ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಅಳುತ್ತಿದ್ದಾಗ ರಾಜ್ಯದ ತುದಿಯಲ್ಲಿದ್ದ ಕಾಡಿನ ಬಳಿ ಗಡಿನಾಡಿನ ಜನ ವಾಸವಾಗಿದ್ದರು. ಅವರು ಕಾಡಿನಲ್ಲಿ ಹೋಗಿ ಪ್ರಾಣಿಗಳನ್ನು ಕೊಂದು ಅವುಗಳ ಮಾಂಸ ತಂದು ಸಂಸಾರದ ಪೋಷಣೆ ಮಾಡುತ್ತಿದ್ದರು. ಈ ಹಳ್ಳಿಗಳಿಂದ ಕೊಂಚ ದೂರದಲ್ಲಿ, ಕಾಡಿನಲ್ಲಿ ಒಂದು ವಿಶಾಲವಾದ ಕೆರೆ ಇತ್ತು. ಅದರ ಉತ್ತರದಲ್ಲಿ ಮೃಗರಾಜ ಸಿಂಹ ವಾಸವಾಗಿತ್ತು, ದಕ್ಷಿಣದಲ್ಲಿ ಒಂದು ಗಂಡು ಹದ್ದು ನೆಲೆಯಾಗಿತ್ತು. ಪಶ್ಚಿಮದಲ್ಲೊಂದು ಹೆಣ್ಣು ಹದ್ದು ಗೂಡು ಕಟ್ಟಿಕೊಂಡಿತ್ತು. ಪೂರ್ವದಿಕ್ಕಿನಲ್ಲಿ ಒಂದು ಮರದ ಮೇಲೆ ಶಕ್ತಿಶಾಲಿಯಾದ ಸಮುದ್ರದ ಗರುಡ ತನ್ನ ಪರಿವಾರದವರೊಂದಿಗೆ ಇತ್ತು. ಕೆರೆಯ ಮಧ್ಯದಲ್ಲಿ ಎತ್ತರದ ಸ್ಥಳದಲ್ಲಿ ಒಂದು ಭಾರೀ ದೊಡ್ಡ ಆಮೆ ಮನೆ ಮಾಡಿಕೊಂಡಿತ್ತು.
ಒಂದು ದಿನ ಗಂಡು ಹದ್ದು, ಹೆಣ್ಣು ಹದ್ದಿನ ಬಳಿಗೆ ಹೋಗಿ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡಿತು. ಆಗ ಆ ಬುದ್ಧಿವಂತ ಹೆಣ್ಣು ಹದ್ದು, ‘ನಾವು ಮದುವೆಯಾಗುವುದೇನೋ ಸರಿ. ಆದರೆ ಮುಂದೆ ನಮ್ಮ ಪರಿವಾರ ಬೆಳೆದಂತೆ ನಮಗೆ ಕುತ್ತುಗಳು ಬರುತ್ತವೆ. ಅದಕ್ಕೆ ನಾವು ನಮಗೆ ಸಹಾಯಮಾಡುವ ಸ್ನೇಹಿತರನ್ನು ಸಂಪಾದಿಸಬೇಕು’ ಎಂದಿತು. ಹಾಗೆಯೇ ಆಗಲಿ ಎಂದು ಗಂಡು ಹದ್ದು ಗರುಡರಾಜನ, ಆಮೆಯ ಹಾಗೂ ಮೃಗರಾಜ ಸಿಂಹದ ಬಳಿಗೆ ಹೋಗಿ ವಿನಯದಿಂದ ಮಾತನಾಡಿ ಸ್ನೇಹ ಮಾಡಿಕೊಂಡಿತು. ನಂತರ ಹದ್ದುಗಳು ಮದುವೆಯಾಗಿ ಮರದಲ್ಲಿ ಗೂಡು ನಿರ್ಮಿಸಿಕೊಂಡವು. ಮುಂದೆ ಅವುಗಳಿಗೆ ಎರಡು ಮರಿಗಳಾದವು.
