ಇಂದ್ರಿಯಗಳೊಳು ಬಾಳಿ ಜೀವ ಪಕ್ವಂಗೊಳ್ಳ – |
ಲಿಂದ್ರಿಯಂಗಳ ಮೀರಿ ಮೇಲೇರಿ ಜಾಣಿಂ - ||
ದಿಂದ್ರಿಯಂಗಳನಾಳಿ ಲೋಕವಂ ಸಂತಯಿಪ |
ಬಂಧು ಜೀವನ್ಮುಕ್ತ – ಮಂಕುತಿಮ್ಮ || 912 ||
ಪದ-ಅರ್ಥ: ಇಂದ್ರಿಯಗಳೊಳು=ಇಂದ್ರಿಯಗಳ+ಒಳು(ಒಳಗೆ), ಪಕ್ಪಗೊಳ್ಳಲಿಂದ್ರಿಯಂಗಳ=ಪಕ್ವಗೊಳ್ಳಲು+ಇಂದ್ರಿಯಂಗಳ(ಇಂದ್ರಿಯಗಳನ್ನು), ಜಾಣಿಂದ್ರಿಯಗಳನಾಳಿ=ಜಾಣಿಂ
(ಜಾಣತನದಿಂದ)+ಇಂದ್ರಿಯಗಳನು+ಆಳಿ, ಸಂತಯಿಪ=ಸಂತೈಸುವ.
ವಾಚ್ಯಾರ್ಥ: ಇಂದ್ರಿಯಾನುಭವಗಳಿಂದಲೇ ಬಾಳಿ, ಜೀವವು ಪಕ್ವಗೊಂಡಾಗ ಇಂದ್ರಿಯಗಳನ್ನು ಮೀರಿ, ದಾಟಿ, ಜಾಣತನದಿಂದ ಇಂದ್ರಿಯಗಳನ್ನು ಆಳಿ, ಪ್ರಪಂಚವನ್ನು ಸಂತೈಸುವ ಬಂಧುವಾದ ವ್ಯಕ್ತಿಯೇ ಜೀವನ್ಮುಕ್ತ.
ವಿವರಣೆ: ನಮಗೆ ಎರಡು ತರಹದ ಜೀವನಗಳು. ಮೊದಲನೆಯದು ನಿತ್ಯ ಬದುಕಿನ ಜೀವನ. ಎರಡನೆಯದು ಉಜ್ಜೀವನ. ಜೀವನ ತಾಪವಾದರೆ ಉಜ್ಜೀವನ ತಪ. ಜೀವನ ಚಿಂತೆಯಾದರೆ, ಉಜ್ಜೀವನ ಚಿಂತನೆ. ನಮ್ಮ ಜೀವನದ ಪ್ರತಿಕ್ಷಣವೂ
ಇಂದ್ರಿಯಗಳಿಂದ ನಿರ್ದೇಶಿತವಾದದ್ದು. ಇಂದ್ರಿಯಗಳು ತಂದು ಹಾಕಿದ್ದೇ ಅನುಭವ. ಅನುಭವಗಳ ತೂಗುಯ್ಯಾಲೆಯಲ್ಲೇ
ಬದುಕು ಸಾಗುತ್ತದೆ. ಆದರೆ ಒಂದು ಹಂತ ಬರುತ್ತದೆ. ನಮ್ಮ ಜೀವನವೆಲ್ಲ ಇಂದ್ರಿಯಗಳ ದಾಸನಾಗಿಯೇ ಉಳಿಯಿತಲ್ಲ, ಈ
ಇಂದ್ರಿಯಗಳನ್ನು ಮೀರಿದ ಅನುಭವವೇನಾದರೂ ಉಂಟೇ ಎಂದು ಮನಸ್ಸು ಯೋಚಿಸತೊಡಗುತ್ತದೆ. ಅದು ಜೀವವು ಪಕ್ವವಾಗತೊಡಗಿದ ಲಕ್ಷಣ. ಆಗ ಇಂದ್ರಿಯಗಳಿಂದ ಜೀವ ಮೇಲಕ್ಕೇರಿ ಇಂದ್ರಿಯಾನುಭವಗಳನ್ನು ದಾಟಿ ಪರಸತ್ವದ
