ಹಿಂದೆ ಬ್ರಹ್ಮದತ್ತ ರಾಜ್ಯವಾಳುತ್ತಿದ್ದಾಗ ಬೋಧಿಸತ್ವ ಒಬ್ಬ ಶ್ರೇಷ್ಠಿಯ ಮಗನಾಗಿ ಹುಟ್ಟಿದ್ದ. ತಂದೆಯ ನಿಧನಾನಂತರ ತಾನೇ ನಗರದ ಶ್ರೇಷ್ಠಿಯಾಗಿ ವ್ಯವಹಾರ ಮಾಡಿದ. ಒಂದು ದಿನ ತನ್ನಲ್ಲಿ ಶೇಖರವಾಗಿದ್ದ ಅಪಾರ ಸಂಪತ್ತನ್ನು ಗಮನಿಸಿದ. ಈ ಹಣವನ್ನೆಲ್ಲ ನಾನು ಸಂಪಾದನೆ ಮಾಡಲಿಲ್ಲ, ಮಾಡಿದವರು ಮರೆಯಾಗಿ ಹೋಗಿದ್ದಾರೆ. ಅಂದರೆ ಸಂಪಾದಿಸಿದವರು ಅದನ್ನು ಅನುಭವಿಸಲಿಲ್ಲ. ಈ ಸಂಪತ್ತಿನಿಂದ ಪ್ರಯೋಜನವೇನು ಎಂದು ಚಿಂತಿಸಿ ನಗರದಲ್ಲಿ ನಾಲ್ಕು ದಾನ ಶಾಲೆಗಳನ್ನು ನಿರ್ಮಿಸಿ ಸದಾಕಾಲ ದಾನ ಕಾರ್ಯ ನಡೆಯುವಂತೆ ಮಾಡಿದ.
ತಾನು ತೀರುವ ಮೊದಲು ಮಗನಿಗೆ ದಾನಪರಂಪರೆಯನ್ನು ಬೆಳೆಸಿಕೊಂಡು ಹೋಗಲು ಸೂಚನೆಯನ್ನಿತ್ತ. ಮರಣದ ನಂತರ ಶಕ್ರನಾದ. ಅವನ ಮಗ ದಾನವನ್ನು ಮುಂದುವರೆಸಿ ಮರಣದ ತರುವಾಯ ಚಂದ್ರನಾದ. ಅವನ ಮಗ ಹಾಗೆಯೇ ಮುಂದುವರೆದು ಸೂರ್ಯನಾದ, ಅವನ ಮಗ ಪುತ್ರಮಾತಲಿಯಾದ. ಅವನ ಮಗ ಪಂಚಶಿಖ ಗಂಧರ್ವನಾದ. ಆದರೆ ಅವನ ಮಗ, ಆರನೇ ತಲೆಮಾರಿನವ ಮಾತ್ರ ಮಹಾ ಜಿಪುಣ, ಕ್ರೂರಿ, ಸ್ನೇಹ ರಹಿತ ಹಾಗೂ ಕರುಣೆ ಇಲ್ಲವನಾದ. ಅವನು ಮನೆಯ ಮುಂದೆ ಬಂದ ದೀನರಿಗೆ ಒಂದು ಹುಲ್ಲುಕಡ್ಡಿಯನ್ನಾಗಲಿ ಒಂದು ತೊಟ್ಟು ನೀರನ್ನಾಗಲಿ ಕೊಡುವವನಲ್ಲ. ದಾನಶಾಲೆಗಳನ್ನು ಮುಚ್ಚಿಸಿ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡತೊಡಗಿದ.
ಒಂದು ದಿನ ಶಕ್ರ ಧ್ಯಾನದಲ್ಲಿದ್ದಾಗ ತನ್ನ ವಂಶಜರು ಏನು ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಿದ. ತನ್ನ ಆರನೆಯ ತಲೆಮಾರಿನವನು ಅಧರ್ಮಿಯಾದದ್ದನ್ನು ಕಂಡು ದುಃಖವಾಯಿತು. ತನ್ನ ಮಗ ಚಂದ್ರನಾದ, ಅವನ ಮಗ ಸೂರ್ಯನಾದ, ಅವನ ವಂಶದಲ್ಲಿ ಮುಂದೆ ಪುತ್ರಮಾತಲಿ, ಪಂಚಶಿಖರಾದರು. ಇಂಥ ದಾನಿಗಳ ಮನೆತನದಲ್ಲಿ ನೀಚಬುದ್ಧಿಯವನು ಹುಟ್ಟಿದ್ದಾನೆ, ಅವನಿಗೆ ಬುದ್ಧಿ ಕಲಿಸಬೇಕು ಎಂದು ತೀರ್ಮಾನಿಸಿದ.
