ADVERTISEMENT

ಗುರುರಾಜ ಕರಜಗಿ ಅಂಕಣ-ಬೆರಗಿನ ಬೆಳಕು| ಫಲಿಸಿದ ಮೋಸ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 20:51 IST
Last Updated 20 ಏಪ್ರಿಲ್ 2021, 20:51 IST
   

ಗಿಳಿಮರಿ ಬಂದು ಹೇಳಿದ ವಿಷಯವನ್ನು ಕೇಳಿ ಮಹೋಷಧಕುಮಾರ, ನಗರದಲ್ಲಿ ಎಲ್ಲರನ್ನೂ ಸೇರಿಸಿ ಕೋಟೆಯ ಬಾಗಿಲುಗಳನ್ನು ಹಾಕಿಸಿದ. ಅಪಾರವಾದ ಧನ-ಧಾನ್ಯಗಳನ್ನು, ಹಣವನ್ನು, ಔಷಧಿಗಳನ್ನು ಶೇಖರಿಸಿ ಇಟ್ಟ. ಮಂತ್ರಿ ಕೇವಟ್ಟ ಹೇಳಿದಂತೆ ಬ್ರಹ್ಮದತ್ತ, ಮಿಥಿಲೆಯ ವಿದೇಹ ರಾಜನೊಬ್ಬನನ್ನುಳಿದು ಉಳಿದೆಲ್ಲ ಚಿಕ್ಕ-ಪುಟ್ಟ ರಾಜರನ್ನು ತನ್ನೆಡೆಗೆ ಸೆಳೆದುಕೊಂಡಿದ್ದ. ವಿದೇಹದ ರಾಜನನ್ನು ಗೆದ್ದು ಇಡೀ ಜಂಬೂದ್ವೀಪಕ್ಕೆ ಚಕ್ರವರ್ತಿಯಾಗುವ ಹಂಬಲ ಅವನಿಗೆ. ಆದರೆ ಕೇವಟ್ಟ, ರಾಜನಿಗೆ ಮಹೋಷಧಕುಮಾರನ ಬಗ್ಗೆ ಎಚ್ಚರಿಕೆ ನೀಡಿದ. ಆತ ತುಂಬ ಬುದ್ಧಿವಂತ, ಅವನಿರುವವರೆಗೆ ವಿದೇಹ ರಾಜನನ್ನು ಸೋಲಿಸುವುದು ಕಷ್ಟ ಎಂದು ತಿಳಿಸಿದ. ಆದರೆ ಬ್ರಹ್ಮದತ್ತನಿಗೆ ಈಗ ದೊರೆತ ಜಯದಿಂದ ಅಹಂಕಾರ ಬಲಿತು ನಿಂತಿತ್ತು.

ಕೇವಟ್ಟ ಹೇಳಿದ, ‘ಮಹಾರಾಜಾ, ವಿದೇಹದ ರಾಜನೊಡನೆ ಯುದ್ಧ ಬಹುಕಾಲ ನಡೆಯಬಹುದು. ಆದ್ದರಿಂದ ಮೊದಲಿನ ಯೋಜನೆಯಂತೆ, ಈಗ ನಮ್ಮೊಂದಿಗಿರುವ ರಾಜರನ್ನೆಲ್ಲ ಉದ್ಯಾನವನದಲ್ಲಿ ಸೇರಿಸಿ ಒಂದು ಕೂಟವನ್ನು ಮಾಡಿ, ಅವರಿಗೆ ವಿಷಪೂರಿತ ಮದ್ಯವನ್ನು ಕುಡಿಸಿ ಕೊಂದುಬಿಡೋಣ. ನಂತರ ವಿದೇಹ ರಾಜನ ಮೇಲೆ ದಾಳಿ ಮಾಡೋಣ. ಈ ಕೂಟಕ್ಕೆ ವಿದೇಹ ರಾಜನನ್ನು ಆಮಂತ್ರಿಸೋಣ. ಅವನನ್ನು ಸೇರಿಸಿ ಎಲ್ಲರನ್ನೂ ಸಾಯಿಸಿಬಿಡೋಣ’. ಅವನು ಹೇಳಿದಂತೆ ವಿದೇಹರಾಜನಿಗೆ ಆಮಂತ್ರಣ ಬಂದಿತು. ಮಹೋಷಧಕುಮಾರನಿಗೆ ಈ ನೀಚರ ಯೋಜನೆ ಮೊದಲೇ ಗಿಳಿಮರಿಯಿಂದ ತಿಳಿದಿದ್ದರಿಂದ ಆತ ಮತ್ತೊಂದು ಯೋಜನೆ ಮಾಡಿದ.ಪಾಪ! ಅಷ್ಟೊಂದು ಜನ ರಾಜರು ಸಾಯುವುದು ಸರಿಯಲ್ಲ, ಅವರನ್ನು ಉಳಿಸಿಕೊಳ್ಳಬೇಕೆಂದುಕೊಂಡ.

