ADVERTISEMENT

ಬೆರಗಿನ ಬೆಳಕು: ಸಿದ್ಧಿಯ ಸ್ಮರಣೆ

ಡಾ. ಗುರುರಾಜ ಕರಜಗಿ
Published 23 ನವೆಂಬರ್ 2022, 19:30 IST
Last Updated 23 ನವೆಂಬರ್ 2022, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಮೇರುಪರ್ವತಕಿಹವು ನೂರೆಂಟು ಶಿಖರಗಳು ದಾರಿ ನೂರಿರಬಹುದು, ನಿಲುವ ಕಡೆ ನೂರು ||
ಸಾರು ನೀಂ ಯಾತ್ರಿಕರಿಗೆಲ್ಲ ಕೆಳೆಯಾಗಿರುತೆ |
ಮೇರು ಸಂಸ್ಮೃತಿಯೆ ಬಲ - ಮಂಕುತಿಮ್ಮ || 763

ಪದ-ಅರ್ಥ: ಪರ್ವತಕಿಹವು=ಪರ್ವತಕೆ+ಇಹವು(ಇವೆ), ಸಾರು=ನಡೆ, ಕೆಳೆಯಾಗಿರುತೆ=ಕೆಳೆ(ಸ್ನೇಹಿ)+ಆಗಿ+ಇರುತೆ(ಇರುತ್ತ), ಸಂಸ್ಮೃತಿ=ಸ್ಮರಣೆ(ಪ್ರೀತಿಯಿಂದ ನೆನಪಿಸಿಕೊಳ್ಳುವುದು)

ವಾಚ್ಯಾರ್ಥ: ಪರ್ವತಕ್ಕೆ ನೂರಾರು ಶಿಖರಗಳು. ಮೇಲಕ್ಕೇರಲು ನೂರಾರು ದಾರಿಗಳು ಮತ್ತು ನೂರಾರು ನಿಲುಗಡೆಗಳು. ಯಾತ್ರಿಕರಿಗೆಲ್ಲ ನೀನು ಜೊತೆಯಾಗಿ ಸಾಗು. ಮೇರುವಿನ ನೆನಪೇ ಶಕ್ತಿ.

ADVERTISEMENT

ವಿವರಣೆ: ಈ ಕಗ್ಗದಲ್ಲಿ ಒಂದು ಸುಂದರ ಪ್ರತಿಮೆ ಇದೆ. ಅದು ಒಂದು ಪರ್ವತದ ಬಗ್ಗೆ ಹೇಳುತ್ತದೆ. ಪರ್ವತಕ್ಕೆ ನೂರಾರು ಶಿಖರಗಳಿವೆ. ಅವುಗಳನ್ನು ತಲುಪಲು ಅನೇಕ ದಾರಿಗಳಿವೆ ಮತ್ತು ದಾರಿಯಲ್ಲಿ ನೂರಾರು ನಿಲುಗಡೆಗಳಿವೆ. ಅನೇಕ ಯಾರ್ತಾರ್ಥಿಗಳು ತಮಗೆ ಸರಿಕಂಡ ದಾರಿಯಲ್ಲಿ ಪರ್ವತವನ್ನು ಏರುತ್ತಿದ್ದಾರೆ.

