ADVERTISEMENT

ಬೆರಗಿನ ಬೆಳಕು: ಕಾಡುವ ಗುಪ್ತ ಭೂತಗಳು

ಡಾ. ಗುರುರಾಜ ಕರಜಗಿ
Published 7 ಮಾರ್ಚ್ 2023, 19:30 IST
Last Updated 7 ಮಾರ್ಚ್ 2023, 19:30 IST
   

ಎತ್ತೆತ್ತ ನೋಡಲುಂ ಗುಪ್ತ ಭೂತಗಳಯ್ಯ |
ಕತ್ತಲೆಯೊಳಾಡುತಿಹ ದೆವ್ವಗಳ ಸುಳಿವು ||
ಮುತ್ತಿ ಮುಸುಕಿಹುದು ಜೀವವ ರಹಸ್ಯವೊಂದು |
ಬೆತ್ತಲೆಯದಹುದೆಂತು? – ಮಂಕುತಿಮ್ಮ || 837 |

ಪದ-ಅರ್ಥ: ನೋಡಲುಂ=ನೋಡಿದರೆ, ಕತ್ತಲೆಯೊಳಾಡುತಿಹ=ಕತ್ತಲೆಯೊಳು+ಆಡುತಿಹ, ಬೆತ್ತಲೆಯದಹುದೆಂತು=ಬೆತ್ತಲೆ+ಅದು+ಅಹುದು+ಎಂತು.

ವಾಚ್ಯಾರ್ಥ: ಎಲ್ಲ ನೋಡಿದಡಲ್ಲಿ ಗುಪ್ತಭೂತಗಳಿವೆ. ಕತ್ತಲೆಯಲ್ಲಿ ದೆವ್ವಗಳು ಓಡಾಡಿದಂತಿದೆ. ಜೀವದ ಸೃಷ್ಟಿಯೇ ರಹಸ್ಯದಲ್ಲಿ ಮುಸುಕಿದೆ. ಅದು ತೆರೆದುಕೊಳ್ಳುವುದೆಂತು?

