ತಿರಿದನ್ನವುಂಬಂಗೆ ಹುರುಡೇನು, ಹಟವೇನು ? |
ತಿರುಪೆಯಿಡುವರು ಕುಪಿಸಿ ಬಿರಿನುಡಿಯ ನುಡಿಯೆ ||
ದುರದುರನೆ ನೋಡಿ ನೀನೆದುರುನುಡಿ ನುಡಿಯುವುದೆ ? |
ಗರುವವೇತಕೆ ನಿನಗೆ ? – ಮಂಕುತಿಮ್ಮ || 671 ||
ಪದ-ಅರ್ಥ: ತಿರಿದನ್ನವುಂಬಂಗೆ=ತಿರಿದು(ಭಿಕ್ಷೆ ಬೇಡಿ)+ಅನ್ನ+ಉಂಬಂಗೆ(ಉಣ್ಣುವವನಿಗೆ), ಹುರುಡೇನು=ಸ್ಪರ್ಧೆಯೇನು, ತಿರುಪೆಯಿಡುವರು=ತಿರುಪೆ(ಭಿಕ್ಷೆ)+ಇಡುವರು, ಕುಪಿಸಿ=ಕೋಪಮಾಡಿಕೊಂಡು, ನೀನೆದುರುನುಡಿ= ನೀನು +ಎದುರುನುಡಿ.
ವಾಚ್ಯಾರ್ಥ: ಭಿಕ್ಷೆಯಿಂದ ಊಟಮಾಡುವವನಿಗೆ ಸ್ಪರ್ಧೆ, ಹಟವೇಕೆ? ಭಿಕ್ಷೆ ನೀಡುವವರು ಕೋಪದಿಂದ ಬಿರುಸು ಮಾತನಾಡಿದರೆ ನೀನು ಅವರನ್ನು ದುರುಗಟ್ಟಿ ನೋಡಿ ತಿರುಗಿ ಮಾತನಾಡುವುದೆ? ನಿನಗೆ ಯಾಕೆ ಆ ಗರ್ವ?
ವಿವರಣೆ: ಗುರುದೇವ ರವೀಂದ್ರನಾಥ ಠಾಕೂರರು ತಮ್ಮ ಪ್ರಸಿದ್ಧವಾದ ಗೀತಾಂಜಲಿಯ ಪದ್ಯವೊಂದರಲ್ಲಿ ಭಕ್ತನ ಭಾವವನ್ನು ಸುಂದರವಾಗಿ ವಿವರಿಸುತ್ತಾರೆ. ಭಕ್ತ ಹೇಳುತ್ತಾನೆ, “ಭಗವಂತ, ನಿನ್ನ ದರ್ಬಾರಿನಲ್ಲಿ ನಾನೊಬ್ಬ ಭಿಕ್ಷುಕನಾಗಿ ಬಂದಿದ್ದೇನೆ. ನನ್ನ ಮನದಲ್ಲಿ ಬಯಕೆಗಳ, ಬೇಡಿಕೆಗಳ ಸರಮಾಲೆಯೇ ಇದೆ. ಅದಕ್ಕೆ ಮಿತಿಯಿಲ್ಲ. ನೀನು ದಯಾಘನ, ಕೇಳಿದ್ದನ್ನೆಲ್ಲ ಕೊಡುತ್ತೀಯಾ. ಆದರೆ ನಿನ್ನ ದರ್ಬಾರಿಗೆ ಬಂದಾಗ, ನಿನ್ನ ಮುಖಕಮಲವನ್ನು ಕಂಡಾಗ ಮಾತು ಮರೆತು ಹೋಗುತ್ತದೆ. ನನಗೊಂದು ಭಯವಿದೆ ಪ್ರಭು. ನೀನು ಕರುಣೆಯ ಸಮುದ್ರ. ಕೇಳಿದ್ದನ್ನೆಲ್ಲ ಎಲ್ಲಿ ಕೊಟ್ಟುಬಿಡುತ್ತೀಯೋ ಎಂಬ ಭಯ ನನಗೆ. ಯಾಕೆಂದರೆ ಏನು ಕೇಳಬೇಕೆಂಬ ಪ್ರಜ್ಞೆ ನನಗಿಲ್ಲ. ಕೇಳಬಾರದೆಂಬ ತಿಳುವಳಿಕೆಯೂ ಇಲ್ಲ”.
