ADVERTISEMENT

ಬೆರಗಿನ ಬೆಳಕು: ಅರ್ಥವಾಗದ ಪ್ರಶ್ನೆ

ಡಾ. ಗುರುರಾಜ ಕರಜಗಿ
Published 30 ಮಾರ್ಚ್ 2021, 19:30 IST
Last Updated 30 ಮಾರ್ಚ್ 2021, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಮಹೋಷಧಕುಮಾರ ಯಾಕೆ ಹೀಗೆ ತಪ್ಪಿಸಿಕೊಂಡು ಹೋದ ಎಂದು ಅಮರಾದೇವಿ ಚಿಂತಿಸಿದಳು. ಆಕೆಗೆ ಕಾರಣ ಹೊಳೆಯಿತು. ಈ ರಾಜರಿಗೆ ಬುದ್ಧಿ ಕಡಿಮೆ, ಕೋಪ ಜಾಸ್ತಿ. ಆ ಕೋಪದ ಕ್ಷಣಗಳಲ್ಲಿ ಆತನ ಕೈ, ಕಾಲುಗಳನ್ನೋ ಅಥವಾ ತಲೆಯನ್ನೇ ಕತ್ತರಿಸಿಬಿಟ್ಟರೆ ಏನು ಮಾಡುವುದು? ಆದ್ದರಿಂದ ಆ ಕೋಪದ ಕ್ಷಣಗಳು ಕಳೆದುಹೋಗುವ ತನಕ ರಾಜನ ಕಣ್ಣಮುಂದೆ ಬರಬಾರದೆಂದು ಹೀಗೆ ಮಾಡಿದ್ದಾನೆ ಎಂದು ತಿಳಿದಳು. ಆ ಸಮಯದಲ್ಲಿ ರಾಜ್ಯದ ದೇವಿಗೆ, ಬೋಧಿಸತ್ವನಾದ ಮಹೋಷಧಕುಮಾರನ ಧರ್ಮಬೋಧೆ ದೊರೆಯದೆ, ಅವನನ್ನು ಕರೆತರುವ ಉಪಾಯ ಮಾಡಿದಳು. ಅರಮನೆಯ ನಾಲ್ಕನೆಯ ಮಹಡಿಯ ನಿಪಾತದಲ್ಲಿ ನಿಂತುಕೊಂಡು, ‘ರಾಜಾ ನಾನು ನಾಲ್ಕು ಪ್ರಶ್ನೆಗಳನ್ನು ಕೇಳುತ್ತೇನೆ. ನಿನ್ನ ಅಮಾತ್ಯರಲ್ಲಿ ಯಾರಾದರೂ ಬುದ್ಧಿವಂತರಾಗಿದ್ದಾರೆ ಅವುಗಳಿಗೆ ಉತ್ತರ ಹೇಳಲಿ. ಇಲ್ಲದಿದ್ದರೆ ಮಹೋಷಧಕುಮಾರನನ್ನು ಕರೆಯಿಸಿ ಉತ್ತರವನ್ನು ಹೇಳಿಸು’ ಎಂದಳು. ಆಕೆಯ ಮೊದಲನೆಯ ಪ್ರಶ್ನೆ ಹೀಗಿತ್ತು. ‘ಅದು ಕೈ ಕಾಲುಗಳಿಂದ ಹೊಡೆಯುತ್ತದೆ, ಮುಖಕ್ಕೂ ಹೊಡೆಯುತ್ತದೆ. ಆದರೂ ರಾಜ, ಅದು ಅತ್ಯಂತ ಪ್ರಿಯವಾಗಿರುತ್ತದೆ. ಅಂಥ ದೃಶ್ಯ ಯಾವುದು?’ ಮರುದಿನ ರಾಜ ತನ್ನ ದರ್ಬಾರಿನ ಪಂಡಿತರಾದ ಸೆನೆಕ ಮತ್ತಿತರನ್ನು ಕರೆದು, ‘ದೇವಿ ನನಗೆ ಈ ಪ್ರಶ್ನೆಯನ್ನು ಕೇಳಿದಳು. ಆಕೆಗೆ ಒಟ್ಟು ನಾಲ್ಕು ಪ್ರಶ್ನೆಗಳಿವೆಯಂತೆ. ಈಗ ಮೊದಲನೆಯದನ್ನು ಕೇಳಿದ್ದಾಳೆ. ನನಗೆ ಅದರ ಉತ್ತರ ಗೊತ್ತಿಲ್ಲ. ನೀವೇ ಯೋಚನೆ ಮಾಡಿ ಅದಕ್ಕೆ ಉತ್ತರ ಹುಡುಕಿಕೊಡಿ‌’ ಎಂದ. ಆ ಪ್ರಶ್ನೆಯನ್ನು ಕೇಳಿ ಸೆನೆಕ ಹಾಗೂ ಉಳಿದ ಪಂಡಿತರಿಗೆ ತಲೆ ಕೆಟ್ಟು ಹೋಯಿತು. ಅದರ ತಲೆಬುಡ ಅರ್ಥವಾಗಲಿಲ್ಲ. ಅದೊಂದು ಅರ್ಥಹೀನವಾದ ಪ್ರಶ್ನೆ ಎನ್ನಿಸಿತು.

