ADVERTISEMENT

ಬೆರಗಿನ ಬೆಳಕು: ವಿಸ್ತಾರದ ಬದುಕು

ಡಾ. ಗುರುರಾಜ ಕರಜಗಿ
Published 27 ಫೆಬ್ರುವರಿ 2022, 20:25 IST
Last Updated 27 ಫೆಬ್ರುವರಿ 2022, 20:25 IST
ಡಿ.ವಿ.ಗುಂಡಪ್ಪ
ಡಿ.ವಿ.ಗುಂಡಪ್ಪ   

ಪುರುಷಯೋಚನೆಯೆಲ್ಲ ಮುರಿದುಮಣ್ಣಹುದೆಂದು |
ಕೊರಗದಿರು; ಕೆಟ್ಟೆನೆಂದೆಂದುಮೆನ್ನದಿರು ||
ಶರಧಿಯೊಳು ನೀನೊಂದು ಪುಟ್ಟಲೇ ಸಾಯಲೇಂ? |
ಪರವೆಯೇನಿಲ್ಲವೆಲೊ – ಮಂಕುತಿಮ್ಮ || 572 ||

ಪದ-ಅರ್ಥ: ಕೆಟ್ಟೆನೆಂದೆಂದುಮೆನ್ನದಿರು=ಕೆಟ್ಟೆನೆಂದು+ಎಂದೆಂದೂ+ಎನ್ನದಿರು, ಶರಧಿ=ಸಮುದ್ರ, ಪುಟ್ಟಲೇ=ಹುಟ್ಟಿದರೇನು, ಸಾಯಲೇಂ=ಸತ್ತರೇನು, ಪರವೆಯೇನಿಲ್ಲವೆಲೊ=ಪರವೆ(ಚಿಂತೆ, ಕಾಳಜಿ)+ಏನಿಲ್ಲ+ಎಲೊ.

ವಾಚ್ಯಾರ್ಥ: ಪುರುಷ ಯೋಚನೆಗಳೆಲ್ಲ ಸಾಕಾರವಾಗದೆ ಮುರಿದು ಮಣ್ಣಾಗುತ್ತವೆ ಎಂದು ಕೊರಗಬೇಡ, ಕೆಟ್ಟೆನೆಂದು ಎಂದುಕೊಳ್ಳಬೇಡ. ಸಮುದ್ರದಲ್ಲಿ ಒಂದು ಮೀನು ಹುಟ್ಟಿದರೆ, ಸತ್ತರೆ ಸಮುದ್ರಕ್ಕೆ ಯಾವ ಪರಿವೆಯೂ ಇಲ್ಲ.

ADVERTISEMENT

ವಿವರಣೆ: ಇದೊಂದು ಅದ್ಭುತವಾದ ಚೌಪದಿ. ಇದನ್ನು ಎರಡು ಬಗೆಗಳಲ್ಲಿ ಕಾಣಬಹುದು. ಮನುಷ್ಯರು ಮಾಡಿದ ಯೋಜನೆಗಳು, ಕನಸುಗಳು ಎಲ್ಲವೂ ಸಾಕಾರವಾಗುತ್ತವೆಂದು ಹೇಳುವುದು ಸಾಧ್ಯವಿಲ್ಲ. ಅಲೆಗ್ಸಾಂಡರ್ ಪ್ರಪಂಚವನ್ನೇ ಗೆಲ್ಲುವ ಮಹದಾಸೆ ಹೊಂದಿದ್ದ. ಹಿಟ್ಲರ್ ಜಗತ್ತಿನಲ್ಲಿದ್ದ ಎಲ್ಲ ಯಹೂದ್ಯರನ್ನು ಕೊಲ್ಲುವ ಯೋಜನೆ ಹಾಕಿದ್ದ. ಭಾರತ ಒಂದೇ ರಾಷ್ಟ್ರವಾಗಿ ಉಳಿಯಬೇಕೆಂದು ಮಹಾತ್ಮಾಗಾಂಧಿ ಕನಸು ಕಂಡಿದ್ದರು. ಅವರೆಲ್ಲರ ಚಿಂತನೆಗಳು ಕೈಗೂಡಲಿಲ್ಲ. ಆದರೆ ಏನೂ ನಡೆದಿಲ್ಲವೆನ್ನುವಂತೆ ಪ್ರಪಂಚ ಮುನ್ನಡೆದಿದೆ. ಯಾವ ಮಹಾನ್ ಘಟನೆಯ ಆಗುವಿಕೆ ಅಥವಾ ಆಗದೆ ಉಳಿಯುವಿಕೆ ಪ್ರಪಂಚದ ಅಸ್ತಿತ್ವಕ್ಕೆ ಕೊಂಚವೂ ವ್ಯತ್ಯಾಸವನ್ನು ತರಲಿಲ್ಲ. ಆ ವಿಷಯವನ್ನು ಕಗ್ಗ ಹೇಳುತ್ತದೆ. ಅಪಾರವಾದ ಜಲರಾಶಿಯ ಅನಂತವಾದ ಸಮುದ್ರದಲ್ಲಿ ಅದೆಷ್ಟು ತರಹದ ಜೀವರಾಶಿಗಳು! ದೊಡ್ಡ ರಾಕ್ಷಸಾಕಾರದ ತಿಮಿಂಗಲಗಳು, ಲಕ್ಷಾಂತರ ಬಗೆಯ ಚಿಕ್ಕದೊಡ್ಡ ಮೀನುಗಳು ಇವೆ. ಇಂಥ ಸಮುದ್ರದಲ್ಲಿ ಒಂದು ಪುಟ್ಟ ಮೀನು ಹುಟ್ಟಿದರೆ ಅಥವಾ ಸತ್ತು ಹೋದರೆ ಸಮುದ್ರಕ್ಕೆ ಏನಾದರೂ ವ್ಯತ್ಯಾಸವಾಗುತ್ತದೆಯೆ? ಸಮುದ್ರಕ್ಕೆ ಈ ಮೀನು ತನ್ನಲ್ಲಿ ಬದುಕಿತ್ತು ಎಂಬ ವಿಷಯವೂ ತಿಳಿದಿರಲಾರದು. ಅಷ್ಟು ಅಲ್ಪವಾದದ್ದು ಮೀನಿನ ಅಸ್ತಿತ್ವ. ಆ ಮೀನಿಗೆ ಬದುಕು ಸೃಷ್ಟಿಯಾಗಿರಬಹುದು ಅಥವಾ ಮುಗಿದಿರಬಹುದು. ಆದರೆ ಸಮುದ್ರಕ್ಕೆ ಅದಕ್ಕೆ ಮೀನಿನ ಪರಿವೆಯೇ ಇಲ್ಲ. ಆದ್ದರಿಂದ ನಮ್ಮ ವೈಫಲ್ಯಗಳ ಬಗ್ಗೆ ಕೊರಗಿ, ಕೆಟ್ಟೆ ಎನ್ನವುದು ಬೇಡ. ಯಾಕೆಂದರೆ ಈ ಬೃಹತ್ ಪ್ರಪಂಚಕ್ಕೆ ಇಂಥದೊಂದು ಪ್ರಯತ್ನವಾಗಿತ್ತೆಂಬುದೂ ತಿಳಿದಿಲ್ಲ. ಇದು ಒಂದು ದೃಷ್ಟಿ.

ನನಗೆ ಇನ್ನೊಂದು ದೃಷ್ಟಿ ಮುಖ್ಯವಾದದ್ದು ಎನ್ನಿಸುತ್ತದೆ. ಸಮುದ್ರದಂತೆ ಮನುಷ್ಯನೊಬ್ಬನ ಬದುಕೂ ದೀರ್ಘವಾದದ್ದು. ಅರವತ್ತು, ಎಪ್ಪತ್ತು ಅಥವಾ ಎಂಭತ್ತು ವರ್ಷಗಳನ್ನು ಬದುಕಿದ ಮನುಷ್ಯನ ಜೀವಿತಾವಧಿಯಲ್ಲಿ ಆತ ಅನೇಕ ಕನಸುಗಳನ್ನು ಕಾಣುತ್ತಾನೆ, ಹೊಸ ಸಾಹಸಗಳನ್ನು ಮಾಡುತ್ತಾನೆ. ಎಲ್ಲವೂ ಕೈಗೂಡುತ್ತವೆ ಎಂದಲ್ಲ. ಯಾವುದೋ ಒಂದು ಪ್ರಯತ್ನ ಸಾಧಿತವಾಗಲಿಲ್ಲ ಎಂದು ಕೊರಗಿ ಪ್ರಯೋಜನವಿಲ್ಲ. ಜೀವನದ ಪ್ರತಿಯೊಂದು ಪ್ರಯತ್ನ ದೊಡ್ಡ ವರ್ಣಚಿತ್ರದಲ್ಲಿನ ಒಂದು ಪುಟ್ಟ ಚುಕ್ಕೆ ಇದ್ದಂತೆ. ಅದನ್ನೇ ನೆನೆಸಿಕೊಂಡು ಕೊರಗುತ್ತ ಕುಳಿತರೆ ಆ ಚುಕ್ಕೆಯನ್ನು ವರ್ಣಚಿತ್ರದ ತುಂಬೆಲ್ಲ ಬರೆದಂತೆ. ಆಗ ಚಿತ್ರ ಹಾಳಾಗುತ್ತದೆ. ನಾವು ಒಂದು ಪ್ರಯತ್ನದಲ್ಲಿ ವಿಫಲರಾಗಿರಬಹುದು ಆದರೆ ಬದುಕಿನಲ್ಲಲ್ಲ. ಬದುಕೊಂದು ಸಮುದ್ರ. ಪ್ರತಿಯೊಂದು ಪ್ರಯತ್ನ ಒಂದು ಮೀನು ಇದ್ದಂತೆ. ಅದರಿಂದಾಗಿ ಜೀವನದ ಗತಿ ಕೆಡಬಾರದು. ಕೆಲವರು ಯಾವುದೊ ಪ್ರಯತ್ನ ವಿಫಲವಾಯಿತೆಂದು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಕಂಡಾಗ ಬಹಳ ದುಃಖವಾಗುತ್ತದೆ. ಅವರು ಮೀನನ್ನೇ ಸಮುದ್ರವೆಂದು ಭಾವಿಸಿದವರು. ಒಂದು ಮೀನಿನಿಂದ ಸಮುದ್ರ ಗಂಭೀರ ವಿಸ್ತಾರ ಕೆಡದಂತೆ, ಒಂದು ಘಟನೆ, ಪ್ರಯತ್ನ ಜೀವನದ ಸೊಗಡನ್ನು ಕೆಡಿಸಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.