ADVERTISEMENT

ಬೆರಗಿನ ಬೆಳಗು ಅಂಕಣ | ಜೀವನ ಮುಕ್ತಾವಸ್ಥೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2023, 23:00 IST
Last Updated 2 ಮಾರ್ಚ್ 2023, 23:00 IST
   

ಹೀಗೊ ಹಾಗೊ ಹೇಗೊ ಜನುಮಕಥೆ ಮುಗಿಯುವುದು|
ಈಗಲೋ ಆಗಲೋ ಎಂದೊ ಮುಗಿಯುವುದು ||
ಸಾಗಿ ಮುಗಿವುದು; ಮುಗಿದು ಮರೆವುದದೆ
ನರಸುಕೃತ |
ಭೂಗತ ಸ್ಥಿತಿ ಮುಕುತಿ – ಮಂಕುತಿಮ್ಮ || 834 ||

ಪದ-ಅರ್ಥ: ಮರೆವುದದೆ=ಮರೆವುದು+ಅದೆ,ನರಸುಕೃತ=ನರ+ಸುಕೃತ(ಪುಣ್ಯ), ಭೂಗತ=ಮಣ್ಣಲ್ಲಿ ಸೇರಿ ಹೋಗುವುದು.

ವಾಚ್ಯಾರ್ಥ: ಹೀಗೊ, ಹಾಗೊ, ಹೇಗೋ ಒಮ್ಮೆ ಹುಟ್ಟಿದ ಮನುಷ್ಯನ ಜೀವನದ ಕಥೆ ಮುಗಿಯುತ್ತದೆ. ಇಂದೋ, ಎಂದೋ ಅದು ಮುಗಿಯುತ್ತದೆ. ಹಾಗೆ ಮುಗಿದು ಮರೆತು ಹೋಗುವುದೇ ಮನುಷ್ಯನ ಪುಣ್ಯ. ಮಣ್ಣಿನಲ್ಲಿ ಮರೆಯಾಗಿ ಹೋಗುವುದೇ ಮುಕ್ತಿ.

ADVERTISEMENT

ವಿವರಣೆ: ಪೌಲ್ ಕಾರೂಸ್‌ರವರ ‘ನಿರ್ವಾಣ’ ಬೌದ್ಧಧರ್ಮದ ನಿರ್ವಾಣ ಪರಿಕಲ್ಪನೆಯನ್ನು ಸರಳವಾಗಿ ನಮ್ಮ ಮುಂದೆ ಇರಿಸುವ ವಿಶಿಷ್ಟ
ಕೃತಿ. ಸುಭೂತಿ, ಸುದತ್ತ, ಕಾಚ್ಯಾಯಣ, ಅನುರುದ್ದ ಮೊದಲಾದ ಪಾತ್ರಗಳ ನಡುವಿನ ಸಂಭಾಷಣೆಯ ಮೂಲಕ, ಸುಂದರ ಕಥೆಗಳ ರೀತಿಯಲ್ಲಿ ಬೌದ್ಧಧರ್ಮದ ನಿರ್ವಾಣ ತತ್ವವನ್ನು ವಿವರಿಸುವ ಈ ಕೃತಿ ಬೌದ್ಧಸಾಹಿತ್ಯಕ್ಕೆ ಮಹತ್ವದ ಕೊಡುಗೆ. ಅದರಲ್ಲೊಂದು ಸುಂದರವಾದ ಮಾತಿದೆ.