ಯಾವುದು ಹೊಡೆಯುತ್ತದೆ, ಯಾರಿಗೆ ಹೊಡೆಯುತ್ತದೆ ಎಂದು ಯೋಚಿಸಿ, ಯೋಚಿಸಿ ಹಣ್ಣಾದರು ಪಂಡಿತರು. ಅಂದು ರಾತ್ರಿ ಪುನ: ದೇವಿ, ‘ಯಾರಿಗಾದರೂ ಉತ್ತರ ಹೊಳೆಯಿತೇ?’ ಎಂದು ರಾಜನನ್ನು ಕೇಳಿದರು. ಆತ, ‘ನನ್ನ ನಾಲ್ವರೂ ಪಂಡಿತರಿಗೆ ಈ ಪ್ರಶ್ನೆಯನ್ನು ಕೇಳಿದ್ದೇನೆ. ಅವರಿಗೂ ಉತ್ತರ ತಿಳಿಯಲಿಲ್ಲ’ ಎಂದ. ‘ಈ ಮೂರ್ಖರಿಗೆ ಇದಕ್ಕೆ ಉತ್ತರ ಹೇಗೆ ಹೊಳೆದೀತು? ಮಹೋಷಧನ ಹೊರತಾಗಿ ಯಾರೂ ಇದಕ್ಕೆ ಉತ್ತರ ನೀಡಲಾರರು. ಅವನನ್ನು ಕರೆಯಿಸಿ. ಈ ಪ್ರಶ್ನೆಗಳಿಗೆ ಉತ್ತರ ಕೊಡಿಸದಿದ್ದರೆ, ಉರಿಯುತ್ತಿರುವ ಈ ಸುತ್ತಿಗೆಯಿಂದ ನಿನ್ನ ತಲೆಯನ್ನು ಒಡೆದುಬಿಡುತ್ತೇನೆ‘ ಎಂದು ದೇವಿ ಹೆದರಿಸಿದಳು. ‘ನಾನೇನು ಮಾಡಲಿ?’ ಎಂದು ಅಸಹಾಯಕನಾಗಿ ಕೇಳಿದ ರಾಜನಿಗೆ ದೇವಿ ಹೇಳಿದಳು, ‘ಬೆಂಕಿಯ ಅಗತ್ಯವಿದ್ದಾಗ ಮಿಂಚುಹುಳವನ್ನು ಸುಡಿಸುವುದು ಮತ್ತು ಹಾಲು ಬೇಕಾದಾಗ ಕೊಂಬು ಹಿಂಡುವುದು ಸರಿಯಲ್ಲ’ ಎಂದಳು. ‘ಹಾಗೆಂದರೇನು?’ ಎಂದು ಬೆಪ್ಪನಾಗಿ ರಾಜ ಕೇಳಿದ. ದೇವಿ, ‘ರಾಜಾ, ಬೆಂಕಿ ಬೇಕಾದಾಗ ಒಬ್ಬ ಮನುಷ್ಯ ಕಾಡಿನಲ್ಲಿ ಹೊರಟ. ಅಲ್ಲಿ ಮಿನುಗುತ್ತಿರುವ ಮಿಂಚುಹುಳಗಳನ್ನು ಕಂಡು, ಅವು ಬೆಂಕಿಯ ಕಿಡಿಗಳು ಎಂದು ಭಾವಿಸಿ ಬೆರಣಿಯ ಚೂರುಗಳನ್ನು, ಒಣ ಹುಲ್ಲನ್ನು ಹಾಕುತ್ತಾ ಬಂದ. ಅವನ ಅಜ್ಞಾನದಿಂದಾಗಿ ಬೆಂಕಿ ಹುಟ್ಟಲಿಲ್ಲ. ಅಂತೆಯೇ ಮೂರ್ಖನೊಬ್ಬ ಹಾಲು ಬೇಕಾದಾಗ, ಹಸುವಿನ ಮೊಲೆಗಳನ್ನು ಹಿಂಡದೆ ಅದರ ಕೊಂಬುಗಳನ್ನು ಹಿಂಡಿ ಕೈ ನೋಯಿಸಿಕೊಂಡ, ಹಾಲು ದಕ್ಕಲಿಲ್ಲ. ಅಂತೆಯೇ ಮೂರ್ಖಮಂತ್ರಿಗಳನ್ನಿಟ್ಟುಕೊಂಡು ಬುದ್ಧಿವಂತಿಕೆಯ ಪ್ರಶ್ನೆಗಳಿಗೆ ಉತ್ತರ ಕೇಳುವುದು ವ್ಯರ್ಥ. ಆದ್ದರಿಂದ ಮಹೋಷಧಕುಮಾರನನ್ನು ಹುಡುಕಿಸು’ ಎಂದು ಆಜ್ಞೆ ಮಾಡಿದಳು. ರಾಜ ನಾಲ್ಕು ಜನ ಅಮಾತ್ಯ ಪಂಡಿತರಿಗೆ ಹೇಳಿ, ಮಹೋಷಧಕುಮಾರನನ್ನು ಹುಡುಕಿ ತರಲು ನಾಲ್ಕು ದಿಕ್ಕಿಗೆ ಕಳುಹಿಸಿದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT