ADVERTISEMENT

ಮಂಕುತಿಮ್ಮನ ಕಗ್ಗ | ಬದುಕಿನ ಆಯ್ಕೆಗಳು

ಡಾ. ಗುರುರಾಜ ಕರಜಗಿ
Published 30 ಸೆಪ್ಟೆಂಬರ್ 2020, 15:04 IST
Last Updated 30 ಸೆಪ್ಟೆಂಬರ್ 2020, 15:04 IST
ಡಿ.ವಿ.ಗುಂಡಪ್ಪ
ಡಿ.ವಿ.ಗುಂಡಪ್ಪ   

ರೇಖಾರಹಸ್ಯಗಳು ನಿನ್ನ ಹಣೆಯವದಿರಲಿ |
ನೀಂ ಕಾಣ್ಬ ರೂಪಭಾವಂಗಳೊಳಮಿಹುವು ||
ತಾಕಿ ನಿನ್ನಾತುಮವ ನಾಕನರಕಂಗಳಂ |
ಏಕವೆನಿಪುವು ನಿನಗೆ – ಮಂಕುತಿಮ್ಮ || 340 ||

ಪದ-ಅರ್ಥ: ಹಣೆಯವದಿರಲಿ = ಹಣೆಯವು + ಅದಿರಲಿ, ಕಾಣ್ಬ = ಕಾಣುವ ರೂಪಭಾವಂಗಳೊಳಮಿಹುವು = ರೂಪ + ಭಾವಂಗಳೊಳು (ಭಾವಗಳಲ್ಲಿ) + ಇಹುವು, ನಿನ್ನಾತುಮವ = ನಿನ್ನ + ಆತ್ಮವ, ನಾಕನರಕಂಗಳಂ = ನಾಕ (ಸ್ವರ್ಗ) + ನರಕಂಗಳಂ (ನರಕಗಳನ್ನು),
ಏಕವೆನಿಪುವು = ಒಂದಾಗಿಸುತ್ತವೆ.

ಗುರುರಾಜ ಕರಜಗಿ

ವಾಚ್ಯಾರ್ಥ: ನಿನ್ನ ಹಣೆಯ ಬರಹ ಒಂದು ರಹಸ್ಯ. ಅದಿರಲಿ, ಅವು ನಿಜವಾಗಿಯೂ ಇರುವುದು ನೀನು ಕಾಣುವ ರೂಪ, ಭಾವಗಳಲ್ಲಿ. ಅವು ನಿನ್ನ ಆತ್ಮವನ್ನು ತಟ್ಟಿ ಸ್ವರ್ಗ ನರಕಗಳನ್ನು ಒಂದು ಮಾಡುತ್ತವೆ.

ADVERTISEMENT

ವಿವರಣೆ: ‘ಅವನ ಹಣೆಬರಹ, ಯಾರು ಏನು ಮಾಡೋದಕ್ಕೆ ಆಗುತ್ತದೆ?’ ಇಂಥ ಮಾತುಗಳನ್ನು ನಾವು ಸಾಕಷ್ಟು ಬಾರಿ ಕೇಳಿದ್ದೇವೆ. ಯಾವುದು ಈ ಹಣೆಯ ಬರಹ? ಇದನ್ನು ಬರೆದವರು ಯಾರು? ಬರೆದಿದ್ದಾರೆಂದು ಯಾರು ಕಂಡು ಹಿಡಿದರು? ಅದನ್ನು ಓದುವವರು ಯಾರು? ಅದನ್ನು ಹಣೆಯಲ್ಲಿ ಬರೆದಿದ್ದೇಕೆ? ಇಂಥ ಹಲವಾರು ಪ್ರಶ್ನೆಗಳಿಗೆ ಉತ್ತರಗಳಿಲ್ಲ. ಯಾವುದನ್ನು ನಾವು ತರ್ಕ ಹಾಗೂ ವಿವರಣೆಗಳಿಂದ ತಿಳಿಸಲು ಸಾಧ್ಯವಿಲ್ಲವೋ ಅದನ್ನು ಹಣೆಯ ಬರಹ ಎಂದು ಹೇಳಿಬಿಡುತ್ತೇವೆ. ಅದಕ್ಕೇ ಡಿ.ವಿ.ಜಿ ಹೇಳುತ್ತಾರೆ, ಆ ರಹಸ್ಯವಾದ ಬರಹ ನಿನ್ನ ಹಣೆಯದ್ದೇ ಇರಬಹುದು. ಇರಲಿ, ಆದರೆ ನಿಜವಾದ ರಹಸ್ಯ ಬರಹ ಈ ಪ್ರಪಂಚದಲ್ಲಿ ನೀನು ಕಾಣುವ ವಸ್ತುವಿಶೇಷಗಳಲ್ಲಿದೆ. ನೀನು ಯಾವ ರೂಪಗಳನ್ನು ಕಾಣುತ್ತೀಯೋ, ಯಾವ ಭಾವಗಳು ನಿನ್ನನ್ನು ಆಕರ್ಷಿಸುತ್ತವೋ, ಅದರಲ್ಲಿ ನಿನ್ನ ಹಣೆಯ ಬರಹ, ಭವಿಷ್ಯ ಇದೆ.

