ನಿನಗಿರದ ಕಣ್ ಬಾಯಿ ವಾಲ್ಮೀಕಿಗೆಂತಾಯ್ತು ? |
ಮುನಿಕವಿತೆಗೆಂತು ನಿನ್ನೆದೆಯೊಳೆಡೆಯಾಯ್ತು ? ||
ಘನಮಹಿಮನೊಳ್ ಜ್ವಲಿಸುತಿತರರೊಳು ನಿದ್ರಿಸುತೆ |
ಅನಲನೆಲ್ಲರೊಳಿಹನು – ಮಂಕುತಿಮ್ಮ || 571 ||
ಪದ-ಅರ್ಥ: ನಿನಗಿರದ=ನಿನಗೆ+ಇರದ, ವಾಲ್ಮೀಕಿಗೆಂತಾಯ್ತು=ವಾಲ್ಮೀಕಿಗೆ+ ಎಂತು+ಆಯ್ತು, ಮುನಿಕವಿತೆಗೆಂತು=ಮುನಿಕವಿತೆಗೆ+ಎಂತು, ನಿನ್ನೆದೆಯೊಳೆಡೆಯಾಯ್ತು=ನಿನ್ನ+ಎದೆಯೊಳು+ಎಡೆ+ಆಯಿತು, ಜ್ವಲಿಸುತಿತರೊಳು=ಜ್ವಲಿಸುತ+ಇತರೊಳು, ಅನಲನೆಲ್ಲರೊಳಿಹನು=ಅನಲನು(ಬೆಂಕಿಯು)+ಎಲ್ಲರೊಳು+ಇಹನು(ಇರುವನು)
ವಾಚ್ಯಾರ್ಥ: ನಿನಗೆ ಇರದಂಥ ಕಣ್ಣು, ಬಾಯಿ ವಾಲ್ಮೀಕಿಗೆ ದೊರೆತದ್ದು ಹೇಗೆ? ಆ ಮುನಿಯ ಕವಿತೆಗೆ ನಿನ್ನ ಎದೆಯಲ್ಲಿ ಹೇಗೆ ಸ್ಥಾನ ದೊರೆಯಿತು? ಬೆಂಕಿಯು ಮಹಿಮರಲ್ಲಿ ಜ್ವಲಿಸುತ್ತ, ಇತರರಲ್ಲಿ ನಿದ್ರಿಸುತ್ತ ಎಲ್ಲರಲ್ಲಿಯೂ ಇದೆ.
ವಿವರಣೆ: ಮಹರ್ಷಿ ವಾಲ್ಮೀಕಿಗಳು ಸ್ನಾನಕ್ಕೆ ನದೀತೀರಕ್ಕೆ ಹೋದಾಗ ಅಲ್ಲಿ ಎರಡು ಕ್ರೌಂಚ ಪಕ್ಷಿಗಳು ಆಟವಾಡುತ್ತಿರುವುದನ್ನು ಕಂಡರು. ಆಗ ಬೇಡನೊಬ್ಬ ಬಾಣದಿಂದ ಮಿಥುನದೊಳಿದ್ದ ಒಂದನ್ನು ಹೊಡೆದು ಕೊಂದ. ವಾಲ್ಮೀಕಿ ಮಹರ್ಷಿಗಳ ಹೃದಯದಲ್ಲಿ ಹುಟ್ಟಿದ ಕೋಪ, ದುಃಖ ಶ್ಲೋಕರೂಪವಾಗಿ ಹರಿದು ಬಂದಿತು. ಅದು ರಾಮಾಯಣಕ್ಕೆ ಪ್ರಾರಂಭವಾಯಿತು. ಆ ಮಹಾನ್ ಕಾವ್ಯಕ್ಕೆ ಇದೊಂದು ನೆಪವಾಯಿತು. ಇಂತಹ ಅನಾಹುತಗಳನ್ನು ನಾವೆಷ್ಟು ಕಂಡಿಲ್ಲ? ಆದರೆ ನಮಗೆ ಕಾವ್ಯರಚನೆ ಸಾಧ್ಯವಾಗಲೇ ಇಲ್ಲ. ಕಾವ್ಯರಚನೆಯಂತೂ ದೂರ, ಸ್ಫುರಣೆ ಕೂಡ ಆಗಲಿಲ್ಲ. ವಾಲ್ಮೀಕಿಗಳೂ ನಮ್ಮ ಹಾಗೆಯೇ ಮನುಷ್ಯರು, ದೇಹ ಧರಿಸಿದ್ದರು. ಅವರಿಗೆ ಸಾಧ್ಯವಾದದ್ದು ನಮಗೇಕೆ ಸಾಧ್ಯವಾಗುವುದಿಲ್ಲ?
