ADVERTISEMENT

ಬೆರಗಿನ ಬೆಳಕು | ಬೀಗಕ್ಕೊಂದೇ ಕೈ

ಡಾ. ಗುರುರಾಜ ಕರಜಗಿ
Published 25 ಜುಲೈ 2023, 19:30 IST
Last Updated 25 ಜುಲೈ 2023, 19:30 IST
ಡಾ. ಗುರುರಾಜ ಕರಜಗಿ
ಡಾ. ಗುರುರಾಜ ಕರಜಗಿ   

ಮೆಣಸು ಹಿಪ್ಪಲಿ ಶುಂಠಿ ಜೀರಿಗೆಗಳೆಲ್ಲ ಸರಿ |
ಅನುವಪ್ಪುದೊಂದೊಂದು ರೋಗಕೊಂದೊಂದು ||
ನಿನಗಮಂತೆಯೆ ನೂರು ನೀತಿಸೂತ್ರಗಳಿರಲು |
ಅನುವನರಿವುದೆ ಜಾಣು – ಮಂಕುತಿಮ್ಮ || 935 ||

ಪದ-ಅರ್ಥ: ಅನುವಪ್ಪುದೊಂದೊಂದು=ಅನುವು(ಹೊಂದಿಕೆ)+ಅಪ್ಪುದು(ಇರುವುದು)+ಒಂದೊಂದು, ರೋಗಕೊಂದೊಂದು=ರೋಗಕೆ+ಒಂದೊಂದು, ನಿನಗಮಂತೆಯೆ=ನಿನಗಮ್(ನಿನಗೂ)+ಅಂತೆಯೆ, ಅನುವನರಿವುದೆ=ಅನುವನು(ಹೊಂದಿಕೆಯಾದದ್ದನ್ನು)+ಅರಿವುದೆ, ಜಾಣು=ಬುದ್ಧಿವಂತಿಕೆ.

ವಾಚ್ಯಾರ್ಥ: ಮೆಣಸು, ಹಿಪ್ಪಲಿ, ಶುಂಠಿ, ಜೀರಿಗೆಗಳೆಲ್ಲ ಔಷಧಿಗಳಾಗಿ ಒಂದೊಂದು ರೋಗಕ್ಕೆ ಸರಿಯಾಗಿ ಹೊಂದುತ್ತವೆ. ನಿನಗೂ ಹಾಗೆಯೇ ನೂರಾರು ನೀತಿ ಸೂತ್ರಗಳು ಲಭ್ಯವಿವೆ. ಯಾವುದು ನಿನಗೆ ಹೊಂದುತ್ತದೆಂಬುದನ್ನು ತಿಳಿದು ಆರಿಸಿಕೊಳ್ಳುವುದು ಜಾಣತನ.

ADVERTISEMENT

ವಿವರಣೆ: ಗೌಡರು ಏಳುವರ್ಷದ ಮಗ ಕಿಟ್ಟಣ್ಣನನ್ನು ಕರೆದುಕೊಂಡು ವೈದ್ಯರ ಬಳಿಗೆ ಹೋಗಿ ದಬಾಯಿಸಿದರು, “ಏನ್ ಡಾಕ್ಟ್ರೆ? ಒಂದು ವಾರದಿಂದ ನೀವೇ ಕೊಟ್ಟ ಔಷಧಿಯನ್ನು ಕೊಡ್ತಾನೇ ಇದ್ದೀವಿ, ಜ್ವರಾ ಕಡಿಮೆಯಾಗ್ತಾನೇ ಇಲ್ಲ. ಸರಿಯಾಗಿ  ನೋಡಿ”. ವೈದ್ಯರು ಹುಡುಗನನ್ನು ನೋಡಿದರು. ಅವನನ್ನು ನೋಡಿದ ನೆನಪೇ ಬರುತ್ತಿಲ್ಲ. “ಗೌಡರೇ, ನಾನು ಕೊಟ್ಟ ಔಷದಿ ಚೀಟಿಯನ್ನು ಕೊಡಿ” ಎಂದು ಕೇಳಿ ಇಸಿದುಕೊಂಡರು. ಅವರ ಮೇಲೆ ರೋಗಿಯ ಹೆಸರು ಪುಟ್ಟಣ್ಣ, ವಯಸ್ಸು ಹನ್ನೆರಡು ವರ್ಷ ಎಂದು ಬರೆದಿತ್ತು.

“ಅಲ್ರೀ, ಇದು ನಿಮ್ಮ ಹಿರಿಯ ಮಗನಿಗೆ ಕೊಟ್ಟದ್ದು. ಅದೂ ಭೇದಿ ನಿಲ್ಲಿಸುವುದಕ್ಕೆ ಕೊಟ್ಟದ್ದು. ಈ ಹುಡುಗನಿಗೆ ಬಂದದ್ದು ಜ್ವರ”. ಗೌಡರ ಕೋಪ ಮೇಲೇರಿತು.

“ಏನಾದರೇನು, ಒಂದೇ ತಾಯಿಯ ಮಕ್ಕಳಲ್ಲವೇ?”. ಹಿರಿಯ ಮಗನಿಗೆ ಭೇದಿಗೆ ಕೊಟ್ಟ ಔಷಧವನ್ನು ಕಿರಿಯ ಮಗನ ಜ್ವರಕ್ಕೆ ಕೊಟ್ಟರೆ ಹೇಗೆ ಕಡಿಮೆಯಾದೀತು?. ಪ್ರತಿಯೊಂದು ರೋಗಕ್ಕೆ ಅದಕ್ಕೇ ಆದ ವಿಶೇಷ ಔಷಧಿ ಇರುತ್ತದೆ, ವ್ಯಕ್ತಿಯಿಂದ ವ್ಯಕ್ತಿಗೆ, ಬೇರೆ ಬೇರೆ ವಯಸ್ಸಿಗೆ ಅದು ಬದಲಾಗುತ್ತದೆ ಎಂದು ತಿಳಿಸಲು ವೈದ್ಯರು ತುಂಬ ಕಷ್ಟಪಟ್ಟರು. ಕಗ್ಗ ತಿಳಿಸುತ್ತದೆ, ಮೆಣಸು, ಹಿಪ್ಪಲಿ, ಶುಂಠಿ, ಜೀರಿಗೆಗಳೆಲ್ಲ ಔಷಧಿಗಳೇ. ಆದರೆ ಅವು ಒಂದೇ ರೋಗಕ್ಕಲ್ಲ.

ಒಂದೊಂದು ರೋಗಕ್ಕೆ ಒಂದೊಂದು ಔಷಧಿಯಾಗುತ್ತದೆ. ಅಂತೆಯೇ ಪ್ರಪಂಚದಲ್ಲಿ ನೂರಾರು ನೀತಿಗಳು, ಯುಕ್ತಿಗಳು ಇವೆ. ಅವೆಲ್ಲ ವಿಭಿನ್ನ ಜನರಿಗೆ, ವಿಭಿನ್ನ ಪರಿಸ್ಥಿತಿಗಳಲ್ಲಿ ಪ್ರಯೋಜನವಾಗಲಿ ಎಂದು ಮಾಡಲ್ಪಟ್ಟ ಯೋಜನೆಗಳು. ಅವು ಆಯಾ ಪರಿಸ್ಥಿತಿಗೆ ಸರಿ. ನಾವು ನೀತಿ ಇದೆಯಲ್ಲ ಎಂದು ಕಣ್ಣು ಕಟ್ಟಿಕೊಂಡು ಬಳಸದೇ ನನ್ನ ಪರಿಸ್ಥಿತಿಗೆ, ಮನಸ್ಥಿತಿಗೆ ಅದು ಹೊಂದುತ್ತದೆಯೋ ಎಂದು ಪರೀಕ್ಷಿಸಿ ಪ್ರಯೋಗಿಸುವುದು ಜಾಣತನ. ಪ್ರತಿಯೊಂದು ಬೀಗಕ್ಕೂ ಬೇರೆಯದೇ ಕೀಲೀಕೈ ಅಲ್ಲವೆ? ಒಂದರ ಕೈಯನ್ನು ಮತ್ತೊಂದು ಬೀಗಕ್ಕೆ ಬಳಸಿದರೆ ಹೇಗೆ ತೆರೆದೀತು ? ಕಗ್ಗ ಹೇಳುತ್ತದೆ ಯಾವ ನೀತಿಯನ್ನು, ಯುಕ್ತಿಯನ್ನು ನಮ್ಮ ಜೀವನಕ್ಕೆ ಅನ್ವಯಿಸಿಕೊಳ್ಳಬೇಕು ಎಂಬುದನ್ನು ತಿಳಿದು ಅನುಸರಿಸುವುದು ಜಾಣತನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.