ವಾರಾಣಸಿಯಲ್ಲಿ ಬ್ರಹ್ಮದತ್ತ ರಾಜನಾಗಿದ್ದಾಗ ಬೋಧಿಸತ್ವ ಕಾಗೆಯಾಗಿ ಹುಟ್ಟಿದ. ಆತ ಸಹಸ್ರಾರು ಕಾಗೆಗಳಿಗೆ ನಾಯಕನಾಗಿ ಸ್ಮಶಾನದಲ್ಲಿ ನೆಲೆಸಿದ್ದ. ಒಂದು ದಿನ ನದಿಯ ಹತ್ತಿರವಿದ್ದಾಗ ರಾಜಪುರೋಹಿತ ನದಿಯಲ್ಲಿ ಸ್ನಾನ ಮುಗಿಸಿ, ಗಂಧವನ್ನು ಲೇಪಿಸಿಕೊಂಡು, ಕೊರಳಲ್ಲಿ ಮಾಲೆ ಧರಿಸಿ ಆಢ್ಯತೆಯಿಂದ ನಗರದ ಕಡೆಗೆ ಬರುತ್ತಿದ್ದ. ಬೋಧಿಸತ್ವನೊಡನೆ ಇದ್ದ ಒಂದು ಕಾಗೆ ಪುರೋಹಿತನ ಅಹಂಕಾರವನ್ನು ಕಂಡು, ‘‘ಸ್ನೇಹಿತ, ನಾನು ಈ ಪುರೋಹಿತ ನಗರದ್ವಾರದಲ್ಲಿ ಬರುತ್ತಿದ್ದಂತೆ ಅವನ ತಲೆಯ ಮೇಲೆ ಹಿಕ್ಕೆ ಹಾಕುತ್ತೇನೆ’’ ಎಂದಿತು. ಆಗ ಬೋಧಿಸತ್ವ, “ಬೇಡಪ್ಪ, ಆತ ರಾಜನಿಗೆ ಹತ್ತಿರವಾಗಿರುವವನು, ಹಣವಂತ ಮತ್ತು ಬಲಶಾಲಿ. ಅಂಥವರ ಜೊತೆಗೆ ವೈರ ಬೇಡ” ಎಂದ. ಆದರೆ ಇನ್ನೊಂದು ಕಾಗೆ ಬಲು ಮೊಂಡು. ಪುರೋಹಿತ ನಗರದ್ವಾರದಲ್ಲಿ ಬರುತ್ತಲೇ ಹಾರಿ ಅವನ ತಲೆಯ ಮೇಲೆ ಹೋಗಿ ಹಿಕ್ಕೆ ಹಾಕಿತು. ಬ್ರಾಹ್ಮಣನಿಗೆ ಕೋಪ ಉಕ್ಕಿತು. ಕಾಗೆಗಳ ವಂಶದ ಮೇಲೆಯೇ ದ್ವೇಷ ಬಂದಿತು.
ಮರುದಿನ ಅರಮನೆಯ ಹಿಂಭಾಗದಲ್ಲಿ ಅಡಿಗೆ ಮನೆಯಲ್ಲಿ ಕೆಲಸ ಮಾಡುವ ದಾಸಿ ಹಿತ್ತಲಿನಲ್ಲಿ ಅಕ್ಕಿಯನ್ನು ಬಿಸಿಲಿಗೆ ಹರಡಿ ಕಾಯುತ್ತ ಕುಳಿತಿದ್ದಳು. ಆಕೆಗೆ ನಿದ್ರೆ ಬಂದು ತೂಕಡಿಸುವಾಗ ಒಂದು ಕುರಿ ಬಂದು ಅಕ್ಕಿಗೆ ಬಾಯಿ ಹಾಕಿತು. ಅದನ್ನು ಕಂಡ ದಾಸಿ ಓಡಿ ಹೋಗಿ ಉರಿಯುವ ಕೊಳ್ಳಿಯನ್ನು ತಂದು ಕುರಿಗೆ ಹೊಡೆದಳು. ಅದರ ಕೂದಲಿಗೆ ಬೆಂಕಿ ಹತ್ತಿಕೊಂಡಿತು. ಗಾಬರಿಯಾದ ಕುರಿ ಗಜಶಾಲೆಗೆ ನುಗ್ಗಿ ಅಲ್ಲಿದ್ದ ಹುಲ್ಲಿನ ಮೆದೆಗೆ ಮೈ ಉಜ್ಜಿತು. ಈಗ ಬೆಂಕಿ ಹುಲ್ಲಿನ ಮೆದೆಗೆ ಹತ್ತಿ ಆನೆಗಳು ಗಾಬರಿಯಾಗಿ ಅತ್ತಿತ್ತ ಓಡತೊಡಗಿದವು. ಕೆಲವು ಆನೆಗಳಿಗೆ ಮೈಸುಟ್ಟು ಗಾಯಗಳಾದವು. ಅಷ್ಟೊಂದು ಆನೆಗಳಿಗೆ ಶುಶ್ರ್ರೂಷೆ ಮಾಡುವುದು ರಾಜವೈದ್ಯನಿಗೆ ಕಷ್ಟವಾಯಿತು. ರಾಜ ಪುರೋಹಿತನಿಗೆ, “ಇದಕ್ಕೆ ಏನಾದರೂ ಪರಿಹಾರ ಉಂಟೇ?” ಎಂದು ಕೇಳಿದ. ಆಗ ಇದೇ ಅವಕಾಶವೆಂದು ಭಾವಿಸಿ ಪುರೋಹಿತ. “ಪ್ರಭೋ, ಇದಕ್ಕೆ ಅತ್ಯಂತ ಶ್ರೇಷ್ಠ ಔಷಧಿ ನನಗೆ ಗೊತ್ತು. ನಗರದಲ್ಲಿರುವ ಕಾಗೆಗಳನ್ನೆಲ್ಲ ಕೊಲ್ಲಿಸಿ ಅವುಗಳ ಕೊಬ್ಬನ್ನು ತೆಗೆಯಿಸಿ. ಅದರಿಂದ ಔಷಧವನ್ನು ನಾನು ಮಾಡುತ್ತೇನೆ” ಎಂದ. ರಾಜ ಹಿಂದುಮುಂದು ನೋಡದೆ ಎಲ್ಲ ಕಾಗೆಗಳನ್ನು ಕೊಲ್ಲಲು ಆಜ್ಞೆ ಮಾಡಿದ. ರಾಶಿ ರಾಶಿ ಸತ್ತ ಕಾಗೆಗಳ ದೇಹಗಳು ಬಂದು ಬಿದ್ದವು.
