ಜಗತ್ತಿನಲ್ಲಿ ಕ್ರಾಂತಿಗೆ ಕಾರಣರಾದ ಬಹುತೇಕ ನೇತಾರರು ವಿಮರ್ಶೆ ಮತ್ತು ಸ್ವವಿಮರ್ಶೆಯ ಅಗತ್ಯವನ್ನು ಪ್ರತಿಪಾದಿಸಿದ್ದಾರೆ. ಕ್ರಾಂತಿಕಾರಿ ಲೆನಿನ್ ನಿಲುವನ್ನು ಇಲ್ಲಿ ಪ್ರಸ್ತಾಪಿಸ ಬಹುದು. ಮ್ಯಾಕ್ಸಿಂ ಗಾರ್ಕಿ ಅವರಂತೆ ಟಾಲ್‍ಸ್ಟಾಯ್ ಅವರು ರಷ್ಯಾ ಕ್ರಾಂತಿಯ ಜೊತೆಗಾರರಲ್ಲ. ಹಾಗೆಂದು ಅವರ ಕೃತಿಗಳನ್ನು ನಿರ್ಲಕ್ಷಿಸಬಾರದೆಂದು ಲೆನಿನ್ ಪ್ರತಿಪಾದಿಸುತ್ತಾರೆ.
‘ಟಾಲ್‍ಸ್ಟಾಯ್ ಅವರ ದೃಷ್ಟಿಕೋನವು ಸಮಕಾಲೀನ ವೈರುಧ್ಯಗಳನ್ನು ಪ್ರಕಟಿಸಿದ್ದು, ಅದರಿಂದ ಶ್ರಮಿಕವರ್ಗವು ಶತ್ರುಗಳನ್ನು ಅರಿಯಬಹುದು ಮತ್ತು ತನ್ನ ದೌರ್ಬಲ್ಯ ಗಳನ್ನೂ ತಿಳಿಯಬಹುದು’ ಎಂದು ವಿವರಿಸಿದ್ದಾರೆ. ಅಲ್ಲದೆ, ಕಾರ್ಮಿಕ ವರ್ಗದ ಹೋರಾಟವನ್ನು ವಿಮರ್ಶಿಸಿ, ಕೇವಲ ತುಟ್ಟಿಭತ್ಯೆಯಂತಹ ಬೇಡಿಕೆಗಳಿಗೆ ಸೀಮಿತವಾಗದೆ ವಿಶ್ವವ್ಯಾಪಿ ಶ್ರಮಿಕವರ್ಗದ ಹೋರಾಟಕ್ಕೆ ಪೂರಕವಾಗಬೇಕೆಂದು ತಿಳಿಹೇಳಿದ್ದಾರೆ. ಅಂದರೆ ಹೊರಗಿನಿಂದ ಬರುವ ವಿಮರ್ಶೆಯನ್ನು ಪರಿಶೀಲಿಸುವ ಮತ್ತು ಒಳಗಿನ ವಿಮರ್ಶೆಯಿಂದ ಪರಿವರ್ತಿಸಿಕೊಳ್ಳುವ ಪ್ರಕ್ರಿಯೆಗೆ ಒಡ್ಡಿಕೊಳ್ಳುವುದು ಅಗತ್ಯ ಎಂದರ್ಥ.
