ವಿಸ್ತಾರದಲಿ ಬಾಳು, ವೈಶಾಲ್ಯದಿಂ ಬಾಳು |
ಕತ್ತಲೆಯ ಮೊಡಕು ಮೂಲೆಗಳ ಸೇರದಿರು ||
ಭಾಸ್ಕರನನುಗ್ರಹವೆ ನೂತ್ನಜೀವನಸತ್ತ್ವಂ |
ಮೃತ್ಯು ನಿನಗಲ್ಪತೆಯೊ – ಮಂಕುತಿಮ್ಮ || 913 ||
ಪದ-ಅರ್ಥ: ಭಾಸ್ಕರನನುಗ್ರಹವೆ=ಭಾಸ್ಕರನ+ಅನುಗ್ರಹವೆ, ನೂತ್ನಜೀವನಸತ್ತ್ವಂ=ನೂತ್ನ(ನೂತನ)+ಜೀವನ ಸತ್ವ,
ನಿನಗಲ್ಪತೆಯೊ=ನಿನಗೆ+ಅಲ್ಪತೆಯೊ.
ವಾಚ್ಯಾರ್ಥ: ವಿಸ್ತಾರದಿಂದ, ವೈಶಾಲ್ಯದಿಂದ ಬಾಳು. ಅಜ್ಞಾನದ ಕತ್ತಲೆಯ ಮೂಲೆಗಳನ್ನು ಸೇರಬೇಡ. ಸೂರ್ಯನ ಬೆಳಕಿನ ಅನುಗ್ರಹವೇ ಹೊಸ ಜೀವನದ ಸತ್ವ. ಹಾಗೆ ಆದಾಗ ಸಾವು ಎನ್ನುವುದು ತೀರ ಗೌಣವಾದ ವಿಷಯ.
ವಿವರಣೆ: ವಿಸ್ತಾರ ಎಂಬ ಪದವೇ ಅದ್ಭುತವಾದದ್ದು ಅದಕ್ಕೆ ಅರ್ಥ, ಹಿರಿದಾದದ್ದು, ವ್ಯಾಪಕವಾದದ್ದು ಎಂದಿದೆ. ವಿಸ್ತಾರ ಎನ್ನುವುದು ಭಗವಂತನ ಒಂದು ಹೆಸರೂ ಹೌದು. ವಿಷ್ಣು ಸಹಸ್ರನಾಮದಲ್ಲಿ “ಶ್ರೀ ವಿಸ್ತಾರಾಯ ನಮ:” ಎಂದಿದೆ. ಸಮಸ್ತ ಲೋಕಗಳು ಭಗವಂತನಲ್ಲಿ ವಿಸ್ತಾರವನ್ನು ಮತ್ತು ಅಭಿವೃದ್ಧಿಯನ್ನು ಹೊಂದುತ್ತವೆ. ಪ್ರಳಯಕಾಲದಲ್ಲಿ ಸ್ಥೂಲವಾದ ಈ ಪ್ರಪಂಚ ಕೇವಲ ಸೂಕ್ಷ್ಮರೂಪದಲ್ಲಿ ಉಳಿಯುತ್ತದೆ. ಮತ್ತೆ ಸೃಷ್ಟಿಕಾಲದಲ್ಲಿ ಭಗವಂತ ಅದನ್ನು ವಿಸ್ತಾರಗೊಳಿಸಿ ಸ್ಥೂಲ ಪ್ರಪಂಚವನ್ನು ನಿರ್ಮಾಣ ಮಾಡುತ್ತಾನೆ. ಅದಕ್ಕೇ ಅವನಿಗೆ ವಿಸ್ತಾರ ಎಂಬ ಹೆಸರು.
