ADVERTISEMENT

ಬೆರಗಿನ ಬೆಳಕು: ಜಗವನಾಳುವ ಜಾಣ

ಡಾ. ಗುರುರಾಜ ಕರಜಗಿ
Published 19 ಜೂನ್ 2023, 20:31 IST
Last Updated 19 ಜೂನ್ 2023, 20:31 IST
   

ಮಗುವಾಗಿ ಬೊಂಬೆಗೆಂದತ್ತು ಪಿರಿಯರ ಕಾಡಿ |
ಜಗದುಣಿಸುಗಳನುಂಡು ಬೆಳೆದವಂ ತಾನೆ ||
ಮಗುಗಳನು ಬೆಳೆಸುತ್ತ
ಮನೆಯನಾಳುವವೋಲು |
ಜಗವನಾಳ್ಪನು ಜಾಣ – ಮಂಕುತಿಮ್ಮ || 909 ||

ಪದ-ಅರ್ಥ: ಬೊಂಬೆಗೆಂದತ್ತ್ತು=ಬೊಂಬೆಗೆ+ಎಂದು+ಅತ್ತು, ಪಿರಿಯರ=ಹಿರಿಯರ. ಜಗದುಣಿಸುಗಳನುಂಡು=ಜಗದ+ಉಣಿಸುಗಳನು+ಉಂಡು, ಬೆಳೆದವಂ=ಬೆಳೆದವನು, ಮನೆಯನಾಳುವವೋಲು=ಮನೆಯನು+ಆಳುವ+ಓಲು, ಜಗವನಾಳ್ಪನು=ಜಗವನು+ಆಳ್ಪನು.
ವಾಚ್ಯಾರ್ಥ: ಮಗುವಾಗಿದ್ದಾಗ ಬೊಂಬೆಗೆ ಎಂದು ಹಟ ಮಾಡಿ, ಅತ್ತು, ಹಿರಿಯರನ್ನು ಕಾಡಿ, ಜಗತ್ತಿನ ತಿನಿಸುಗಳನ್ನು ತಿಂದು ಬೆಳೆದವನು ನೀನು. ಈಗ ಮಕ್ಕಳನ್ನು ಬೆಳೆಸುತ್ತ ಮನೆಯನ್ನು ಆಳುವವನಂತೆ ಜಗತ್ತನ್ನು ಆಳುವವನು ಜಾಣ.

