ADVERTISEMENT

ಬೆರಗಿನ ಬೆಳಕು | ಕೇವಲ ಒಳ್ಳೆಯ ಭಾವನೆ ಸಾಕೇ?

ಡಾ. ಗುರುರಾಜ ಕರಜಗಿ
Published 16 ಏಪ್ರಿಲ್ 2023, 23:30 IST
Last Updated 16 ಏಪ್ರಿಲ್ 2023, 23:30 IST
   

ಮುದಿಕುರುಡಿ ಹೊಂಗೆಯನು “ಬಾದಾಮಿ, ಕೋ”ಯೆನುತ |
ಪದುಳದಿಂ ಮೊಮ್ಮಂಗೆ ಕೊಡಲು ಸಿಹಿಯಹುದೆ? ||
ಹೃದಯವೊಳಿತಾದೊಡೇಂ? ತಿಳಿವಿಹುದೆ? ಜಾಣಿಹುದೆ? ||
ಸುಧೆ ಬಂತೆ ಸುಲಭದಲಿ? - ಮಂಕುತಿಮ್ಮ || 863||

ಪದ-ಅರ್ಥ: ಕೋ=ತೆಗೆದುಕೊ, ಪದುಳದಿಂ=ಪ್ರೀತಿಯಿಂದ, ಮೊಮ್ಮಂಗೆ=ಮೊಮ್ಮಗನಿಗೆ,
ಹೃದಯವೊಳಿತಾದೊಡೇಂ=ಹೃದಯ+ಒಳಿತು +ಆದೊಡೇಂ(ಆದರೇನು), ತಿಳಿದಿಹುದೆ= ತಿಳಿವು+ಅಹುದೆ, ಜಾಣಿಹುದೆ= ಜಾಣತನವಿಹುದೆ,ಸುಧೆ = ಅಮೃತ
ವಾಚ್ಯಾರ್ಥ: ಮುದುಕಿಯಾದ ಕುರುಡಿ ಹೊಂಗೆಮರದ ಬೀಜವನ್ನು ಹಿಡಿದುಕೊಂಡು, ಬಾದಾಮಿಯನ್ನು ತೆಗೆದುಕೋ ಎಂದು ಪ್ರೀತಿಯಿಂದ
ಮೊಮ್ಮಗನಿಗೆ ಕೊಟ್ಟರೆ ಅದು ಸಿಹಿಯಾಗುವುದೆ? ಹೃದಯದಲ್ಲಿ ಎಷ್ಟು ಒಳ್ಳೆಯ ಭಾವನೆ ಇದ್ದರೇನು, ತಿಳುವಳಿಕೆ ಇದೆಯೇ, ಜಾಣತನವಿದೆಯೇ? ಅಮೃತ ಸುಲಭದಲ್ಲಿ ಬಂದೀತೇ?

ವಿವರಣೆ: ಗರುಡ ಮಹಾವಿಷ್ಣುವಿನ ಅರಮನೆಯ ಬಾಗಿಲಲ್ಲಿ ಕುಳಿತಿದ್ದ. ಅಲ್ಲಿಗೆ ಯಮರಾಜ ಬಂದ. ಗರುಡನಿಗೆ ಅಭಿವಾದನೆ ಮಾಡಿ, ಎಡಗಡೆಗೆ ನೋಡಿದ. ಅಲ್ಲೊಂದು ಗುಬ್ಬಚ್ಚಿ ಕುಳಿತಿದೆ. ಅದನ್ನು ಕಂಡು ಆಶ್ಚರ್ಯದಿಂದ ಹುಬ್ಬೇರಿಸಿ ಒಳಗೆ ನಡೆದ. ಗುಬ್ಬಚ್ಚಿ ಬಿಕ್ಕಿ ಬಿಕ್ಕಿ ಅಳತೊಡಗಿತು. ಯಮ ತನ್ನನ್ನು ನೋಡಿದ ರೀತಿಯಿಂದ ತನ್ನ ಆಯುಷ್ಯ ಮುಗಿಯಿತೆಂದು ಖಚಿತವಾಯಿತು. ಗರುಡ ಮಹಾಶಕ್ತಿಶಾಲಿಯಾದರೂ ಪಕ್ಷಿಯೇ ತಾನೇ? ಜಾತಿ ಪ್ರೇಮ ಉಕ್ಕೇರಿತು. ಗುಬ್ಬಚ್ಚಿಯಿಂದ ಗಾಬರಿಯ ಕಾರಣವನ್ನು ಕೇಳಿ, ಭಯಪಡಬೇಡ, ಯಮರಾಜ ನಿನಗೆ ಏನೂ ಮಾಡದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು ಎಂದು ಗುಬ್ಬಚ್ಚಿಯನ್ನು ಹಗುರವಾಗಿ ತನ್ನ ಕೊಕ್ಕಿನಲ್ಲಿ ಹಿಡಿದು ಆಕಾಶಕ್ಕೆ ಹಾರಿತು. ಗರುಡ ಮನೋವೇಗದಲ್ಲಿ ಹೋಗುವ ಪಕ್ಷಿ. ಒಂದು ಕ್ಷಣದಲ್ಲಿ ಗುಬ್ಬಚ್ಚಿಯನ್ನು ಗಂಧಮಾದನ ಪರ್ವತದ ತುತ್ತತುದಿಯಲ್ಲಿ ಇಳಿಸಿ, ಮರಳಿ ಬಂದು ತನ್ನ ಸ್ಥಳದಲ್ಲಿ ಕುಳಿತುಕೊಂಡಿತು. ಯಮರಾಜ ಹೊರಗೆ ಬಂದು ಗುಬ್ಬಚ್ಚಿಯು ಕುಳಿತಿದ್ದ ಸ್ಥಳವನ್ನು ಕಂಡು ಆಶ್ಚರ್ಯ ತೋರಿದ. ಗರುಡ ಕೇಳಿದ, ಏಕೆ, ಆ ಗುಬ್ಬಚ್ಚಿಯ ಪ್ರಾಣಹರಣ ಮಾಡಬೇಕೆಂದಿದ್ದೀಯಾ? ನಿನಗೆ ಸಿಗದ ಹಾಗೆ ವ್ಯವಸ್ಥೆ ಮಾಡಿದ್ದೇನೆ.