ನೀನು ಅವರಿಗೆಲ್ಲ ಸ್ನೇಹಿತರಂತೆ ಜೊತೆಯಾಗಿರುತ್ತ ನಡೆ. ಆ ಎತ್ತರದ ಸ್ಮರಣೆಯೇ ಶಕ್ತಿ ಕೊಡುವಂಥದ್ದು.ಇದೊಂದು ಸಂಕೇತ. ಇದು ಸೂಚಿಸುವುದು ಮನುಷ್ಯನ ಊರ್ಧ್ವಮುಖ ಯಾತ್ರೆಯನ್ನು. ಉನ್ನತಿಯ ಮೇರು ಶಿಖರಕ್ಕೆ ನೂರಾರು ದಾರಿಗಳು. ಕೆಲವರು ಸಂಗೀತದ ಮೂಲಕ, ಕೆಲವರು ಸಾಹಿತ್ಯದ ದಾರಿಯಿಂದ, ನಟನೆಯಿಂದ, ಓದಿನಿಂದ, ತ್ಯಾಗದಿಂದ, ಸಹಕಾರದಿಂದ, ಪ್ರೇಮದಿಂದ ತಮ್ಮ ತಮ್ಮ ಜೀವನದ ಮೇರುವನ್ನೇರಿದ್ದಾರೆ. ಪ್ರತಿಯೊಬ್ಬರಿಗೂ ಅವರವರದೇ ಮಾರ್ಗ. ಅವರು ತಮ್ಮ ಆರೋಹಣದಲ್ಲಿ ಅಲ್ಲಲ್ಲಿ ನಿಂತು ಸುಧಾರಿಸಿಕೊಂಡು ಯಶಸ್ಸಿನ ಶಿಖರಗಳನ್ನು ಏರಿದ್ದಾರೆ.

ತೆಂಡೂಲ್ಕರರಿಗೆ ಕ್ರಿಕೆಟ್ ದಾರಿಯಾದರೆ, ಬಿಸ್ಮಿಲ್ಲಾಖಾನ್‌ರಿಗೆ ಶಹನಾಯಿಯಾಯಿತು. ವಿವೇಕಾನಂದರಿಗೆ ಸಮಾಜೋದ್ಧಾರವೇ ಬದುಕಿನ ಗುರಿಯಾದರೆ ಲತಾ ಮಂಗೇಶಕರ್‌ರಿಗೆ ಸಂಗೀತವೇ ತಪಸ್ಸಾಯಿತು. ನೀರಜ್ ಚೋಪ್ರಾ ಭಲ್ಲೆ ಎಸೆದು ಯಶಸ್ಸು ಪಡೆದರೆ, ದೀನರ ಸೇವೆ ಮಾಡಿ ಮದರ್ ತೆರೆಸಾ ಮಾನ್ಯರಾದರು. ಇದರರ್ಥ, ಸಾಧನೆಯ ಶಿಖರಕ್ಕೆ ಹಲವಾರು ದಾರಿಗಳು. ಯಾವ ದಾರಿಯೂ ಸಣ್ಣದಲ್ಲ, ಯಾವುದೂ ದೊಡ್ಡದಲ್ಲ. ಪ್ರತಿಯೊಬ್ಬರೂ ತಮ್ಮಲ್ಲಿ ಅಂತರ್ಗತವಾದ ಶಕ್ತಿಯನ್ನು, ಪ್ರೇರಣೆಯನ್ನು ಬಳಸಿಕೊಂಡು ಬೆಳೆಯುತ್ತಾರೆ. ಕಗ್ಗ ನಮಗೊಂದು ಸಲಹೆ ನೀಡುತ್ತದೆ.

ಸಾಧಕರು ತಮ್ಮ ಊರ್ಧ್ವಮುಖ ಸಾಧನೆಯಲ್ಲಿ ತೊಡಗಿದಾಗ, ಅವರನ್ನು ಗಮನಿಸಿ, ಅವರೊಡನೆ ಸಾಮೀಪ್ಯ ಸಾಧಿಸಿ, ಅವರೊಂದಿಗೆ ಸ್ನೇಹದಿಂದಿರಬೇಕು. ಅವರೊಂದಿಗೆ ನಾವೂ ಎತ್ತರಕ್ಕೆ ಏರಲು ಪ್ರಯತ್ನಿಸಬೇಕು. ಆಗ ನಮಗೂ ಸಾಧನೆಯ ಶಿಖರ ಕಂಡೀತು. ಸಿದ್ಧಿಯ ಶಿಖರದ ಪ್ರೀತಿಯ ಸ್ಮರಣೆಯೇ ನಮ್ಮ ಸಾಧನೆಗೆ ಬಲ ತರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.