ವಿವರಣೆ: ಈ ಕಗ್ಗ ಮತ್ತೆ ಈಶಾವಾಸ್ಯ ಉಪನಿಷತ್ತಿನ ಮೊದಲನೆಯ ಮಂತ್ರಕ್ಕೆ ವಿಶೇಷ ವಿವರಣೆ ನೀಡುವಂತಿದೆ. ಕಗ್ಗ, ನಮ್ಮ ಮುಂದೆ ಒಂದು ಸುಂದರವಾದ ದೃಷ್ಟಾಂತವನ್ನು ತರುತ್ತದೆ. ಪುಟ್ಟ ಮಗು ಬೊಂಬೆ ಬೇಕು ಎಂದು ಹಟ ಹಿಡಿದು ಅಳುತ್ತದೆ. ಅದು ದೊರೆಯುವವರೆಗೂ ಹಿರಿಯರನ್ನು ಕಾಡಿ ಬೇಡುತ್ತದೆ. ಆಗ ಜವಾಬ್ದಾರಿ ಏನಾದರೂ ಇತ್ತೇ? ಒಂದು ಪರಿವಾರ ಪ್ರವಾಸಕ್ಕೆ ಹೊರಟಿದೆ ಎಂದಿಟ್ಟುಕೊಳ್ಳಿ. ಮಕ್ಕಳಿಗೆ ಏನಾದರೂ ಚಿಂತೆ ಉಂಟೆ? ರೈಲಿನ ಟಿಕೆಟ್ ಆಯಿತೇ? ಹೋಗುವ ಸ್ಥಳದಲ್ಲಿ ಹೊಟೆಲ್ಲು ಅಥವಾ ಉಳಿದುಕೊಳ್ಳುವ ವ್ಯವಸ್ಥೆಯಾಗಿದೆಯೇ? ಊಟ, ತಿಂಡಿ ಎಲ್ಲಿ? ಯಾವ ಯಾವ ಸ್ಥಳಗಳನ್ನು ನೋಡಬೇಕು? ಇದಾವುದರ ವಿಚಾರವೂ ಮಕ್ಕಳಿಗೆ ಇಲ್ಲ. ಯಾಕೆಂದರೆ ಹಿರಿಯರಿದ್ದಾರಲ್ಲ, ಅವರು ಎಲ್ಲವನ್ನು ನೋಡಿಕೊಳ್ಳುತ್ತಾರೆ. ತಮಗೆ ಬೇಕಾದ್ದನ್ನು ಕೇಳುವುದು ಮಾತ್ರ ಅವರಿಗೆ ಸೇರಿದ್ದು. ಪೂರೈಸುವುದು ಹಿರಿಯರ ಜವಾಬ್ದಾರಿ. ಮಗು ಬೆಳೆದು ದೊಡ್ಡದಾಗುತ್ತದೆ. ಈಗ ಆ ವ್ಯಕ್ತಿಗೆ ಮಕ್ಕಳಿದ್ದಾರೆ. ಮಕ್ಕಳು ಅಪೇಕ್ಷಿಸಿದ್ದನ್ನು ಕೊಡುವುದು ಅವನ ಕರ್ತವ್ಯ. ಇಷ್ಟು ದಿನ ಮಗುವಾಗಿದ್ದಾಗ ಕೇಳಿ ಪಡೆದುಕೊಂಡದ್ದಾಯಿತು. ಇನ್ನು ನೀಡುವ ಸರದಿ. ತನ್ನ ಅವಶ್ಯಕತೆಗಳನ್ನು ಹಿಂದಿಕ್ಕಿ, ಮಕ್ಕಳ ಅವಶ್ಯಕತೆಗಳಿಗೆ ಆದ್ಯತೆ ನೀಡಬೇಕು. ಅವರ ತೃಪ್ತಿಯಲ್ಲಿ ತನ್ನ ಸಂತೋಷವನ್ನು ಕಾಣಬೇಕು. ಹೀಗೆ ಮತ್ತೊಬ್ಬರ ಸಂತೋಷದಲ್ಲಿ ತನ್ನ ಸಂತೃಪ್ತಿಯನ್ನು ಕಾಣುವುದು ಯಜಮಾನಿಕೆ. ಈ ದೃಷ್ಟಾಂತ ಒಂದು ಸಂಕೇತ. ಇದರ ಹಿಂದಿರುವ ಅರ್ಥ ವಿಶಾಲವಾದದ್ದು. ವಿಸ್ತಾರವಾದ ಪ್ರಪಂಚದಲ್ಲಿ ನಾವು ಮಕ್ಕಳ ತರಹ ಬೇಡುತ್ತಲೇ, ಪಡೆಯುತ್ತಲೇ ಇರುತ್ತೇವೆ. ಬೇಡುವುದು ಮಗುತನವೇ. ಆ ಬೇಡಿಕೆ ಹಣಕ್ಕಾಗಿ, ಅಧಿಕಾರಕ್ಕಾಗಿ, ಮನ್ನಣೆಗಾಗಿ, ಸಂಸಾರಸುಖಕ್ಕಾಗಿ ಅಥವಾ ಇನ್ಯಾವುದಕ್ಕೇ ಆಗಿರಬಹುದು. ಅದು ಮಗುತನವೇ. ಕೆಲವರು ಆಯುಷ್ಯ ಪೂರ್ತಿ ಮಗುವಾಗಿಯೇ ಉಳಿಯುತ್ತಾರೆ. ಅದಕ್ಕೆ ಕಗ್ಗ ಹೇಳುತ್ತದೆ, ಮಗುವಾಗಿ ಬೇಡಿದ್ದು ಸಾಕು, ಈಗ ಯಜಮಾನನಾಗು. ನೀನೀಗ ಬೇಡುವುದನ್ನು ನಿಲ್ಲಿಸಿ ಜಗತ್ತಿಗೆ ಏನು ಬೇಕೋ ಅದನ್ನು ಸಂತೋಷದಿಂದ ಕೊಡು. ಕೊಟ್ಟು ತೃಪ್ತಿಯನ್ನು ಪಡೆ. ಹೀಗೆ ಕೊಡುವುದರಲ್ಲಿ ತೃಪ್ತಿಯನ್ನು ಪಡೆಯುವವವನು ಯಜಮಾನ. ಹಾಗೆ ಬಾಳುವವನೇ ನಿಜವಾದ ಜಾಣ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.