ಹಿಂದೆ ಬ್ರಹ್ಮದತ್ತ ವಾರಾಣಸಿಯಲ್ಲಿ ಆಳುತ್ತಿದ್ದಾಗ ನಗರದಲ್ಲಿ ಒಬ್ಬ ಬ್ರಾಹ್ಮಣ ಇದ್ದ. ಆತ ಬಹಳ ಶ್ರೀಮಂತ ಮತ್ತು ಬಹುಶ್ರುತ. ಆತ ಅನೇಕ ತರುಣರಿಗೆ ಪಾಠ ಹೇಳುತ್ತಿದ್ದ.
ಒಂದು ದಿನ ಅವನ ಹದಿನಾರು ವರ್ಷದ ಮಗ ಅದಾವುದೋ ರೋಗ ಬಂದು ಎರಡೇ ದಿನಗಳಲ್ಲಿ ತೀರಿಹೋದ. ಬ್ರಾಹ್ಮಣ ಮಗನ ಅಂತ್ಯಸಂಸ್ಕಾರಗಳನ್ನು ಮುಗಿಸಿ ಮನೆಗೆ ಬಂದ. ಮನೆಯಲ್ಲಿ ಮಗನಿಲ್ಲದೆ ಇರುವುದು ಅಸಾಧ್ಯವೆನ್ನಿಸಿತು. ಅವನ ನೆನಪು ತುಂಬ ಕಾಡತೊಡಗಿತು. ಆತ ನೇರವಾಗಿ ಸ್ಮಶಾನಕ್ಕೆ ಹೋದ. ಅಲ್ಲಿ ತನ್ನ ಮಗನನ್ನು ದಹಿಸಿದ ಕಟ್ಟೆಗೆ ಹೋಗಿ ಆ ಬೂದಿಯನ್ನು ಕೆದರುತ್ತ ಅಳುತ್ತ ಕುಳಿತ. ಮನೆಯವರು, ಸ್ನೇಹಿತರು ಬಂದು ಕರೆದರೂ ಸ್ಮಶಾನವನ್ನು ಬಿಡದೆ, ನನ್ನ ಮಗ ಮತ್ತೆ ಬರುವವರಿಗೆ ಮನೆಗೆ ಬರಲಾರೆ ಎಂದು ಪ್ರಲಾಪ ಮಾಡುತ್ತಿದ್ದ.
ಎಂಟು ದಿನಗಳು ಕಳೆದವು. ಬ್ರಾಹ್ಮಣ ಊಟ, ನಿದ್ರೆಯಿಲ್ಲದೆ ಸುಸ್ತಾದ. ಈಗ ಅವನು ಬದುಕುವ ಚಿಂತೆ ಉಳಿದವರನ್ನು ಕಾಡತೊಡಗಿತು. ಬ್ರಾಹ್ಮಣನ ತೀರಿ ಹೋದ ಮಗ ದೇವಲೋಕವನ್ನು ಸೇರಿದ್ದ. ತನ್ನ ತಂದೆಯ ಶೋಕವನ್ನು ಕಂಡು ಅವರಿಗೆ ಶೋಕವನ್ನು ಕಡಿಮೆ ಮಾಡಲೆಂದು ಧರೆಗಿಳಿದು ಬಂದ. ಒಬ್ಬ ತರುಣನ ರೂಪದಲ್ಲಿ, ಅತ್ಯಂತ ಸುಂದರವಾದ ವೇಷಭೂಷಣಗಳಿಂದ ಅಲಂಕೃತವಾಗಿ ಕಾಣಿಸಿಕೊಂಡ. ಅವನನ್ನು ಕಂಡ ಬ್ರಾಹ್ಮಣನಿಗೆ ತನ್ನ ಮಗನ ನೆನಪಾಗಿ ಅವನ ಬಳಿಗೆ ಬಂದ. ಆಶ್ಚರ್ಯವೆಂದರೆ ಆ ತರುಣ ಒಂದೇ ಸಮನೆ ಅಳುತ್ತಿದ್ದ! ಬ್ರಾಹ್ಮಣನ ಮನದಲ್ಲಿ ಪುತ್ರ ಪ್ರೇಮ ಜಾಗೃತವಾದದ್ದರಿಂದ ಅವನ ಬಳಿ ಹೋಗಿ ಕೇಳಿದ, ‘ಮಗು, ನೀನು ನೋಡುವುದಕ್ಕೆ ಸುಂದರನಾಗಿ, ಶ್ರೀಮಂತನಂತೆ ಕಾಣುತ್ತೀ. ಆದರೆ ನಿನ್ನ ದುಃಖಕ್ಕೆ ಕಾರಣವೇನು?’. ತರುಣ, ‘ಸ್ವಾಮಿ, ನನಗೆ ಯಾವುದೂ ಕಡಿಮೆ ಇಲ್ಲ, ನನಗೊಂದು ಬಂಗಾರದ ರಥ ಸಿಕ್ಕಿದೆ, ಎರಡು ಸುಂದರವಾದ ಕುದುರೆಗಳೂ ಇವೆ. ಆದರೆ ನನ್ನ ರಥಕ್ಕೆ ಗಾಲಿಗಳೇ ಇಲ್ಲ. ಎರಡು ಗಾಲಿಗಳು ಸಿಕ್ಕರೆ ಸಾಕು, ನನ್ನ ಪ್ರಯಾಣಕ್ಕೆ ಅನುಕೂಲವಾಗುತ್ತದೆ’ ಎಂದ.