ಅನುಭವವನ್ನು ಪಡೆಯುವುದು ಉಜ್ಜೀವನ. ವಿಚಿತ್ರವೆಂದರೆ ಜೀವನವಿಲ್ಲದಿದ್ದರೆ ಉಜ್ಜೀವನವಿಲ್ಲ. ಉಜ್ಜೀವನದೆಡೆಗೆ ಸಾಗುವುದೆಂದರೆ ನದಿಯನ್ನು ದಾಟಿದಂತೆ. ನದಿಯನ್ನು ದಾಟಲು ಮೊದಲು ನದಿಯಲ್ಲಿ ಹಾರಬೇಕು. ನೀರನ್ನು ಹಿಂದೆ ತಳ್ಳಿ, ತಳ್ಳಿ ಮುಂದೆ ಸಾಗಬೇಕು. ಹಾಗೆ ಸತತ ಪ್ರಯತ್ನ ಮಾಡಿದಾಗಲೇ ನದಿ ದಾಟುವುದು ಸಾಧ್ಯ. ಅದನ್ನೇ ಕಗ್ಗ
ಹೇಳುತ್ತದೆ, ನಾವು ಇಂದ್ರಿಯಗಳ ಒಳಗೇ ಬದುಕಬೇಕು. ನಂತರ ಪ್ರಯತ್ನದಿಂದ ಇಂದ್ರಿಯಗಳನ್ನು ಮೀರಿ ಅಧ್ಯಾತ್ಮಿಕವಾಗಿ ಮೇಲಕ್ಕೇರಬೇಕು. ಆಗೇನಾಗುತ್ತದೆ? ಯಾವ ಇಂದ್ರಿಯಗಳು ನಮ್ಮನ್ನು ಆಳುತ್ತಿದ್ದವೋ ಅವೇ ನಮ್ಮ ಆಳುಗಳಾಗುತ್ತವೆ. ನಾವು ಹೇಳಿದ್ದನ್ನು, ಅಪೇಕ್ಷಿಸಿದ್ದನ್ನು ಮಾಡುತ್ತವೆ. ಅದೇ ಇಂದ್ರಿಯಗಳನ್ನು ಆಳುವ ಪ್ರಕ್ರಿಯೆ. ಇಂಥವರನ್ನು ನಮ್ಮ ಜಗತ್ತು ಕಂಡಿದೆ. ಅವರಾರೂ ಇಂದ್ರಿಯಗಳ ದಾಸರಾಗದೆ, ಇಂದ್ರಿಯಗಳನ್ನು ನಿಗ್ರಹಿಸಿದವರಾದರು. ಶ್ರೀ ರಾಮಕೃಷ್ಣ ಪರಮಹಂಸರು, ರಮಣ ಮಹರ್ಷಿಗಳು, ಅಲ್ಲಮಪ್ರಭು, ಮಹಾದೇವಿಯಕ್ಕ, ಸಿದ್ಧರಾಮೇಶ್ವರ ಇವರೆಲ್ಲ ಇಂದ್ರಿಯಗಳನ್ನು
ಹತೋಟಿಯಲ್ಲಿಟ್ಟುಕೊಂಡು, ಇಂದ್ರಿಯಗಳ ಹಿಡಿತದಲ್ಲಿ ನೋವುಂಡವರಿಗೆ, ಸಂತ್ರಸ್ತರಾದವರಿಗೆ ಸಾಂತ್ವನ ಹೇಳಿದವರು. ಹೀಗೆ ಲೋಕಕ್ಕೆಲ್ಲ ಸಾಂತ್ವನ ಹೇಳಿದವರು ಜಗತ್ತಿನ ಬಂಧುಗಳು ಮತ್ತು ಅವರೇ ಜೀವನ್ಮುಕ್ತರು, ಜೀವನದ ಜಂಜಾಟಗಳಿಂದ ಮುಕ್ತರಾದವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.