ಮಹೋಷಧಕುಮಾರ ತನ್ನ ಅತ್ಯಂತ ನಂಬಿಕೆಯ ಸಾವಿರ ಜನ ಸೈನಿಕರನ್ನು ಕರೆದು ಹೇಳಿದ, ‘ನೀವು ಒಳ್ಳೆಯ ಬಟ್ಟೆ ಹಾಕಿಕೊಂಡು ಕೂಟ ನಡೆಯುವ ಉದ್ಯಾನವನಕ್ಕೆ ಹೋಗಿ ಬ್ರಹ್ಮದತ್ತನಿಗೆಂದು ಇಟ್ಟ ಸಿಂಹಾಸನದ ಮೇಲೆ ಮತ್ತು ಅದರ ಸುತ್ತಮುತ್ತಲಿನ ಕುರ್ಚಿಗಳ ಮೇಲೆ ಕುಳಿತುಕೊಳ್ಳಿ. ಬ್ರಹ್ಮದತ್ತನ ಸೇವಕರು ಬಂದು ಜಾಗ ಖಾಲಿ ಮಾಡಿ ಎಂದಾಗ, ಇದು ನಮ್ಮ ವಿದೇಹ ಮಹಾರಾಜರ ಜಾಗ ಎಂದು ಗಲಾಟೆ ಮಾಡಿ. ಅವರನ್ನು ಮತ್ತಷ್ಟು ಸಿಟ್ಟಿಗೆಬ್ಬಿಸಿ ದಪ್ಪನಾದ ಕೋಲುಗಳಿಂದ ಸುರೆಯ ಮಡಕೆಗಳನ್ನೆಲ್ಲ ಒಡೆದು ಹಾಕಿಬಿಡಿ. ನೀವು ಆ ಸುರೆಯನ್ನು ಕುಡಿಯಬೇಡಿ. ಅವೆಲ್ಲ ವಿಷ ತುಂಬಿದ ಮಡಕೆಗಳು. ನಂತರ ಅವರ ಸೈನ್ಯದಲ್ಲಿ ಗಲಭೆಯನ್ನೆಬ್ಬಿಸಿ ಮರಳಿ ಬಂದು ಬಿಡಿ’. ಅವರೆಲ್ಲ ಆಗಲಿ ಎಂದು ಉದ್ಯಾನವನಕ್ಕೆ ಬಂದು ಸುರೆಯ ಮಡಕೆಗಳನ್ನು ಒಡೆದು ಸೈನ್ಯದಲ್ಲಿ ಗದ್ದಲವನ್ನೆಬ್ಬಿಸಿ ಮರಳಿ ಬಂದು ಮಹೋಷಧಕುಮಾರನಿಗೆ ವರದಿ ನೀಡಿದರು. ತಾನು ವಿಷಪೂರಿತ ಸುರೆಯನ್ನು ರಾಜರುಗಳಿಗೆ ಕುಡಿಸಿ ಕೊಲ್ಲುವ ಉಪಾಯ ವಿಫಲವಾದದ್ದನ್ನು ಕಂಡು ಬ್ರಹ್ಮದತ್ತನಿಗೆ ಅಸಾಧ್ಯ ಕೋಪ ಬಂದಿತು. ತಕ್ಷಣವೇ ತನ್ನ ಹದಿನೆಂಟು ಅಕ್ಷೋಹಿಣಿ ಸೇನೆಯನ್ನು ತೆಗೆದುಕೊಂಡು ಮಿಥಿಲೆಯ ಮೇಲೆ ದಾಳಿ ಮಾಡಲು ನಿರ್ಧರಿಸಿದ. ಆದರೆ ಮಂತ್ರಿ ಕೇವಟ್ಟ ಹೇಳಿದ, ‘ಪ್ರಭೂ, ಮಹೋಷಧಕುಮಾರ ಭಾರೀ ಬುದ್ಧಿವಂತ. ಅವನನ್ನು ಶಕ್ತಿಯಿಂದ ಸೋಲಿಸುವುದು ಅಸಾಧ್ಯ. ಅವಸರ ಬೇಡ. ವಿದೇಹ ರಾಜನ ಹಿಂದಿರುವ ಶಕ್ತಿ ಅವನೇ’. ಆದರೆ ರಾಜ ಮಂತ್ರಿಯ ಮಾತು ಕೇಳದೆ ಯುದ್ಧಕ್ಕೆ ಕರೆ ನೀಡಿಯೇ ಬಿಟ್ಟ. ಅದಕ್ಕೆ ಸರಿಯಾದ ಪ್ರತಿಕ್ರಿಯೆಯನ್ನು ಮಹೋಷಧಕುಮಾರ ಸಿದ್ಧಮಾಡಿಕೊಂಡಿಟ್ಟ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.