ಸಾಮಾನ್ಯರ ಬದುಕು ವಿಸ್ತಾರವಾಗುವುದು ಹೇಗೆ? ಅದು ಎತ್ತರಕ್ಕೇರಬೇಕು. ಬೆಟ್ಟದ ಮೇಲೆ ಏರಿದಂತೆಲ್ಲ ದೃಷ್ಟಿ ವಿಸ್ತಾರವಾಗುತ್ತದೆ. ಬದುಕು ನಿಂತ ನೀರಾಗದೆ ಪ್ರತಿಕ್ಷಣವೂ ಎತ್ತರಕ್ಕೇರಬೇಕು. ಯಾವ ಕ್ಷೇತ್ರದಲ್ಲೇ ಆಗಲಿ ಸಾಧನೆ ವ್ಯಕ್ತಿಯನ್ನು ಎತ್ತರಕ್ಕೇರಿಸುತ್ತದೆ. ಎತ್ತರಕ್ಕೆ ಹೋದಷ್ಟೂ ದೃಷ್ಟಿ, ಮನಸ್ಸು ವಿಶಾಲವಾಗುತ್ತವೆ. ಸಂಕುಚಿತ ಭಾವನೆಗಳೆಲ್ಲ ಕರಗಿ ಮನಸ್ಸು ಶುದ್ಧವಾಗುತ್ತವೆ. ಕಗ್ಗದ ಆಶಯ ಇದು. ನಮ್ಮ ಬದುಕು ವಿಸ್ತಾರವಾಗಬೇಕು. ಅದರಿಂದ ದೃಷ್ಟಿಯಲ್ಲಿ ವೈಶಾಲ್ಯತೆ ಬರಬೇಕು. ಹಾಗಾಗಬೇಕಾದರೆ ನಾವು ಕತ್ತಲೆಯ, ಅಜ್ಞಾನದ ಮೂಲೆಗಳನ್ನು ಸೇರಿ ಕುಳಿತುಕೊಳ್ಳಬಾರದು. ಸದಾಕಾಲ ಬೆಳಕಿನ, ಸೂರ್ಯನ ಅನುಗ್ರಹಕ್ಕೆ ಪ್ರಾರ್ಥಿಸಬೇಕು. ಈಶಾವಾಸ್ಯದ ಹದಿನೈದನೇ ಮಂತ್ರ ಹೇಳುತ್ತದೆ.
“ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿಹಿತಂ ಮುಖಂ |
ತತ್ತ್ವಂ ಪೂಷನ್ನಪಾವೃಣು ಸತ್ಯಧರ್ಮಾಯ ದೃಷ್ಟವೇ ||”
“ಸತ್ಯದ ಸ್ವರೂಪವು ಚಿನ್ನದಂತಹ ಆವರಣದಿಂದ ಮುಚ್ಚಲ್ಪಟ್ಟಿದೆ, ಪೂಷನ್ ಸೂರ್ಯನೇ ! ನನಗಾಗಿ, ಸತ್ಯಧರ್ಮದ ದರ್ಶನಕ್ಕಾಗಿ ಆ ಆವರಣವನ್ನು ತೆಗೆ”. ಸೂರ್ಯನ ಅನುಗ್ರಹವಾದರೆ ವ್ಯಕ್ತಿಗೆ ಸತ್ಯಧರ್ಮದ ದರ್ಶನವಾಗುತ್ತದೆ. ಹಾಗೆ ಆದಾಗ ದೇಹದ ಮೇಲಿನ, ಸಂಸಾರದಲ್ಲಿಯ ಮೋಹ ಕರಗಿ ಹೋಗುತ್ತದೆ. ಆಗ ದೊರಕುವುದೇ ಸದಾ ನೂತನವಾದ ಜೀವೋತ್ಕರ್ಷದ ಸತ್ವ. ಆ ಸದಾ ಮಂಗಲಕರವಾದ, ಅನಂತವಾದ ಶಾಂತಿಯನ್ನು ಕೊಡುವ ಸತ್ವದ ಎದುರಿನಲ್ಲಿ ಮೃತ್ಯುವಿನ ಭಯವೇ ಇರದು.
ಯಾಕೆಂದರೆ ಆ ಸತ್ವಕ್ಕೆ ಮರಣವೆಂಬುದೇ ಇಲ್ಲ ಎಂಬ ಸಂಪೂರ್ಣ ತಿಳಿವಳಿಕೆ ಬಂದಾಗ ದೇಹದ ಅಳಿವು ದೊಡ್ಡದೆನ್ನಿಸದೆ, ಹಳೆ ಬಟ್ಟೆಯನ್ನು ತ್ಯಜಿಸಿದಂಥ ಸಾಮಾನ್ಯ ಕ್ರಿಯೆಯಾಗಿಬಿಡುತ್ತದೆ. ಅದನ್ನೇ ಕಗ್ಗ, “ಮೃತ್ಯು ನಿನಗಲ್ಪತೆಯೊ” ಎನ್ನುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.