ಸೇರಿರ್ಪುವುಸಿರುಗಳೊಳೆಷ್ಟೊ ಜೀವಾಣು |
ಹಾರುತಿಹುವೆಷ್ಟೊ ಚೇತನ ಧೂಳು ಕಣದೊಳ್ ||
ಪ್ರಾರಬ್ಧಗತಿಯ ನಿಶ್ಚಯದಿ ತಿಳಿದವರಿಲ್ಲ |
ಆ ರಹಸ್ಯಕ್ಕೆರಗೊ ! –ಮಂಕುತಿಮ್ಮ || 843 ||
ಪದ-ಅರ್ಥ: ಸೇರಿರ್ಪುವುಸಿರುಗಳೊಳೆಷ್ಟೊ=ಸೇರಿರ್ಪುವು(ಸೇರಿವೆ)+ಉಸಿರುಗ ಳೊಳು (ಉಸಿರುಗಳಲ್ಲಿ)+ಎಷ್ಟೊ, ಹಾರುತಿಹುವೆಷ್ಟೊ=ಹಾರುತಿಹವು+ಎಷ್ಟೊ, ರಹಸ್ಯಕ್ಕೆರಗೊ=ರಹಸ್ಯಕ್ಕೆ+ಎರಗೊ(ನಮಿಸೊ)
ವಾಚ್ಯಾರ್ಥ: ನಮ್ಮ ಉಸಿರುಗಳಲ್ಲಿ ಎಷ್ಟೋ ಜೀವಾಣುಗಳು ಸೇರಿವೆ. ವಾತಾವರಣದ ಧೂಳಿನಲ್ಲಿ ಎಷ್ಟೋ ಚೈತನ್ಯಮಯವಾಗಿವೆ. ಹಿಂದಿನಿಂದ ಬಂದ ನಮ್ಮ ಪ್ರಾರಬ್ಧದ ನಡೆಯನ್ನು ತಿಳಿದವರಿಲ್ಲ. ಆ ರಹಸ್ಯಕ್ಕೆ ತಲೆಬಾಗು.
ವಿವರಣೆ: ನಮ್ಮ ಸುತ್ತಲಿನ ವಾತಾವರಣದಲ್ಲಿ ಅನೇಕಾನೇಕ ಜೀವಾಣುಗಳಿವೆ. ಅವುಗಳಲ್ಲಿ ಕೆಲವು ಬದುಕಿಗೆ ಪ್ರಯೋಜನಕಾರಿಯಾದವುಗಳು ಮತ್ತೆ ಕೆಲವು ರೋಗಗಳ ವಾಹಕಗಳು. ಯಾವಾಗ ಯಾವ ಜೀವಾಣು ನಮ್ಮ ದೇಹದಲ್ಲಿ ಸೇರಿಕೊಂಡು ಅನಾರೋಗ್ಯವನ್ನು ತಂದೀತೋ ಎಂಬುದನ್ನು ಹೇಳುವುದು ಸಾಧ್ಯವಿಲ್ಲ. ನಮ್ಮ ಜೊತೆಗೇ ಇದ್ದವರನ್ನು ಅದು ಬಾಧಿಸಲಿಕ್ಕಿಲ್ಲ. ಅಷ್ಟೊಂದು ಜನ ಸೇರಿದ್ದರಲ್ಲ, ಅವರನ್ನೆಲ್ಲ ಬಿಟ್ಟು ನನ್ನನ್ನೇ ಏಕೆ ಇದು ಹಿಡಿದುಕೊಂಡಿತು ಎಂದು ಕೇಳಿದರೆ ಅದಕ್ಕೆ ಒಂದೇ ಉತ್ತರ, ಪ್ರಾರಬ್ಧ. ಹಿಂದೆ ಮಾಡಿದ ಯಾವುದೋ ಕರ್ಮಕ್ಕೆ ಇದು ಶಿಕ್ಷೆ. ಇದರಂತೆಯೇ ನಮ್ಮ ಸುತ್ತಲೂ ಚೈತನ್ಯದ ಧೂಳಿಕಣಗಳಿವೆ. ಅವು ನಮ್ಮ ಬದುಕಿಗೊಂದು ಅರ್ಥವನ್ನು, ತಿರುವನ್ನು ತರುತ್ತವೆ. ಈ ಚೈತನ್ಯದ ಕಣಗಳು ವ್ಯಕ್ತಿಗಳಾಗಬಹುದು ಸಂದರ್ಭವಾಗಬಹುದು, ಒಂದು ಮಾತಾಗಬಹುದು, ಒಂದು ದೃಶ್ಯವೂ ಆಗಬಹುದು. ಹನ್ನೊಂದನೇ ಶತಮಾನದಲ್ಲಿ ದಕ್ಷಿಣ ಭಾರತದಲ್ಲಿ ಒಮ್ಮೆರಾಜನೊಬ್ಬ ರಾಜಗುರುವಿನೊಂದಿಗೆ ಮಾತನಾಡುತ್ತಿದ್ದಾಗ, ಹಾಲು ಮಾರುವ ಹುಡುಗ ಅಲ್ಲಿಗೆ ಬಂದ. ಆಗ ರಾಜಗುರು ಭಗವಂತನ ಕೃಪೆಯ ಬಗ್ಗೆ ಮಾತನಾಡುತ್ತಿದ್ದ.