“ಬದುಕುವುದು ಎಂದರೆ ಸಾಯುವುದು ಎಂದರ್ಥ. ಉಸಿರಾಡುವಯಾವ ಜೀವಿಯೂ ಸಾವಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.ಸಂಯುಕ್ತ ವಸ್ತುಗಳಿಂದ ನಿರ್ಮಾಣವಾಗಿರುವ ಪ್ರತಿಯೊಂದುವಸ್ತುವೂ ಮತ್ತೆ ಮತ್ತೆ ವಿಸರ್ಜನೆಗೊಳ್ಳುತ್ತವೆ. ಆದರೆ, ಸತ್ಕಾರ್ಯಗಳು ಸಾಯುವುದಿಲ್ಲ. ಅವು ಎಲ್ಲ ಕಾಲಕ್ಕೂಬದುಕಿರುತ್ತವೆ ಇದು ಅಭಿಧರ್ಮದ ಸಾರ, ತಿರುಳು. ಯಾರು ಅಂಥ ಸಾವಿಗೆ ಸಂತೋಷದಿಂದ ಶರಣಾಗುತ್ತಾರೋ ಅವರು ನಿರ್ವಾಣದ ಘಟ್ಟವನ್ನು ಮುಟ್ಟುತ್ತಾರೆ”.ಮೇಲೆ ಹೇಳಿದ ತತ್ವದಂತೆ, ವಿಕಾಸತತ್ವದ ಸಹಜ ಪ್ರಕ್ರಿಯೆಯಲ್ಲಿ ಮೂಡಿ ಬಂದ ಪ್ರತಿಯೊಂದು ಜೀವ, ಪ್ರತಿಕ್ಷಣವೂ ತನ್ನ ಅಂತ್ಯದ ಕಡೆಗೆ ಧಾವಿಸುತ್ತದೆ. ಈ ಧಾವಂತದ ಬದುಕಿನಲ್ಲಿ ಒಂದಷ್ಟು ಸಂತೋಷ, ಪ್ರೀತಿ, ದುಃಖ, ನಿರಾಸೆ, ಎಂಬ ಭಾವಗಳಿಗೆ ಸಿಕ್ಕು ಒದ್ದಾಡುತ್ತದೆ. ಬದುಕು ಎಷ್ಟೇ ದೀರ್ಘವಾದರೂ, ಒಂದು ದಿನ ಮುಗಿಯಲೇ ಬೇಕು. ಪ್ರಪಂಚದ ಇತಿಹಾಸದಲ್ಲಿ ಶಾಶ್ವತವಾಗಿ ದೇಹದಿಂದ ಉಳಿದವರು ಯಾರೂ ಇಲ್ಲ. ಅವತಾರಿಗಳಾದ ರಾಮ, ಕೃಷ್ಣ, ಪರಶುರಾಮನಂಥವರೂ ಉಳಿಯಲಿಲ್ಲ. ನಮ್ಮ ಬದುಕೂ ಅಷ್ಟೆ! ನಾನು ಇಲ್ಲಿ ಇಂದು ಇದ್ದೇನೆ. ಬೇರೆ ಮತ್ತೊಬ್ಬ ನಾಳೆ ಬಂದಾಗ, ನಾನು ಇಳಿಯಲೇ ಬೇಕಾಗುತ್ತದೆ. ಕಾಲ ಅವನನ್ನು ಒಂದು ದಿನ ಕೆಳಗೆ ಇಳಿಸುತ್ತದೆ. ಆತ್ಮತತ್ವ ಮಾತ್ರ ಪರಿವರ್ತನೆಗೆ ನಿಲುಕದ ದಿವ್ಯವಸ್ತು. ಅದಕ್ಕೆ ಆದಿ, ಅಂತ್ಯವಿಲ್ಲ. ಅದು ಅನಾವರ್ತನೀಯ. ಆವರ್ತನೆಗೆ ಒಳಗಾದ ವಿಶ್ವದ ಅಂತರಂಗದಲ್ಲೇ ಈ ಅವಿಚಲ ತತ್ವ ಇದೆ. ಅನಾವರ್ತನ ಚೇತನದ ಚಿಂತನೆಯೊಂದಿಗೆ ಆವರ್ತನ ಬದುಕನ್ನು ಬಾಳುವುದೇ ಮುಕ್ತಾವಸ್ಥೆ. ಇದೇ ನಿರ್ವಾಣ ಸ್ಥಿತಿ. ಅಂಥ ಸ್ಥಿತಿ ಬರಲಿ ಎನ್ನುವುದೇ ನರಸುಕೃತ. ಈ ದೇಹ ಯಾತ್ರೆ ಹೇಗೋ ನಡೆದು ಒಂದು ದಿನ ಮುಗಿದು, ಬಯಲಾಗಿ ಹೋಗುತ್ತದಲ್ಲ ಎಂಬುದೇ ಸಂತೋಷ. ಮಣ್ಣಿನಲ್ಲಿ ಮರೆಯಾಗಿ, ಯಾವ ಗುರುತನ್ನು ಉಳಿಸದೆ ಬಯಲಾಗುವುದೇ ಮುಕ್ತಿ ಎನ್ನುತ್ತದೆ ಕಗ್ಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.