ಮರುದಿನ ಶ್ರೇಷ್ಠಿಯ ಮನೆಯ ಮುಂದೆ ಒಬ್ಬ ಬ್ರಾಹ್ಮಣನ ವೇಷದಲ್ಲಿ ಬಂದು ಭಿಕ್ಷೆಯನ್ನು ಬೇಡಿದ. ಶ್ರೇಷ್ಠಿ, ‘ಹೇ ಬ್ರಾಹ್ಮಣ ನಮ್ಮ ಮನೆಯಲ್ಲಿ ಯಾರಿಗೂ ದಾನ ಕೊಡುವುದಿಲ್ಲ, ಮುಂದೆ ಹೋಗು’ಎಂದ. ಬ್ರಾಹ್ಮಣ ಬಿಟ್ಟಾನೆಯೇ, ‘ಅಯ್ಯಾ ಶ್ರೇಷ್ಠಿ, ಹಸಿದು ಬಂದ ಬ್ರಾಹ್ಮಣನಿಗೆ ಇಲ್ಲ ಎನ್ನಲಾಗುವುದಿಲ್ಲ. ಏನಾದರೂ ಕೊಡು’ಎಂದು ಹಟ ಹಿಡಿದ. ಶ್ರೇಷ್ಠಿ ‘ನಮ್ಮ ಮನೆಯಲ್ಲಿ ಅಡುಗೆಯನ್ನೇ ಮಾಡಿಲ್ಲ. ನನಗೇ ಊಟಕ್ಕಿಲ್ಲ, ನಿನಗೇನು ಕೊಡಲಿ?’ಎಂದು ಮರುಪ್ರಶ್ನೆ ಮಾಡಿದ. ‘ಭಿಕ್ಷುಕರು ಕೂಡ, ತಮ್ಮ ಭಿಕ್ಷೆಯಲ್ಲಿ ಒಂದಿಷ್ಟನ್ನು ಉಳಿದ ಭಿಕ್ಷಕರಿಗೆ ದಾನ ಮಾಡುತ್ತಾರೆ. ನೀನು ಶ್ರೀಮಂತ, ದಾನ ಮಾಡದಿದ್ದರೆ ಐಶ್ವರ್ಯ ಕರಗಿ ಹೋಗುತ್ತದೆ’ಎಂದು ಶ್ರೇಷ್ಠಿಯನ್ನು ಬ್ರಾಹ್ಮಣ ಹೆದರಿಸಿದ. ಆಗ ಶ್ರೇಷ್ಠಿ ‘ಹಾಗಾದರೆ ಒಳಗೆ ಬಂದು ಕುಳಿತುಕೋ, ನೋಡೋಣ ಏನಾದರೂ ದೊರೆತೀತೇನೋ’ಎಂದ. ಬ್ರಾಹ್ಮಣ ಒಳಗೆ ಬಂದ. ಅವನ ಹಿಂದೆಯೇ ಚಂದ್ರ, ಸೂರ್ಯ, ಪುತ್ರಮಾತಲಿ, ಪಂಚಶಿಖರು ಒಬ್ಬೊಬ್ಬರಾಗಿಯೇ ಬಂದು ಸಾಲಾಗಿ ಕುಳಿತರು.
ಇವರನ್ನು ಓಡಿಸುವುದಕ್ಕಾಗಿ ಶ್ರೇಷ್ಠಿ ಸೇವಕರಿಗೆ ಹೇಳಿ, ದನಕ್ಕೆ ಹಾಕುವ, ಅರೆಬರೆ ಬೆಂದ ಹುರುಳಿಕಾಳುಗಳನ್ನು ಇವರ ಮುಂದೆ ಹಾಕಿದ. ಅವರು ಅದನ್ನು ಕೊಂಚ ತಿಂದು, ಗಂಟಲಿಗೆ ಸಿಕ್ಕಿತೆನ್ನುವಂತೆ ಮುಖಮಾಡಿ ದೊಪ್ಪನೆ ಬಿದ್ದುಬಿಟ್ಟರು. ತಾನು ಕೊಟ್ಟ ಹುರುಳಿಯಿಂದಾಗಿ ಐದು ಜನ ಬ್ರಾಹ್ಮಣರು ಸತ್ತು ಹೋದರೆಂದು ಜನ ತನ್ನನ್ನು ತೆಗಳಬಹುದೆಂದು ಭಾವಿಸಿ ಅವರಿಗೆ ಮೃಷ್ಟಾನ್ನ ಭೋಜನ ತರಿಸಿದ. ಆಗ ಶಕ್ರ ಎದ್ದುನಿಂತು ತನ್ನ ನಿಜರೂಪ ತೋರಿಸಿ, ‘ಅಯ್ಯಾ, ನಾವೆಲ್ಲರೂ ನಿನ್ನ ಹಿಂದಿನ ತಲೆಮಾರಿನವರು. ನಿನ್ನ ಈಗಿನ ಹಣಕ್ಕೆ ನಾವೂ ಕಾರಣರು. ದಾನದಿಂದ ನಾವೀಗ ಎತ್ತರದ ಸ್ಥಾನಗಳಲ್ಲಿದ್ದೇವೆ. ನೀನು ಇದೇ ರೀತಿ ಜನ್ಮ ಕಳೆದರೆ ನರಕವೇ ಶಾಶ್ವತ. ಹಿರಿಯರು ಗಳಿಸಿದ ಹಣವನ್ನು ದಾನಮಾಡಿ ನೀನೂ ಯೋಗ್ಯಸ್ಥಾನ ಪಡೆ’ಎಂದು ಬೋಧಿಸಿದ. ಅಂದಿನಿಂದ ಶ್ರೇಷ್ಠಿ ಮಹಾದಾನಿಯಾದ.
ಇದು ಕೇವಲ ಶ್ರೇಷ್ಠಿಯ ಕಥೆಯಲ್ಲ. ನಮ್ಮ ಹಿರಿಯರು ಮಾಡಿದ ಪುಣ್ಯವಿಶೇಷದಿಂದ ನಾವು ನೆಮ್ಮದಿಯಾಗಿದ್ದೇವೆ. ನಮ್ಮ ಪುಣ್ಯ ನಮ್ಮ ಮುಂದಿನವರನ್ನು ಕಾಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.