ಅನುರಾಗ ದುಃಖಂಗಳೊಮ್ಮೊಮ್ಮೆ ಬಿರುಬೀಸಿ |
ಮನದ ತೆರೆಗಳ ಕುಲುಕಿ ಕಡೆಯುವುದುಮೊಳಿತು ||
ಘನವರ್ಷ ಬಿರುಗಾಳಿ ಬಡಿಯಲಿರುಳೊಳ್ ನೆಲನ |
ದಿನದ ಸೊಗಸಿಮ್ಮಡಿಯೊ –ಮಂಕುತಿಮ್ಮ|| 422 ||
ಪದ-ಅರ್ಥ: ಅನುರಾಗದುಃಖಂಗಳೊಮ್ಮೊಮ್ಮೆ ಬಿರುಬೀಸಿ=ಅನುರಾಗ+ದುಃಖಂಗಳು(ದುಃಖಗಳು)+ಒಮ್ಮೊಮ್ಮೆ+ಬಿರುಬೀಸಿ (ಜೋರಾಗಿ ಬೀಸಿ), ಕಡೆಯುವುದುಮೊಳಿತು=ಕಡೆಯುವುದುಂ+ಒಳಿತು, ಘನವರ್ಷ=ಭಾರೀಮಳೆ, ಬಡಿಯಲಿರುಳೊಳ್=ಬಡಿಯಲು+ಇರುಳೊಳ್(ರಾತ್ರಿಯಲ್ಲಿ), ಸೊಗಸಿಮ್ಮಡಿಯೊ=ಸೊಗಸು+ಇಮ್ಮಡಿಯೊ(ಎರಡು ಪಟ್ಟು)
ವಾಚ್ಯಾರ್ಥ: ಅನುರಾಗ, ದುಃಖಗಳು ಒಮ್ಮೊಮ್ಮೆ ಜೋರಾಗಿ ಬೀಸಿ ಮನಸ್ಸಿನ ತೆರೆಗಳನ್ನು ಕದಡಿ, ಮಂಥನ ಮಾಡುವುದು ಒಳ್ಳೆಯದು. ಭಾರೀಮಳೆ, ಬಿರುಗಾಳಿ, ರಾತ್ರಿ ನೆಲವನ್ನು ಅಪ್ಪಳಿಸಿದಾಗ ಮರುದಿನದ ಸೊಗಸು ಹೆಚ್ಚಾಗುತ್ತದೆ.
ವಿವರಣೆ: ಅನುರಾಗ ಯಾರಿಗೆ ಬೇಡ? ದುಃಖ ಯಾರಿಗೆ ಬೇಕು? ಪ್ರತಿಯೊಬ್ಬರೂ ಮನಸ್ಸಿಗೆ ದುಃಖ, ನೋವು ಆಗಬಾರದು ಎಂದು ಸತತ ಪ್ರಯತ್ನ ಮಾಡುತ್ತಾರೆ. ವಿಚಿತ್ರವೆಂದರೆ ದುಃಖವೇ, ಸಂತೋಷಕ್ಕೆ ಹೊಸ ಮೆರಗನ್ನು ನೀಡುತ್ತದೆ. ರಾತ್ರಿಯೇ ಇಲ್ಲದಿದ್ದರೆ ಹಗಲಿಗೇನು ಅರ್ಥ? ಹಗಲು ಎನ್ನುವ ಪದವೇ ರಾತ್ರಿಗೆ ವಿರುದ್ಧವಾದದ್ದು. ಹಗಲಿನ ಸಂತೋಷ ರಾತ್ರಿಯ ಇರುವಿಕೆಯಿಂದ. ಖಾರದ ವಸ್ತುವನ್ನು ತಿಂದಾಗಲೇ ಸಿಹಿಗೆ ಹೆಚ್ಚಿನ ಮಜಾ.
ಈ ಕಗ್ಗ ಹೇಳುತ್ತದೆ, ಒಮೊಮ್ಮೆ ಅನುರಾಗ, ದುಃಖಗಳು ನಮ್ಮನ್ನು ಬಿರುಗಾಳಿಯಂತೆ ಅಪ್ಪಳಿಸಿ, ನಮ್ಮ ಮನಸ್ಸನ್ನು ಕಲಕಿ, ಒದ್ದಾಡಿಸುವುದು ಒಳ್ಳೆಯದು. ಆಮ್ಲಜನಕಕ್ಕಾಗಿ ಒದ್ದಾಡಿದವನಿಗೆ, ಅದರ ನಿಜವಾದ ಬೆಲೆ ಅರ್ಥವಾಗುವುದು. ರೋಗಗಳಿಂದ ಜನ, ಪ್ರಾಣ ಕಳೆದುಕೊಂಡು, ಕೇವಲ ಸಂಖ್ಯೆಗಳಾಗುತ್ತಿರುವ ಸಂದರ್ಭದಲ್ಲೇ, ಜೀವನದ ಬೆಲೆ ತಿಳಿಯುವುದು. ಅದಕ್ಕೇ ಒಂದು ಹಿರಿಯರ ಮಾತಿದೆ, ‘ಒಬ್ಬ ಮನುಷ್ಯನ ವೈಯಕ್ತಿಕ ಸಂತೋಷದ ಅಳತೆಯನ್ನು ಆತ ಅನುಭವಿಸಿದ ದುಃಖದ ಆಳದಿಂದ ಅರಿಯಬಹುದು’.