ಬ್ರಾಹ್ಮಣನಿಗೆ ತರುಣನ ಮೇಲೆ ಪ್ರೀತಿ ಮೂಡಿತ್ತಲ್ಲ, ಆತ ಸಮಾಧಾನ ಮಾಡುವಂತೆ ಕೇಳಿದ, ‘ಚಿಂತೆ ಬೇಡ ಮಗೂ, ನಿನಗೆ ಎಂತಹ ಗಾಲಿ ಬೇಕು ಹೇಳು, ನಾನು ಅದನ್ನು ತರಿಸಿ ಕೊಡುತ್ತೇನೆ. ಬಂಗಾರದ ಗಾಲಿ ಬೇಕೇ? ಇಲ್ಲ, ಬೆಳ್ಳಿಯ, ಮಣಿಗಳ ಅಥವಾ ಕಬ್ಬಿಣದ ಗಾಲಿ ಬೇಕೇ?’. ಅದಕ್ಕೆ ಪ್ರತಿಯಾಗಿ ತರುಣ ಹೇಳಿದ, ‘ನನ್ನ ಬಳಿಯಿದ್ದ ಆ ವಿಶೇಷವಾದ ರಥಕ್ಕೆ ಗಾಲಿಗಳೆಂದರೆ ಸೂರ್ಯ ಮತ್ತು ಚಂದ್ರ ಮಾತ್ರ. ಅವರಿಬ್ಬರೂ ನನಗೆ ದೊರೆತರೆ ಮಾತ್ರ ನನ್ನ ರಥ ಓಡುವುದು ಸಾಧ್ಯ’. ಅದನ್ನು ಕೇಳಿ ಬ್ರಾಹ್ಮಣ, ‘ಅಯ್ಯೋ ಮೂರ್ಖ, ಯಾವುದು ದೊರೆಯುವುದು ಅಸಾಧ್ಯವೋ ಅದನ್ನು ಬೇಡುತ್ತಿದ್ದೀಯಲ್ಲ? ನಿನ್ನ ಆಸೆ ಎಂದಾದರೂ ಈಡೇರೀತೇ?’ ಎಂದು ಕೇಳಿದ.
‘ಹಾಗಾದರೆ ನಮ್ಮಿಬ್ಬರಲ್ಲಿ ಹೆಚ್ಚು ಮೂರ್ಖರು ಯಾರು? ಸೂರ್ಯ ಚಂದ್ರರನ್ನು ಬಯಸಿದ ನಾನು ಮೂರ್ಖ. ಆದರೆ ಸತ್ತು ಹೋದ ಮಗ ಮತ್ತೆ ಮರಳಿ ಬಯಸುವವನು ಹೆಚ್ಚಿನ ಮೂರ್ಖ. ನಾನೇ ನಿಮ್ಮ ಮಗನಾಗಿದ್ದೆ. ನಿಮ್ಮ ಶೋಕ ತಡೆಯಲು ಬಂದೆ. ನೀವು ತಿಳಿದವರು, ನಾವು ಅದೆಷ್ಟು ಜನ್ಮಗಳಲ್ಲಿ ಹುಟ್ಟಿ ಬಂದಿದ್ದೇವೋ? ಪ್ರತಿಯೊಂದು ಜನ್ಮದಲ್ಲೊಬ್ಬ ತಂದೆ, ತಾಯಿ ಇದ್ದರು. ಹಾಗಾದರೆ ನಿಜವಾದ ತಂದೆ-ತಾಯಿ ಯಾರು? ನಾವು ಬದುಕಿರುವವರೆಗೆ ಸಂಬಂಧಗಳು. ನಂತರ ಅವು ಕರಗಿ ಹೋಗಿ ಮತ್ತೊಂದು ಜನ್ಮದ ಹೊಸ ಸಂಬಂಧಗಳು ಹುಟ್ಟಿಕೊಳ್ಳುತ್ತವೆ. ಇದು ಒಂದು ತರಹದ ಬಣ್ಣಬಣ್ಣದ ನೀರಗುಳ್ಳೆ. ಅವುಗಳ ಬಗ್ಗೆ ಬಹಳ ಮೋಹ ಬೇಡ’ ಎಂದು ಹೇಳಿ ತರುಣ ಮಾಯವಾದ. ಮೋಹವನ್ನು ಕಳೆದುಕೊಂಡು ಬ್ರಾಹ್ಮಣ ಮನೆಗೆ ಮರಳಿದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.