*ವಿವಾಹಿತ ಮಹಿಳೆ. ಮದುವೆಯಾಗಿ 5 ವರ್ಷ ಆಗಿದೆ ಇಬ್ಬರು ಮಕ್ಕಳಿದ್ದಾರೆ. ಪತಿ ಮೊದಲು ಒಬ್ಬ ಮಹಿಳೆಯೊಂದಿಗೆ ಸಂಬಂಧವಿರಿಸಿಕೊಂಡಿದ್ದರು. ಅದನ್ನುತಿಳಿದು ಈ ರೀತಿ ಮಾಡುವುದು ಸರಿಯಲ್ಲ ಎಂದು ಅವರಿಗೆ ಬುದ್ಧಿ ಹೇಳಿದೆ. ಅದಕ್ಕೆ ಅವರು ತಪ್ಪಾಯಿತು ಎಂದು ಆ ಮಹಿಳೆಯಿಂದ ದೂರವಾದರು. ಇತ್ತೀಚೆಗೆ ಪರಿಚಿತ ಹುಡುಗಿಯೊಬ್ಬಳು ‘ನಿಮ್ಮ ಪತಿ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ‘ ಎಂದು ಹೇಳುತ್ತಿದ್ದಾಳೆ. ಪತಿ, ತಾನು ಈ ರೀತಿ ನಡೆದುಕೊಂಡಿಲ್ಲ ಎಂದು ಹೇಳುತ್ತಿದ್ದಾರೆ. ಆ ಹುಡುಗಿ ತುಂಬಾ ಒಳ್ಳೆಯವಳು, ಈ ರೀತಿ ಏಕೆ ಆಪಾದನೆ ಮಾಡುತ್ತಿದ್ದಾಳೆ ಎಂದು ತಿಳಿಯುತ್ತಿಲ್ಲ. ಇವರಿಬ್ಬರಲ್ಲಿ ಯಾರು ಸುಳ್ಳು ಹೇಳುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ಸಲಹೆ ನೀಡಿ.
ಹೆಸರು ಊರು ತಿಳಿಸಿಲ್ಲ.
ಪತಿಯನ್ನು ಸರಿದಾರಿಗೆ ತಂದು ಕುಟುಂಬದ ನೆಮ್ಮದಿಯನ್ನು ಉಳಿಸಿಕೊಳ್ಳುವ ನಿಮ್ಮ ಪ್ರಯತ್ನ ಉತ್ತಮ ವಾದದ್ದೇ. ಆದರೆ ಇದಕ್ಕೆ ನಿಮ್ಮ ಪತಿಯ ಸಹಕಾರವೂ ಬೇಕಲ್ಲವೇ? ಅವರು ಜವಾಬ್ದಾರಿಯುತವಾಗಿ ವರ್ತಿಸು ವುದನ್ನು ಕಲಿಯದಿದ್ದರೆ ನಿಮಗೆ ನಿರಾಸೆ ಕಾದಿರಬಹುದಲ್ಲವೇ? ಹಾಗಾಗಿ ಹುಡುಗಿ ಹೇಳುತ್ತಿರುವುದರ ಸತ್ಯಾ ಸತ್ಯತೆಯನ್ನು ಪರೀಕ್ಷಿಸುವ ಬದಲಾಗಿ ನಿಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳುವುದರ ಕಡೆ ಹೆಚ್ಚಿನ ಗಮನ ನೀಡಿ.
ಪತಿಗೆ ಹಿಂದೊಮ್ಮೆ ಹೊರಸಂಬಂಧವಿತ್ತು ಎಂದ ಮೇಲೆ ಅಂತಹ ಆಕರ್ಷಣೆಗೆ ಒಳಗಾಗುವ ಪ್ರವೃತ್ತಿ ಅವರೊ ಳಗೆ ಇರಬೇಕಲ್ಲವೇ? ನಿಮ್ಮ ಬುದ್ಧಿವಾದದಿಂದ ಆಳವಾಗಿ ಬೇರೂರಿರುವ ಅಂತಹ ಪ್ರವೃತ್ತಿಗಳು ಮಾಯ ವಾಗಿರುವ ಸಾಧ್ಯತೆಗಳಿಲ್ಲ. ಹಾಗಾಗಿ ನಿಮ್ಮಿಬ್ಬರ ವೈವಾಹಿಕ ಸಂಬಂಧ ಮತ್ತು ಲೈಂಗಿಕ ಅಗತ್ಯಗಳ ಕುರಿತು ಪತಿಯ ಜೊತೆ ಮುಕ್ತವಾಗಿ ಚರ್ಚೆಮಾಡುವ ಅಗತ್ಯವಿದೆ. ಹೊರಸಂಬಂಧದಲ್ಲಿ ಪತಿಗೆ ದೊರಕುತ್ತಿದ್ದು ಏನು? ಅದನ್ನು ದಾಂಪತ್ಯದಲ್ಲಿ ಹುಡುಕಿಕೊಳ್ಳುವುದ ಏಕೆ ಸಾಧ್ಯವಾಗುತ್ತಿಲ್ಲ? ಇಬ್ಬರಿಗೂ ಮತ್ತೊಬ್ಬರ ಲೈಂಗಿಕ ಅಗತ್ಯಗಳು ಆಸಕ್ತಿಗಳು ಆಯ್ಕೆಗಳು, ಮಿಲನದ ರೀತಿ, ಸಮಯ-ಮುಂತಾದ ಎಲ್ಲಾ ವಿಷಯಗಳ ಪರಿಚಯ ವಿದೆಯೇ? ಈ ಎಲ್ಲಾ ವಿಚಾರಗಳನ್ನು ಆಗಾಗ ಚರ್ಚೆ ಮಾಡುತ್ತಿರಬೇಕು. ಒಬ್ಬರು ಮತ್ತೊಬ್ಬರ ಲೈಂಗಿಕ ಅಗತ್ಯವನ್ನು ಸಂಪೂರ್ಣವಾಗಿ ಪೂರೈಸಲೇಬೇಕೆಂದಿಲ್ಲ. ಆದರೆ ಲೈಂಗಿಕವಾಗಿ ಹೆಚ್ಚುಹೆಚ್ಚು ಪರಿಚಿತರಾದರೆ ಇಬ್ಬರಿಗೂ ಪೂರ್ಣ ತೃಪ್ತಿಯನ್ನು ಪಡೆಯುವ ದಾರಿಗಳನ್ನು ಸುಲಭವಾಗುತ್ತದೆ.
