ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿರುವಾಗ ಬೋಧಿಸತ್ವ ನಗರದ ಹೊರಗಡೆಯಲ್ಲಿ ಒಂದು ಚಾಂಡಾಲ ವಂಶದಲ್ಲಿ ಹುಟ್ಟಿದ. ಅವನಿಗೆ ಮಾತಂಗ ಎಂದು ಹೆಸರಿಟ್ಟರು. ಆತ ಬೆಳೆದಂತೆ ಮಹಾನ್ ಜ್ಞಾನಿಯಾದ. ಅವನನ್ನು ಜನ ಮಾತಂಗ ಪಂಡಿತ ಎಂದು ಕರೆಯತೊಡಗಿದರು.
ಒಂದು ದಿನ ನಗರ ಶ್ರೇಷ್ಠಿಯ ಮಗಳು ನಗರೋದ್ಯಾನಕ್ಕೆ ಹೊರಟಿದ್ದಳು. ಅವಳು ಅಲ್ಲಿ ಬಡವರಿಗೆ ದಾನವನ್ನು ಮಾಡುತ್ತಿದ್ದಳು. ಆಕೆ ಬರುತ್ತಿದ್ದಾಗ ಎದುರಿಗೆ ಮಾತಂಗ ಪಂಡಿತ ಬಂದ. ‘ನೀನು ಯಾರು?’ ಎಂದು ಕೇಳಿದಳು ವೈಶ್ಯಪುತ್ರಿ ದಿಟ್ಟಮಂಗಲೆ. ‘ನಾನು ಚಾಂಡಾಲ ಪುತ್ರ’ ಎಂದ ಮಾತಂಗ. ಆಕೆ ‘ಛೇ, ನಿನ್ನ ದರ್ಶನದಿಂದ ನನ್ನ ಪ್ರಯಾಣ ವ್ಯರ್ಥವಾಯಿತು’ ಎಂದು ಮನೆಗೆ ಮರಳಿದಳು. ಇದರಿಂದಾಗಿ ತಮಗೆ ದೊರೆಯಬಹುದಾದ ದಾನ ದೊರೆಯದೆ ಹೋಯಿತೆಂದು ಅಲ್ಲಿದ್ದ ಜನ ಅವನನ್ನು ಹೊಡೆದು ಪ್ರಜ್ಞಾಹೀನನನ್ನಾಗಿ ಮಾಡಿ ಹೋಗಿಬಿಟ್ಟರು. ಎಚ್ಚರ ಬಂದ ಮೇಲೆ ದಿಟ್ಟಮಂಗಲೆಗೆ ಇದ್ದ ಕುಲದ ಅಹಂಕಾರವನ್ನು ಕರಗಿಸಬೇಕೆಂದು ಆಕೆಯ ಮನೆಯ ಮುಂದೆ ನಿರಾಹಾರ ಉಪವಾಸವನ್ನು ಮಾಡಿದ. ಏಳು ದಿನಗಳ ನಂತರ ದಿಟ್ಟಮಂಗಲೆಯ ತಂದೆಗೆ ಹೆದರಿಕೆ ಬಂದಿತು. ಈ ಚಾಂಡಾಲ ತರುಣ ತನ್ನ ಮನೆಯ ಮುಂದೆ ಸತ್ತರೆ ತನಗೆ ಕೆಟ್ಟ ಹೆಸರು ಬರುತ್ತದೆಂದು ಮಗಳನ್ನು ಮಾತಂಗನಿಗೆ ಹೆಂಡತಿಯಾಗಿ ಒಪ್ಪಿಸಿದ. ಮಾತಂಗ ಹೇಳಿದ, ‘ನಿಮ್ಮವರು ಹೊಡೆದದ್ದರಿಂದ ನನಗೆ ನಡೆಯಲು ಆಗುತ್ತಿಲ್ಲ. ನನ್ನನ್ನು ಹೊತ್ತುಕೊಂಡು ನಮ್ಮ ಚಾಂಡಾಲ ಗ್ರಾಮಕ್ಕೆ ನಡೆ’. ಆಕೆ ಮಾತನಾಡದೆ ಅವನನ್ನು ಬೆನ್ನಿನಲ್ಲಿ ಹೊತ್ತು ಗ್ರಾಮಕ್ಕೆ ಬಂದಳು.