ವಿವರಣೆ: ಜೀವಸೃಷ್ಟಿಯ ಉಗಮವನ್ನು ಕುರಿತಾದ ಚಿಂತನೆಯ ಪ್ರಯತ್ನವನ್ನು ನಾನಾ ದೇಶಗಳ ಪುರಾಣಗಳಲ್ಲಿ ಕಾಣಬಹುದು. ಕಥೆಗಳು ಬೇರೆ ಬೇರೆಯಾದರೂ ಚಿಂತನೆಯ ರೀತಿಯಲ್ಲಿ ಸಮಾನತೆ ಇದೆ. ಸಾಗರದ ತಳದಲ್ಲಿ ಮಹಾಕೂರ್ಮ ರೂಪದ ಬ್ರಹ್ಮಾಂಡ ಅಡಗಿತ್ತಂತೆ, ವರಾಹಾವತಾರದ ವಿಷ್ಣು ತನ್ನ ಕೋರೆದಾಡೆಗಳಿಂದ ಅದನ್ನೆತ್ತಿ ಉದ್ಧರಿಸಿದನಂತೆ, ಇನ್ನೊಂದು ಪುರಾಣದಲ್ಲಿ ವೀರದೇವತೆ ನೀರಿನಲ್ಲಿ ಮುಳುಗಿ ಎತ್ತಿ ತಂದ ಮರಳಿನಿಂದ ಪೃಥ್ವಿಯನ್ನು ಸೃಷ್ಟಿಸಿದನಂತೆ. ಹೀಗೆ ಕಥೆಗಳ ಸಾಲು ಸಾಲು. ಆದರೆ ಸೃಷ್ಟಿಯ ಕಾರಣವೇನು? ಪ್ರಾಣಿ-ಸಸ್ಯ- ಮಾನವ ಎಂಬ ವೈವಿಧ್ಯವಾದರೂ ಏಕೆ ಅವಶ್ಯಕವಾಯಿತು? ಇಂತಹ ಮೂಲಭೂತ ಪ್ರಶ್ನೆಗಳಿಗೆ, ಮೂಲನಿವಾಸಿಗಳಿಗಿರಲಿ, ರೂಢಿಗತ ಸಂಪ್ರದಾಯದ ನವನಾಗರಿಕರಿಗೂ ಸಹ, ಹಿಂದಿನಿಂದ ಬಂದ ಪುರಾಣ ಕಥೆಗಳ ಹೊರತಾಗಿ ಮತ್ತಾವ ಉತ್ತರಗಳೂ ಹೊಳೆಯುವುದಿಲ್ಲ. ಎಲ್ಲವೂ ಕಲ್ಪನೆಯ ಕುದುರೆಯ ಮೇಲೇರಿ ವಿಹರಿಸುವ, ಸಮಾಧಾನ ನೀಡುವ, ಕೊನೆಯಲ್ಲಿ ಸಜ್ಜನರನ್ನು ದೇವರನ್ನು ಕೈಬಿಡಲಾರನೆಂಬ ಹಾರೈಕೆಗಳೇ. ಇಂದು ವಿಜ್ಞಾನ ನಿಗೂಢವಾಗಿದ್ದ ಕೆಲವು ಪ್ರಕೃತಿರಹಸ್ಯಗಳನ್ನು ಬಯಲು ಮಾಡಿದೆ. ಜೀವವಿಕಾಸವನ್ನು ವಿಶ್ಲೇಷಿಸಲಾಗಿದೆಯಾದರೂ, ಜೀವರಹಸ್ಯವನ್ನು ಭೇದಿಸುವುದು ಸಾಧ್ಯವಾಗಿಲ್ಲ. ಜೀವ ಹುಟ್ಟುವುದು ಹೇಗೆ, ಸಾಯುವುದು ಎಂದರೇನು ಎಂಬುದರ ಒಳಮರ್ಮ ಇನ್ನೂ ತಿಳಿದಿಲ್ಲ. ಸ್ಪಷ್ಟತೆ ಇಲ್ಲದೆ ಹೋದಾಗ ಕೇವಲ ಸಂಶಯದ, ಕುತೂಹಲದ ಪ್ರಶ್ನೆಗಳೇ ನಮ್ಮನ್ನು ಕಾಡುವುದು ಅಲ್ಲವೆ? ಮೊಟ್ಟಮೊದಲ ಜೀವ ಬಂದದ್ದು ಯಾವುದು? ಅದು ಹೇಗಿತ್ತು? ಅದನ್ನು ಸೃಷ್ಟಿ ಮಾಡಿದ ಶಕ್ತಿ ಯಾವುದು? ಜೀವಿ ಸಾಯುವುದು ಬೇಕೆ? ಅಮರತ್ವ ಅಸಾಧ್ಯವೇ? ಸತ್ತ ಮೇಲೆ ಆತ್ಮ ಎಲ್ಲಿಗೆ ಹೋಗುತ್ತದೆ? ಸ್ವರ್ಗ, ನರಕ ಎನ್ನುವುವು ನಿಜವಾಗಿಯೂ ಇವೆಯೆ? ಅಥವಾ ಅವು ಕೇವಲ ಆಸೆ ತೋರುವ, ಹೆದರಿಸುವ ಸಾಧನಗಳೇ? ದೇವರುಗಳು ನಿಜವೇ? ಅಥವಾ ಅವೂ ನಾವೇ ಸೃಷ್ಟಿಸಿದ ಕಲ್ಪನೆಗಳೇ? ಈ ಪ್ರಶ್ನೆಗಳಿಗೆ ಸರಿಯಾದ ಉತ್ತರ ಗೊತ್ತಿಲ್ಲ ಆದರೆ ಅವು ನಮ್ಮನ್ನು ಕಾಡುತ್ತವೆ. ಅದಕ್ಕೇ ಕಗ್ಗ ಈ ಉತ್ತರವಿಲ್ಲದ ಪ್ರಶ್ನೆಗಳನ್ನು ಗುಪ್ತ ಭೂತಗಳು ಮತ್ತು ಕತ್ತಲೆಯಲ್ಲಿ ಆಡುವ ದೆವ್ವಗಳು ಎಂದು ಕರೆಯುತ್ತದೆ. ಕಣ್ಣಿಗೆ ಕಾಣದ ಆದರೆ ಕಲ್ಪನೆಯಲ್ಲಿ ನಮ್ಮನ್ನು ಆವರಿಸಿಕೊಂಡು ಕಾಡುವ ಶಕ್ತಿಗಳನ್ನೇ ನಾವು ದೆವ್ವ, ಭೂತ ಎಂದು ಕರೆಯುವುದು. ಹೀಗೆ ಇಡೀ ಸೃಷ್ಟಿಯನ್ನು ರಹಸ್ಯವೊಂದು ಮುಸುಕಿಬಿಟ್ಟಿದೆ. ಹಾಗಾದರೆ ನಾವು ಬೆತ್ತಲಾಗುವುದೆಂತು? ಬೆತ್ತಲಾಗುವುದೆಂದರೆ ನಮ್ಮನ್ನು ನಾವು ಅರಿಯುವುದು. ತತ್- ತ್ವಂ-ಅಸಿ. ಅದೇ ಸತ್ಯದರ್ಶನ. ಆ ದರ್ಶನಕ್ಕಾಗಿ ಮನವಕುಲಕಾದು ಕುಳಿತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT