ವಾರಾಣಸಿಯಲ್ಲಿ ಹಿಂದೆ ಬ್ರಹ್ಮದತ್ತ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ಒಂದು ಅತ್ಯಂತ ಸುಂದರವಾದ ನವಿಲಾಗಿ ಹುಟ್ಟಿದ್ದ. ಅದರ ಸೌಂದರ್ಯ ಎಲ್ಲರನ್ನು ಆಕರ್ಷಿಸುತ್ತಿತ್ತು.
ಆಗ ವ್ಯಾಪಾರಸ್ಥರು ವ್ಯಾಪಾರಕ್ಕಾಗಿ ಹಡಗುಗಳಲ್ಲಿ ದೂರದೂರದ ದೇಶಗಳಿಗೆ ಹೋಗುತ್ತಿದ್ದರು. ಹೀಗೆ ಹೋಗುವಾಗ ಒಂದು ಬಾರಿ ಹಡಗಿನಲ್ಲೊಂದು ಕಾಗೆ ಸೇರಿಕೊಂಡಿತು. ವ್ಯಾಪಾರಸ್ಥರು ತಮ್ಮ ಊಟದಲ್ಲಿ ಉಳಿದ ವಸ್ತುಗಳನ್ನು ಹಾಕುತ್ತಿದ್ದುದರಿಂದ ಕಾಗೆ ಅದನ್ನೇ ತಿಂದುಕೊಂಡು ಸಂತೋಷವಾಗಿತ್ತು. ಹಡಗು ಸಮುದ್ರ ಮಧ್ಯದಲ್ಲಿರುವುದರಿಂದ ಅದಕ್ಕೆ ಹಾರಿ ದೂರ ಹೋಗುವುದೂ ಸಾಧ್ಯವಿರಲಿಲ್ಲ. ಹಡಗು ಹೀಗೆ ಸಾಗುತ್ತ ಬಾವೆರು ಎಂಬ ದೇಶದ ಬಂದರಿಗೆ ಬಂದು ತಲುಪಿತು. ವ್ಯಾಪಾರಿಗಳು ತಮ್ಮ ಸರಕುಗಳನ್ನು ಮಾರಲು ಕೆಳಗೆ ಇಳಿದರು. ಅವರೊಂದಿಗೆ ಕಾಗೆಯೂ ಬಂದಿತು. ಅದೊಂದು ವಿಚಿತ್ರವಾದ ದ್ವೀಪ. ಅಲ್ಲಿ ಒಂದು ಪಕ್ಷಿಯೂ ಇರಲಿಲ್ಲ, ಆ ಜನರಿಗೆ ಕಾಗೆಯನ್ನು ಕಂಡು ಆಶ್ಚರ್ಯವಾಯಿತು. ಎಲ್ಲರೂ ಅದನ್ನು ನೋಡಲು ಬರತೊಡಗಿದರು. ಆಗ ವ್ಯಾಪಾರಿಗಳು ಅದನ್ನೊಂದು ಸುಂದರವಾದ ಪಂಜರದಲ್ಲಿ ಹಾಕಿಟ್ಟರು. ಜನ ಸಾಲುಗಟ್ಟಿ ನಿಂತು ಅದನ್ನು ನೋಡಿ, ಅದರ ಕೊಕ್ಕು, ಕಣ್ಣುಗಳು, ಮೈಬಣ್ಣ, ಅದರ ಕೂಗುವಿಕೆಯನ್ನು ಮೆಚ್ಚಿಕೊಂಡು ಮಾತನಾಡಿ ಸಂಭ್ರಮ ಪಡುತ್ತಿದ್ದರು.
ಬಾವೆರು ದ್ವೀಪದ ಶ್ರೀಮಂತ ವ್ಯಾಪಾರಿಗಳು ಬಂದು, ‘ನೋಡಿ, ನಮ್ಮ ದೇಶದಲ್ಲಿ ನಾವು ಇದುವರೆಗೂ ಒಂದು ಪಕ್ಷಿಯನ್ನು ನೋಡಿರಲಿಲ್ಲ. ನಿಮ್ಮ ದೇಶದಲ್ಲಿ ಬೇಕಾದಷ್ಟು ಪಕ್ಷಿಗಳಿವೆ. ದಯವಿಟ್ಟು ಈ ಕಾಗೆಯನ್ನು ನಮಗೆ ಬಿಟ್ಟು ಹೋಗಿ. ನಾವು ಅದಕ್ಕೆ ತಾವು ಹೇಳಿದ ಬೆಲೆಯನ್ನು ಕೊಡುತ್ತೇವೆ’ ಎಂದರು. ವಾರಾಣಸಿಯ ವ್ಯಾಪಾರಸ್ಥರು ಈ ಕಾಗೆಗೆ ಒಂದು ಕಹಾಪಣವನ್ನೂ ಯಾರೂ ಕೊಡುವುದಿಲ್ಲ, ಆದರೂ ಕೇಳಿ ನೋಡೋಣ ಎಂದುಕೊಂಡು ಕಾಗೆಯ ಬೆಲೆ ನೂರು ಕಹಾಪಣಗಳು ಎಂದರು. ದ್ವೀಪದ ವ್ಯಾಪಾರಿಗಳು ಮಾತನಾಡದೆ ನೂರು ಕಹಾಪಣಗಳನ್ನು ನೀಡಿ ಕಾಗೆಯನ್ನು ಪಡೆದರು.
ಅದನ್ನೊಂದು ಬಂಗಾರದ ಪಂಜರದಲ್ಲಿಟ್ಟು ಅದಕ್ಕೆ ರಾಜೋಪಚಾರವನ್ನು ಮಾಡಿದರು. ಮೀನು, ಮಾಂಸ, ಹಣ್ಣುಗಳನ್ನು ತಿನ್ನಿಸುತ್ತ ಬೆಳೆಸಿದರು. ದುರ್ಗುಣಿಯಾದ ಕಾಗೆಗೆ ಭಾರೀ ಅಹಂಕಾರ ಬಂದಿತು. ತನ್ನಂತಹ ಜೀವಿ ಭೂಮಿಯ ಮೇಲೆಯೇ ಇಲ್ಲವೆಂಬಂತೆ ನಡೆಯತೊಡಗಿತು.
ಮರುವರ್ಷ ವಾರಾಣಸಿಯ ವ್ಯಾಪಾರಸ್ಥರು ಬಾವೆರು ದ್ವೀಪಕ್ಕೆ ಹೋಗುವಾಗ ತಮ್ಮೊಂದಿಗೆ ಬೋಧಿಸತ್ವ ನವಿಲನ್ನು ಕರೆದೊಯ್ದರು. ಚಪ್ಪಾಳೆ ತಟ್ಟಿದರೆ ಬಂದು ರೆಕ್ಕೆಗಳನ್ನು ಅಗಲವಾಗಿಸಿ ನೃತ್ಯಮಾಡುವ ನವಿಲು ಎಲ್ಲರ ಹೃದಯಗಳನ್ನು ಗೆದ್ದಿತು. ಅಲ್ಲಿಯ ಜನರಿಗೆ ಅದರ ಹುಚ್ಚೇ ಹಿಡಿಯಿತು. ಅವರು ನವಿಲನ್ನು ತಮಗೆ ಮಾರಿ ಎಂದು ಗಂಟುಬಿದ್ದು ಹತ್ತು ಸಾವಿರ ಕಹಾಪಣಗಳಿಗೆ ಅದನ್ನು ಕೊಂಡುಕೊಂಡರು. ಅದಕ್ಕೊಂದು ವಜ್ರಖಚಿತವಾದ ಪುಟ್ಟ ಮನೆಯನ್ನೇ ನಿರ್ಮಿಸಿ ಅದಕ್ಕೆ ಪ್ರೀತಿಯಾದ ಮೀನು, ಮಾಂಸ, ಹಣ್ಣಿನ ರಸಗಳನ್ನು ತಿನ್ನಿಸುತ್ತ ಸಂತೋಷಪಟ್ಟರು. ಈಗ ಕಾಗೆಯನ್ನು ಗಮನಿಸುವವರು ಯಾರೂ ಇಲ್ಲದಂತಾಯಿತು. ಮೊದಮೊದಲು ಕಾಗೆ ತನ್ನ ಕರ್ಕಶವಾದ ಕಾಕಾ ಧ್ವನಿಯಿಂದ ಜನರ ಮನಸ್ಸನ್ನು ಸೆಳೆಯಲು ಪ್ರಯತ್ನಿಸಿತು. ನವಿಲಿನ ಸೌಂದರ್ಯಕ್ಕೆ ಮಾರು ಹೋದ ಜನ ಕಾಗೆಯನ್ನು ನೋಡಿಯಾರೇ? ಬರುಬರುತ್ತ ಕಾಗೆಯ ಹೊಟ್ಟೆಗೆ ಆಹಾರ ಸಿಗದಂತಾಯಿತು. ಕೊನೆಗೆ ಅನಿವಾರ್ಯವಾಗಿ ಹಾರಿಬಂದು ತಿಪ್ಪೆಯ ಮೇಲೆ ಕುಳಿತು ಕೊಳೆತ ಆಹಾರವನ್ನು ತಿನ್ನುವಂತಾಯಿತು.
ನಮ್ಮೆಲ್ಲರ ಸ್ಥಿತಿಯೂ ಹಾಗೆಯೇ. ಒಂದು ಸ್ವಲ್ಪ ಸಾಧನೆಯಾದೊಡನೆ ನನಗೆ ಸಮಾನರಾರು ಎಂಬಂತೆ ಹಾರಾಡುತ್ತೇವೆ, ಅಹಂಕಾರಪಡುತ್ತೇವೆ. ಆದರೆ ನಮಗಿಂತ ಹೆಚ್ಚು ಸಾಧನೆ ಮಾಡಿದವರು ಬಂದಾಗ ಬಾಲಮುದುರಿಕೊಂಡು ಕೊರಗುತ್ತ ಕೂಡ್ರುತ್ತೇವೆ. ಆದ್ದರಿಂದ ಸದಾ ಕಾಲದ ವಿನಯ, ನಮ್ರತೆ ಬಾಳಿನ ಹದ ಕೆಡದಂತೆ ನೋಡಿಕೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.