ಹೆಂಡತಿಯ ಮೇಲಿನ ಪ್ರೇಮದಿಂದ ಕುರುಡರಾದ ತುಳಸೀದಾಸರು ಮಧ್ಯರಾತ್ರಿ ಭಾರೀ ಮಳೆಯಲ್ಲಿ ಉಕ್ಕಿ ಹರಿಯುತ್ತಿದ್ದ ನದಿಯನ್ನು ಈಜಿಕೊಂಡು ದಾಟಿ, ಮೇಲಿನ ಮಹಡಿಯಲ್ಲಿದ್ದ ಆಕೆಯನ್ನು ನೋಡಲು ಹಾವನ್ನೇ ಹಗ್ಗವೆಂದು ಭಾವಿಸಿ ಮೇಲೇರಿ ಆಕೆಯನ್ನು ಕಂಡಾಗ, ಆಕೆ, “ನನ್ನ ಮೇಲಿರುವಷ್ಟು ಪ್ರೇಮ ರಾಮಚಂದ್ರನ ಮೇಲಿದ್ದರೆ ನೀವು ಭವಸಾಗರವನ್ನೇ ದಾಟಿ ಹೋಗುತ್ತಿದ್ದಿರಿ” ಎಂದಳಂತೆ. ಆ ಒಂದು ಮಾತು ಸಾಕಾಯಿತು ತುಳಸೀದಾಸರಿಗೆ. ತಕ್ಷಣವೇ ಪತ್ನಿಯನ್ನೇ ಗುರುವೆಂದು ಸ್ವೀಕರಿಸಿ, ಏಕಾಗ್ರತೆಯಿಂದ ರಾಮಚಂದ್ರನನನ್ನು ಧ್ಯಾನಿಸಿ “ರಾಮಚರಿತಮಾನಸ”ವನ್ನು ರಚಿಸಿ ಅಮರರಾದರು. ನಾವೂ ಅವರಂತೆಯೇ ಮನುಷ್ಯರು. ನಮಗೆ ಹೆಂಡತಿಯ ಮೇಲೆ ಆ ಉತ್ಕಟ ಪ್ರೇಮವೂ ಬರಲಿಲ್ಲ, ದೈವಕೃಪೆಯೂ ಆಗಲಿಲ್ಲ. ಇದು ಕೇವಲ ಅವರಿಗೆ ಮಾತ್ರ ಆದದ್ದು ಹೇಗೆ?
ಇದು ಎಲ್ಲ ಕ್ಷೇತ್ರಗಳಲ್ಲೂ ಆದದ್ದು. ಕೆಲವರಿಗೆ ಸುಲಭಸಾಧ್ಯವಾದದ್ದು ಬಹಳಷ್ಟು ಜನರಿಗೆ ಕಲ್ಪನೆಗೂ ನಿಲುಕಲಾರದು. ಇದಕ್ಕೆ ಕಾರಣವೊಂದನ್ನು ಕಗ್ಗ ನೀಡುತ್ತದೆ. ಸಾಧನೆಯ ಬೆಂಕಿ, ಜ್ಞಾನಾಗ್ನಿ ಎಲ್ಲರೊಳಗೂ ಇರುತ್ತದೆ. ಕೆಲವರು ಅದನ್ನು ಜ್ಞಾನದಿಂದ, ಏಕಾಗ್ರತೆಯಿಂದ, ಛಲದಿಂದ ಪ್ರಜ್ವಲಿಸಿ ಇಟ್ಟುಕೊಂಡಿರುತ್ತಾರೆ. ಬಹಳಷ್ಟು ಜನರು ತಮಸ್ಸಿನಿಂದ, ಅಜ್ಞಾನದಿಂದ ಆ ಬೆಂಕಿಗೆ ಬೂದಿ ಮುಚ್ಚಿಕೊಂಡಿರುವಂತೆ ಮಾಡಿರುತ್ತಾರೆ. ಆ ಬೆಂಕಿ ಎಲ್ಲರಲ್ಲಿಯೂ ಇದೆ. ಯಾರು ಅದನ್ನು ಪ್ರಜ್ವಲಿಸಿ ಇಟ್ಟುಕೊಂಡಿರುತ್ತಾರೋ, ಅವರ ದೃಷ್ಟಿ, ಸಾಧನೆಗಳೇ ಬೇರೆ. ಉಳಿದವರಿಗೆ ಅದು ಕೇವಲ ಜಠರಾಗ್ನಿ ಮಾತ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.