ಭಿಕ್ಷುಕನಿಗೆ ಆಯ್ಕೆಗಳಿಲ್ಲ. ನೀಡುವುದು ದಾನಿಯ ಕೆಲಸ, ಬೇಡುವುದು ಭಿಕ್ಷುಕನ ಕರ್ಮ. ಇಷ್ಟೇ ಕೊಡು, ಇದನ್ನೇ ಕೊಡು ಎಂದು ಕೇಳುವ ಅಧಿಕಾರ ಭಿಕ್ಷುಕನಿಗೆ ಇಲ್ಲ. ನೀಡುವವನು ಕೋಪದಿಂದ ತೆಗಳಿದರೆ, ಒರಟು ಮಾತನಾಡಿದರೆ ಭಿಕ್ಷುಕ ತಿರುಗಿ ಮಾತನಾಡಲಾಗುತ್ತದೆಯೆ? ವಿನಯ ಭಿಕ್ಷುಕನಿಗೆ ಅನಿವಾರ್ಯ. ಒಂದು ರೀತಿಯಲ್ಲಿ ನಾವೆಲ್ಲ ಭಿಕ್ಷುಕರೆ. ನಾವು ಮೇಲಧಿಕಾರಿಗಳನ್ನು, ಸರಕಾರವನ್ನು, ಹಿರಿಯರನ್ನು, ಜ್ಞಾನಿಗಳನ್ನು ಕೊನೆಗೆ ದೇವರನ್ನು ಬೇಡುವವರೇ. ಎಲ್ಲರದೂ ಚಾಚಿದ ಕೈ, ತೆರೆದ ಬಾಯಿ. ಭಿಕ್ಷುಕನಂತೆ ಭಕ್ತನಿಗೂ ವಿನಯಬೇಕು ಎನ್ನುತ್ತದೆ ವಚನ.
ಭಕ್ತಿಗೆ ಅನುಭಾವವೆ ಬೀಜ ಕಾಣಿರೆ,
ಭಕ್ತಿಗೆ ಅನುಭಾವವೆ ಆಚಾರ ಕಾಣಿರೆ,
ಅನುಭಾವವಿಲ್ಲದವನ ಭಕ್ತಿ ಎಳತಟಗೊಳಿಸಿತ್ತು.
ಅನುಭಾವವ ಮಾಡುವಲ್ಲಿ ವಿನಯದಿಂದ ಕೇಳದಿದ್ದಡೆ,
ಕೂಡಲ ಚೆನ್ನಸಂಗಮದೇವರು ಅಘೋರನರಕದಲ್ಲಿಕ್ಕುವ
ಭಕ್ತನ ಅನುಭಾವಕ್ಕೂ ವಿನಯವೇ ಮೂಲವಸ್ತು. ಅಲ್ಲಿ ಗರ್ವಕ್ಕೆ ಸ್ಥಾನವಿಲ್ಲ, ಮರ್ಯಾದೆಯಿಲ್ಲ. ನಮ್ಮ ಬದುಕು ಭಗವಂತ ನೀಡಿದ ಪ್ರಸಾದ. ಅದನ್ನು ಕೃತಜ್ಞತೆಯಿಂದ ಸ್ವೀಕರಿಸಿ, ಒಪ್ಪವಾಗಿ ಬದುಕಬೇಕು. ಅದನ್ನು ಧಿಕ್ಕರಿಸುವುದು, ಪ್ರತಿಭಟಿಸುವುದು, ಕೊಟ್ಟಿದ್ದನ್ನು ಸರಿಯಾಗಿ ಬಳಸದಿರುವುದು ಗರ್ವದ ನಡೆಯಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.