ಹೀಗೆಂದ ಕೂಡಲೇ ತಾವು ನಂಬಿದ ಸಿದ್ಧಾಂತದ ಮೂಲ ಆಶಯವನ್ನು ಬಿಟ್ಟುಕೊಡಬೇಕಾಗಿಲ್ಲ. ಕಾಲಕಾಲಕ್ಕೆ ಸಮಕಾಲೀನವೂ ಪ್ರಸ್ತುತವೂ ಆಗುವ ಅನಿವಾರ್ಯವನ್ನು ಅರ್ಥಮಾಡಿಕೊಂಡು ಸೈದ್ಧಾಂತಿಕ ಜೀವಶಕ್ತಿಯನ್ನು ಉಳಿಸುವ, ಬೆಳೆಸುವ ಸೃಜನಾತ್ಮಕ ದೃಷ್ಟಿಕೋನ ಬೇಕು. ಪಕ್ಷ, ಪಂಥ, ಧರ್ಮಗಳ ಸಾಂಸ್ಥಿಕ ನೇತಾರರು ಈ ಅಂಶವನ್ನು ಅಂತರ್ಗತ ಮಾಡಿಕೊಂಡು ನಿಜವಾದ ಮಾನವೀಯ ಸಮಾಜಕ್ಕಾಗಿ ಶ್ರಮಿಸಬೇಕು. ಆದರೆ ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶದಲ್ಲಿ ಪೂರ್ವಗ್ರಹ ಪರಿಣತಿಯೇ ಪ್ರಮುಖ ಮುಖ ಮತ್ತು ಮಾತಾಗಿ ಠೇಂಕಾರ ಮಾಡುತ್ತಿದೆ. ಇದು ರಾಜಕೀಯ ಕ್ಷೇತ್ರಕ್ಕೆ ಮಾತ್ರ ಮಿತಿಗೊಂಡಿಲ್ಲ. ಎಲ್ಲ ಕ್ಷೇತ್ರಗಳಿಗೂ ವ್ಯಾಪಿಸುತ್ತಿದೆ.
ರಾಜಕೀಯ ಮತ್ತು ಧರ್ಮಗಳೊಂದಾದ ಇಂದಿನ ಸನ್ನಿವೇಶದಲ್ಲಿ ವಿಚಾರ ವಿಶ್ಲೇಷಣೆಯ ಜಾಗದಲ್ಲಿ ಏಕಮುಖೀ ಜಡ ವಾದ ವೈಖರಿ ವಿಜೃಂಭಿಸುತ್ತಿದೆ. ಆದರೆ ಧಾರ್ಮಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಕ್ಷೇತ್ರಗಳು ಕೂಡ ಏಕಮುಖೀ ವಾದದಲ್ಲಿ ವಿಜೃಂಭಿಸಬೇಕೇ? ಆಯಾ ವಿಷಯದ ವಿವಿಧ ಆಯಾಮಗಳನ್ನು ಅರ್ಥೈಸಲು, ತಾವು ನಂಬಿದ ಧರ್ಮ, ಪಕ್ಷ, ಪಂಥಗಳ ಒಳಗಿದ್ದೂ ಹೊರಗೆ ನಿಂತು ನೋಡುವ ಒಳನೋಟ ಬೇಕಲ್ಲವೇ? ಆತಂಕದ ಸಂಗತಿಯೆಂದರೆ, ಕೆಲವು ಕಾನೂನು ತಜ್ಞರ ಅಭಿಪ್ರಾಯ ಗಳಲ್ಲೂ ಇತ್ತೀಚೆಗೆ ಧಾರ್ಮಿಕ ಮೂಲಭೂತವಾದದ ವಾಸನೆ ಮತ್ತು ಪಕ್ಷ ಪೂರ್ವಗ್ರಹ ಕಾಣಿಸುತ್ತಿವೆ. ಕೆಲವು ಮಠ-ಮಾಧ್ಯಮಗಳಲ್ಲೂ ಈ ಪ್ರವೃತ್ತಿ ಪ್ರಕಟವಾಗುತ್ತಿದೆ. ಎಲ್ಲ ಧರ್ಮಗಳೂ ರಾಜಕೀಯ ಪಕ್ಷಗಳೂ ಪಂಥಗಳೂ ಸೇರಿದಂತೆ ಒಟ್ಟು ವೈಚಾರಿಕ ವಲಯವು ಮೂಲಭೂತ
ವಾದದಿಂದ ಮುಕ್ತವಾಗಬೇಕಾಗಿದೆ. ಇದಕ್ಕೆ ಒಳವಿಮರ್ಶೆಯ ಅಗತ್ಯವಿದೆ.