ಲೈಂಗಿಕ ಸಂಬಂಧದ ಹೊರತಾಗಿ ನಿಮ್ಮಿಬ್ಬರ ನಡುವಿನ ಆತ್ಮೀಯತೆ ಹೇಗಿದೆ? ಇಬ್ಬರೂ ಮತ್ತೊಬ್ಬರೊಡನೆ ಸುಮ್ಮನೆ ಸಮಯ ಕಳೆಯಲು ಇಷ್ಟಪಡುತ್ತೀರಾ? ಒಟ್ಟಾಗಿ ಎಷ್ಟು ಸಮಯ ಕಳೆಯುತ್ತೀರಿ? ಅಂತಹ ಸಮಯದಲ್ಲಿ ಮತ್ತೊಬ್ಬರಿಗೆ ಹೇಗೆ ಸ್ಪಂದಿಸುತ್ತೀರಿ? ಕುಟುಂಬಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಗಳಲ್ಲಿ ಮುಕ್ತವಾಗಿ ಮಾತನಾಡುವುದು ಇಬ್ಬರಿಗೂ ಸಾಧ್ಯವಾಗುತ್ತಿದೆಯೇ? ಇಂತಹ ಹಲವಾರು ಪ್ರಶ್ನೆಗಳಿಗೆ ಉತ್ತರ ಹುಡುಕೊಳ್ಳಿ. ವಾರಕ್ಕೆ ಒಂದೆರೆಡು ಬಾರಿಯಾದರೂ ಮಕ್ಕಳ ಜವಾಬ್ದಾರಿಗಳಿಲ್ಲದೆ ನಿಮ್ಮ ಖಾಸಗಿ ಬದುಕಿಗೆ ಸಮಯ ಹೊಂದಿಸಿಕೊಳ್ಳಿ. ಇಲ್ಲದಿದ್ದರೆ ಒಟ್ಟಾಗಿ ಬದುಕುತ್ತಿರುವಾಗಲೂ ಮಾನಸಿಕವಾಗಿ ದೂರವಾಗುವ ಸಾಧ್ಯತೆಗಳಿರುತ್ತವೆ. ಕೊನೆಯದಾಗಿ ಇಂತಹ ಘಟನೆಗಳನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ ಎನ್ನುವ ಸಂದೇಶವನ್ನು ಪತಿಗೆ ಸ್ಪಷ್ಟವಾಗಿ ತಲುಪಿಸಿ. ನೀವು ಎಲ್ಲಾ ಘಟನೆಗಳಲ್ಲಿ ಸತ್ಯವನ್ನು ಹುಡುಕಿ ಮಧ್ಯಸ್ಥಿಕೆ ನಡೆಸುವ ಅಗತ್ಯವಾದರೂ ಏನಿದೆ? ಅನುಚಿತವಾಗಿ ವರ್ತಿಸಿದರೆ ಪತಿ ಅದರ ಪರಿಣಾಮಗಳನ್ನು ಎದುರಿಸ ಬೇಕಲ್ಲವೇ? ನೀವು ಅವರ ಜೊತೆ ಬಾಳಲು ಒಪ್ಪಿಕೊಂಡಿದ್ದೀರಿ ಎಂದ ಮಾತ್ರಕ್ಕೆ ಅವರ ದುರ್ವರ್ತನೆಗಳನ್ನು ಸಹಿಸಿಕೊಳ್ಳಬೇಕೆಂದು ಅರ್ಥವೇ? ಸಂಬಂಧಗಳಿಗೆ ವಂಚನೆ ಮಾಡದಂತೆ ಬದುಕುವ ಜವಾಬ್ದಾರಿ ನಿಮ್ಮ ಪತಿಗೆ ಇರದಿದ್ದರೆ ನಿಮ್ಮ ಬುದ್ಧಿವಾದಗಳು ಕೆಲಸ ಮಾಡುವುದಿಲ್ಲ. ನಮ್ಮ ವರ್ತನೆಗಳಿಗೆ ತಾವೇ ಜವಾಬ್ದಾರಿ ಹೊರುವುದು ಅನಿವಾರ್ಯವಾದಾಗ ಮಾತ್ರ ನಮ್ಮ ಪ್ರವೃತ್ತಿಗಳು ಹಿಡಿತಕ್ಕೆ ಬರುವ ಸಾಧ್ಯತೆಗಳಿರುತ್ತವೆ. ನೀವು ಪತಿಗೆ ಬದಲಾಗಲು ಅವಕಾಶ ಕೊಟ್ಟು ಅವರಿಗೆ ಬೆಂಬಲ ನೀಡಲು ಸಿದ್ಧರಿದ್ದರೆ ಸಾಕು. ಕೊನೆಗೂ ಅವರ ವರ್ತನೆಗಳಿಗೆ ಅವರೇ ಜವಾಬ್ದಾರರು ಎನ್ನುವುದನ್ನು ಮರೆಯುವಂತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.