ಸಂಕಟ-ಸಂತೋಷ, ಕೀರ್ತಿ-ಅಪಕೀರ್ತಿ, ತ್ಯಾಗ-ಸಮೃದ್ಧಿ ಇವು ವಿರುದ್ಧ ಪದಗಳು. ಗಮನಿಸಿದರೆ, ಒಂದಿಲ್ಲದೆ ಮತ್ತೊಂದಿಲ್ಲ. ಹರಿಶ್ಚಂದ್ರ ಪಟ್ಟ ಕಷ್ಟಗಳಿಗೆ ಮಿತಿಯುಂಟೆ? ಆದರೆ ಆ ಕಷ್ಟಗಳ ಬೆಂಕಿಯಲ್ಲಿ ಹಾಯ್ದು ಬಂದದ್ದರಿಂದಲೇ ಆತ ಸತ್ಯಹರಿಶ್ಚಂದ್ರನೆಂದು ಶಾಶ್ವತನಾದ. ಕೃಷ್ಣನಿಗೆ ಶ್ಯಮಂತಕಮಣಿಯನ್ನು ಕದ್ದವನೆಂಬ ಅಪಖ್ಯಾತಿ ಬಂತು. ಅದನ್ನು ನಿವಾರಿಸಿದ ಕೃಷ್ಣನ ಬದುಕು ಖ್ಯಾತಿಯನ್ನು ಪಡೆದು ಪ್ರಕಾಶಮಾನವಾಯಿತು. ಯಾರು ಯಾರು ಕಷ್ಟಗಳ ಕುಲುಮೆಯಲ್ಲಿ ಬೆಂದು ನಿಷ್ಕಳಂಕರಾಗಿ ಹೊರಬಂದರೋ, ಅವರೆಲ್ಲ ಜಗತ್ತಿಗೆ ಮಾದರಿಗಳಾದರು. ಕಷ್ಟಗಳ ಬೆಂಕಿ ಅವರಿಗೆ ಪುಟನೀಡಿತು.
ಕಗ್ಗ ಇನ್ನೊಂದು ಸುಂದರ ರೂಪಕವನ್ನು ಕಟ್ಟಿ ಕೊಡುತ್ತದೆ. ಕಲ್ಪಿಸಿಕೊಳ್ಳಿ, ರಾತ್ರಿ ಭಯಂಕರ ಮಳೆ, ಗುಡುಗು ಸಿಡಿಲುಗಳ ಅಬ್ಬರ. ಯಾರಿಗಾದರೂ ಹೆದರಿಕೆ ಬರುವ ವಾತಾವರಣ. ಇಡೀ ರಾತ್ರಿ ಧೋ, ಧೋ ಎಂದು ಸುರಿದಿದೆ ಮಳೆ. ಆದರೆ ಬೆಳಿಗ್ಗೆ ನೀವು ಮನೆಯಿಂದ ಹೊರಬಂದರೆ, ರಸ್ತೆಗಳು ಸ್ವಚ್ಛವಾಗಿವೆ, ಮರದ ಎಲೆಗಳು ಮೈಮೇಲಿನ ಧೂಳು ಕೊಡವಿಕೊಂಡು ಮಿನುಗುತ್ತಿವೆ. ಆಕಾಶ ನಿರಭ್ರವಾಗಿದೆ. ಸೂರ್ಯನ ಬೆಳಕು ಆಹ್ಲಾದಕರವೆನ್ನಿಸುತ್ತದೆ. ಈ ಬೆಳಗಿನ ಸುಂದರತೆಗೆ, ನಿನ್ನೆಯ ಭಾರೀ ಮಳೆ ಕಾರಣ. ಹೀಗಾಗಿ ಬರುವ ಕಷ್ಟ, ಸುಖಗಳು ನಮ್ಮನ್ನು ಇನ್ನಷ್ಟು ಸಶಕ್ತರನ್ನಾಗಿ ಮಾಡಿಯಾವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.