ADVERTISEMENT

ಬೆರಗಿನ ಬೆಳಕು: ತೀರ್ಮಾನವಾದ ಲೆಕ್ಕ

ಡಾ. ಗುರುರಾಜ ಕರಜಗಿ
Published 17 ಜುಲೈ 2022, 19:30 IST
Last Updated 17 ಜುಲೈ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಒಂದಗಳು ಹೆಚ್ಚಿರದು, ಒಂದಗಳು ಕೊರೆಯಿರದು|
ತಿಂದು ನಿನ್ನನ್ನ ಋಣ ತೀರುತಲೆ ಪಯಣ ‌||
ಹಿಂದಾಗದೊಂದು ಚಣ, ಮುಂದಕು ಕಾದಿರದು |
ಸಂದ ಲೆಕ್ಕವದೆಲ್ಲ – ಮಂಕುತಿಮ್ಮ || 673 ||

ಪದ-ಅರ್ಥ: ಒಂದಗಳು=ಒಂದು+ಅಗುಳು,
ಕೊರೆಯಿರದು =ಕೊರೆ(ಕಡಿಮೆ)+ಇರದು, ನಿನ್ನನ್ನ=ನಿನ್ನ +ಅನ್ನ,
ಹಿಂದಾಗದೊಂದು =ಹಿಂದೆ+ಆಗದು+ಒಂದು, ಚಣ=ಕ್ಷಣ, ಸಂದ=ತೀರ್ಮಾನವಾದ, ಲೆಕ್ಕವದೆಲ್ಲ=ಲೆಕ್ಕವು+ಅದೆಲ್ಲ.
ವಾಚ್ಯಾರ್ಥ: ಒಂದು ಅಗುಳು ಹೆಚ್ಚಾಗಲಾರದು, ಒಂದು ಅಗುಳು ಕಡಿಮೆಯಾಗದು. ನಮ್ಮ ಅನ್ನದ ಋಣ ಮುಗಿದ ಕ್ಷಣವೇ ಪ್ರಯಾಣ. ಒಂದು ಕ್ಷಣವೂ ಹಿಂದೆ, ಮುಂದೆ ಆಗುವುದಿಲ್ಲ. ಅದೆಲ್ಲತೀರ್ಮಾನವಾದಲೆಕ್ಕ.

ವಿವರಣೆ: ಯಮರಾಜ ವಿಷ್ಣುವನ್ನು ಕಾಣಲು ವೈಕುಂಠಕ್ಕೆ ಬಂದ. ದ್ವಾರದ ಬಲಭಾಗದಲ್ಲಿ ಗರುಡ ಕುಳಿತಿದ್ದ. ಯಮ ಅಕಸ್ಮಾತ್ತಾಗಿ ಬಲಕ್ಕೆ ತಿರುಗಿ ನೋಡಿದಾಗ ಪುಟ್ಟ ಗುಬ್ಬಚ್ಚಿಯೊಂದು
ಕುಳಿತದ್ದನ್ನು ಕಂಡ. ಆಶ್ಚರ್ಯದಿಂದ ಹುಬ್ಬೇರಿಸಿ, ಭುಜ ಕುಣಿಸಿ ನೋಡಿದಾಗ ಪುಟ್ಟ ಗುಬ್ಬಚ್ಚಿಯೊಂದು ಕುಳಿತದ್ದನ್ನು ಕಂಡ. ಆಶ್ಚರ್ಯದಿಂದ ಹುಬ್ಬೇರಿಸಿ, ಭುಜ ಕುಣಿಸಿ ಒಳಗೆ ನಡೆದ. ಗುಬ್ಬಚ್ಚಿಗೆ ಗಾಬರಿ. ತನ್ನ ಆಯುಷ್ಯ ಮುಗಿಯಿತು ಎಂದು ಅಳತೊಡಗಿತು. ಗರುಡ ಮಹಾನ್ ಬಲಶಾಲಿಯಾದರೂ ಮೂಲತಃ ಪಕ್ಷಿ ತಾನೇ? ಜಾತಿ ಪ್ರೇಮ ಉಕ್ಕಿತು. ಯಾಕೆ ಅಳುತ್ತೀ ಎಂದು ಗುಬ್ಬಚ್ಚಿಯನ್ನು ಕೇಳಿದ ಗುಬ್ಬಚ್ಚಿ ಹೇಳಿತು, “ಯಮರಾಜ ನನ್ನನ್ನು ನೋಡಿದ ರೀತಿ, ನನ್ನ ಆಯುಸ್ಸು ಮುಗಿಯಿತು ಎಂದು ತೋರುತ್ತದೆ. ಕ್ಷಣದಲ್ಲಿ ನಾನೂ ಇಲ್ಲೇ ಸತ್ತು ಹೋಗುತ್ತೇನೆ”. ಗರುಡ ಹೇಳಿದ, “ಭಯ ಬೇಡ. ನೀನು ಯಮನ ಕೈಗೆ ಸಿಗದಂತೆ ಪಾರು ಮಾಡುತ್ತೇನೆ ಬಾ”. ಗುಬ್ಬಚ್ಚಿಯನ್ನು ನಯವಾಗಿ ಚುಂಚಿನಲ್ಲಿ ಹಿಡಿದು ಹಾರಿದ. ಅವನ
ಪ್ರಯಾಣ ಮನೋವೇಗದಲ್ಲಿ. ಕ್ಷಣಮಾತ್ರದಲ್ಲಿ ಆತ ಗಂಧಮಾದನ ಪರ್ವತದ ಅತ್ಯುನ್ನತ ಶಿಖರದ ಮೇಲಿದ್ದ ಗುಬ್ಬಚ್ಚಿಯನ್ನು ಅಲ್ಲಿ ಇಳಿಸಿದ. “ನೀನು ಇಲ್ಲಿರು, ಯಮ ಕೂಡ ಇಲ್ಲಿಗೆ ಬರಲಾರ” ಎಂದು ಹೇಳಿ ಮರಳಿ ಬಂದು ತನ್ನ ಸ್ಥಾನದಲ್ಲಿ ಕುಳಿತ.

