು ಆಯ್ಕೆ ಮಾಡಬಹುದು ಎನ್ನುವುದೇ ಆ ಸಾಧ್ಯತೆ. ಆಗ ನಿತೀಶ್‌ ಅವರ ಅವಕಾಶ ಕೈತಪ್ಪುವ ಸಂಭವವಿದೆ. ಸಂಸತ್ತಿನಲ್ಲಿರುವ ಅಥವಾ ಆಡಳಿತಕ್ಕೆ ಬರುವ ಮೈತ್ರಿಕೂಟದಲ್ಲಿರುವ ಅತಿದೊಡ್ಡ ಪಕ್ಷದ ನಾಯಕನೇ ಸರ್ಕಾರದ ನೇತೃತ್ವವನ್ನೂ ವಹಿಸಬೇಕು ಎಂಬುದು ಒಪ್ಪಿತ ರೂಢಿ. ಹೀಗಾಗಿ ಯಾರೂ ಅದನ್ನು ವಿರೋಧಿಸಲಾರರು.

ಇನ್ನೊಂದು ಸಾಧ್ಯತೆಯೂ ಇದೆ. ಕಾಂಗ್ರೆಸ್‌ವೊಂದನ್ನು ಹೊರತುಪಡಿಸಿ ಇತರ ವಿರೋಧ ಪಕ್ಷಗಳಿಂದ ನಿತೀಶ್‌ ಅವರು ಬೆಂಬಲ ಗಳಿಸಬಹುದು. ಲೋಹಿಯಾವಾದದ ಹಿನ್ನೆಲೆಯುಳ್ಳ ‘ಜನತಾದಳ ಪರಿವಾರ’ದ ಆರ್‌ಜೆಡಿ, ಜೆಡಿಎಸ್‌, ಸಮಾಜವಾದಿ ಪಕ್ಷ (ಎಸ್‌ಪಿ), ಭಾರತೀಯ ರಾಷ್ಟ್ರೀಯ ಲೋಕದಳ (ಐಎನ್‌ಎಲ್‌ಡಿ) ಮತ್ತು ನಿತೀಶ್‌ ಅವರದೇ ಸ್ವಂತ ಜೆಡಿಯು ಪಕ್ಷ ಅವರ ಬೆಂಬಲಕ್ಕೆ ನಿಲ್ಲಬಹುದು. ಜೆಡಿಎಸ್‌ನ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಅವರಂತೂ ಈಗಾಗಲೇ ನಿತೀಶ್‌ ಅವರ ನಾಯಕತ್ವಕ್ಕೆ ಪರೋಕ್ಷವಾಗಿ ಒಪ್ಪಿಗೆ ಸೂಚಿಸಿದ್ದಾರೆ. ಆರ್‌ಜೆಡಿ ಸಹ ಅವರ ಜತೆಗಿದೆ. ಎಸ್‌ಪಿ ಮತ್ತು ಐಎನ್‌ಎಲ್‌ಡಿ ಕೂಡ ಅವರನ್ನು ಬೆಂಬಲಿಸುವ ಸಾಧ್ಯತೆ ಇದೆ.

ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಮತ್ತು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಎರಡೂ ಮೊದಲಿನಿಂದಲೂ ಕಾಂಗ್ರೆಸ್‌ ನಾಯಕತ್ವವನ್ನು ಪ್ರಶ್ನಿಸುತ್ತಲೇ ಬಂದಿವೆ. ಒಕ್ಕೂಟದ ಅಭ್ಯರ್ಥಿಯಾಗಿ ರಾಹುಲ್‌ ಅವರನ್ನೋ ಅಥವಾ ಕಾಂಗ್ರೆಸ್‌ ಪಕ್ಷದ ಬೇರೆ ಯಾವುದೇ ನಾಯಕನನ್ನೋ ಆ ಪಕ್ಷಗಳು ಒಪ್ಪುವ ಸಾಧ್ಯತೆ ಕಡಿಮೆ. ಆಗಲೂ ನಿತೀಶ್‌ ಅವರೇ ಸ್ವೀಕಾರಾರ್ಹವಾಗಿ ಗೋಚರಿಸಬಹುದು.

ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಅವರು ಪಟ್ನಾದಲ್ಲಿ ಇತ್ತೀಚೆಗೆ ನಿತೀಶ್‌ ಅವರನ್ನು ಭೇಟಿ ಮಾಡಿರುವುದು ಈ ಹಿನ್ನೆಲೆಯಲ್ಲಿ ಮಹತ್ವ ಪಡೆದು ಕೊಂಡಿದೆ. ಜಂಟಿ ಪತ್ರಿಕಾಗೋಷ್ಠಿಯಲ್ಲಿ ಎದುರಾದ ‘ನಿತೀಶ್‌ ಅವರು ಪ್ರಧಾನಿ ಅಭ್ಯರ್ಥಿಯಾಗಬಹುದೇ’ ಎಂಬ ಪ್ರಶ್ನೆಗೆ, ‘ದೇಶದ ಅತ್ಯುತ್ತಮ ಹಾಗೂ ಹಿರಿಯ ನಾಯಕರಲ್ಲಿ ನಿತೀಶ್‌ ಕೂಡ ಒಬ್ಬರಾಗಿದ್ದಾರೆ. ಒಕ್ಕೂಟದ ಪಕ್ಷಗಳೆಲ್ಲ ಒಟ್ಟಿಗೆ ಕುಳಿತು ಪ್ರಧಾನಿ ಅಭ್ಯರ್ಥಿ ಯಾರಾಗಬೇಕೆಂದು ನಿರ್ಧರಿಸುತ್ತವೆ’ ಎಂದು ರಾವ್‌ ಉತ್ತರಿಸಿದ್ದರು. ಅವರ ಈ ಹೇಳಿಕೆಯಿಂದ ಟಿಆರ್‌ಎಸ್‌ ಕೂಡ ನಿತೀಶ್‌ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ನೋಡುತ್ತಿದೆ ಎಂದೇ ಭಾವಿಸಬಹುದು.