ಅವಳ ಜಾತಿಯ ಅಹಂಕಾರ ಕರಗಿದ್ದನ್ನು ಕಂಡ ಮಾತಂಗ ಅವಳಿಗೆ ಶ್ರೇಷ್ಠ ಯಶಸ್ಸನ್ನು ತೋರಿಸಬೇಕೆಂದು ಮಾತಂಗ ಕಾಡಿಗೆ ಹೋಗಿ ಶ್ರಮಣ ಪ್ರವ್ರಜ್ಜೆ ಸ್ವೀಕರಿಸಿ ಏಳು ದಿನಗಳಲ್ಲಿ ಎಲ್ಲ ಸಾಧನೆಯನ್ನು ಮುಗಿಸಿದ. ನಂತರ ಚಾಂಡಾಲ ಗ್ರಾಮಕ್ಕೆ ಬಂದು ದಿಟ್ಟಮಂಗಲೆಯನ್ನು ಭೇಟಿಯಾದ. ಆಕೆ ತನ್ನ ಗಂಡ ಪ್ರವ್ರಜಿತವಾದುದನ್ನು ಕಂಡು ದುಃಖಪಟ್ಟಳು. ಮಾತಂಗ ಹೇಳಿದ, ‘ಚಿಂತಿಸಬೇಡ. ನಾನು ಹಿಮಾಲಯಕ್ಕೆ ಹೋಗಿ ಎಂಟನೆಯ ದಿನ ಬರುತ್ತೇನೆ. ಯಾರು ಕೇಳಿದರೂ ನನ್ನ ಗಂಡ ಮಹಾಬ್ರಹ್ಮ ಎಂದು ಹೇಳು. ನಾನು ಮರಳಿ ಬಂದ ಮೇಲೆ ನೀನು ಅಪಾರ ಶ್ರೀಮಂತಿಕೆಯನ್ನು ಪಡೆಯುತ್ತೀ’. ಹೀಗೆ ಹೇಳಿ ಗಾಳಿಯಲ್ಲಿ ಹಾರಿ ಹಿಮಾಲಯಕ್ಕೆ ಹೋಗಿಬಿಟ್ಟ. ಆತ ಹೇಳಿದಂತೆ ಆಕೆ ನಗರದಲ್ಲೆಲ್ಲ ತನ್ನ ಗಂಡ ಮಹಾಬ್ರಹ್ಮ ಎಂದು ಹೇಳತೊಡಗಿದಳು.
ಎಂಟನೆಯ ದಿನ ಜನ ನೋಡುತ್ತಿದ್ದಂತೆ ಮೋಡವನ್ನು ಸೀಳಿ ಬೆಳಕು ಬಂದಂತೆ ಮಾತಂಗ ಬಂದು ದಿಟ್ಟಮಂಗಲೆಯ ಮನೆಯನ್ನು ಸೇರಿದ. ಮಂಚದ ಮೇಲೆ ಮಲಗಿದ್ದ ಅವಳ ಹೊಕ್ಕುಳನ್ನು ಬೆರಳಿನಿಂದ ಮುಟ್ಟಿದ. ಆಕೆ ಗರ್ಭವತಿಯಾದಳು! ಮಾತಂಗ ಹೇಳಿದ, ‘ಇನ್ನು ಮೇಲೆ ಜನ ನಿನ್ನನ್ನು ದೇವತೆಯಂತೆ ನೋಡುತ್ತಾರೆ. ನಿನ್ನನ್ನು ಕಂಡರೆ ನೂರಾರು, ಸಾವಿರಾರು ಹಣ ಕೊಡುತ್ತಾರೆ. ಆದರೆ ಮಗನನ್ನು ಚೆನ್ನಾಗಿ ಬೆಳೆಸು’. ನಂತರ ಮಾಯವಾದ. ದಿಟ್ಟಮಂಗಲೆಗೆ ಮಗ ಹುಟ್ಟಿದ. ಅವನನ್ನು ಮಾಂಡವ್ಯ ಎಂದು ಕರೆದರು.
ದಿಟ್ಟಮಂಗಲೆಯನ್ನು ದೇವತೆಯಂತೆ ಕಂಡ ಜನ ಅಪಾರ ಶ್ರೀಮಂತಿಕೆ ಯನ್ನು ಕೊಟ್ಟರು. ಮುಂದೆ ಬೆಳೆದ ಮಗ ಶ್ರೀಮಂತಿಕೆಯಲ್ಲಿ ಕಳೆದು ಹೋಗಿ ದುರಹಂಕಾರಿಯಾದ. ಮಾತಂಗನೇ ಮತ್ತೆ ಬಂದು ಶಿಕ್ಷೆ ನೀಡಿ, ಬುದ್ಧಿ ಕಲಿಸಿದ. ಹೆಂಡತಿಗೆ ಹೇಳಿದ, ‘ನಿನಗೆ ಜಾತಿಯ ಅಹಂಕಾರವಿತ್ತು, ನಿನ್ನ ಮಗನಿಗೆ ಶ್ರೀಮಂತಿಕೆಯ ಅಹಂಕಾರ. ಯಾವ ಅಹಂಕಾರವಾದರೂ ಅದಕ್ಕೆ ಖಂಡಿತ ಪೆಟ್ಟು ಬೀಳುತ್ತದೆ. ಅದಕ್ಕೆ ಸದಾಕಾಲದ ಜಾಗ್ರತೆ ಅಗತ್ಯ’.
ಆ ಮಾತು ಇಂದಿಗೂ ಸತ್ಯವೇ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.