ಇದನ್ನು ಕಂಡು ಬೋಧಿಸತ್ವ ವೇಗವಾಗಿ ಹಾರಿಬಂದು ರಾಜನ ಮುಂದೆ ಕುಳಿತ. ಅದರ ಗಾಂಭೀರ್ಯವನ್ನು ಕಂಡು, ಅದನ್ನು ಹಿಡಿಯಲು ಬಂದ ಸೈನಿಕರನ್ನು ತಡೆದ. ಬೋಧಿಸತ್ವ ಹೇಳಿದ, “ರಾಜಾ, ನಾಯಕನಾದವನು ಭಾವೋದ್ರೇಕದಿಂದ ತೀರ್ಮಾನ ತೆಗೆದುಕೊಳ್ಳದೆ, ಎಲ್ಲ ವಿಷಯಗಳನ್ನು ಚಿಂತಿಸಿ, ಚರ್ಚಿಸಿ ಆಜ್ಞೆ ಮಾಡಬೇಕು. ಈಗ ನೀವು ಮಾಡಿರುವ ತೀರ್ಮಾನ ತುಂಬ ತಪ್ಪಾಗಿದೆ. ಕಾಗೆಗಳಿಗೆ ಕೊಬ್ಬೇ ಇರುವುದಿಲ್ಲ, ಅವು ಯಾವಾಗಲೂ ಗಾಬರಿಯಾಗಿ ಆತಂಕದಲ್ಲಿರುವ ಪಕ್ಷಿಗಳು ಹಾಗಾಗಿ ಅವುಗಳಲ್ಲಿ ಕೊಬ್ಬು ಕಡಿಮೆ ಅಲ್ಲದೆ ಅವುಗಳಿಂದ ಯಾವ ಔಷಧಿಯನ್ನು ಮಾಡಲಾಗುವುದಿಲ್ಲ. ಇದು ನಿಮ್ಮ ಪುರೋಹಿತ ಕಾಗೆಗಳ ಮೇಲಿನ ದ್ವೇಷಕ್ಕೆ ಮಾಡಿದ ಕಾರ್ಯ” ಎಂದ. ರಾಜ ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಿ ತನ್ನ ಹಿಂದಿನ ಆಜ್ಞೆಯನ್ನು ರದ್ದು ಮಾಡಿದ. ಕಾಗೆ ಯಾವ ಬಹುಮಾನವನ್ನು ಕೇಳಿದರೂ ಕೊಡಲು ಸಿದ್ಧನಾದ. ಬೋಧಿಸತ್ವ ಏನನ್ನು ತೆಗೆದುಕೊಳ್ಳದೆ ಸರ್ವ ಪ್ರಾಣಿಗಳಿಗೆ ಅಭಯವನ್ನು ಕೇಳಿ, ಧರ್ಮೋಪದೇಶ ಮಾಡಿ ಗೂಡಿಗೆ ಮರಳಿದ.
ಇದು ಎರಡೂವರೆ ಸಾವಿರ ವರ್ಷಗಳ ಹಿಂದಿನ ಕಥೆ. ಆದರೆ ಇಂದಿಗೂ ನಮ್ಮ ಜನನಾಯಕರು ಆಳವಾದ ಚಿಂತನೆಗಳಿಂದ ತೀರ್ಮಾನ ತೆಗೆದುಕೊಳ್ಳದೆ ಭಾವೋದ್ರೇಕದಿಂದ, ಯಾರದೋ ಮಾತುಗಳಿಂದ ಪ್ರೇರಿತರಾಗಿ ಆಜ್ಞೆಗಳನ್ನು ಮಾಡುವುದನ್ನು ಕಂಡಾಗ ಮನುಷ್ಯ ಸ್ವಭಾವ ಬದಲಾಗಲೇ ಇಲ್ಲ ಎನ್ನಿಸುವುದಿಲ್ಲವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.