ಪ್ರಾರಬ್ಧದಲಿ ನಿನ್ನ ಪುಣ್ಯವಿನಿತಾನುಮಿರೆ |
ಸೇರೆ ಪಶ್ಚಾತ್ತಾಪ ಭಾರವದರೊಡನೆ ||
ದಾರುಣದ ಕರ್ಮನಿಯತಿಯನಿನಿತು ಶಿಥಿಲಿಪುದು |
ಕಾರುಣ್ಯದಿಂ ದೈವ –ಮಂಕುತಿಮ್ಮ || 509 ||
ಪದ-ಅರ್ಥ: ಪ್ರಾರಬ್ಧ=ಮೊದಲು ಮಾಡಿದ ಕರ್ಮ, ಪುಣ್ಯವಿನಿತಾನುಮಿರೆ=ಪುಣ್ಯ+ಇನಿ
ತಾನುಂ (ಸ್ವಲ್ಪವಾದರೂ)+ಇರೆ(ಇದ್ದರೆ), ದಾರುಣದ=ನೋವಿನ, ಕರ್ಮನಿಯತಿಯನಿನಿತು=
ಕರ್ಮ +ನಿಯತಿಯನು(ನಿಯಮವನು),+ಇನಿತು (ಸ್ವಲ್ಪ), ಶಿಥಿಲಿಪುದು=ಕಡಿಮೆ ಮಾಡುವುದು
ವಾಚ್ಯಾರ್ಥ: ಪ್ರಾರಬ್ಧದಲ್ಲಿ ಸ್ವಲ್ಪವಾದರೂ ಪುಣ್ಯವಿದ್ದರೆ, ಅದರೊಡನೆ ಪಶ್ಚಾತ್ತಾಪದ ಭಾರ ಸೇರಿದರೆ, ಕರ್ಮದ ನಿಯಮದಂತೆ ದೊರೆಯಬೇಕಿದ್ದ ನೋವನ್ನು ದೈವ ಕರುಣೆಯಿಂದ ಕಡಿಮೆಮಾಡುತ್ತದೆ.
ವಿವರಣೆ: ಕರ್ಮಸಿದ್ಧಾಂತವು, ಭಾರತೀಯ ದರ್ಶನಗಳೆಲ್ಲ ಒಮ್ಮತದಿಂದ ಸ್ವೀಕರಿಸಿರುವ ತತ್ವ. ಹಿಂದೂ ಧರ್ಮದ ಪ್ರಕಾರ ಮನುಷ್ಯನ ಜೀವನ ಒಂದು ಮುಗಿದು ಹೋಗುವ ಗ್ರಂಥವಲ್ಲ. ಅದು ಸರಣಿಯಂತೆ ಬೆಳೆಯುತ್ತಲೇ ಹೋಗುವ ಪ್ರಕ್ರಿಯೆ. ಇದಕ್ಕೆ ಕೊನೆಯೆಂಬುದೇ ಇಲ್ಲ. ಮನುಷ್ಯ ತನ್ನ ಕರ್ಮಗಳಿಗೆ ಅನುಗುಣವಾಗಿ ಪುನಃ ಪುನಃ ಹುಟ್ಟಿ ಬರುತ್ತಾನೆ. ಮತ್ತೆ ಕರ್ಮ ಮಾಡುತ್ತಾನೆ. ಅದಕ್ಕೆ ಮತ್ತೆ ಕರ್ಮಫಲ.
ಇದೊಂದು ಕೊನೆಗೊಳ್ಳದ ಸರಪಳಿ. ಕರ್ಮದಲ್ಲಿ ಮೂರು ಬಗೆಗಳು.
1.ಸಂಚಿತ ಕರ್ಮ: ಹಿಂದಿನ ಜನ್ಮಗಳಲ್ಲಿ ಸಂಗ್ರಹವಾದ ಕರ್ಮಗಳ ಮೊತ್ತ.
2.ಆಗಾಮಿ ಕರ್ಮ: ಇದು ಮುಂದೆ ಅನುಭವಿಸಬೇಕಾದ ಕರ್ಮಫಲ. ಈ ಜೀವನದಲ್ಲಿ ಮಾಡುವ ಕರ್ಮಗಳಿಗೆ ಅನುಗುಣವಾಗಿ ಬರುವ ಫಲಗಳು.
