ಯತನಂ ಕರ್ತವ್ಯವದು, ನಮಗೆ ವಿದ್ಯಾಭ್ಯಾಸ |
ಹಿತಪರಿಜ್ಞಾನ ಯತ್ನಾನುಭವ ಫಲಿತ ||
ಸತತಯತ್ನದಿನಾತ್ಮಶಕ್ತಿ ಪರಿವರ್ಧಿಪುದು |
ಯತನ ಜೀವನಶಿಕ್ಷೆ – ಮಂಕುತಿಮ್ಮ || 867 ||
ಪದ-ಅರ್ಥ: ಯತನ=ಯತ್ನ, ಯತ್ನಾನುಭವ=ಯತ್ನ+ಅನುಭವ, ಫಲಿತ=ಫಲ, ಪ್ರಯೋಜನ, ಸತತಯತ್ನದಿನಾತ್ಮಶಕ್ತಿ=ಸತತ+ಯತ್ನದಿನ್+ಆತ್ಮಶಕ್ತಿ, ಪರಿವರ್ಧಿಪುದು=ವೃದ್ಧಿಸುವುದು.
ವಾಚ್ಯಾರ್ಥ: ಪ್ರಯತ್ನ ನಮ್ಮ ಕರ್ತವ್ಯ. ಅದು ನಮಗೆ ಕಲಿಕೆಯ ವಿಧಾನ. ಪ್ರಯತ್ನಗಳ ಅನುಭವದಿಂದ ದೊರೆಯುವುದೆ ಹಿತವಾವುದು ಎಂಬುದರ ಪರಿಜ್ಞಾನ. ಸತತ ಪ್ರಯತ್ನದಿಂದಲೇ ಆತ್ಮಶಕ್ತಿಯ ವೃದ್ಧಿ. ಪ್ರಯತ್ನವೇ ನಮಗೆ ಜೀವನ ಶಿಕ್ಷಣ.
ವಿವರಣೆ: ಶರಣ ಆಯ್ದಕ್ಕಿ ಮಾರಯ್ಯನ ವಚನ ಹೀಗೆ. ಕಾಯಕದಲ್ಲಿ ನಿರತನಾದಡೆ, ಗುರುದರ್ಶನವಾದಡೂ ಮರೆಯಬೇಕು. ಲಿಂಗಪೂಜೆಯಾದಡೂ ಮರೆಯಬೇಕು. ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು. ಕಾಯಕವೇ ಕೈಲಾಸವಾದ ಕಾರಣ. ಅಮರೇಶ್ವರಲಿಂಗವಾಯಿತ್ತಾದಡೂ
ಕಾಯಕದೊಳಗು. ಎಲ್ಲಕ್ಕಿಂತ ಕಾಯಕ, ಕರ್ತವ್ಯ ಬಹಳ ಮುಖ್ಯವಾದದ್ದು. ಯಾಕೆಂದರೆ ಕಾಯಕವೇ ಕೈಲಾಸ. ಅದು ಯತ್ನವಿಲ್ಲದೆ ಸಾಧ್ಯವಾಗಲಾರದು. ಆದ್ದರಿಂದ ಪ್ರಯತ್ನ ಅವಶ್ಯಮಾತ್ರವಲ್ಲ, ಅದು ನಮ್ಮ ಕರ್ತವ್ಯ. ಕರ್ತವ್ಯದಿಂದಲೇ ನಮಗೆ ತಿಳುವಳಿಕೆ, ಜ್ಞಾನ ಬರುವುದು. “ನೀನು ಸದಾ ಕರ್ಮವನ್ನು ಮಾಡುತ್ತಲೇ ಇರಬೇಕು. ಕರ್ಮವಿಲ್ಲದೆ ಮುಕ್ತಿಯಿಲ್ಲ” ಎನ್ನುತ್ತದೆ ಭಗವದ್ಗೀತೆ. ಸತತವಾಗಿ ಪ್ರಯತ್ನ ಮಾಡುತ್ತಲೇ ಇರುವಾಗ ಯಶಸ್ಸು ಬರಬಹುದು, ಸೋಲೂ ಆಗಬಹುದು. ಈ ಯಶಸ್ಸು, ಸೋಲುಗಳು ಜೀವನದ ಪಾಠಗಳು. ಯಾವುದು ನನಗೆ ಹಿತವಾದದ್ದು, ಯಾವುದು ಅಹಿತವಾದದ್ದು ಎಂಬುದು ತಿಳಿಯುವುದು ಈ ಕರ್ಮ ಮಾಡುವಾಗಲೇ. ಮನುಷ್ಯ ಸತತ ಪ್ರಯತ್ನ ಮಾಡುವಾಗ ಅವನ ಕೈ ಮನಸ್ಸು ಬುದ್ಧಿಗಳೆಲ್ಲ ಸಂಲಗ್ನಗೊಳ್ಳಬೇಕು. ಆಗಲೇ ಮನುಷ್ಯ ದೈವತ್ವಕ್ಕೇರುವುದು. ಹೀಗೆ ಮೈಮರೆತು ಪ್ರಯತ್ನ ಮಾಡಿದಾಗಲೇ ಜಗತ್ತು ತನ್ನ ಹೃದಯವನ್ನು ತೆರೆಯುತ್ತದೆ.
ಉಳಿದವರಿಗೆ ಅಸಾಧ್ಯವೆನ್ನಿಸಿದ್ದ ಎವರೆಸ್ಟ್, ಹಿಲರಿ ಮತ್ತು ತೇನ್‌ಸಿಂಗ್‌ರಿಗೆ ಒಲಿದದ್ದು ಹೇಗೆ? ದಾರಿಯಲ್ಲಿದ್ದ ಹುಡುಗನನ್ನು ಹುರಿಗೊಳಿಸಿ ಸಾಮ್ರಾಟನನ್ನಾಗಿಸಿದ ಚಾಣಕ್ಯನ ಹಿಂದಿದ್ದ ಶಕ್ತಿ ಯಾವುದು? ಪಕ್ಷಿಯಂತೆ ಗಾಳಿಯಲ್ಲಿ ಹಾರಬೇಕೆಂದು ಕನಸು ಕಂಡ ಮನುಷ್ಯನನ್ನು, ವಿಮಾನದಲ್ಲಿ ಹಾರಿಸಿದ ರೈಟ್ ಸಹೋದರರ ಸಾಧನೆಯ ಮೂಲ ಶಕ್ತಿ ಯಾವುದು? ಇವೆಲ್ಲವುಗಳ ಉತ್ತರ ಒಂದೇ ಸತತ ಪ್ರಯತ್ನ. ಅದಕ್ಕೆ ಕಗ್ಗ, ಯತ್ನವೇ ವಿದ್ಯಾಭ್ಯಾಸ, ಅದೇ ನಮಗೆ ಹಿತದ ಜ್ಞಾನ ನೀಡುವುದು, ಅದರಿಂದಲೇ ಆತ್ಮಶಕ್ತಿಯ ವೃದ್ಧಿ ಮತ್ತು ಅದೇ ನಮಗೆ ಜೀವನ ಶಿಕ್ಷಣ ಎಂದು ಪ್ರಯತ್ನದ ಅಗತ್ಯತೆಯನ್ನು ಒತ್ತಿ ಹೇಳುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.