ADVERTISEMENT

ಬೆರಗಿನ ಬೆಳಕು: ದೈವದ ಕರಣ

ಡಾ. ಗುರುರಾಜ ಕರಜಗಿ
Published 22 ಫೆಬ್ರುವರಿ 2022, 19:30 IST
Last Updated 22 ಫೆಬ್ರುವರಿ 2022, 19:30 IST
ಡಿ.ವಿ.ಗುಂಡಪ್ಪ
ಡಿ.ವಿ.ಗುಂಡಪ್ಪ   

ವಕ್ತ್ರವುಂಟೆಲ್ಲರಿಗೆ, ವರ್ಚಸೋರೊರ್ವಂಗೆ |
ಕತ್ತಿ ಪುಣ್ಯದೊಳುಂಟು, ಶಕ್ತಿ ಸಹಜದಲಿ ||
ವ್ಯಕ್ತಿಪ್ರಭಾವವೀ ಲೋಕಚರಿತೆಯ ಕೀಲು |
ಹಸ್ತವದು ದೈವಕೆಲೊ – ಮಂಕುತಿಮ್ಮ || 570 ||

ಪದ-ಅರ್ಥ: ವಕ್ತ್ರವುಂಟೆಲ್ಲರಿಗೆ=ವಕ್ತ್ರ(ಮುಖ)+ಉಂಟು+ಎಲ್ಲರಿಗೆ, ವರ್ಚಸೋರೊರ್ವಂಗೆ=ವರ್ಚಸು(ಮುಖದ ಕಾಂತಿ)+ಓರೋರ್ವಂಗೆ(ಒಬ್ಬೊಬ್ಬರಿಗೆ), ಪುಣ್ಯ=ಹಣ, ದೈವಕೆಲೊ=ದೈವಕೆ+ಎಲೊ.

ವಾಚ್ಯಾರ್ಥ: ಎಲ್ಲರಿಗೂ ಮುಖವಿದೆ ಆದರೆ ಕೆಲವರಿಗೆ ಮಾತ್ರ ವರ್ಚಸ್ಸು ಇದೆ. ಕತ್ತಿಯನ್ನು ಹಣದಿಂದ ಕೊಳ್ಳಬಹುದು ಆದರೆ ಶಕ್ತಿ ಸಹಜವಾದದ್ದು. ವ್ಯಕ್ತಿಗಳ ಪ್ರಭಾವವೇ ಲೋಕಚರಿತ್ರೆಯ ಕೀಲು. ಅದೇ ದೈವದ ಕೈ.

ADVERTISEMENT

ವಿವರಣೆ: ನೆಪೋಲಿಯನ್ ಬೋನಾಪಾರ್ಟಿ ಫ್ರೆಂಚ್ ಮಿಲಿಟರಿ ಮತ್ತು ರಾಜಕೀಯ ನಾಯಕನಾಗಿದ್ದವನು. ಹತ್ತು ವರ್ಷಗಳ ಕಾಲ ಫ್ರೆಂಚ್ ಚಕ್ರವರ್ತಿಯಾಗಿದ್ದವನು. ಮುಂದೆ ವಾಟರ್‌ಲೂ ಕದನದಲ್ಲಿ ಸೋತ. ಅವನನ್ನು ಸೇಂಟ್ ಹೆಲೆನಾ ದ್ವೀಪಕ್ಕೆ ಗಡಿಪಾರು ಮಾಡಲಾಯಿತು. ಅಲ್ಲಿ ನೆಪೋಲಿಯನ್ ಏಕಾಂಗಿ. ಅವನನ್ನು ಕಾಯಲು ಸೈನಿಕರ, ಅಧಿಕಾರಿಗಳ ದಂಡೇ ಇತ್ತು. ಆತ ದ್ವೀಪದಲ್ಲಿ ತಿರುಗಾಡುತ್ತಿದ್ದಾಗ ಅವನು ಹತ್ತಿರ ಬಂದೊಡನೆ ಕಾಯಲು ನಿಯೋಜಿತರಾಗಿದ್ದ ಸೈನಿಕರು ಎದ್ದು ನಿಂತು ಅವನಿಗೆ ಸೆಲ್ಯೂಟ್ ಮಾಡುತ್ತಿದ್ದರಂತೆ. ಒಂದು ಸಲ ಅವರು ಯೋಚಿಸಿದರು. ನೆಪೋಲಿಯನ್ ಒಬ್ಬ ಕೈದಿ. ಅವನನ್ನು ಕಾಯುವವರು ನಾವು. ನಾವೇಕೆ ಅವನು ಬಂದಾಗ ಎದ್ದು ನಿಂತು ಗೌರವ ತೋರಿಸಬೇಕು? ಇನ್ನು ಮೇಲೆ ಹಾಗೆ ಮಾಡುವುದು ಬೇಡ. ಅವನು ತಿರುಗಾಡುತ್ತ ಹೋಗಲಿ. ಅವನನ್ನು ಕಾಣದವರಂತೆ ಇದ್ದುಬಿಡಬೇಕು ಎಂದು ತೀರ್ಮಾನ ಮಾಡಿಕೊಂಡರು. ಸಂಜೆಗೆ ಮತ್ತೆ ನೆಪೋಲಿಯನ್ ಬಂದ. ಇವರು ಗಟ್ಟಿಯಾಗಿ ಕೂತಿದ್ದರು. ಆತ ಹತ್ತಿರ ಬರುತ್ತಿದ್ದಂತೆ ಇವರ ಎದೆಬಡಿತ ಜೋರಾಯಿತು. ಆತ ಇನ್ನೂ ಹತ್ತಿರ ಬರುತ್ತಿದ್ದಂತೆ ಇವರು ಥಟ್ಟನೇ ಮೇಲೆದ್ದು ಸೆಲ್ಯೂಟ್ ಮಾಡಿ ನಿಂತರು! ನಂತರ ತಾವು ಹಾಗೆ ಮಾಡಿದ್ದೇಕೆ ಎಂದು ಚಿಂತಿಸಿದರು. ಅವರಲ್ಲೊಬ್ಬ ಹೇಳಿದ, ‘ಏನು ಮಾಡುವುದು, ನೆಪೋಲಿಯನ್ ಮುಖದ ಮೇಲಿನ ವರ್ಚಸ್ಸೇ ಹಾಗಿದೆ. ಅವನು ಕೈದಿಯಾಗಿದ್ದರೂ ಅವನ ವರ್ಚಸ್ಸು ಚಕ್ರವರ್ತಿಯದೇ’.