ADVERTISEMENT

ಸ್ವಲ್ಪ ಹೊತ್ತಿಗೆ ಯಮರಾಜ ಮರಳಿ ಬಂದ. ಗುಬ್ಬಚ್ಚಿ ಅಲ್ಲಿ ಇಲ್ಲದ್ದನ್ನು ಕಂಡು ಕಣ್ಣುಮುಚ್ಚಿ ನಕ್ಕ. ಗರುಡ ಕೇಳಿದ, “ನಿನಗೆ ನಿನ್ನ ಬಗ್ಗೆ ಬಹಳ ಹೆಮ್ಮೆ ಅಲ್ಲವೆ? ಪಾಪ! ಆ ಗುಬ್ಬಚ್ಚಿಯ ಪ್ರಾಣವನ್ನು ಇಲ್ಲಿ ತೆಗೆಯಬೇಕೆಂದಿದ್ದೆ ನೀನು. ಈಗ ನಿನಗೆ ಅದು ಸಿಗಲಾರದು”, “ಯಾಕೆ? ಅದನ್ನು ಎಲ್ಲಿಗೆ ಒಯ್ದೆ?” ಕೇಳಿದ ಯಮ, “ನಿಮ್ಮ ದೂತರು ತಲುಪದಂತೆ ಗಂಧಮಾದನ
ಪರ್ವತದ ಶಿಖರದ ಮೇಲೆ ಇರಿಸಿದ್ದೇನೆ” ಎಂದ ಗರುಡ ಗರ್ವದಿಂದ. ಯಮ, “ಧನ್ಯವಾದಗಳು. ವಿಧಿಲಿಖಿತದಂತೆ ಅದು ಈ ಕ್ಷಣ ಗಂಧಮಾದನ ಪರ್ವತದ ಅತ್ಯುನ್ನತ ಶಿಖರದ ಮೇಲೆ
ಸಾಯಬೇಕಿತ್ತು. ಆ ಪುಟ್ಟ ಪಕ್ಷಿ ನೂರು ವರ್ಷ ಹಾರಿದರೂ ಅದು ತಲುಪುವುದು ಅಸಾಧ್ಯ. ಅದಕ್ಕೇ ಅದನ್ನು ಇಲ್ಲಿ ಕಂಡು ಆಶ್ಚರ್ಯವಾಗಿತ್ತು. ನೀನಲ್ಲದೆ ಅದನ್ನು ಯಾರು ಆ ಮೃತ್ಯುವಿನ ಸ್ಥಳಕ್ಕೆ ಕರೆದೊಯ್ಯಬಹುದಿತ್ತು?”. ಬದುಕಿನ ಹುಟ್ಟು ಸಾವುಗಳ ಕ್ಷಣಗಳು ನಿಶ್ಚಿತ. ಒಂದು
ಕ್ಷಣವೂ ಆಚೀಚೆ ಆಗುವುದಿಲ್ಲ. ಅದು ವಿಧಿಯ ನಿರ್ಧಾರಿತಲೆಕ್ಕ. ಅದಕ್ಕೇ ಕಗ್ಗ ಹೇಳುತ್ತದೆ, ನಾನು ಭೂಮಿಯಲ್ಲಿ ಎಷ್ಟು ಕ್ಷಣ ಇರಬೇಕು, ಎಷ್ಟು ಊಟ ಮಾಡಬೇಕು ಎನ್ನುವುದು
ಪೂರ್ವನಿರ್ಧಾರಿತ. ಅದರಲ್ಲಿ ಒಂದು ಅಗುಳೂ ಹೆಚ್ಚು ಕಡಿಮೆಯಾಗುವುದಿಲ್ಲ. ಅನ್ನದ ಋಣ ಮುಗಿಯುತ್ತಲೇ ಪ್ರಯಾಣ. ಸುದೈವವೋ, ದುರ್ದೈವವೋ ಮನುಷ್ಯನಿಗೆ ಬದುಕಿನ ಅಂಚುಗಳು ಕಾಣುವುದಿಲ್ಲ. ಆದ್ದರಿಂದ ಅಂಚು ಹತ್ತಿರದಲ್ಲೇ ಇದೆಯೆಂದು ತಿಳಿದು ನೇಮದಿಂದ ಬಾಳುವುದು ಕ್ಷೇಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.