ಅವರಿಬ್ಬರು ಅವಳಿ ಜವಳಿ ಅಣ್ಣ–ತಮ್ಮಂದಿರು. ಒಂದೇ ಮನೆಯಲ್ಲಿ, ಒಂದೇ ಪರಿಸರದಲ್ಲಿ ಬೆಳೆದವರು. ಅಣ್ಣ ಚೆನ್ನಾಗಿ ಓದಿ ಸುಪ್ರೀಂ ಕೋರ್ಟಿನ ನ್ಯಾಯಾಧೀಶನಾದ, ಬಹುಮಾನ್ಯನಾದ. ಅವನ ಮಾತುಗಳು, ಬರಹಗಳು ಪ್ರಪಂಚದಾದ್ಯಂತ ಹೆಸರು ಮಾಡಿದವು. ಆತ ಈಗ ದೇಶದ ಅತ್ಯಂತ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬ. ಅವನೊಂದಿಗೇ ಹುಟ್ಟಿದ ತಮ್ಮನನ್ನು ಬೇರೆ ವಿಷಯಗಳು ಸೆಳೆದವು. ಆತ ಮಾಧ್ಯಮಿಕ ಹಂತದಲ್ಲೇ ಶಾಲೆಯನ್ನು ಬಿಟ್ಟ. ಅವನು ಆಯ್ಕೆ ಮಾಡಿಕೊಂಡ ಸಂಗಾತಿಗಳೂ ಹಾಗೆಯೇ ಇದ್ದರು. ಆತ ದುಶ್ಚಟಗಳಿಗೆ ಬಲಿಯಾದ. ಚಟಗಳಿಗೆ ಹಣ ಬೇಕಲ್ಲ, ಕಳ್ಳತನ ಪ್ರಾರಂಭ ಮಾಡಿದ. ಅದೂ ಸಾಕಾಗದಾಗ ದೊಡ್ಡ ದರೋಡೆಗೆ ಕೈ ಹಾಕಿ ಒಂದಿಬ್ಬರ ಕೊಲೆ ಮಾಡಿದ. ಕೊನೆಗೊಮ್ಮೆ ಸಿಕ್ಕುಬಿದ್ದು ಜೀವಾವಧಿ ಶಿಕ್ಷೆ ಪಡೆದು ಜೈಲಿನಲ್ಲಿ ಕೊಳೆಯುತ್ತಿದ್ದಾನೆ. ಒಬ್ಬ ಪತ್ರಿಕಾ ವರದಿಗಾರ ತಮ್ಮನನ್ನು ಜೈಲಿನಲ್ಲಿ ಭೇಟಿಯಾಗಿ ಅವನ ಈ ಅವಸ್ಥೆಗೆ ಯಾರು ಕಾರಣ ಎಂದು ಕೇಳಿದಾಗ ಆತ, ‘ನನ್ನ ತಂದೆಯೇ ಕಾರಣ. ಅವರು ನಿತ್ಯ ಕುಡಿದು ಬಂದು ನಮ್ಮನ್ನೆಲ್ಲ ಪೀಡಿಸುತ್ತಿದ್ದರು. ಅವರನ್ನು ನೋಡಿ ನಾನೂ ಹಾಗೆಯೇ ಅದೆ’ ಎಂದ. ವರದಿಗಾರ ಅಣ್ಣನನ್ನು ಭೇಟಿಯಾಗಿ ಅವನ ಯಶಸ್ಸಿನ ಕಾರಣ ಕೇಳಿದ. ಆತ ಕೂಡ ಹೇಳಿದ, ‘ಅದಕ್ಕೆ ನನ್ನ ತಂದೆಯೇ ಕಾರಣ, ಅವರು ಕುಡಿದು ಬಂದು ಹಿಂಸಿಸುವಾಗ, ನಾನು ಖಂಡಿತ ಅವರಂತೆ ಆಗಬಾರದು ಎಂದು ಪ್ರಯತ್ನಪೂರ್ವಕವಾಗಿ ಒಳ್ಳೆಯ ಜನರ ಸ್ನೇಹ, ಒಳ್ಳೆಯ ಗ್ರಂಥಗಳು ಇವುಗಳನ್ನು ಆಯ್ದುಕೊಂಡೆ’.

ಇಬ್ಬರಿಗೂ ಒಂದೇ ಪರಿಸರ. ಅವರ ಆಯ್ಕೆಗಳು ಅವರ ಬದುಕನ್ನು ಸ್ವರ್ಗವನ್ನಾಗಿ, ನರಕವನ್ನಾಗಿ ಮಾಡಿದವು. ಕಗ್ಗದ ಆಶಯ ಇದೇ. ನಾವು ಪ್ರಪಂಚದಲ್ಲಿ ಕಾಣುವ, ಆಯ್ದುಕೊಳ್ಳುವ ರೂಪ, ಭಾವಗಳು ನಮ್ಮ ಆತ್ಮಕ್ಕೆ ತಾಕಿ ಬದುಕನ್ನು ಸ್ವರ್ಗ, ನರಕಗಳನ್ನಾಗಿ ಮಾಡುತ್ತವೆ. ಆಯ್ಕೆಗಳಂತೆ ಬದುಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.