ಈ ಮಾತನ್ನು ಕಗ್ಗ ವಿವರಿಸುತ್ತದೆ. ಎಲ್ಲರಿಗೂ ಮುಖ ಇದ್ದೇ ಇರುತ್ತದೆ. ಆದರೆ ಕೆಲವೇ ಜನರ ಮುಖದ ಮೇಲೆ ವರ್ಚಸ್ಸು, ಕಾಂತಿ ಇರುತ್ತದೆ. ಅದನ್ನು ಕಂಡೊಡನೆ ಗೌರವ ನೀಡಬೇಕು ಎನ್ನಿಸುತ್ತದೆ. ಅದೇ ರೀತಿ ಒಳ್ಳೊಳ್ಳೆಯ ಖಡ್ಗಗಳು ಹಣ ಕೊಟ್ಟರೆ ದೊರಕುತ್ತವೆ. ಆದರೆ ಅದನ್ನು ಸಮರ್ಥವಾಗಿ ಬಳಸುವ ಶಕ್ತಿಯನ್ನು ಪರಿಶ್ರಮದಿಂದ ಸಂಪಾದಿಸಬೇಕಾಗುತ್ತದೆ. ಬರೀ ಮುಖದಿಂದ, ಬರೀ ಖಡ್ಗದಿಂದ ಏನೂ ಆಗುವುದಿಲ್ಲ. ಅದಕ್ಕೆ ವರ್ಚಸ್ಸು, ಶಕ್ತಿ ಬೇಕು. ಹಾಗೆ ಅವುಗಳನ್ನು ಪಡೆದುಕೊಂಡವರೇ ಲೋಕಚರಿತ್ರೆಯನ್ನು ನಿರ್ಮಿಸಿದವರು. ಇವರೇ ವಿಶ್ವಚರಿತ್ರೆಯ ಕೀಲುಗಳು. ಇಂಗ್ಲೀಷಿನಲ್ಲಿ ಮಾತೊಂದಿದೆ. “History is the record of the lives of successful people” (ಇತಿಹಾಸ, ಯಶಸ್ಸಿನ ಜನರ ಜೀವನಗಳ ದಾಖಲೆ). ಆ ವ್ಯಕ್ತಿಗಳ ಜೀವನ ಪ್ರಭಾವ, ಪ್ರಪಂಚದ ಇತಿಹಾಸದ ಮೈಲಿಗಲ್ಲುಗಳು. ಇವರೇ ದೈವದ ಕರಣವಾಗಿ ಬಂದು ಬದುಕನ್ನು ಮುನ್ನಡೆಸಿದವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.