ನೀನು ಬರೆದ ಹಣೆಬರಹವನ್ನು ಯಾರೂ ಬದಲಿಸಲಾರರೆಂಬ ಅಹಂಕಾರವಲ್ಲವೇ ನಿನಗೆ? ಇಲ್ಲ, ನನಗೆ ಆಶ್ಚರ್ಯವಾದದ್ದು ಈ ಗುಬ್ಬಚ್ಚಿ ಈಗ ಯಾಕೆ ಇಲ್ಲಿದೆ? ಈ ಕ್ಷಣದಲ್ಲಿ ಅದರ ಪ್ರಾಣ ಗಂಧಮಾದನ ಪರ್ವತದ ತುತ್ತತುದಿಯಲ್ಲಿ ಆಗಬೇಕಿತ್ತು. ಅದು ವರ್ಷಗಟ್ಟಲೇ ಹಾರಿದರೂ ಅಲ್ಲಿಗೆ ತಲುಪಲಾರದು. ಮನೋವೇಗದಿಂದ ಸಾಗುವ ನೀನು ಮಾತ್ರ ಅದನ್ನು ಅಲ್ಲಿಗೆ ತಲುಪಿಸಿ ನನ್ನ ಬರೆಹ ತಪ್ಪದಂತೆ ನೋಡಿಕೊಂಡೆ. ಗುಬ್ಬಚ್ಚಿ ಅಲ್ಲಿಯೇ ಸತ್ತಿದೆ ಎಂದ ಯಮರಾಜ. ಗರುಡನ ಉದ್ದೇಶ ಒಳ್ಳೆಯದಿತ್ತು. ಆದರೆ ಒಳಿತಾಯಿತೇ? ಕಗ್ಗ ಅದನ್ನೇ ತಿಳಿಸುತ್ತದೆ. ಕುರುಡಿಯಾದ ಅಜ್ಜಿ ಕೈಯಲ್ಲಿ ಹೊಂಗೆಯ ಬೀಜವನ್ನು ಹಿಡಿದುಕೊಂಡು, ಬಾದಾಮಿಯೆಂದು ಮೊಮ್ಮಗನಿಗೆ ಕೊಟ್ಟರೆ ಸಿಹಿಯಾದೀತೇ? ಹೃದಯ ಒಳ್ಳೆಯದು, ಆದರೆ ತಿಳುವಳಿಕೆ ಇದೆಯೆ? ಜಾಣತನವಿದೆಯೆ? ಆ ಜಾಣತನ, ತಿಳುವಳಿಕೆ ಸುಲಭದಲ್ಲಿ ಬರುವುದಲ್ಲ. ಸಮುದ್ರಮಥನ ಮಾಡಿದಾಗ ಅಮೃತ ಸುಲಭದಲ್ಲಿ ಬಂತೇ? ಏನೇನೋ ವಸ್ತುಗಳು, ವಿಷ ಬಂದ ಮೇಲೆ ಅಮೃತ ಸಿದ್ಧಿಯಾಯಿತು. ಅದರಂತೆಯೇ ಆ ಜಾಣತನ, ತಿಳುವಳಿಕೆಗೆ ತಾಳ್ಮೆ, ಪರಿಶ್ರಮ ಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT