ಜಗದ ಸೊಗದರಸಿಕೆಯ ಫಲ, ನೋಡು, ಬರೀ ಕಲಹ |
ಮೃಗಗಳಾವೇಶಗೊಳಲಪ್ಪುದಿನ್ನೇನು ? ||
ಮುಗಿಯುವುದು ಕಾಳ್ಗಿಚ್ಚು ವನ ಬೂದಿಯಾದಂದು
ಹಗೆೆತನವುಮಂತು ಬಿಡು – ಮಂಕುತಿಮ್ಮ || 864
ಪದ-ಅರ್ಥ: ಸೊಗದರಸಿಕೆಯ=ಸೊಗದ+ಅರಸಿಕೆಯ(ಹುಡುಕುವಿಕೆಯ), ಮೃಗಗಳಾವೇಶಗೊಳಲಪ್ಪುದಿನ್ನೇನು=ಮೃಗಗಳ+ಆವೇ
ಶಗೊಳಲು+ಅಪ್ಪುದು(ಆಗುವುದು)+ಇನ್ನೇನು, ಕಾಳ್ಗಿಚ್ಚು=ಕಾಡಿನ ಬೆಂಕಿ, ಹಗೆತನವುಮಂತು=ಹಗೆತನವು+ಅಂತು.
ವಾಚ್ಯಾರ್ಥ: ಸುಖದ, ಸಂತೋಷದ ಅರಸುವಿಕೆಯ ಫಲ ಕೇವಲ ಕಲಹ. ಆಗ ಕಾಣುವುದು ಪಶುಗಳ ಆವೇಶದ ನಡಿಗೆ. ಕಾಡಿನಲ್ಲಿ ಬೆಂಕಿ ಹರಡಿದರೆ ಅದು ಬೂದಿಯಾದಾಗಲೇ ಮುಗಿಯುವುದು. ದ್ವೇಷ ಸಾಧನೆಯೂ ಹಾಗೆಯೇ.
ವಿವರಣೆ: ಪ್ರತಿಯೊಬ್ಬರಿಗೂ ಸುಖದ ಆಸೆ ಇದೆ. ಅವುಗಳಿಗೆ ಅಂತ್ಯವಿಲ್ಲ. ದೊರಕಬಹುದಾದ ಸುಖದ ಬೆನ್ನಟ್ಟಿ ಮನುಷ್ಯ ಓಡುತ್ತಾನೆ. ಸಿಖ್ ಧರ್ಮದ ಪರಮಪವಿತ್ರ ಗ್ರಂಥ ಗುರ್ಬಾನಿ (ಶ್ರೀ ಗುರು ಗ್ರಂಥ ಸಾಹಿಬ್) ಹೇಳುತ್ತದೆ, “ಸುಖ ಕಾ ಮಾಗೈ ಶುಭು ಕೋ ದು:ಖ ನ ಮಾಗೈ ಕೋಯಿ | ಸುಖಿ ಕೌ ದು:ಖು ಅಗಳಾ ಮನಮುಖಿ ಬೂಜ್ ನ ಹೋ ಕೋಯಿ ||” “ಪ್ರತಿಯೊಬ್ಬರೂ ಸುಖಕ್ಕಾಗಿ ಕೇಳುತ್ತಾರೆ ಆದರೆ ದು:ಖವನ್ನು ಯಾರೂ ಕೇಳುವುದಿಲ್ಲ. ಆದರೆ ಸುಖದ ಹಿನ್ನೆಲೆಯಲ್ಲೇ ದು:ಖವಿದೆ. ಅದನ್ನು ತಿಳಿದುಕೊಳ್ಳುವ ಮನವಿದ್ದವರು ಇಲ್ಲ”. ನನಗೆ ಸಾಮ್ರಾಜ್ಯದ ಸಂತೋಷ ಬೇಕು ಎಂದು ದುರ್ಯೋಧನ ಛಲತೊಟ್ಟ. ಅದು ನಮ್ಮದೇ ಸಾಮ್ರಾಜ್ಯವೆಂದರು ಪಾಂಡವರು. ರಾಜ್ಯ ದೊರಕಿದರೆ ಸಂತೋಷ ದಕ್ಕೀತು ಎಂದುಕೊಂಡು ಹದಿನೆಂಟು ದಿನ ಹೋರಾಡಿದರು. ಯುದ್ಧದ ಕೊನೆಯಲ್ಲಿ ಉಳಿದವರು ಕೆಲವೇ ಜನರು. ಇಡೀ ಸಾಮ್ರಾಜ್ಯ ಸ್ಮಶಾನವಾಗಿತ್ತು. ಅಪೇಕ್ಷಿಸಿದ ಸುಖ ದೊರಕಿತೇ? ಈ ದಳ್ಳುರಿಯಲ್ಲಿ ಅಮಾಯಕರಾದ ಲಕ್ಷಾಂತರ ಸೈನಿಕರು ಬೂದಿಯಾಗಿ ಹೋದರು. ತನ್ನ ಸಾಮ್ಯಾಜ್ಯವನ್ನು ವಿಸ್ತರಿಸುವ ಆಸೆಯಿಂದ ಸಾಮ್ರಾಟ್ ಅಶೋಕ ದಂಡನ್ನು ಹುರಿಗೊಳಿಸಿ ದಂಡಯಾತ್ರೆ ಮಾಡಿದ. ಕಳಿಂಗವನ್ನು ನೆಲಸಮಮಾಡಿಬಿಟ್ಟ. ರಾಜ್ಯ ಗೆದ್ದ ಸುಖದ ಹಿಂದೆಯೇ ನುಗ್ಗಿ ಬಂತು ಅನಾಹುತವನ್ನು ಮಾಡಿದ ಅಪರಾಧಿ ಪ್ರಜ್ಞೆ. ಅದು ಅವನನ್ನು ಬುದ್ಧದಾಸನನ್ನಾಗಿಸಿತು. ಕಗ್ಗ ಹೇಳುತ್ತದೆ, ಸುಖವನ್ನು ಅರಸುತ್ತ ಹೋದರೆ ದೊರಕುವುದು ಕಲಹ, ಅಶಾಂತಿ. ಯಾಕೆಂದರೆ ಸುಖಸಾಧನೆಯ ಉನ್ಮಾದದಲ್ಲಿದ್ದವನಲ್ಲಿ ಜಾಗ್ರತವಾಗಿರುವುದು ಪಶುಗಳ ಅವೇಶ.
ಈ ಮನಸ್ಥಿತಿಯಲ್ಲಿದ್ದವರಿಂದ ಏನನ್ನು ಅಪೇಕ್ಷಿಸಲು ಸಾಧ್ಯ? ಶಾಂತಿ, ನೆಮ್ಮದಿ, ಸಹಬಾಳ್ವೆಗಳು ಇಂಥ ಮನೋಭೂಮಿಕೆಯಲ್ಲಿ ್ಲ ಹೊರಹೊಮ್ಮುವುದು ಅಸಾಧ್ಯ. ಕಾಡಿನಲ್ಲಿ ಬೆಂಕಿಬಿದ್ದರೆ, ಇಡೀ ಕಾಡನ್ನು ತಿಂದು ಭಸ್ಮ ಮಾಡಿಬಿಡುತ್ತದೆ. ನಳನಳಿಸುತ್ತಿದ್ದ ಮರ, ಗಿಡಗಳು ಸುಟ್ಟು ಹೋಗುತ್ತವೆ. ಅಂತೆಯೇ ದ್ವೇಷದ ಬೆಂಕಿ ಹುಟ್ಟಿಕೊಂಡರೆ ಅದರಲ್ಲಿ ಭಾಗಿಯಾದವರನ್ನೆಲ್ಲ ನಾಶಮಾಡುತ್ತದೆ. ದ್ವೇಷ ಮಾಡಿದವನು, ದ್ವೇಷಕ್ಕೆ ಒಳಗಾದವನು ಇಬ್ಬರೂ ಆ ಬೆಂಕಿಯಲ್ಲಿ ಕರಕಾಗಿ ಹೋಗುತ್ತಾರೆ. ದ್ವೇಷವೆನ್ನುವುದು ಬೆಂಕಿ ಇದ್ದಂತೆ. ನಾವು ಅದನ್ನು ಬೊಗಸೆಯಲ್ಲಿ ಹಿಡಿದು ಮತ್ತೊಬ್ಬರ ತಲೆಯ ಮೇಲೆ ಹಾಕಲು ಹೋದಾಗ, ಅದು ಮೊದಲು ಸುಡುವುದು ನನ್ನ ಕೈಯನ್ನು. ನಂತರ ಅದು ಇನ್ನೊಬ್ಬರನ್ನು ಸುಡುತ್ತದೆ. ಹೇಗೆ ಕಾಡಿನ ಬೆಂಕಿ ನಿರಪರಾಧಿಗಳಾದ ಗಿಡಮರಗಳನ್ನು ನಾಶಮಾಡುತ್ತದೋ, ಹಾಗೆಯೇ ದ್ವೇಷ ಭಾಗೀದಾರರನ್ನು ಮಾತ್ರವಲ್ಲ, ಅವರ ಪರಿವಾರದವರನ್ನು, ಅನೇಕ ಮುಗ್ಧರನ್ನು ನಾಶ ಮಾಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.