ಆವ ಗಾಳಿಯದಾವ ಧೂಳ್ಕಣವ ಪೊತ್ತಿಹುದೊ |
ಆವ ಧೂಳಿನೊಳಾವ ಚೈತನ್ಯಕಣವೊ! ||
ಜೀವವಿಂತಜ್ಞಾತ ಸೂತ್ರದಾಟದ ಬೊಂಬೆ |
ಭಾವಿಸಾ ಸೂತ್ರಗಳ – ಮಂಕುತಿಮ್ಮ || 839 ||
ಪದ-ಅರ್ಥ: ಗಾಳಿಯದಾವ=ಗಾಳಿಯು+ಅದಾವ, ಧೂಳ್ಕಣವ=ಧೂಳ್+ಕಣವ, ಪೊತ್ತಿಹೊದೊ=ಹೊತ್ತಿಹುದೊ, ಧೂಳಿನೊಳಾವ=ಧೂಳಿನೊಳು+ಆವ, ಜೀವವಿಂತಜ್ಞಾತ=ಜೀವವು+ಇಂತು(ಹೀಗೆ)+ಅಜ್ಞಾತ, ಭಾವಿಸಾ=ಭಾವಿಸು+ಆ.
ವಾಚ್ಯಾರ್ಥ: ಯಾವ ಗಾಳಿ ಧೂಳಿಕಣವನ್ನು ಹೊತ್ತು ತರುತ್ತದೋ, ಯಾವ ಧೂಳಿನಲ್ಲಿ ಯಾವ ಚೈತನ್ಯದ ಕಣ ಅಡಗಿದೆಯೋ? ಜೀವವು ಹೀಗೆ ಅಜ್ಞಾತವಾದ ಸೂತ್ರದಾಟದ ಬೊಂಬೆ. ಈ ಸೂತ್ರಗಳನ್ನು ಚಿಂತಿಸು.
ವಿವರಣೆ: ಒಂದು ಅಧ್ಯಾತ್ಮಿಕ ಕಾವ್ಯದಂತೆ ಈ ಕಗ್ಗ ಎರಡು ನೆಲೆಯಲ್ಲಿ ವಿಷಯವನ್ನು ತಿಳಿಸುತ್ತದೆ. ಕೇವಲ ವಾಚ್ಯಾರ್ಥವನ್ನು ಗಮನಿಸಿದರೆ, ಗಾಳಿ ಬೀಸಿದಾಗ ಅದರೊಂದಿಗೆ ಒಂದಿಷ್ಟು ಧೂಳಿಕಣಗಳೂ ಬರುತ್ತವೆ. ಯಾವ ಗಾಳಿ ಯಾವ ಧೂಳಿಯನ್ನು ಹೊತ್ತಿದೆಯೋ, ಆ ಧೂಳಿನಲ್ಲಿ ಯಾವ ಚೈತನ್ಯದ ಕಣವಿದೆಯೋ ತಿಳಿಯದು, ಎನ್ನುತ್ತದೆ. ಆದರೆ ಇದರ ಹಿಂದಿನ ಗೂಢಾರ್ಥ ಬೇರೆ. ಯಾರಿಗೆ, ಯಾವಾಗ, ಎಲ್ಲಿಂದ ಚೈತನ್ಯದ ಸ್ಫುರಣೆಯಾದೀತು ಎಂಬುದನ್ನು ಹೇಳುವುದುಕಷ್ಟ ಯಾವುದೋ ಒಂದು ಮಾತು, ಕ್ರಿಯೆ, ಪರಿಸ್ಥಿತಿ, ವ್ಯಕ್ತಿಯನ್ನು ಪೂರ್ತಿಯಾಗಿ ಬದಲಾಯಿಸಿಬಿಡಬಹುದು. ‘ನಿನಗೆ ಯಾಕೆ ಬೇಕು ಈ ಶಿಕ್ಷಣ?’ ಎಂಬ ಒಂದು ಮೂದಲಿಕೆಯಮಾತು ವೆಂಕಟರಮಣನನ್ನು ರಮಣಮಹರ್ಷಿಯನ್ನಾಗಿಸಿತು.