ಈ ಹುಡುಗನನ್ನು ನೋಡಿ, “ಭಗವಂತನ ಕೃಪೆಯಾದರೆ ಈ ಹುಡುಗನೂ ಮಹಾತ್ಮನಾಗಬಲ್ಲ” ಎಂದ. ಹುಡುಗನ ಕಿವಿಯಲ್ಲಿ ನರಸಿಂಹ ಮಂತ್ರವನ್ನು ಹೇಳಿದ. ಹುಡುಗ ಎಡೆಬಿಡದೆ ನರಸಿಂಹಮಂತ್ರದ ಆರಾಧನೆ ಮಾಡಿದ. ದೇವರ ಕೃಪೆಯಾಯಿತು. ವೇದ, ಉಪನಿಷತ್ತುಗಳು ಅವನ ಬಾಯಲ್ಲಿ ನಲಿದವು. ಶ್ರೀಧರಸ್ವಾಮಿ ಎಂದು ಆತ ಹೆಸರಾದರು. ಬಾಂಧವರ ಒತ್ತಾಯಕ್ಕೆ ಅವರ ಮದುವೆಯಾಯಿತು. ಹೆಂಡತಿ ಒಂದು ಮಗುವಿಗೆ ಜನ್ಮ ನೀಡಿ ಕಣ್ಣು ಮುಚ್ಚಿದಳು. ಎಲ್ಲವನ್ನು ತೊರೆದು ಕಾಡಿಗೆ ಹೋಗಬೇಕು ಎಂದುಕೊಂಡಾಗ ಮಗುವಿನ ಜವಾಬ್ದಾರಿ ಹಿಡಿದು ಹಿಂದೆಳೆಯಿತು. ತಾನಲ್ಲದೆ ಅದನ್ನು ಯಾರು ನೋಡಿಕೊಂಡಾರು ಎಂದು ಚಿಂತಿಸುವಾಗ ಮುಂದೆ ಬಂದು ದೃಶ್ಯ ಕಂಡಿತು. ಮನೆಯ ಮುಂದಿನ ಮರದಲ್ಲಿ ಪಕ್ಷಿಯ ಗೂಡು. ಅದರಲ್ಲಿ ಮೂರು ಮೊಟ್ಟೆಗಳು. ಗಾಳಿಗೆ ಒಂದು ಮೊಟ್ಟೆ ಸರಿದು ಕೆಳಗೆ ಹುಲ್ಲಿನ ಮೇಲೆ ಬಿದ್ದು ಒಡೆಯಿತು, ಪುಟ್ಟ ಮರಿ ಹೊರಗೆ ಇಣುಕಿತು. ಅದು ದಿನ ತುಂಬದೆ ಹೊರಗೆ ಬಂದದ್ದು. ಆ ಮರಿಗೆ ಆಹಾರ ಯಾರು ಕೊಟ್ಟಾರು? ಆಗ ಹಾರುವ ಹುಳವೊಂದು ಬಂದು ಮೊಟ್ಟೆಯ ಮೇಲೆ ಕುಳಿತಿತು. ಲೋಳೆಯಂಥ ದ್ರವದಲ್ಲಿ ಅದು ಸಿಕ್ಕಿಕೊಂಡಿತು. ಮರಿ ತಟಕ್ಕನೆ ಬಾಯಿ ತೆರೆದು ಅದನ್ನು ನುಂಗಿತು.ಅದನ್ನು ಕಂಡ ಶ್ರೀಧರಸ್ವಾಮಿಗಳು ಈಗ ಹುಟ್ಟಿದ ಮರಿಗೇ,ಅದಿರುವ ಸ್ಥಳದಲ್ಲೇ ಆಹಾರ ಕೊಡುವ ಭಗವಂತನಿದ್ದಾಗ,ನನ್ನ ಮಗನನ್ನು ಅವನೇ ಕಾಪಾಡುತ್ತಾನೆ ಎಂದು ಹೊರಟುಬಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.