3.ಪ್ರಾರಬ್ಧ ಕರ್ಮ: ಹಿಂದಿನ ಜನ್ಮಗಳಲ್ಲಿ ಮಾಡಿದ ಪಾಪ-ಪುಣ್ಯಗಳ ಫಲವಾಗಿ ಈ ಜನ್ಮದಲ್ಲಿ ಪಡುವ ಸುಖ-ದುಃಖಗಳು. ಅವುಗಳ ಮೇಲೆ ನಮ್ಮ ಹತೋಟಿಯಿಲ್ಲ. ಆದರೆ ಸುಕೃತಗಳಿಂದ ಅವುಗಳನ್ನು ಕಡಿಮೆ ಮಾಡಿಕೊಳ್ಳಬಹುದು.
ಹಿಂದಿನ ಜನ್ಮಗಳಲ್ಲೇನಾದರೂ ಒಳ್ಳೆಯ ಕಾರ್ಯಗಳನ್ನು ಮಾಡಿದ್ದರೆ, ಅದರ ಜೊತೆಗೆ ಪಶ್ಚಾತ್ತಾಪ, ಭಕ್ತಿಗಳು ಉದಯಿಸಿದರೆ, ದೈವ ಕೊಂಚ ಕರುಣೆ ತೋರಬಹುದು, ಎನ್ನುತ್ತದೆ ಕಗ್ಗ.
ಇಂದ್ರದ್ಯುಮ್ನನೆಂಬ ಸಾತ್ವಿಕರಾಜ ಆರಾಧನೆಯಲ್ಲಿ ಮಗ್ನನಾದಾಗ ತನ್ನನ್ನು ಗಮನಿಸಲಿಲ್ಲವೆಂದು ಅಗಸ್ತ್ಯಮುನಿ ಕೋಪದಿಂದ ಆನೆಯಾಗಿ ಹೋಗು ಎಂದು ಶಾಪಕೊಟ್ಟನಂತೆ. ಮತ್ತೊಬ್ಬ ಹುಹೂ ಎಂಬ ಗಂಧರ್ವ ಪತ್ನಿಯರೊಂದಿಗೆ ಜಲಕ್ರೀಡೆಯಾಡುತ್ತಿರುವಾಗ, ಹುಡುಗಾಟಿಕೆಯಿಂದ, ಅಲ್ಲಿಗೆ ಬಂದ ಋಷಿಗಳ ಕಾಲು ಎಳೆದನಂತೆ. ಅದಕ್ಕೆ ಅವರು ಮೊಸಳೆಯಾಗು ಎಂದು ಶಾಪ ನೀಡಿದರು. ಇಬ್ಬರೂ ಒಂದೇ ಕಡೆಗೆ ಹುಟ್ಟಿದರು. ಇದು ಪ್ರಾರಬ್ಧ ಕರ್ಮ. ಮೂಲತಃ ಇಬ್ಬರೂ ಒಳ್ಳೆಯವರೇ ಆಗಿದ್ದರಿಂದ ಮತ್ತು ಪಶ್ಚಾತ್ತಾಪ ಪಟ್ಟಿದ್ದರಿಂದ ಮುಕ್ತಿಗೆ ಕಾಯುತ್ತಿದ್ದರು. ಒಂದು ದಿನ ನೀರು ಕುಡಿಯಲು ಬಂದ ಆನೆಯ ಕಾಲನ್ನು ಮೊಸಳೆ ಹಿಡಿದಾಗ, ಬಿಡಿಸಿಕೊಳ್ಳಲಾಗದೆ, ಆನೆ ಆರ್ತತೆಯಿಂದ ದೇವರನ್ನು ಬೇಡಿದಾಗ ವಿಷ್ಣು, ತನ್ನ ಚಕ್ರದಿಂದ ಮೊಸಳೆಯ ಬಾಯನ್ನು ಕತ್ತರಿಸಿ, ಆನೆಯನ್ನು ಪಾರು ಮಾಡಿದ. ಮೊಸಳೆ ಮತ್ತು ಆನೆ ಇಬ್ಬರಿಗೂ ಮೋಕ್ಷವಾಯಿತಂತೆ.
ಪ್ರಾರಬ್ಧ ಕರ್ಮದ ಫಲವನ್ನು ಅನುಭವಿಸಿದರೂ, ಪಶ್ಚಾತ್ತಾಪದಿಂದ ದೈವವನ್ನು ಒಲಿಸಿಕೊಂಡಾಗ ಫಲದ ತೀಕ್ಷ್ಣತೆ ಕಡಿಮೆಯಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.