ಒಂದು ಸಲ ಹಳ್ಳಿಯ ಜನ ಬೇಟೆಯಾಡಲು ಕಾಡಿಗೆ ಬಂದರು. ಅಂದು ಅವರಿಗೆ ಯಾವುದೂ ಪ್ರಾಣಿ ಸಿಗಲಿಲ್ಲ. ರಾತ್ರಿಯಾದ್ದರಿಂದ ಮರದ ಕೆಳಗೆ ಮಲಗಿದ್ದು ಮರುದಿನ ಮನೆಗೆ ಹೋಗಬೇಕೆಂದು ತೀರ್ಮಾನಿಸಿ ಹದ್ದುಗಳ ಗೂಡಿದ್ದ ಮರದ ಕೆಳಗೆ ಮಲಗಿದರು. ರಾತ್ರಿ ಸೊಳ್ಳೆಗಳ ಕಾಟವಾದ್ದರಿಂದ ಬೆಂಕಿ ಹಾಕಿ ಹೊಗೆ ಮಾಡಿದರು. ಹೊಗೆಗೆ ಗಾಬರಿಯಾದ ಹದ್ದಿನ ಮರಿಗಳು ಕಿರುಚಿದವು. ಅದನ್ನು ಕೇಳಿ ಹಳ್ಳಿಗರು,
‘ಓಹೋ, ಮರದಲ್ಲಿಯೇ ನಮಗೆ ಆಹಾರವಿದೆ. ಈ ಮರಿಗಳನ್ನು ಕೊಂದು ಹೊಟ್ಟೆ ತುಂಬಿಸಿಕೊಳ್ಳೋಣ’ ಎಂದು ಮತ್ತಷ್ಟು ಹೊಗೆ ಹಾಕಿದರು. ಹೆಣ್ಣು ಹದ್ದು ಗಾಬರಿಯಾಗಿ, ಸ್ನೇಹಿತರ ಸಹಾಯ ಪಡೆಯುವಂತೆ ಗಂಡನಿಗೆ ಹೇಳಿತು. ಹದ್ದು ಹೋಗಿ ಗರುಡ
ರಾಜನನ್ನು ಕರೆತಂದಿತು. ಗರುಡ ತನ್ನ ಬಾಯಿಯಲ್ಲಿ ನೀರು ತುಂಬಿಕೊಂಡು ದೊಂದಿಯ ಮೇಲೆ ಸುರಿಸಿ ಅದನ್ನು ಆರಿಸಿತು. ಆದರೆ ಅವರು ಮತ್ತೆ ಮತ್ತೆ ಹಚ್ಚುತ್ತಲೇ ಇದ್ದರು. ಗರುಡನಿಗೆ ನೀರು ಉಗಿದು ಉಗಿದು ಉಸಿರು ಕಟ್ಟಿದಂತಾಯಿತು.
ಆಗ ಹದ್ದು ಆಮೆಯನ್ನು ಕರೆತಂದಿತು. ಆಮೆ ತನ್ನ ಮೈಗೆಲ್ಲ ಕೆಸರು, ಬಳ್ಳಿಗಳನ್ನು ಹಾಕಿಕೊಂಡು ಬಂದು ಬೆಂಕಿಯಲ್ಲಿ ಬಿದ್ದು ಅದನ್ನು ಆರಿಸಿತು. ಹಳ್ಳಿಗರು, ‘ಪಕ್ಷಿ ಹೋಗಲಿ, ಈ ಕುರುಡು ಆಮೆಯನ್ನೇ ಕೊಂದು ತಿನ್ನೋಣ’ ಎಂದರು. ಆಗ ಆ ಆಮೆ ತನ್ನ ಶಕ್ತಿಯಿಂದ ಅವರನ್ನೇ ಎಳೆದು ನೀರಲ್ಲಿ ಹಾಕಿತು. ಹಳ್ಳಿಗರು, ‘ಇವತ್ತು ಯಾಕೋ ಈ ಪ್ರಾಣಿಗಳು ನಮಗೆ ತುಂಬ ತೊಂದರೆ ಕೊಡುತ್ತಿವೆ. ಬೆಳಿಗ್ಗೆ ಮರವನ್ನೇರಿ ಮರಿಗಳನ್ನು ಹಿಡಿದು ತಿಂದು ಬಿಡೋಣ’ ಎಂದರು. ಹದ್ದಿನ ದಂಪತಿಗಳಿಗೆ ಜೀವವೇ ಹಾರಿಹೋಯಿತು. ಗಂಡು ಹದ್ದು ಹಾರಿ ಹೋಗಿ ಸಿಂಹವನ್ನು ಕರೆತಂದಿತು. ಅದರ ಘರ್ಜನೆಯನ್ನು ಕೇಳಿದೊಡನೆ ಹಳ್ಳಿಗರು ಜೀವಭಯದಿಂದ ಓಡಿ ಹೋದರು. ಮುಂದೆ ಪಕ್ಷಿಗಳು ಸುಖವಾಗಿದ್ದವು.
ಬದುಕಿನಲ್ಲಿ ನಿಜವಾದ ಸ್ನೇಹಿತರು ಬಹಳ ಮುಖ್ಯ. ಆತ್ಮೀಯ ಸ್ನೇಹಿತರು ಒಂದು ದೊಡ್ಡ ಸೈನ್ಯವಿದ್ದಂತೆ. ಅದು ಅನೇಕ ಹಂತಗಳಲ್ಲಿ ನಮ್ಮನ್ನು ಕಾಪಾಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.