ನಿಜವಿಮರ್ಶೆ ಎನ್ನುವುದು ಪರನಿಂದೆಯಲ್ಲ; ಒಳವಿಮರ್ಶೆ ಎನ್ನುವುದು ಆತ್ಮವಿಶ್ವಾಸವನ್ನು ಕುಗ್ಗಿಸುವ ಕ್ರಿಯೆಯಲ್ಲ. ನಮ್ಮಲ್ಲಿ ನಿಜವಿಮರ್ಶಕರು ಮತ್ತು ಒಳವಿಮರ್ಶಕರ ಒಂದು ಪರಂಪರೆಯೇ ಇದೆ. ಕನ್ನಡದಲ್ಲಿ ಪಂಪ ಕವಿಯು ರಾಜಪ್ರಭುತ್ವದ ಮೊದಲ ಒಳವಿಮರ್ಶಕ. ಆಶ್ರಿತ ರಾಜನನ್ನು ಕಾವ್ಯನಾಯಕ ಅರ್ಜುನನಿಗೆ ಸಮೀಕರಿ ಸಿದ್ದರೂ ಪ್ರತಿನಾಯಕ ಕರ್ಣನೇ ಮಹಾಭಾರತದಲ್ಲಿ ಮುಖ್ಯನೆಂದು ಹೇಳಿ ಒಳಪ್ರತಿರೋಧವನ್ನು ಒಡ್ಡಿದ್ದಲ್ಲದೆ ‘ಪೆರರೀವುದೇಂ ಪೆರರಿಂದಮಪ್ಪುದೇಂ’ ಎಂದು ಪರೋಕ್ಷವಾಗಿ ರಾಜನಿಗೆ ಹೇಳಿದ. ಜೈನಧರ್ಮ ದೊಳಗಿದ್ದೂ ಅದನ್ನು ಮೀರಿ ಮನುಷ್ಯರೆಲ್ಲ ಒಂದೇ ಜಾತಿ ಎಂದು ಸಾರಿದ.
ಆತ್ಮನಿರೀಕ್ಷೆಗೆ ಹನ್ನೆರಡನೇ ಶತಮಾನದ ಬಸವಣ್ಣ ನವರಿಗಿಂತ ಉತ್ತಮ ಆದರ್ಶ ಬೇಕಾಗಿಲ್ಲ. ಬಸವಣ್ಣ ನವರ ಭಕ್ತಿಸ್ಥಲದ ವಚನಗಳು ನಿಜಭಕ್ತನ ಆತ್ಮನಿರೀಕ್ಷೆಯ ಅತ್ಯುತ್ತಮ ರಚನೆಗಳಾಗಿವೆ. ತಮ್ಮೊಳಗನ್ನು ತಾವೇ ನೋಡಿಕೊಳ್ಳುತ್ತ ಅನಪೇಕ್ಷಿತ ಅಂಶಗಳಿಂದ ಹೊರಬರುವ ಪ್ರಾಮಾಣಿಕ ಪ್ರತೀಕವಾಗುವ ಬಸವಣ್ಣ ನವರ ಈ ವಚನಗಳು ಇಂದಿಗೂ ಆದರ್ಶಪ್ರಾಯವಾಗಿವೆ. ಈ ಸ್ವವಿಮರ್ಶೆಯ ಪ್ರಾಮಾಣಿಕತೆಯು ವ್ಯಕ್ತಿಗಳಿಗಷ್ಟೇ ಅಲ್ಲ, ಪಕ್ಷ, ಪಂಥ ಮತ್ತು ವಿಶೇಷವಾಗಿ ಧಾರ್ಮಿಕ ಮೂಲಭೂತವಾದಿಗಳಿಗೆ ಬೇಕಾಗಿದೆ.
ವಚನ ಚಳವಳಿಯಲ್ಲಿ ಒಳವಿಮರ್ಶಕರಿಗೆ ಇದ್ದ ಮಹತ್ವವೂ ಇಲ್ಲಿ ಉಲ್ಲೇಖನೀಯ; ಅನುಭವ ಮಂಟಪದ ಅಧ್ವರ್ಯರಾದ ಅಲ್ಲಮಪ್ರಭುಗಳೇ ಶರಣ ಸಂಸ್ಕೃತಿ ಯೊಳಗಿನ ಪ್ರಶ್ನಾ ಪ್ರತೀಕರಾಗಿಯೂ ಕೆಲಸ ಮಾಡಿದ್ದಾರೆ; ಅಂದಿನ ಶರಣ ಸಿದ್ಧಾಂತದಲ್ಲಿ ಮುಖ್ಯವಾಗಿದ್ದ ‘ಭಕ್ತ-ಭವಿ’ ಪರಿಕಲ್ಪನೆಯನ್ನು ಅಲ್ಲಮರೂ ‘ಶರಣಸತಿ-ಲಿಂಗಪತಿ’ ಪರಿಕಲ್ಪನೆಯನ್ನು ಅಂಬಿಗರ ಚೌಡಯ್ಯನವರೂ ತಮ್ಮದೇ ಸ್ವತಂತ್ರ ದೃಷ್ಟಿಯಿಂದ ವಿಮರ್ಶಿಸಿದ್ದಾರೆ. ಅಲ್ಲಮ ಪ್ರಭುಗಳು ‘ಭವಿಯಲ್ಲವೆ ನಿಮ್ಮ ತನುಗುಣಾದಿಗಳು!’ ‘ಭವಿಯಲ್ಲವೆ ನಿಮ್ಮ ಮನಗುಣಾದಿಗಳು!’ ಎಂದು ಪ್ರಶ್ನಿಸುತ್ತಾರೆ. ಕಡೆಗೆ ‘ನಾನು ಭವಿಯ ಪೂಜಿಸಿ ಭವಂ ನಾಸ್ತಿಯಾದೆನು’ ಎನ್ನುತ್ತಾರೆ.
ಅಂಬಿಗರ ಚೌಡಯ್ಯನವರು ‘ಶಿವಪಥಕ್ಕೆ ದೂರಾಗಿ ದುರಾಚಾರವ ಆಚರಿಸಿ ಸತ್ತು ಹೋಗುವ ಜಡದೇಹಿ ಕಡುಪಾತಕ ಕತ್ತೆ ಹಡಕ’ರನ್ನು ಉಗ್ರ ಶಿಕ್ಷೆಗೆ ಗುರಿ ಮಾಡುವ ಮಾತಾಡುತ್ತ ‘ಈಶ ಲಾಂಛನವ ತೊಟ್ಟು ಮನ್ಮಥ ವೇಷ ಲಾಂಛನವ ತೊಟ್ಟವರ ನಡೆನುಡಿಗೆ ನಾಚಿಕೆಯಿಲ್ಲವೆ?’ ಎಂದು ಪ್ರಶ್ನಿಸುತ್ತಾರೆ. ‘ಶರಣಸತಿ ಲಿಂಗಪತಿ ಎಂಬ ಮಾತು ಮೊದಲಿಗೆ ಮೋಸ’ ಎನ್ನುತ್ತಾರೆ.