ರಾವ್‌ ಅವರ ಹೇಳಿಕೆಯು ಹಿಂದಿನ ತನ್ನ ನಿಲುವಿನಿಂದ ಟಿಆರ್‌ಎಸ್‌ ಹಿಂದೆ ಸರಿದುದರ ಸಂಕೇತವಾಗಿದೆ. ಟಿಎಂಸಿಯಂತೆಯೇ ಟಿಆರ್‌ಎಸ್‌ ಕೂಡ ವಿರೋಧ ಪಕ್ಷಗಳನ್ನು ಒಗ್ಗೂಡಿಸುವಲ್ಲಿ ತಾನೇ ಊರುಗೋಲಾಗಲು ಹೊರಟಿತ್ತು. ಕಾಂಗ್ರೆಸ್‌ನಿಂದ ಉಳಿದ ವಿರೋಧ ಪಕ್ಷಗಳನ್ನು ದೂರ ಸರಿಸಲು ಕೂಡ ಪ್ರಯತ್ನಿಸಿತ್ತು. ಕೆಸಿಆರ್‌ ಅವರು ನಿತೀಶ್‌ ಪರವಾಗಿ ಆಡಿರುವ ಮಾತುಗಳು ಕಾಂಗ್ರೆಸ್ಸೇತರ ನಾಯಕ ಪ್ರಧಾನಿ ಅಭ್ಯರ್ಥಿಯಾಗಲು ತನ್ನ ಸಹಮತವಿದೆ ಎನ್ನುವುದರ ದ್ಯೋತಕ.

ನಿತೀಶ್‌ ಅವರನ್ನು ಟಿಎಂಸಿ ಹೇಗೆ ನೋಡಲಿದೆ ಎನ್ನುವುದು ಇನ್ನೂ ಅಸ್ಪಷ್ಟ. ಮಮತಾ ಬ್ಯಾನರ್ಜಿ ಮತ್ತು ನಿತೀಶ್‌ ನಡುವೆ ಸೌಹಾರ್ದ ಸಂಬಂಧವಿದೆ ಎನ್ನುವುದು ನಿಜವಾದರೂ ‘ರಾಷ್ಟ್ರಮಟ್ಟದ ಪಾತ್ರ’ ನಿರ್ವಹಿಸಲು ಮಮತಾ ಉತ್ಸುಕರಾಗಿರುವುದನ್ನು ಅಲ್ಲಗಳೆಯು
ವಂತಿಲ್ಲ. ಅವರು, ಈಗಾಗಲೇ ವಿರೋಧಪಕ್ಷಗಳ ಎರಡು ಸಭೆಗಳನ್ನು ನಡೆಸಿದ್ದು, ಶರದ್‌ ಪವಾರ್‌ ಅವರೊಂದಿಗೂ ಚರ್ಚಿಸಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ದೀರ್ಘ ಸಮಯದಿಂದ ಸೇವೆ ಸಲ್ಲಿಸುತ್ತಿರುವ ಮಮತಾ ಪ್ರಧಾನಿ ಹುದ್ದೆಗೇರುವ ಬಯಕೆ ಹೊಂದಿರುವುದು ಸಹಜವಾಗಿಯೇ ಇದೆ. ಅವರ ಪಾಲಿಗೆ ‘ರಾಷ್ಟ್ರ ಮಟ್ಟದ ಪಾತ್ರ’ ನಿರ್ವಹಿಸುವುದು ಎಂದರೆ ಪ್ರಧಾನಿ ಹುದ್ದೆ ಅಲಂ ಕರಿಸುವುದೇ ಹೊರತು ಈ ಹಿಂದೆ ನಿಭಾಯಿಸಿದ ಕೇಂದ್ರ ಸಚಿವರ ಹುದ್ದೆಗೆ ಏರುವುದಲ್ಲ. ಅದರರ್ಥ ವಿರೋಧ
ಪಕ್ಷಗಳ ಒಕ್ಕೂಟದಲ್ಲೇ ಬಹುಕೋನದ ಸ್ಪರ್ಧೆ. ಹಾಗಾದಾಗ ನಿತೀಶ್‌ ಅಭ್ಯರ್ಥಿಯಾಗುವ ಅವಕಾಶಗಳು ಕ್ಷೀಣಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.