ಹೆಂಡತಿಯ ಮೇಲಿನ ಅನನ್ಯ ಪ್ರೇಮದಿಂದ, ಉಕ್ಕಿ ಹರಿಯುತ್ತಿದ್ದನದಿಯನ್ನು ಈಜಿ, ದಾಟಿ, ಮನೆಯ ಮಾಳಿಗೆಯನ್ನೇರಲು, ಜೋತುಬಿದ್ದದ್ದ ಹಾವನ್ನೇ ಹಗ್ಗವೆಂದು ತಿಳಿದು ಮೇಲೆ ಹತ್ತಿದಾಗ ಮೋಹದ ಹೆಂಡತಿ “ನನ್ನ ಮೇಲೆ ತೋರಿದ ಪ್ರೇಮವನ್ನು ರಾಮನಲ್ಲಿ ತೋರಬಾರದಿತ್ತೇ?” ಎಂಬ ಒಂದು ನುಡಿ ಪತ್ನಿಪ್ರೇಮಿಯನ್ನು ರಾಮಪ್ರೇಮಿ ತುಳಸಿದಾಸನನ್ನಾಗಿ ಮಾಡಿತ್ತು. “ನೀವು ದೇವರನ್ನು ಕಂಡಿದ್ದೀರಾ?” ಎಂಬ ಧಾಷ್ಟದ ಪ್ರಶ್ನೆ ಕೇಳಿದ ನರೇಂದ್ರನನ್ನು ಗುರು ಶ್ರೀರಾಮಕೃಷ್ಣರ ಒಂದು ಮಾತು, ಒಂದು ಸ್ಪರ್ಶ ವಿಶ್ವವಿಜೇತ ವಿವೇಕಾನಂದನನ್ನಾಗಿ ಪರಿವರ್ತಿಸಿತ್ತು. ಸುಕುಮಾರ ರಾಮನನ್ನು ವಿಶ್ವಾಮಿತ್ರ ರೂಪದಲ್ಲಿ ಚೈತನ್ಯ ಸ್ಪರ್ಶಿಸಿತ್ತು. ರಾಮನನ್ನು ನೆಪವಾಗಿ ಇಟ್ಟುಕೊಂಡು ತಾಟಕಿಯನ್ನು ಕೊಲ್ಲಿಸಿ, ಅಹಲ್ಯೆಯ ಶಾಪವಿಮೋಚನೆಯನ್ನು ಮಾಡಿಸಿ, ಹಿಂಸೆಯ ಪ್ರತೀಕವಾಗಿದ್ದ ಶಿವಧನಸ್ಸನ್ನು ಮುರಿಸಿ, ಉಗ್ರತೆಯ, ಹಿಂಸೆಯ ಮೂರ್ತರೂಪವಾಗಿದ್ದ ಪರಶುರಾಮನನ್ನು ಸೋಲಿಸಿ, ಅಹಿಂಸೆಯ ರೂಪವಾದ ಶ್ರೀರಾಮನನ್ನು ಜಗದ್ವಂದ್ಯನನ್ನಾಗಿ ಮಾಡಿದ ವಿಶ್ವಾಮಿತ್ರ ಮಹರ್ಷಿ. ಕಗ್ಗ ಈ ಚಿಂತನೆಯನ್ನು ಧ್ವನಿಸುತ್ತದೆ. ಯಾವ ರೂಪದಲ್ಲಿ, ಯಾವ ಅವಸ್ಥೆಯಲ್ಲಿ ಚೈತನ್ಯಕಣ ನಮ್ಮನ್ನು ತಟ್ಟುವುದೋ ತಿಳಿಯದು. ಅದನ್ನು ಯಾವ ಗಾಳಿ ತಂದೀತೆಂಬುದನ್ನು ಹೇಳುವುದು ಹೇಗೆ? ಯಾವುದೋ ಅಜ್ಞಾತವಾದ ಶಕ್ತಿ ಹೀಗೆ ಚೈತನ್ಯವನ್ನು ತಂದು ಜೀವಿಗಳನ್ನು ಪರಿವರ್ತಿಸಿ ಬಿಡುತ್ತದೆ. ಅದಕ್ಕೇ ಜೀವಿ ಇಂತಹ ಅಜ್ಞಾತವಾದ ಸೂತ್ರದ ಆಟದ ಬೊಂಬೆ. ಯಾವುದೋ ಕಣ್ಣಿಗೆ ಕಾಣದ ಸೂತ್ರ ಚೈತನ್ಯದಾಟವನ್ನು ಆಡುತ್ತಿದೆ. ಆ ಸೂತ್ರವನ್ನು ಭಾವಿಸುವುದು, ಧ್ಯಾನಿಸುವುದು ಅವಶ್ಯವಾದದ್ದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.