ಇಪ್ಪತ್ತನೇ ಶತಮಾನದ ಒಳವಿಮರ್ಶಕರಿಗೆ ಸಾಂಕೇತಿಕವಾಗಿ ಸ್ವಾಮಿ ವಿವೇಕಾನಂದ ಮತ್ತು ಗಾಂಧೀಜಿ ಅವರನ್ನು ಉದಾಹರಿಸಬಹುದು. ಇಬ್ಬರೂ ಹಿಂದೂ ಧರ್ಮ ನಿಷ್ಠರು ಎಂಬುದಿಲ್ಲಿ ವಿಶೇಷ. ಆದರೆ ಇಬ್ಬರೂ ಹಿಂದೂ ಧರ್ಮದ ಒಳ ವಿಮರ್ಶಕರಾಗಿ ಜಾತಿ, ವರ್ಣ, ವರ್ಗಗಳನ್ನು ಮೀರಿದ ಮೌಲ್ಯಗಳ ಪ್ರತಿಪಾದಕರಾಗಿದ್ದರು. ‘ಪ್ರಪಂಚದಲ್ಲಿ ಯಾವ ಧರ್ಮವೂ ಹಿಂದೂ ಧರ್ಮದಷ್ಟು ಭವ್ಯವಾಣಿಯಲ್ಲಿ ಮನುಷ್ಯತ್ವದ ಘನತೆಯನ್ನು ಬೋಧಿಸುವುದಿಲ್ಲ’ ಎಂದು ಪ್ರಶಂಸೆ ಮಾಡುವ ವಿವೇಕಾನಂದರು ಅದೇ ಉಸಿರಿನಲ್ಲಿ ‘ಯಾವ ಧರ್ಮವೂ ದೀನದಲಿತರ ಕುತ್ತಿಗೆಯನ್ನು ಹಿಂದೂ ಧರ್ಮದಷ್ಟು ಕ್ರೂರವಾಗಿ ತುಳಿಯುವುದಿಲ್ಲ’ ಎಂದು ವಿಷಾದಿಸುತ್ತಾರೆ. ಇದು ಹಿಂದೂ ಧರ್ಮದ ತಪ್ಪಲ್ಲವೆಂದೂ ಆ ಧರ್ಮದಲ್ಲಿರುವ ‘ಸಂಪ್ರದಾಯ ಶರಣರು, ಪುರೋಹಿತರು, ಠಕ್ಕರು’ ಕಾರಣರೆಂದೂ ವಿಶ್ಲೇಷಿಸಿದ್ದಾರೆ (ವಿವೇಕಾನಂದ ಕೃತಿ ಶ್ರೇಣಿ ಸಂಪುಟ-6). ಹಿಂದೂ ಧರ್ಮವನ್ನಷ್ಟೇ ಅಲ್ಲ, ಕ್ರೈಸ್ತ ಮಿಷನರಿಗಳನ್ನೂ ವಿಮರ್ಶಿಸುವ ವಿವೇಕಾನಂದರು ‘ಪಾದ್ರಿಗಳನ್ನೇಕೆ ಕಳಿಸುತ್ತೀರಿ?’ ಎಂದು ಪ್ರಶ್ನಿಸಿದ್ದಾರೆ.
ಮುಖ್ಯವಾಗಿ, 1893ರ ಸೆಪ್ಟೆಂಬರ್ 11ರಂದು ಷಿಕಾಗೊ ಭಾಷಣದಲ್ಲಿ ‘ಸ್ವಮತಾಭಿಮಾನ, ಅನ್ಯಧರ್ಮ ದ್ವೇಷ, ಧಾರ್ಮಿಕ ದುರಭಿಮಾನ’ಗಳನ್ನು ಖಂಡಿಸಿ ‘ಒಂದೇ ಧರ್ಮಕ್ಕೆ ಸೇರಿ, ಒಂದೇ ಧರ್ಮವನ್ನು ಅನುಸರಿಸುವ ದುರ್ದಿನ ಬರದಿರಲಿ. ನಾವು ಎಲ್ಲ ಧರ್ಮಗಳಿಗೂ ಗೌರವ ಕೊಡಬೇಕು’ ಎಂದು ಪ್ರತಿಪಾದಿಸಿದ್ದಾರೆ. ಇದು ಎಲ್ಲ ಧರ್ಮೀಯರಿಗೂ ಆದರ್ಶದ ಪಾಠವಾಗಿದೆ.
ಹಿಂದೂ ಧರ್ಮದ ಪ್ರಾಮಾಣಿಕ ಪ್ರತಿಪಾದಕರಾಗಿದ್ದ ಗಾಂಧೀಜಿ, ಅಸ್ಪೃಶ್ಯತೆಯ ಕಟು ವಿರೋಧಿಯಾಗಿದ್ದರು. ‘ಅಸ್ಪೃಶ್ಯತೆ ನಾಶವಾದರೆ ಮಾತ್ರ ಹಿಂದೂ ಧರ್ಮ ಜೀವಂತವಾಗಿರುತ್ತದೆ. ಅಸ್ಪೃಶ್ಯತೆ ಜೀವಂತವಾಗಿದ್ದರೆ ಹಿಂದೂ ಧರ್ಮ ನಾಶವಾಗುತ್ತದೆ’ ಎಂದು ಎಚ್ಚರಿಸಿದ್ದರು. ಮೊದಲು ಜಾತಿ-ವರ್ಣವ್ಯವಸ್ಥೆಯಲ್ಲಿ ಒಳಿತನ್ನು ಕಾಣುತ್ತಿದ್ದ ಇವರು ಆನಂತರ ಬದಲಾದರು. ‘ಜಾತಿಭೇದವು ಪಾಪ ವ್ಯವಸ್ಥೆ’ (1931) ಎಂದರು. ‘ಜಾತಿಯನ್ನು ಶಾಸ್ತ್ರಗಳು ಪುರಸ್ಕರಿಸುವುದಾದರೆ, ನಾನು ನನ್ನನ್ನು ಹಿಂದೂ ಎಂದು ಕರೆದುಕೊಂಡು ಅದರಲ್ಲಿ ಉಳಿಯಲಾರೆ (1936)’ ಎಂದು ಘೋಷಿಸಿದರು. 1946ರ ಒಂದು ಸಂದರ್ಶನದಲ್ಲಿ ‘ಜಾತಿ, ವರ್ಣ, ವರ್ಗರಹಿತ ಭಾರತ ನಿರ್ಮಾಣಕ್ಕೆ ನನ್ನ ಪ್ರಯತ್ನ’ ಎಂದು ಹೇಳಿದರು.
ಮುಸ್ಲಿಂ ಮೂಲದ ಸಂತ ಜಲಾಲುದ್ದೀನ್ ರೂಮಿ ಅವರು ‘ದೇವರನ್ನು ಹುಡುಕಿಕೊಂಡು ಮೆಕ್ಕಾಗೆ ಹೋದೆ; ಅಲ್ಲಿ ಸಿಗಲಿಲ್ಲ. ಜೆರುಸಲೇಂ ಮತ್ತು ಕಾಶಿಗಳಿಗೂ ಹೋದೆ; ಅಲ್ಲಿ ಕಾಣಲಿಲ್ಲ. ಆಗ ನನ್ನೆದೆಯೊಳಗೆ ನೋಡಿಕೊಂಡೆ, ಅಲ್ಲಿ ದೇವರನ್ನು ಕಂಡೆ’ ಎಂದಿದ್ದಾರೆ.
ಇಂತಹ ಸಮಸ್ತ ಸಾಧಕರ ನಡೆ-ನುಡಿ ಚಿಂತನೆಯು ಎಲ್ಲ ಧರ್ಮಗಳ ಮೂಲಭೂತವಾದಿಗಳ ಮನಸ್ಸನ್ನು ಮುಟ್ಟಬೇಕು. ಪಕ್ಷ ಪಂಥಗಳಿಗೂ ಪಾಠವಾಗಬೇಕು. ಪಾಠ ಮಾಡಲು ಒಳ ವಿಮರ್ಶಕರು ಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.